ಸಿಎಂ ಬೊಮ್ಮಾಯಿಗೆ ಕಿಚ್ಚನ ಬೆಂಬಲ: ಸಿನಿಮಾ, ಜಾಹೀರಾತು ತಡೆ ಕೋರಿ ಚುನಾವಣಾ ಆಯೋಗಕ್ಕೆ ದೂರು!
ಕಳೆದೆರಡು ದಿನಗಳಿಂದ ಕಿಚ್ಚ ಸುದೀಪ್ ಬಿಜೆಪಿ ಸೇರುತ್ತಾರೆ ಅನ್ನೋ ವದಂತಿಗಳಿಗೆ ಬ್ರೇಕ್ ಬಿದ್ದಿದೆ. ಆದರೆ, ಕಿಚ್ಚನ ಒಂದು ನಿರ್ಧಾರವೀಗ ಸಿನಿಮಾ, ಜಾಹೀರಾತು ಹಾಗೂ ಟಿವಿ ಶೋಗೆ ಬ್ರೇಕ್ ಬೀಳುವ ಸಾಧ್ಯತೆಯಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ.
ಇಂದು(ಏಪ್ರಿಲ್ 5) ಕಿಚ್ಚ ಸುದೀಪ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಮುಖಂಡರು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಕಿಚ್ಚ ಸುದೀಪ್ ಸಿಎಂ ಬಸವರಾಜ ಬೊಮ್ಮಾಯಿಗೆ ಬೆಂಬಲ ನೀಡುವುದಕ್ಕೆ ಹೇಳಿದ್ದರು. ಈ ಮೂಲಕ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡುತ್ತಿರುವುದಾಗಿ ಒಪ್ಪಿಕೊಂಡಂತಾಗಿದೆ. ಇಲ್ಲಿಂದ ಒಂದೊಂದೇ ಅಡೆತಡೆಗಳು ಎದುರಾಗಲು ಶುರುವಾಗಿದೆ.
ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲೇ ಬೇಕು ಅಂತ ಪಣತೊಟ್ಟಿರೋ ಬಿಜೆಪಿ, ಕಿಚ್ಚ ಸುದೀಪ್ ಅವರನ್ನು ಸ್ಟಾರ್ ಪ್ರಚಾರಕರಾಗಿ ಕರೆತಂದಿದ್ದಾರೆ. ಈ ಕೆಲಸದಲ್ಲಿ ಸಿಎಂ ಬೊಮ್ಮಾಯಿ ಯಶಸ್ವಿನೂ ಆಗಿದ್ದಾರೆ. ಆದರೆ, ಕಿಚ್ಚನ ನಡೆಗೆ ಮಾತ್ರ ಕೆಲವೆಡೆ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಶಿವಮೊಗ್ಗದಲ್ಲಿ ವಕೀಲರೊಬ್ಬರು ಕಿಚ್ಚ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಕಿಚ್ಚ ಸುದೀಪ್ ಸಿಎಂ ಬೊಮ್ಮಾಯಿ ಪರ ಪ್ರಚಾರಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ, ಶಿವಮೊಗ್ಗ ವಕೀಲ ಕೆಪಿ ಶ್ರೀಪಾಲ್ ಎಂಬುವವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನಲೆಯಲ್ಲಿ ಕಿಚ್ಚ ಸುದೀಪ್ ನಟನೆಯ ಸಿನಿಮಾ, ಜಾಹೀರಾತು ಹಾಗೂ ಟಿವಿ ಶೋಗಳನ್ನು ಚುನಾವಣೆ ಅಂತ್ಯಗೊಳ್ಳುವವರೆಗೂ ತಡೆ ಹಿಡಿಯಬೇಕು ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಕಿಚ್ಚ ಸುದೀಪ್ ಕನ್ನಡ ಚಿತ್ರರಂಗ ಸ್ಟಾರ್ ನಟ. ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಅವರ ಸಿನಿಮಾಗಳು, ಜಾಹೀರಾತು ಹಾಗೂ ಟಿವಿ ಶೋಗಳು ಮತದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಕಾರಣಕ್ಕೆ ಸಿನಿಮಾ,ಜಾಹೀರಾತು, ಟಿವಿ ಶೋಗಳನ್ನು ತಡೆ ಹಿಡಿಯುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಇಂದು(ಏಪ್ರಿಲ್ 5) ಕಿಚ್ಚ ಸುದೀಪ್ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹಲವು ದಿನಗಳ ವದಂತಿಗೆ ಬ್ರೇಕ್ ಹಾಕಿದ್ದಾರೆ. ಆದರೆ, ಸಿಎಂ ಬಸವರಾಜ ಬೊಮ್ಮಾಯಿ ಚಿತ್ರರಂಗಕ್ಕೆ ಬಂದಾಗಿನಿಂದ ಸಹಾಯಕ್ಕೆ ನಿಂತಿದ್ದಾರೆ. ನನ್ನ ಕಷ್ಟಕ್ಕೆ ಆಗಿದ್ದಾರೆ. ಈ ಸಂದರ್ಭದಲ್ಲಿ ಅವರ ಪರ ನಾನು ಪ್ರಚಾರ ಮಾಡುತ್ತೇನೆ. ಅಲ್ಲದೆ ಅವರು ಎಲ್ಲಿ ಪ್ರಚಾರ ಮಾಡು ಅಂತಾರೋ ಅಲ್ಲಿ ಮಾಡುತ್ತೇನೆ." ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಸದ್ಯ ಈ ಹೇಳಿಕೆ ಬಳಿಕ ಕಿಚ್ಚ ಸುದೀಪ್ ಸೋಶಿಯಲ್ ಮೀಡಿಯಾದಲ್ಲಿ ಹೇವಿಯಾಗಿ ಟ್ರೋಲ್ ಆಗಿದ್ದರು. ಅಲ್ಲದೆ ವಿರೋಧ ಪಕ್ಷಗಳು ಟೀಕೆ ಮಾಡಿದ್ದವು. ಈಗ ಶಿವಮೊಗ್ಗದ ವಕೀಲರು ಸಿನಿಮಾ, ಜಾಹೀರಾತು ಹಾಗೂ ಟಿವಿ ಶೋವನ್ನು ತಡೆ ಹಿಡಿಯುವಂತೆ ಚುನಾವಣೆ ಆಯೋಗಕ್ಕೆ ದೂರು ನೀಡಿದ್ದು, ಆಯೋಗ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋ ಪ್ರಶ್ನೆ ಎದ್ದಿದೆ.


Click it and Unblock the Notifications











