"ಲೀಲಾವತಿ ಅಮ್ಮನನ್ನು ತುಂಬಾನೇ ಹಚ್ಚಿಕೊಂಡಿದ್ರು, ವಿನೋದ್ ಹೇಗೆ ತೆಗೆದುಕೊಳ್ತಾರೋ..?" ಶಿವಣ್ಣ ಪ್ರತಿಕ್ರಿಯೆ
ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಲೀಲಾವತಿ ಇಂದು (ಡಿಸೆಂಬರ್ 8) ಅಗಲಿದ್ದಾರೆ. ಹಿರಿಯ ನಟಿ ನಿಧನಕ್ಕೆ ಶಿವರಾಜ್‌ಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಪತ್ನಿ ಗೀತಾ ಶಿವರಾಜ್‌ಕುಮಾರ್ ಜೊತೆ ಬಂದು ಲೀಲಾವತಿಯವರ ಆರೋಗ್ಯವನ್ನು ವಿಚಾರಿಸಿದ್ದರು.
ಲೀಲಾವತಿ ಅಗಲಿಕೆ ಬಳಿಕ ಶಿವರಾಜ್‌ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, "ಹೆಂಗೆ ಏನು ಹೇಳ್ಬೇಕು..? ಮನಸ್ಸಿಗೆ ತುಂಬಾ ಬೇಜಾರಾಗಿದೆ. ಅವರನ್ನು ಕಳೆದ ವಾರ ಭೇಟಿ ಮಾಡಲು ಹೋದಾಗ ಏನೋ ಹೇಳುವುದಕ್ಕೆ ಪ್ರಯತ್ನ ಪಟ್ಟಿದ್ದರು. ಲೀಲಾವತಿ ಅವರು ಹೋಗಿರೋದು ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ ಆಗಿದೆ." ಎಂದು ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ವೇಳೆ ವಿನೋದ್ ರಾಜ್ ಅವರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಮ್ಮನನ್ನು ತುಂಬಾನೇ ಹಚ್ಚಿಕೊಂಡಿದ್ದರು ಹೇಗೆ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. " ವಿನೋದ್‌ಗೆ ಹೇಳ್ತಾ ಇದ್ದೆ. ಯಾವಾಗಲೂ ಜೊತೆಯಲ್ಲಿ ಇದ್ದೇವೆ ಎಂದು ಹೇಳುತ್ತಲೇ ಇದ್ದೆ. ಅವರ ಆತ್ಮಕ್ಕೆ ಶಾಂತಿ ಸಿಗಬೇಕು." ಎಂದಿದ್ದಾರೆ.
"ಲೀಲಾವತಿ ಅಮ್ಮನನ್ನು ವಿನೋದ್ ತುಂಬಾನೇ ಹಚ್ಚಿಕೊಂಡಿದ್ದರು. ಅವರಿಬ್ಬರ ಬಾಂಡಿಂಗ್ ಬೇರೆ ತರಾನೇ ಇತ್ತು. ಅದು ನಮಗೆ ಬೇಜಾರಾಗುತ್ತೆ. ವಿನೋದ್ ಹೆಂಗೆ ತಗೋತಾರೆ ಅನ್ನೋದೇ ಇರೋದು. ಈಗಾಗಲೇ ವಿನೋದ್ ಅವರ ಬಳಿ ಮಾತಾಡಿದ್ದೇವೆ. ಈತರ ಆಗಿದೆ. ಇದೆಲ್ಲ ಆದ್ಮೇಲೆ ಮತ್ತೆ ವಿನೋದ್ ಅವರನ್ನು ಭೇಟಿ ಮಾಡುತ್ತೇನೆ." ಎಂದು ಶಿವರಾಜ್‌ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಹಿರಿಯ ನಟಿ ಲೀಲಾವತಿ ಅಗಲಿಕೆಗೆ ಉಮಾಶ್ರೀ ಸಂತಾಪ ಸೂಚಿಸಿದ್ದಾರೆ. ಚಿತ್ರರಂಗಕ್ಕೆ ಹಿರಿಯ ನಟಿ ಮಾಡಿದ ಸೇವೆಯನ್ನು ನೆನೆದಿದ್ದಾರೆ. ನಟರಾಗಿ, ನಿರ್ಮಾಪಕರಾಗಿ ಚಿತ್ರರಂಗದಲ್ಲಿ ದುಡಿದಿದ್ದಾರೆ. ಮೇರು ನಟಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡು ನೂರಾರು ಸಿನಿಮಾಗಳನ್ನು ಕೊಟ್ಟ ನಟಿ. ಇಂತಹ ಕಲಾವಿದರು ಇದ್ದರು ಅನ್ನೋದೇ ಹೆಮ್ಮೆ ವಿಷಯ ಎಂದಿದ್ದಾರೆ.
