ಪತ್ನಿ ಗೀತಾ ಜೊತೆ ಭಜರಂಗಿ 2 ಸಿನಿಮಾ ನೋಡಲಿದ್ದಾರೆ ಶಿವಣ್ಣ
ಶಿವರಾಜ್‌ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾ ಅಕ್ಟೋಬರ್ 29ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಅಭಿಮಾನಿಗಳಿಗಾಗೇ ಆಯೋಜಿಸಿದ್ದ ಸ್ಪೆಷಲ್ ಶೋ ಮುಗಿಯುತ್ತಿದ್ದಂತೆ ಪುನೀತ್ ದಿಢೀರ್ ನಿಧನದ ಸುದ್ಧಿ ಶಿವಣ್ಣ ಹಾಗೂ ಪುನೀತ್ ಅಭಿಮಾನಿಗಳನ್ನು ಶೋಕ ಸಾಗರದಲ್ಲಿ ಮುಳುಗಿಸಿತ್ತು. ಭಜರಂಗಿ 2 ಫಸ್ಟ್ ಶೋ ನೋಡಿ ಸಿನಿಮಾ ಪ್ರೇಕ್ಷಕರು ಖುಷಿಯಲ್ಲಿ ತೇಲಾಡುತ್ತಿದ್ದರೆ, ಕಹಿ ಸುದ್ದಿ ಖುಷಿಯನ್ನು ಒಂದೇ ಏಟಿಗೆ ಕೊಚ್ಚಿಕೊಂಡು ಹೋಗುವಂತೆ ಮಾಡಿತ್ತು.
ಪುನೀತ್ ನಿಧನದ ಶೋಕ ಸಾಗರದಲ್ಲೇ ಮುಳುಗಿದ್ದ ಚಿತ್ರಮಂದಿರ ಮಾಲೀಕರು ಸಿನಿಮಾ ಶೋಗಳನ್ನು ನಿಲ್ಲಿಸಿದ್ದರು. ಭಾನುವಾರ ಅಪ್ಪು ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ಒಲ್ಲದ ಮನಸ್ಸಿನಿಂದಲೇ ಮತ್ತೆ ಥಿಯೇಟರ್ ಓಪನ್ ಮಾಡಲಾಗಿತ್ತು. ಆದರೆ, ಇನ್ನೂ ಶೋಕದಲ್ಲೇ ಇದ್ದ ಸಿನಿಪ್ರಿಯರು ಚಿತ್ರಮಂದಿರಕ್ಕೆ ಬರಲು ಸಮಯ ತೆಗೆದುಕೊಂಡಿದ್ದರು. ಈಗ ನಿಧಾನವಾಗಿ ಮತ್ತೆ ಸಿನಿಮಾ ನೋಡಲು ಪ್ರೇಕ್ಷಕರು ಬರುತ್ತಿದ್ದಾರೆ, ಹೀಗಾಗಿ ಸ್ವತಃ ಶಿವರಾಜ್‌ಕುಮಾರ್ 13ನೇ ತಾರೀಕಿನಿಂದ ಭಜರಂಗಿ 2 ಪ್ರಚಾರದಲ್ಲಿ ಮುಂದಾಗಲಿದ್ದಾರೆ.
ಪತ್ನಿ ಜೊತೆ ಕೂತು ಸಿನಿಮಾ ನೋಡಲಿರುವ ಶಿವಣ್ಣ
ಪುನೀತ್ ರಾಜ್‌ಕುಮಾರ್ ಅಗಲಿಕೆ ನೋವು ದೊಡ್ಮನೆ ಕುಟುಂಬಕ್ಕೆ ದೊಡ್ಡ ಶಾಕ್. ಆ ನೋವು ಅಷ್ಟು ಸುಲಭಕ್ಕೆ ಕಡಿಮೆಯಾಗಂತಹದ್ದಲ್ಲ. ಹಾಗಂತ, ಅದೇ ನೋವಿನಲ್ಲಿ ಇರುವುದಕ್ಕೂ ಆಗುವುದಿಲ್ಲ. ಬದುಕು ಮುಂದುವರೆಯಲೇ ಬೇಕು. ಅಣ್ಣನಾಗಿ ಪುನೀತ್ ರಾಜ್‌ಕುಮಾರ್ ಎಲ್ಲಾ ಕಾರ್ಯಗಳನ್ನು ಮುಗಿಸಿರುವ ಶಿವಣ್ಣ ಮತ್ತೆ ಸಿನಿಮಾ ಕಡೆ ಮುಖ ಮಾಡುತ್ತಿದ್ದಾರೆ. ಶನಿವಾರದಿಂದ ಮತ್ತೆ ಭಜರಂಗಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಶಿವರಾಜ್‌ಕುಮಾರ್ ಹಾಗೂ ಗೀತಾ ಶಿವರಾಜ್‌ಕುಮಾರ್ ಇದೇ ಭಾನುವಾರ ( ನವೆಂಬರ್ 14) ಪತ್ನಿ ಗೀತಾರೊಂದಿಗೆ ಕೂತು ಭಜರಂಗಿ 2 ಸಿನಿಮಾ ನೋಡಲಿದ್ದಾರೆ.

