"ನನಗೆ ರಚಿತಾ ರಾಮ್‌ಗೆ ಬುಲ್ ಬುಲ್ ಕೊಡಿಸಿದ್ದು ನಾವೇ ಅಂತ ಐದು ಜನ ಹೇಳಿದ್ರು"; ನಟಿ ಶರಣ್ಯ ಶೆಟ್ಟಿ
'ಕೃಷ್ಣಂ ಪ್ರಣಯ ಸಖಿ' ಸಂಕಷ್ಟದಲ್ಲಿದ್ದ ಕನ್ನಡ ಚಿತ್ರರಂಗಕ್ಕೆ ಬಿಗ್ ಬ್ರೇಕ್ ಕೊಟ್ಟ ಸಿನಿಮಾ. ಹಾಗೇ ಸಿನಿಮಾ ಮೂಲಕ ಇಬ್ಬರು ನಾಯಕಿಯರು ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದಿದ್ದರು. ಒಬ್ಬರು ಮಲಯಾಳಂ ನಟಿ ಮಾಳವಿಕಾ ನಾಯರ್. ಇನ್ನೊಬ್ಬರು ಕನ್ನಡದ ನಟಿ ಶರಣ್ಯ ಶೆಟ್ಟಿ.
ಗಣೇಶ್ ನಟಿಸಿದ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಶರಣ್ಯ ಶೆಟ್ಟಿ ಹೊಸ ಇಮೇಜ್ ಕೊಟ್ಟಿದೆ. ಈ ಸಿನಿಮಾ ಮೂಲಕ ಶರಣ್ಯ ಶೆಟ್ಟಿಯ ನಟನೆಯನ್ನು ಕನ್ನಡ ಚಿತ್ರರಂಗದ ಫಿಲ್ಮ್‌ಮೇಕರ್ಸ್ ಮತ್ತೆ ಗುರುತಿಸುವುದಕ್ಕೆ ಆರಂಭಿಸಿದ್ದಾರೆ.

ಶರಣ್ಯ ಶೆಟ್ಟಿಗೆ ಸಿಕ್ಕ ಅದ್ಭುತ ಯಶಸ್ಸನ್ನು ಸದ್ಯ ಎಂಜಾಯ್ ಮಾಡುತ್ತಿದ್ದು, ಫಿಲ್ಮಿಬೀಟ್ ಕನ್ನಡದ ಜೊತೆ ಆ ಖುಷಿಯನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಆರಂಭದ ದಿನಗಳಲ್ಲಿ ಆಡಿಷನ್ ಕೊಡುತ್ತಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ರಚಿತಾ ರಾಮ್‌ಗೆ ಚಾನ್ಸ್ ಕೊಡಿಸಿದ್ದೇ ನಾವು ಎಂದು ಹೇಳಿ ಮೋಸ ಮಾಡಿದ್ದ ಘಟನೆಯನ್ನು ನೆನೆದಿದ್ದಾರೆ.
"ಕ್ಯಾಮರಾ ಮುಂದೆ ನಾನು ಬಂದ ತಕ್ಷಣವೇ ಸಕ್ಸಸ್ ಸಿಕ್ತು ಅಂತ ಹೇಳುವುದಕ್ಕೆ ಆಗಲ್ಲ. ಯಾಕಂದ್ರೆ, ನಾನು 16 ವರ್ಷವಿರುವಾಗಲೇ ನಟನೆ ಶುರು ಮಾಡಿದ್ದೆ. 10ನೇ ತರಗತಿ ಮುಗಿಯುತ್ತಿದ್ದಂತೆ ನನಗೆ ಬ್ಯಾಕ್‌ಗ್ರೌಂಡ್ ಇಲ್ಲ. ಯಾರು ಕರೆದುಕೊಂಡು ಹೋಗುತ್ತಾರೆ ಅಂತಿಲ್ಲ. ಮಾಡಲಿಂಗ್‌ನಿಂದ ಶುರು ಮಾಡೋಣ ಅಂತ ಶುರು ಮಾಡಿದ್ದು. ನಾನು ಡ್ಯಾನ್ಸರ್. ಭರತನಾಟ್ಯಂ ಪರ್ಫಾಮೆನ್ಸ್ ಕೊಟ್ಟಿದ್ದೇನೆ. ಆದರೆ ಆಕ್ಟಿಂಗ್ ಮಾಡಬೇಕು ಅಂತ ಆಸೆಯಿತ್ತು" ಎಂದು ಶರಣ್ಯ ಶೆಟ್ಟಿ ಹೇಳಿದ್ದಾರೆ.

