ಶಿವಣ್ಣ-ಡಾಲಿಯ '666 ಆಪರೇಷನ್ ಡ್ರೀಮ್ ಥಿಯೇಟರ್'ಗೆ ರೆಟ್ರೋ ಹಾರ್ಟ್-ಡಿಸ್ಕೋ ಸೋಲ್.. ಸಾಂಗ್ ಸೆಟ್ ಹೇಗಿದೆ ನೋಡಿ!
ಸ್ಯಾಂಡಲ್‌ವುಡ್‌ನ ಮತ್ತೊಂದು ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ '666 ಆಪರೇಷನ್ ಡ್ರೀಮ್ ಥಿಯೇಟರ್'. ಹೇಮಂತ್ ಎಂ ರಾವ್ 'ಸಪ್ತಸಾಗರದಾಚೆ ಎಲ್ಲೋ' ಬಳಿಕ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶಿವರಾಜ್‌ಕುಮಾರ್, ಡಾಲಿ ಧನಂಜಯ್ ಅವರ ರೆಟ್ರೋ ಲುಕ್ ಈಗಾಗಲೇ ಸಿನಿಪ್ರಿಯರಿಗೆ ಕಿಕ್ ಕೊಟ್ಟಿದೆ. ಸೆಂಚುರಿ ಸ್ಟಾರ್ ಶಿವಣ್ಣ ಅಂತೂ ಅಣ್ಣಾವ್ರ ಹಾಗೇ ಬಾಂಡ್ ಲುಕ್ ಕೊಟ್ಟು ಕುತೂಹಲ ಕೆರಳಿಸಿದ್ದಾರೆ.
'ಸಪ್ತಸಾಗರದಾಚೆ ಎಲ್ಲೋ' ಎಲ್ಲಾ ಮೆಚ್ಚುಗೆ ಪಡೆದುಕೊಂಡ ಬಳಿಕ ಹೇಮಂತ್ ರಾವ್ ಕೈಗೆತ್ತಿಕೊಂಡಿರುವ ಈ ಸಿನಿಮಾ ಮೇಲೆ ನಿರೀಕ್ಷೆ ದುಪ್ಪಟ್ಟಿದೆ. ಅದಕ್ಕೆ ತಕ್ಕಂತೆ ಹೇಮಂತ್ ರಾವ್ ಕೂಡ ಸರ್ಪ್ರೈಸ್ ಕೊಡುತ್ತಲೇ ಇದ್ದಾರೆ. ಸದ್ಯ '666 ಆಪರೇಷನ್ ಡ್ರೀಮ್ ಥಿಯೇಟರ್' ಸಾಂಗ್ ಅನ್ನೂ ಅದ್ಧೂರಿಯಾಗಿ ಶೂಟ್ ಮಾಡುತ್ತಿದ್ದಾರೆ. ವಿಶೇಷ ಅಂದರೆ, ರೆಟ್ರೋ ಸ್ಟೈಲ್‌ನಲ್ಲಿ ಈ ಹಾಡಿನ ಚಿತ್ರೀಕರಣ ನಡೆಯುತ್ತಿದೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ '666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾದ ಅದ್ದೂರಿ ಸೆಟ್ ಹಾಕಲಾಗಿದೆ. ಹೇಮಂತ್ ಎಂ ರಾವ್ ಈ ರೆಟ್ರೋ ಸಾಂಗ್‌ನ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದು, ರೆಟ್ರೋ ಹಾರ್ಟ್-ಡಿಸ್ಕೋ ಸೋಲ್ ಎಂದು ಬರೆದುಕೊಂಡಿದ್ದಾರೆ. ಈ ಮೇಕಿಂಗ್ ಫೋಟೊಗಳು ಕೂಡ ಅದೇ ಸುಳಿವನ್ನು ನೀಡುತ್ತಿವೆ. ಹಾಗಿದ್ದರೆ, ಕೋರಿಯೋಗ್ರಾಫರ್ ಇಮ್ರಾನ್ ಸರ್ದಾರಿಯಾ, ಆರ್ಟ್ ಡೈರೆಕ್ಟರ್ ವಿಶ್ವಾಸ್ ಕಶ್ಯಪ್, ನಿರ್ದೇಶಕ ಹೇಮಂತ್ ಎಂ ರಾವ್ ಏನು ಹೇಳಿದ್ದಾರೆ ಅನ್ನೋದನ್ನು ನೋಡೋಣ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ನಟರಾಕ್ಷಸ ಡಾಲಿ ಧನಂಜಯ್ ಲೀಡ್ ರೋಲ್‌ನಲ್ಲಿ ನಟಿಸುತ್ತಿದ್ದರೆ, ಬಹುಭಾಷಾ ನಟಿ ಪ್ರಿಯಾಂಕಾ ಮೋಹನ್, ಅದಿತಿ ಬಾಲನ್ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಅದ್ಧೂರಿ ರೆಟ್ರೋ ಸಾಂಗ್ ಅನ್ನು ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿ ಮಾಡುತ್ತಿದ್ದಾರೆ. ವಿಶ್ವಾಸ್ ಕಶ್ಯ್ ಅದ್ಧೂರಿ ಸೆಟ್‌ಗಳನ್ನು ಹಾಕಿದ್ದಾರೆ. ಈ ಹಾಡಿನ ಬಗ್ಗೆ ನಿರ್ದೇಶಕ ಹೇಮಂತ್ ರಾವ್ ಸೇರಿದಂತೆ ಇಮ್ರಾನ್ ಸರ್ದಾರಿಯಾ ಹಾಗೂ ವಿಶ್ವಾಸ್ ಕಶ್ಯಪ್ ಹೀಗಂತಾರೆ.
ಕನ್ನಡ ಚಿತ್ರರಂಗದ ಸ್ಟೈಲಿಶ್ ಕೊರಿಯೋಗ್ರಫರ್ ಇಮ್ರಾನ್ ಸರ್ದಾರಿಯಾ ಹಾಡಿನ ಬಗ್ಗೆ ಹೀಗಂತಾರೆ. "ನಿರ್ದೇಶಕ ಹೇಮಂತ್ ಎಂ ರಾವ್ ಅವರೊಟ್ಟಿಗೆ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದೇನೆ. ನಾನು ಯಾವಾಗಲೂ ಅವರ ದೃಷ್ಟಿಕೋನ, ಅವರು ತಮ್ಮ ನಟರನ್ನು ಪ್ರೆಸೆಂಟ್ ಮಾಡುವ ರೀತಿ, ಹಾಗೇ ಅವರು ಹೆಣೆಯುವ ಕಥೆಗಳಿಗೆ ಅಭಿಮಾನಿ. ಮೊದಲ ಬಾರಿಗೆ ಅವರು ವಿಭಿನ್ನವಾದ ಸಿನಿಮಾವನ್ನು ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಹಾಡನ್ನು ಹೇಗೆ ಪ್ರೆಸೆಂಟ್ ಮಾಡಬೇಕು ಎಂಬ ಬಗ್ಗೆ ವಿಸ್ತಾರವಾದ ಚರ್ಚೆ ನಡೆಸಿದ್ದೇವೆ. ಇದು ಕೇವಲ ಹಾಡಲ್ಲ. ಆದರೆ, ಸಿನಿಮಾದ ನಿರೂಪಣೆಯ ಒಂದು ಮುಖ್ಯವಾದ ತುಣುಕು. ಚರಣ್ ರಾಜ್ ಮತ್ತು ಹೇಮಂತ್ ಅದ್ಭುತ ಜೋಡಿ. ಅವರ ಸಂಗೀತಕ್ಕೆ ಕೊರಿಯೋಗ್ರಫಿ ಮಾಡುವುದು ಒಂದು ಉತ್ತಮ ಅನುಭವ. ಇದು ಕಮರ್ಷಿಯಲ್ ರೆಟ್ರೋ ನಂಬರ್. ನನಗೆ ಸಿಕ್ಕಾಪಟ್ಟೆ ಸವಾಲಿನ ಸಿನಿಮಾ ಎನಿಸಿತ್ತು" ಎಂದಿದ್ದಾರೆ.