ತಮ್ಮ ನೋವಿನಲ್ಲೂ ನಿರ್ಮಾಪಕರ ಕಷ್ಟಕ್ಕೆ ಶಿವಣ್ಣ ಸ್ಪಂದನೆ
ಭಜರಂಗಿ 2 ಸಿನಿಮಾಗೆ ಆರಂಭದಲ್ಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಗಳಿಕೆ ಕಾಣುತ್ತೆ ಅಂತಲೂ ಭವಿಷ್ಯ ನುಡಿದಿದ್ದರು. ಆದರೆ, ಅಪ್ಪು ಅಗಲಿಕೆಯ ನುಡಿದವರ ಭವಿಷ್ಯವನ್ನು ತಲೆಕೆಳಗಾಗುವಂತೆ ಮಾಡಿಬಿಟ್ಟಿತ್ತು. ದೀಪಾವಳಿ ಹಬ್ಬಕ್ಕೆ ಶಿವಣ್ಣ ಅಭಿಮಾನಿಗಳಿಗೆ ಭರ್ಜರಿ ಸಿನಿಮಾ ಕೊಡಬೇಕು ಅಂತ ಆಸೆಪಟ್ಟಿದ್ದ ನಿರ್ಮಾಪಕ ಜಯಣ್ಣ ಏನೂ ಮಾಡದ ಸ್ಥಿತಿಯಲ್ಲಿದ್ದರು. ಇದನ್ನು ಅರಿತಿರುವ ಶಿವಣ್ಣ ತಾವೇ ನೋವಿನಲ್ಲಿ ಇದ್ದರೂ ನಿರ್ಮಾಪಕ ಜಯಣ್ಣ ಅಸಹಾಯಕತೆಗೆ ಸ್ಪಂದಿಸಲು ಮುಂದಾಗಿದ್ದಾರೆ. ಶನಿವಾರದಿಂದ ನಿರಂತರ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.
ಬೆಳಗ್ಗೆ 5 ಗಂಟೆಗೆ ಅಭಿಮಾನಿಗಳ ಜೊತೆ ಸಿನಿಮಾ ನೋಡಿದ್ದ ಶಿವಣ್ಣ
ಅಪ್ಪು ಅಗಲಿದ ಸುದ್ದಿ ಶಿವಣ್ಣನಿಗೆ ತಲುಪಿದಾಗ ಮನೆಯಲ್ಲಿದ್ದರು. ಬೆಳಗ್ಗೆ 5 ಗಂಟೆಗೆ ಅಭಿಮಾನಿಗಳಿಗಾಗಿ ಶಿವರಾಜ್‌ಕುಮಾರ್ ಥಿಯೇಟರ್‌ಗೆ ಹೋಗಿದ್ದರು. ತಮ್ಮ ಫ್ಯಾನ್ಸ್ ಜೊತೆ ಕೂತು ಸಿನಿಮಾ ನೋಡಿ, ಮನೆಗೆ ಮರಳಿದ್ದರು. ಆಗ ಬರ ಸಿಡಿಲಿನಂತೆ ಪುನೀತ್ ರಾಜ್‌ಕುಮಾರ್ ನಿಧನ ಸುದ್ಧಿ ಶಿವಣ್ಣನಿಗೆ ತಲುಪಿತ್ತು. ಆಗ ಶಿವಣ್ಣ ಪೋನ್ ಎಸೆದು ಕುಸಿದು ಕುಳಿತುಬಿಟ್ಟಿದ್ದರು. ಆದರೆ, ತಕ್ಷಣವೇ ಸುಧಾರಿಸಿಕೊಂಡು ಮುಂದಿನ ಕಾರ್ಯಕ್ಕೆ ಮುಂದಾಗಿದ್ದರು.

ವಿತರಕರೊಂದಿಗೆ ಭಜರಂಗಿ 2 ಬಗ್ಗೆ ವಿಚಾರಿಸಿದ್ದ ಪುನೀತ್
ಪುನೀತ್ ರಾಜ್‌ಕುಮಾರ್ ಮನೆಯಿಂದ ಆಸ್ಪತ್ರೆಗೆ ತೆರಳುವಾಗ ವಿತರಕ ಮಂಜುನಾಥ್ ಜೊತೆ ಮಾತಾಡಿದ್ದರು. ಭಜರಂಗಿ 2 ಸಿನಿಮಾ ಹೇಗಿದೆ ಅಂತನೂ ವಿಚಾರಿಸಿದ್ದರು. ಪುನೀತ್ ಮಾತನಾಡಿದ್ದು ಅದೇ ಕೊನೆಯ ಕರೆ. ಸಾವನ್ನಪ್ಪುವುದಕ್ಕೂ ಮುನ್ನ ಕೂಡ ಸಿನಿಮಾ ಬಗ್ಗೆನೇ ಮಾತಾಡಿದ್ದ ಪುನೀತ್ ರಾಜ್‌ಕುಮಾರ್, ಈಗ ನೆನಪು ಮಾತ್ರ. ಆದರೆ, ಅಪ್ಪು ಅಗಲಿಕೆ ನೋವಿನಿಂದ ಹೊರಬಂದು ಮತ್ತೆ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಳ್ಳಿದ್ದಾರೆ ಶಿವಣ್ಣ.


Click it and Unblock the Notifications











