ಇರುಮುಡಿ ಹೊತ್ತ ಶಿವಣ್ಣ-ಗೀತಕ್ಕ: ತೀರ್ಥಹಳ್ಳಿಯಲ್ಲಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಸೆಂಚುರಿ ಸ್ಟಾರ್
ಅಣ್ಣಾವ್ರ ಇಡೀ ಕುಟುಂಬ ಅಯ್ಯಪ್ಪ ಸ್ವಾಮಿಯ ಭಕ್ತರು. ಇದನ್ನು ವಿಶೇಷವಾಗಿ ಹೇಳಬೇಕಿಲ್ಲ. ಅಣ್ಣಾವ್ರಿಂದ ಹಿಡಿದು ಶಿವಣ್ಣ, ಪುನೀತ್ ಹಾಗೂ ರಾಘಣ್ಣ ಎಲ್ಲರೂ ಶಬರಿಮಲೆಗೆ ಹೋಗಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಬರುತ್ತಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕೂಡ ಈ ಹಿಂದೆ ಅದೆಷ್ಟೋ ಬಾರಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಬಂದಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಶಿವರಾಜ್‌ಕುಮಾರ್ ಶಬರಿಮಲೆಗೆ ಹೋಗಿರಲಿಲ್ಲ. ಕೆಲವು ವರ್ಷಗಳ ಹಿಂದೆ ಶಿವಣ್ಣನ ಮನೆಯಲ್ಲಿ ಸ್ಯಾಂಡಲ್‌ವುಡ್ ಕೆಲ ತಾರೆಯರು ಸೇರಿಕೊಂಡು ಒಟ್ಟಾಗಿ ಶಬರಿಮಲೆ ಹೋಗಿ ಅಯ್ಯಪ್ಪನ ದರ್ಶನ ಪಡೆದು ಬರುತ್ತಿದ್ದರು. ಈ ವೇಳೆ ಶಿವಣ್ಣನ ಮನೆಯಲ್ಲಿ ಭಾರೀ ಪೂಜಾ ಕಾರ್ಯಗಳು ನಡೆಯುತ್ತಿದ್ದವು. ಆದರೆ, ಕೆಲವು ವರ್ಷಗಳಿಂದ ಶಬರಿಮಲೆಗೆ ಹೋಗುವುದನ್ನು ನಿಲ್ಲಿಸಿದ್ದರು.

ಈಗ ಶಿವರಾಜ್‌ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಇಬ್ಬರೂ ಅಯ್ಯಪ್ಪ ಸ್ವಾಮಿ ದೇವಸ್ಥಾನ ಭೇಟಿ ನೀಡಿದ್ದಾರೆ. ಅಲ್ಲಿ ಇರುಮುಡಿ ಹೊತ್ತು ಅಯ್ಯಪ್ಪನ ದರ್ಶನ ಪಡೆದಿದ್ದು, ಈ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಮಕರ ಸಂಕ್ರಮಣದ ಈ ಶುಭ ದಿನದಂದು ಶಿವಣ್ಣ ಹಾಗೂ ಪತ್ನಿ ಗೀತಾ ಶಿವರಾಜ್‌ಕುಮಾರ್ ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸಿದ್ದರು. ಇರುಮುಡಿ ಹೊತ್ತು ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಪಡೆದಿದ್ದಾರೆ. ಬಹಳ ವರ್ಷಗಳ ಬಳಿಕ ಶಿವಣ್ಣ ಮತ್ತೆ ಅಯ್ಯಪ್ಪ ಸ್ವಾಮಿಯ ಮೊರೆ ಹೋಗಿದ್ದಾರೆ. ಕ್ಯಾನ್ಸರ್‌ನಿಂದ ಹೊರ ಬಂದ ಬಳಿಕ ಶಿವಣ್ಣ ಇದೇ ಮೊದಲ ಬಾರಿಗೆ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ, ದರ್ಶನ ಪಡೆದಿದ್ದಾರೆ.