ಶರಣ್ಯ ಸಿನಿಮಾಗೆ ಬರುವುದಕ್ಕೂ ಮುನ್ನ ಮಾಡಲಿಂಗ್ ಹಾಗೂ ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಆದರೆ, ಇವರ ಅಲ್ಟಿಮೆಟ್ ಗೋಲ್ ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕು ಎಂಬುವುದಾಗಿತ್ತು. ಆ ವೇಳೆ ಯಾರನ್ನು ಕೇಳಬೇಕು ಅಂತ ಗೊತ್ತಾಗುತ್ತಿರಲಿಲ್ಲ. ಗೈಡ್ ಮಾಡೋರು ಇರಲಿಲ್ಲ. ಇಂತಹ ಸಂದರ್ಭದಲ್ಲಿ ಇವರಿಗೆ ಚಿತ್ರ ವಿಚಿತ್ರ ಅನುಭವಗಳು ಆಗಿದ್ದವು.
"ನಮಗೆ ಆ ಹೀರೋ ಡೇಟ್ ಇದೆ. ಸೂಪರ್‌ಸ್ಟಾರ್ ಡೇಟ್ ಇದೆ. ನಿನ್ನನ್ನೇ ಹೀರೋಯಿನ್ ಆಗಿ ಹಾಕೋತಿನಿ ಅಂತ ಹೇಳಿರೋರು. ಮುಗ್ಧರಿದ್ದಾಗ ಅಲ್ಲೊಂದು ಕನಸು ಬರುತ್ತೆ ಗೊತ್ತಾ? ಖುಷಿಯಾಗಿ ಇರುತ್ತೇವೆ. ಆ ಮೇಲೆ ನೋಡಿದಾಗ ಅದು ಫೇಕ್. ಆಗ ಬೇಡಪ್ಪ ಇದೆಲ್ಲ ಓಡಿ ಹೋಗಿಬಿಡೋಣ ಅಂತ ಅನಿಸುತ್ತೆ. ಅದನ್ನೆಲ್ಲ ಬಿಟ್ಟು ಮತ್ತೆ ವಾಪಸ್ ಬರಬೇಕು. ಟ್ರೈ ಮಾಡಬೇಕು. ಹೀಗೆ ಎಷ್ಟೋ ಆಡಿಷನ್ಸ್‌ಗೆ ಹೋಗಿದ್ದಿದೆ." ಎಂದಿದ್ದಾರೆ.
ಶರಣ್ಯ ಶೆಟ್ಟಿ ಆರಂಭದ ದಿನಗಳಲ್ಲಿ ಫೇಕ್ ಆಡಿಷನ್ಸ್‌ಗೆ ಹೋಗಿದ್ದೇ ಜಾಸ್ತಿ. ಸೀರಿಯಲ್ ಹಾಗೂ ಸಿನಿಮಾ ಎರಡಕ್ಕೂ ಆಡಿಷನ್ ಕೊಟ್ಟಿದ್ದಾರೆ. ಆ ವೇಳೆ ಕೆಲವರು ಫೇಕ್ ಆಡಿಷನ್ ಮಾಡುತ್ತಿದ್ದರು. ಇನ್ನು ಕೆಲವು ಸಿನಿಮಾಗಳು ಟೇಕಾಫ್ ಆಗುತ್ತಲೇ ಇರಲಿಲ್ಲ. "ಆಡಿಷನ್‌ಗೆ ಹೋದಾಗ ಒಂದು ಬೈಟ್ ತೆಗೆದುಕೊಂಡಿರುತ್ತಾರೆ. ನಮಗೆ ಈತರ ಒಂದು ಬೈಟ್ ಕೊಟ್ಟರೆ, ನಾಳೆ ಒಂದು ಸಿನಿಮಾ ಕೊಡಿಸುತ್ತಾರೆ ಅಂತ. ಆ ಬೈಟ್ಸ್ ಅನ್ನು ಇವಾಗ ಹಾಗುತ್ತಿದ್ದಾರೆ. ಎಷ್ಟು ಫೇಕ್ ಇರುತ್ತೆ ಕಲ್ಪನೆ ಮಾಡಿಕೊಳ್ಳಿ. ಈ ವಿಡಿಯೋ ಹಾಕಿ ಇಲ್ಲಿವರೆಗೆ ಕರೆದುಕೊಂಡು ಬಂದಿದ್ದು ನಾವೇ ಅಂತ ಹಾಕುತ್ತಾರೆ." ಎಂದು ಬೇಸರ ವ್ಯಕ್ತ ಪಡಿಸುತ್ತಾರೆ.
ಡಿಂಪಲ್ ಕ್ಚೀನ್ ರಚಿತಾ ರಾಮ್ ಹೆಸರು ಇಟ್ಟುಕೊಂಡು ನಾವೇ ಚಾನ್ಸ್ ಕೊಡಿಸಿದ್ದು ಅಂತ ಹೇಳುತ್ತಿದ್ದರಂತೆ. "ಆವಾಗ ರಚಿತಾ ರಾಮ್ ಹೆವಿ ಫೇಮಸ್. ಅವರ ಫೋಟೊನೆಲ್ಲ ತೋರಿಸಿ, ಇವರಿಗೆ ನಾವೇ ಸಿನಿಮಾ ಕೊಡಿಸಿದ್ದು ಅಂದಿದ್ದರು. ನನಗೆ ರಚಿತಾ ರಾಮ್‌ಗೆ ಬುಲ್ ಬುಲ್ ಕೊಡಿಸಿದ್ದು ನಾವೇ ಅಂತ ಐದು ಜನ ಹೇಳಿದ್ದರು. ಇವರಲ್ಲಿ ಯಾರು ಕೊಡಿಸಿದ್ದು, ಐದು ಜನ ಹೇಳುತ್ತಿದ್ದಾರಲ್ಲ ಅಂತ. ನೀವು ನನಗೆ ದುಡ್ಡು ಕೊಡಿ. ನಿಮಗೂ ಅದೇ ತರ ಮಾಡುತ್ತೇನೆ ಅಂತ ಹೇಳುತ್ತಿದ್ದರು." ಎಂದು ಶರಣ್ಯ ಶೆಟ್ಟಿ ಸಂದರ್ಶನದಲ್ಲಿ ಹೇಳಿದ್ದಾರೆ.


Click it and Unblock the Notifications











