Shivarajkumar Cried: ತಮ್ಮನ 'ಜೇಮ್ಸ್' ಸಿನಿಮಾ ನೋಡಿ ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ
ಇಂದು (ಮಾರ್ಚ್ 17) ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ 47ನೇ ಹುಟ್ಟುಹಬ್ಬ. ಇದೇ ದಿನ ಬಹುನಿರೀಕ್ಷೆಯ 'ಜೇಮ್ಸ್' ಸಿನಿಮಾ ಬಿಡುಗಡೆಯಾಗಿದೆ. ಮೈಸೂರಿನಲ್ಲಿ ಇದ್ದ ಶಿವರಾಜ್‌ಕುಮಾರ್ ಅಭಿಮಾನಿಗಳ ಜೊತೆ ಇದ್ದರು. ಇದೇ ವೇಳೆ ಬೆಳಗ್ಗೆಯಿಂದಲೂ ತಮ್ಮನ ಪರವಾಗಿ 'ಜೇಮ್ಸ್' ಬಿಡುಗಡೆಯಾದ ಚಿತ್ರಮಂದಿರಕ್ಕೆ ಶಿವಣ್ಣ ಭೇಟಿ ನೀಡಿದ್ದರು. ಕೆಲ ಹೊತ್ತು ಅಭಿಮಾನಿಗಳೊಂದಿಗೆ ಕಾಲ ಕಳೆದಿದ್ದರು. ಬಳಿಕ ಬೆಂಗಳೂರಿಗೆ ಹಿಂತಿರುಗಿದ್ದರು.
ಬೆಂಗಳೂರಿಗೆ ಬಂದ ಬಳಿಕ ಶಿವರಾಜ್‌ಕುಮಾರ್ 'ಜೇಮ್ಸ್' ಸಿನಿಮಾ ವೀಕ್ಷಿಸಿದ್ದಾರೆ. ಬಳಿಕ ಪತ್ರಿಕಾಗೋಷ್ಠಿಯಲ್ಲಿ ದು:ಖ ತಡೆಯಲಾಗದೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಕ್ಯಾಮರಾ ಮುಂದೆ ದು:ಖವನ್ನು ತಡೆದಿಟ್ಟುಕೊಳ್ಳಲು ಅದೆಷ್ಟೇ ಪ್ರಯತ್ನ ಪಟ್ಟರೂ ಶಿವಣ್ಣನಿಗೆ ಸಾಧ್ಯವಾಗಲೇ ಇಲ್ಲ. ಶಿವಣ್ಣ ತಮ್ಮ ಪುನೀತ್ ರಾಜ್‌ಕುಮಾರ್‌ರನ್ನು ನೆನೆದು ಕಣ್ಣೀರು ಹಾಕಿದ ದೃಶ್ಯಗಳು ಎಂತಹವರ ಮನಕಲುಕುವಂತಿದೆ.
ಈ ವೇಳೆ ಶಿವಣ್ಣ ತಮ್ಮ ಪುನೀತ್ ರಾಜ್‌ಕುಮಾರ್ ಮಾಡಿದ ಸಾಧನೆ ಬಗ್ಗೆ ಮಾತಾಡಿದರು." ಪುನೀತ್ ಇಷ್ಟೆಲ್ಲಾ ಸಾಧನೆ ಮಾಡಲು ಕಾರಣನೇ ಅಪ್ಪಾಜಿ. ಮೂಲನೇ ಅಪ್ಪಾಜಿ. ತಮ್ಮನಾಗಿ ಅಪ್ಪಾಜಿಗಿಂತ ದೊಡ್ಡ ಹೆಸರು ಮಾಡಿದ್ದು ನಮ್ಮ ಪುಣ್ಯ ಅದು. ಅಪ್ಪಾಜಿಗಿಂತ ದೊಡ್ಡ ಮನುಷ್ಯ ಆಗಿಬಿಟ್ಟ ಅವನು. ಯಾವಾಗಲೂ ತಂದೆಯಾದವನು, ಇಲ್ಲ ಅಣ್ಣನಾದವನು. ನನಗಿಂತ ಒಂದು ಮೆಟ್ಟಿಲು ಮೇಲಿರಬೇಕು ಅಂತ ಬಯಸುತ್ತಾರೆ." ಶಿವಣ್ಣ ಮಾಧ್ಯಮಗಳಿಗೆ ಹೇಳಿದ್ದಾರೆ.

"ಅಪ್ಪಾಜಿಗಂತೂ ಅವನನ್ನು ಕಂಡರೆ ಪ್ರಾಣ. ಅಪ್ಪು ಹುಟ್ಟಿದ ಘಳಿಗೆನೇ ಬೇರೆ. ಅವನು ಚಿಕ್ಕ ಮಗು ಇದ್ದಾಗಿನಿಂದ ನೋಡಿ ಹೇಗೆ ಕಾಣಿಸುತ್ತಾನೆ. ಅದೇ ತರಾನೇ ಆ ನಗು ಇನ್ನೂ ಇದೆ. ಆ ನಗು ಯಾವತ್ತೂ ಹೋಗಿಲ್ಲ. ಕರ್ನಾಟಕದಲ್ಲಿ ಅಷ್ಟೊಂದು ಪ್ರೀತಿ ಕೊಟ್ಟಿದ್ದು ನೋಡಿ ತುಂಬಾನೇ ಖುಷಿ ಆಯ್ತು. ಆ ಅಭಿಮಾನವನ್ನು ಕಾಪಾಡಿಕೊಂಡು ಹೋಗಿ ಅಂತ ಹೇಳುತ್ತೇನೆ. ಥಿಯೇಟರ್ ಒಳಗೆ ಪಟಾಕಿ ಹೊಡೆಯ ಬೇಡಿ. ಪಿರಿಯಾಪಟ್ಟಣದಲ್ಲಾದ ಘಟನೆ ನೋಡಿ. ಎಲ್ಲರಿಗೂ ಇದು ಅಪಾಯ. ಬೇಡ, ಪ್ರಾಣ ತುಂಬಾ ಮುಖ್ಯ." ಅಂತಾರೆ ಶಿವಣ್ಣ.


Click it and Unblock the Notifications











