ಶಿವಣ್ಣನ ಪುತ್ರಿ ನಿರ್ಮಾಣದ ಚೊಚ್ಚಲ ಸಿನಿಮಾ ಏನಾಯ್ತು? ಯಾವ ಹಂತದಲ್ಲಿದೆ ಸಿನಿಮಾ?
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಚಿತ್ರರಂಗಕ್ಕೆ ಕಾಲಿಟ್ಟಿರೋದು ಗೊತ್ತೇ ಇದೆ. ನಿರ್ಮಾಪಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರೋ ನಿವೇದಿತಾ ಚೊಚ್ಚಲ ಸಿನಿಮಾವನ್ನು ಕೆಲವು ದಿನಗಳ ಹಿಂದಷ್ಟೇ ಸೆಟ್ಟೇರಿದ್ದರು. ಅದುವೇ 'ಫೈರ್ ಫ್ಲೈ'.
'ಫೈರ್ ಫ್ಲೈ' ಬಹುತೇಕ ಹೊಸಬರೇ ಸೇರಿ ನಿರ್ಮಾಣ ಮಾಡುತ್ತಿರುವ ಸಿನಿಮಾ. ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಬೇಕು ಅನ್ನೋದೇ ಇವರ ಮೂಲ ಉದ್ದೇಶ ಕೂಡ. ಹೀಗಾಗಿ ನಿವೇದಿತಾ, ಅವರದ್ದೇ ಶ್ರೀ ಮುತ್ತು ಸಿನಿ ಸರ್ವೀಸ್ ಸಂಸ್ಥೆಯಿಂದ 'ಫೈರ್ ಫ್ಲೈ'ಗೆ ಕೈ ಹಾಕಿದ್ದರು.
ಶಿವರಾಜ್‌ಕುಮಾರ್ ಹಾಗೂ ಗೀತಾ ಶಿವರಾಜ್‌ಕುಮಾರ್ ಮಗಳಿಗೆ ಜೊತೆಯಾಗಿ ನಿಂತಿದ್ದಾರೆ. ಸದ್ಯ 'ಫೈರ್ ಫ್ಲೈ' ಸಿನಿಮಾದ ಮೊದಲ ಹಂತದ ಶೂಟಿಂಗ್ ಮುಗಿದಿದೆ. ಯಶಸ್ವಿಯಾಗಿ ಸಿನಿಮಾದ ಶೂಟಿಂಗ್ ಮುಗಿಸಿದ್ದಕ್ಕೆ ಚಿತ್ರತಂಡ ಫುಲ್ ಖುಷಿಯಾಗಿದೆ.

'ಫೈರ್ ಫ್ಲೈ' ಸಿನಿಮಾ ಇದೂವರೆಗೂ ಪೋಸ್ಟರ್ ಮೂಲಕ ಗಮನಸೆಳೆದಿತ್ತು. ಸದ್ಯ ಈ ಸಿನಿಮಾದ ಮೊದಲ ಹಂತದ ಶೂಟಿಂಗ್ ಮುಕ್ತಾಯಗೊಂಡಿದೆ. ಇದೂವರೆಗೂ ಮೈಸೂರು,ಬೆಂಗಳೂರು ಸುತ್ತಮುತ್ತ ಸಿನಿಮಾದ ಶೂಟಿಂಗ್ ನಡೆದಿದೆ. ಮುಂದಿನ ತಿಂಗಳು ಅಂದರೆ, ಅಕ್ಟೋಬರ್ ಮೂರನೇ ವಾರದಿಂದ ಎರಡನೇ ಹಂತದ ಶೂಟಿಂಗ್ ಶುರುವಾಗುವ ಸಾಧ್ಯತೆಯಿದೆ.
ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರೋದು ವಂಶಿ. ಅಂದ್ಹಾಗೆ ಈ ಸಿನಿಮಾ ವಂಶಿನೇ ಹೀರೊ. ಈ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಕನ್ನಡಕ್ಕೆ ಪರಿಚಯ ಆಗುತ್ತಿದ್ದಾರೆ. ಚರಣ್ ರಾಜ್ 'ಫೈರ್ ಫ್ಲೈ' ಸಿನಿಮಾಗೆ ಸಂಗೀತ ನೀಡುತ್ತಿರೋದು ಬಲಬಂದಂತೆ ಆಗಿದೆ. ಹಾಗೇ ಈ ಚಿತ್ರಕ್ಕೆ ಅಭಿಲಾಷ್ ಕಲ್ಲಟ್ಟಿ ಕ್ಯಾಮರಾವರ್ಕ್ ಇದ್ದರೆ, ರಘು ನಿಡುವಳ್ಳಿ ಡೈಲಾಗ್ ಬರೆದಿದ್ದಾರೆ.

'ಫೈರ್ ಫ್ಲೈ' ಸಿನಿಮಾ ಹೀರೊ ಕಮ್ ನಿರ್ದೇಶಕ ವಂಶಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿದೆ. ಪಿಆರ್‌ಕೆ ಸಂಸ್ಥೆ ನಿರ್ಮಾಣ ಮಾಡಿದ್ದ 'ಮಯಾಬಜಾರ್' ಸಿನಿಮಾದಲ್ಲಿ ಇವರು ಸಹಾಯ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಹಾಗೇ ಗುರು ದೇಶಪಾಂಡೆಯ 'ಪೆಂಟಗನ್' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ನಿವೇದಿತಾ ಶಿವರಾಜ್‌ಕುಮಾರ್‌ಗೆ ನಿರ್ಮಾಣದ ಅನುಭವ ಇದೇ ಮೊದಲೇನಲ್ಲ. ಈ ಹಿಂದೆ ವೆಬ್ ಸೀರಿಸ್ ಒಂದನ್ನು ನಿರ್ಮಾಣ ಮಾಡಿದ್ದರು. ಆದರೆ, ಸಿನಿಮಾ ಅಂತ ಪ್ರಡ್ಯೂಸ್ ಮಾಡುತ್ತಿರೋದು ಇದೇ ಮೊದಲು. ಈ ಹಂತದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದಕ್ಕೆ ಮುಂದಾಗಿದ್ದಕ್ಕೆ ಚಿತ್ರರಂಗ ಮೆಚ್ಚುಗೆಯನ್ನು ವ್ಯಕ್ತಪಡಿಸಿತ್ತು.
ಅಂದ್ಹಾಗೆ ನಿವೇದಿತಾ 1998ರಲ್ಲಿ ತೆರೆಕಂಡಿದ್ದ ಶಿವಣ್ಣ ನಟನೆಯ 'ಅಂಡಮಾನ್' ಸಿನಿಮಾದಲ್ಲಿ ನಟಿಸಿದ್ದರು. ಬಾಲ ನಟಿಯಾಗಿ ನಟಿದ್ದ ನಿವೇದಿತಾಗೆ ಕರ್ನಾಟಕ ರಾಜ್ಯ ಚಲನ ಚಿತ್ರ ಪ್ರಶಸ್ತಿ ಕೂಡ ಲಭಿಸಿತ್ತು.


Click it and Unblock the Notifications