ಇನ್ನು ರೆಟ್ರೋ ಶೈಲಿಯ ಸಿನಿಮಾಗಳಿಗೆ ಸೆಟ್ಟು ಹಾಕೋದು ಅಷ್ಟು ಸುಲಭ ಅಲ್ಲ. ಡಿಟೈಲ್ ಆಗಿ ಸೆಟ್ ಅನ್ನು ಹಾಕಬೇಕಾಗುತ್ತೆ. ಈ ಸಿನಿಮಾಗೆ ವಿಶ್ವಾಸ್ ಕಶ್ಯಪ್ ಆರ್ಟ್ ಡೈರೆಕ್ಟರ್. ಇವರು ಈ ಅದ್ಧೂರಿ ಸೆಟ್ ಬಗ್ಗೆ ಹೀಗಂತಾರೆ. "ಈ ಸೆಟ್ ಶಾಸ್ತ್ರೀಯ ರಂಗಭೂಮಿ ವಿನ್ಯಾಸದಿಂದ ಸ್ಫೂರ್ತಿ ಪಡೆಯಲಾಗಿದ. ಇದರ ರೂಪವೂ ಕೂಡ ಕರ್ವಿಲಿನಿಯರ್ ಜ್ಯಾಮಿತಿ ವಿನ್ಯಾಸದಿಂದ ಕೂಡಿದೆ. ನಾವು ಇಲ್ಲಿವರೆಗೆ ಒಂಬತ್ತು ಬೃಹತ್ ಸೆಟ್‌ಗಳನ್ನು ನಿರ್ಮಿಸಿದ್ದೇವೆ. ಈ ಸೆಟ್ ಸಿನಿಮಾದ ನಿರೂಪಣೆಯ ಆಧಾರ ಸ್ತಂಭ. ಈ ಸೆಟ್ ಭಾರತೀಯ ಚಿತ್ರರಂಗದ ರೆಟ್ರೋ ಯುಗಕ್ಕೆ ಒಂದು ಹೆಮ್ಮೆ. ಅಂತಹ ದೊಡ್ಡ ಪ್ರಮಾಣದಲ್ಲಿ ನಿರ್ಮಿಸಲಾದ ಸಿನಿಮಾಕ್ಕೆ ದೊಡ್ಡ ಬೆಂಬಲದ ಅಗತ್ಯವಿದೆ" ಎನ್ನುತ್ತಾರೆ ವಿಶ್ವಾಸ್ ಕಶ್ಯಪ್.
ಇನ್ನು ನಿರ್ದೇಶಕ ಹೇಮಂತ್ ರಾವ್ ವೃತ್ತಿ ಬದುಕಿನಲ್ಲೇ ಹಾಡಿಗಾಗಿ ಹಾಕಿರೋ ದೊಡ್ಡ ಸೆಟ್ ಇದು. "ನನ್ನ ಹಿಂದಿನ ಚಿತ್ರಗಳಲ್ಲಿ ನಾನು ಈ ರೀತಿಯ ಹಾಡನ್ನು ಎಂದಿಗೂ ಶೂಟಿಂಗ್ ಮಾಡಿರಲಿಲ್ಲ. ಇದು ನನ್ನ ಸೌಕರ್ಯ ವಲಯದಿಂದ ಸಂಪೂರ್ಣವಾಗಿ ಹೊರಗಿದೆ. ಹೈಪರ್-ಕೊರಿಯೋಗ್ರಾಫ್ ಸೀಕ್ವೆನ್ಸ್‌ಗಾಗಿ ನಾವು ಒಂದು ದೊಡ್ಡ ಸೆಟ್ ಅನ್ನು ನಿರ್ಮಿಸಿದ್ದೇವೆ. ನನಗೆ ಇದೊಂದು ಅದ್ಭುತ ಅನುಭವ" ಎಂದು ಕುತೂಹಲವನ್ನು ದುಪ್ಪಟ್ಟು ಮಾಡುತ್ತಾರೆ.
'666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾ ವೈಶಾಕ್ ಜೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಡಾ. ವೈಶಾಕ್ ಜೆ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಈ ವರ್ಷದ ಸೆಕೆಂಡ ಹಾಫ್‌ನಲ್ಲಿ ಥಿಯೇಟರ್‌ಗಳಿಗೆ ಸಿನಿಮಾ ಲಗ್ಗೆ ಇಡುತ್ತಿದೆ. ಚರಣ್ ರಾಜ್ ಸಂಗೀತ ನಿರ್ದೇಶನವಿದೆ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ವಿಶ್ವಾಸ್ ಕಶ್ಯಪ್ ಆರ್ಟ್ ಡೈರೆಕ್ಷನ್, ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ಹೈ ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾ ತೆಲುಗು ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ರಿಲೀಸ್ ಮಾಡಲಾಗುತ್ತಿದೆ.


Click it and Unblock the Notifications