ಅಪಘಾತವಾದ ನಂತರ ನಟಿ ಶರ್ಮಿಳಾ ಮಾಂಡ್ರೆ ಮೊದಲ ಮಾತು
ಕಳೆದ ತಿಂಗಳ 4 ನೇ ತಾರೀಖು ಬೆಳಗಿನ ಜಾವ ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೆ ಈಡಾಗಿತ್ತು. ಕಠಿಣವಾದ ಲಾಕ್‌ಡೌನ್ ಇದ್ದ ಸಮಯದಲ್ಲಿ ಬೆಳಗಿನ ಜಾವ ನಡೆದ ಈ ಅಪಘಾತ ಹಲವು ಊಹಾಪೋಹಗಳನ್ನು ಸೃಷ್ಟಿಸಿತ್ತು.
Recommended Video
ನಟಿ ಶರ್ಮಿಳಾ ಮಾಂಡ್ರೆ ಜೊತೆಗೆ ಇನ್ನೂ ಕೆಲವು ಖ್ಯಾತರು ಇದ್ದರೆಂದು, ನೈಟ್ ಪಾರ್ಟಿ ಮುಗಿಸಿ ಬರುವಾಗ ಬೆಳಗಿನ ಜಾವ ಶರ್ಮಿಳಾ ಕಾರು ಅಪಘಾತವಾಗಿದೆ, ತನಿಖೆಯನ್ನು ದಿಕ್ಕು ತಪ್ಪಿಸುವ ಉದ್ದೇಶದಿಂದ ಬೇರೆ-ಬೇರೆ ಆಸ್ಪತ್ರೆಯಲ್ಲಿ ಬೇರೆ ಬೇರೆ ಹೆಸರು ಹೇಳಿ ಚಿಕಿತ್ಸೆ ಪಡೆದಿದ್ದಾರೆ ಎಂದೆಲ್ಲಾ ಸುದ್ದಿಗಳು ಹರಿದಾಡಿದ್ದವು.
ಆದರೆ ಶರ್ಮಿಳಾ ಮಾಂಡ್ರೆ ಅಪಘಾತವಾದಂದಿನಿಂದಲೂ ಯಾರ ಕೈಗೂ ಸಿಕ್ಕಿರಲಿಲ್ಲ. ಅಪಘಾತವಾದ ನಂತರ ಮೊದಲ ಬಾರಿಗೆ ಶರ್ಮಿಳಾ ಮಾಂಡ್ರೆ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಅಪಘಾತವಾದ ಬಗ್ಗೆ ಮಾತನಾಡಿದ್ದಾರೆ.

ನನ್ನ ಬಗ್ಗೆ ಹಲವಾರು ಕತೆಗಳು ಹರಿದಾಡಿದ್ದವು
ಇಂದು ಬೆಳಿಗ್ಗೆ ಟ್ವೀಟ್ ಮಾಡಿರುವ ಶರ್ಮಿಳಾ ಮಾಂಡ್ರೆ, 'ಅಪಘಾತವಾದ ಸಮಯದಲ್ಲಿ ನನ್ನ ಬಗ್ಗೆ ಹಲವಾರು ಕತೆಗಳು ಹರಿದಾಡಿದವು, ಆದರೆ ಅಪಘಾತದಲ್ಲಿ ಆದ ಗಾಯಗಳಿಂದ ಗುಣಮುಖವಾಗುವುದು ಆ ಸಮಯದಲ್ಲಿ ನನ್ನ ಮುಖ್ಯ ಉದ್ದೇಶವಾಗಿತ್ತು' ಎಂದು ಶರ್ಮಿಳಾ ಹೇಳಿದ್ದಾರೆ.

ಎಲ್ಲರಿಗೂ ಧನ್ಯವಾದ ಅರ್ಪಣೆ
ಮತ್ತೊಂದು ಟ್ವೀಟ್ ನಲ್ಲಿ, ನಾನು ಈಗ ಸಾಕಷ್ಟು ಸುಧಾರಿಸುತ್ತಿದ್ದೇನೆ. ಈ ಸಮಯದಲ್ಲಿ ನನ್ನ ಕುಟುಂಬದವರಿಗೆ, ಗೆಳೆಯರಿಗೆ, ಹಿತೈಶಿಗಳಿಗೆ, ನನಗೆ ಚಿಕಿತ್ಸೆ ನೀಡಿದ ವೈದ್ಯರಿಗೂ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ' ಎಂದು ಶರ್ಮಿಳಾ ಹೇಳಿದ್ದಾರೆ.

ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ದ ಶರ್ಮಿಳಾ
ಲಾಕ್‌ಡೌನ್ ನಿಯಮ ಉಲ್ಲಂಘಿಸಿ ನಟಿ ಶರ್ಮಿಳಾ ಮಾಂಡ್ರೆ ಮತ್ತು ಅವರ ಸ್ನೇಹಿತರು ಏಪ್ರಿಲ್ 4 ರ ಶುಕ್ರವಾರ ತಡ ರಾತ್ರಿ ಜಾಲಿ ರೈಡ್ ಮಾಡಿದ್ದರು ಎನ್ನಲಾಗಿತ್ತು. ಜಾಗ್ವಾರ್ ಕಾರ್‌ನಲ್ಲಿ ವೇಗವಾಗಿ ತೆರಳುತ್ತಿದ್ದಾಗ ಬೆಂಗಳೂರಿನ ವಸಂತನಗರ ಫ್ಲೈಓವರ್‌ನ ಕೆಳಗಿನ ಪಿಲ್ಲರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಶರ್ಮಿಳಾ ಮಾಂಡ್ರೆಗೆ ಕತ್ತು ಮತ್ತು ಕೈಗೆ ಪೆಟ್ಟಾಗಿತ್ತು.

ತನಿಖೆ ಇನ್ನೂ ಪ್ರಗತಿಯಲ್ಲಿದೆ
ಜಾಲಿರೈಡ್ ಹೊರಟಿದ್ದವರು ಮದ್ಯ ಸೇವನೆಯನ್ನೂ ಮಾಡಿದ್ದರು ಎಂದು ಆರೋಪಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಪೊಲೀಸರು ಮಹಜರು ನಡೆಸಿದ್ದರು. ಶರ್ಮಿಳಾ ಮಾಂಡ್ರೆ ಮತ್ತು ಕಾರಿನಲ್ಲಿದ್ದ ಇನ್ನಿತರೆ ವ್ಯಕ್ತಿಗಳ ಹೇಳಿಕೆ ದಾಖಲಿಸಿದ್ದಾರೆ ಎನ್ನಲಾಗಿತ್ತು. ತನಿಖೆ ಇನ್ನೂ ಪ್ರಗತಿಯಲ್ಲಿದೆ.


Click it and Unblock the Notifications