ಕರ್ನಾಟಕದ ಶಬರಿಮಲೆ ಎಂದೇ ಖ್ಯಾತಿ ಗಳಿಸಿರುವ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಬೆಜ್ಜವಳ್ಳಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶಿವಣ್ಣ ದಂಪತಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ಈ ದೇವಸ್ಥಾನದಲ್ಲೊಂದು ವಿಶೇಷವಿದೆ. ಮಕರ ಸಂಕ್ರಾಂತಿಯ ವಿಶೇಷ ದಿನದಂದು ಇಲ್ಲಿ ಗರುಡನ ದರ್ಶನವಾಗುತ್ತೆ ಎಂಬ ನಂಬಿಕೆಯಿದೆ. ಅದನ್ನು ನೋಡುವುದಕ್ಕೆ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಸೇರುತ್ತಾರೆ. ಶಿವಣ್ಣ ಹಾಗೂ ಗೀತಾ ಶಿವರಾಜ್‌ಕುಮಾರ್ ಕೂಡ ಗರುಡ ದರ್ಶನ ಪಡೆದಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಶಿವಣ್ಣ ಗರುಡನನ್ನು ತೋರಿಸುವುದ ಸೆರೆಯಾಗಿದೆ.'
ಶಿವಣ್ಣ ಹಾಗೂ ಗೀತಾ ಶಿವರಾಜ್‌ಕುಮಾರ್ ಜೊತೆಯಲ್ಲಿ ವಿಶ್ವ ಸಂತೋಷ ಭಾರತಿ ಗುರೂಜಿ ಹಾಗೂ ಅವಧೂತ ವಿನಯ್ ಗುರೂಜಿ ಕೂಡ ಭಾಗವಹಿಸಿದ್ದರು. ವಿಶ್ವ ಸಂತೋಷ ಭಾರತಿ ಗುರೂಜಿ ನೇತೃತ್ವದಲ್ಲಿ ಶ್ರೀಅಯ್ಯಪ್ಪ ಸ್ವಾಮಿ ಮೂರ್ತಿಯ ಪಲ್ಲಕ್ಕಿ ಉತ್ಸವ ನಡೀತು. ಈ ಮೆರವಣಿಗೆಯಲ್ಲಿ ಅವಧೂತ ವಿನಯ್ ಗುರೂಜಿ ಜೊತೆಗೆ ಶಿವರಾಜ್‌ಕುಮಾರ್ ಹಾಗೂ ಗೀತಾ ಶಿವರಾಜ್‌ಕುಮಾರ್ ಕೂಡ ಭಾಗವಹಿಸಿದ್ದರು.
ಈ ಬಾರಿ ಶಿವಣ್ಣ ಶಬರಿಮಲೆಗೆ ಹೋಗಿದೇ ಇದ್ದರೂ, ಕರ್ನಾಟಕದ ಶಬರಿಮಲೆಯಲ್ಲಿ ಅಯ್ಯಪ್ಪ ದರ್ಶನ ಪಡೆದು, ಅಲ್ಲಿನ ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಶಿವಣ್ಣ ಮತ್ತೆ ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸಿ, ಇರುಮುಡಿ ಹೊತ್ತು ದರ್ಶನ ಪಡೆದಿದ್ದು ಅವರ ಅಭಿಮಾನಿಗಳು ಖುಷಿಯನ್ನು ದುಪ್ಪಟ್ಟು ಮಾಡಿದೆ. ಶಿವರಾಜ್‌ಕುಮಾರ್ ಎಂದಿನಂತೆ ಲವಲವಿಕೆಯಿಂದ ಇರೋದು ನೋಡಿ ರಾಜವಂಶದ ಫ್ಯಾನ್ಸ್ ಸಂತಸ ವ್ಯಕ್ತಪಡಿಸಿದ್ದಾರೆ.


Click it and Unblock the Notifications