ಹಾಗೇ ಸುಮಲತಾ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ಲೀಲಾವತಿ ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಹೇಳಿದ್ದಾರೆ. ಲೀಲಾವತಿ ದಕ್ಷಿಣ ಭಾರತದ ಯಶಸ್ವಿ ನಟಿಯಾಗಿದ್ದರು. ಅವರೊಂದಿಗೆ ನನಗೂ 'ಕಥಾನಾಯಕ' ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು ಎಂದು ಆ ದಿನವನ್ನು ನೆನಪಿಸಿಕೊಂಡಿದ್ದಾರೆ.
ಹಿರಿಯ ನಟಿ ಲೀಲಾವತಿ ನಿಧನಕ್ಕೆ ಸಿಎಂ ಸಿದ್ಧರಾಮಯ್ಯ ಸಂತಾಪ ಸೂಚಿಸಿದ್ದಾರೆ. "ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ನೋವುಂಟುಮಾಡಿದೆ. ಕಳೆದ ವಾರವಷ್ಟೇ ಅವರು ಅನಾರೋಗ್ಯಕ್ಕೀಡಾದ ವಿಚಾರ ತಿಳಿದು ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಪುತ್ರ ವಿನೋದ್ ರಾಜ್ ಅವರೊಂದಿಗೆ ಮಾತನಾಡಿದ್ದೆ. ಹಲವು ದಶಕಗಳ ಕಾಲ ತಮ್ಮ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಲೀಲಾವತಿ ಅವರು ಗುಣಮುಖರಾಗಿ ಇನ್ನಷ್ಟು ಕಾಲ ನಮ್ಮ ನಡುವೆ ಇರುತ್ತಾರೆಂಬ ನನ್ನ ನಂಬಿಕೆ ಹುಸಿಯಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ." ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ರಾಜ್ಯಾದ್ಯಕ್ಷ ಬಿ ವೈ ವಿಜಯೇಂದ್ರ ಹಿರಿಯ ನಟಿ ಲೀಲಾವತಿಯವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. "ಕನ್ನಡನಾಡು ಎಂದೂ ಮರೆಯಲಾಗದ ದಕ್ಷಿಣ ಭಾರತ ಚಿತ್ರರಂಗದ ಮಹಾನ್ ನಟಿ ಲೀಲಾವತಿ ಅವರು ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ಅಪಾರ ದುಃಖವಾಯಿತು. ತಮ್ಮ ಮನೋಜ್ಞ ಅಭಿನಯದ ಮೂಲಕ ಸಂತ ತುಕಾರಾಂ, ಭಕ್ತ ಕುಂಬಾರ, ಸಿಪಾಯಿ ರಾಮು, ವೀರ ಕೇಸರಿ ಸೇರಿದಂತೆ 600 ಕ್ಕೂ ಹೆಚ್ಚು ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಲೀಲಾವತಿ ಅವರು ನೀಡಿದ ಕೊಡುಗೆ ಅಪಾರ. ಕಲಾ ಸೇವೆಯ ಜತೆ ಜತೆಗೆ ಅವರಿಗಿದ್ದ ಸಾಮಾಜಿಕ ಕಳಕಳಿ, ಬಡವರ ಪರವಾಗಿದ್ದ ಧೀಮಂತಿಕೆಯಿಂದ ಅವರು ಭೌತಿಕವಾಗಿ ಇಲ್ಲದಿದ್ದರೂ, ಎಂದೆಂದಿಗೂ ಕನ್ನಡ ನಾಡಿನ ಸಿನಿ ಪ್ರೇಕ್ಷಕರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ. ಅವರ ಸುಪುತ್ರ ವಿನೋದ್ ರಾಜ್ ಹಾಗೂ ಅಭಿಮಾನಿ ವರ್ಗಕ್ಕೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ. ಲೀಲಾವತಿಯವರ ಆತ್ಮಕ್ಕೆ ಚಿರಶಾಂತಿ ಲಭಿಸಲೆಂದು ಪ್ರಾರ್ಥಿಸುವೆ." ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.


Click it and Unblock the Notifications











