ನಿವೇದಿತಾ ಶಿವರಾಜ್‌ಕುಮಾರ್‌ಗೆ ಅಪ್ಪನಿಗೆ ಸಿನಿಮಾ ನಿರ್ಮಿಸುವ ಆಸೆ: ಅದು ಯಾವ ಶೈಲಿಯಲ್ಲಿರುತ್ತೆ?
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಸಿನಿಮಾವೊಂದನ್ನು ನಿರ್ಮಾಣ ಮಾಡಿದ್ದಾರೆ. ಅವರದ್ದೇ ನಿರ್ಮಾಣ ಸಂಸ್ಥೆ ಶ್ರೀ ಮುತ್ತು ಸಿನಿ ಸರ್ವೀಸ್ ಬ್ಯಾನರ್‌ನಲ್ಲಿ 'ಫೈರ್ ಫ್ಲೈ' ಎನ್ನುವ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಸಿನಿಮಾ ಪ್ರಚಾರವನ್ನು ಸಹ ಪುತ್ರಿ ನಿವೇದಿತಾ ಈಗಾಗಲೇ ಶುರು ಮಾಡಿದ್ದಾರೆ. ಹೊಸ ಬರ ಸಿನಿಮಾವನ್ನು ನಿರ್ಮಾಣ ಮಾಡಿರುವ ನಿವೇದಿತಾಗೆ ಥಿಯೇಟ್ರಿಕಲ್ ರಿಲೀಸ್ ಅನ್ನೋದು ಹೊಸ ಅನುಭವ.
ಈಗಾಗಲೇ ವೆಬ್ ಸೀರಿಸ್‌ಗಳನ್ನು ನಿರ್ಮಾಣ ಮಾಡಿ ಅನುಭವವಿದ್ದರೂ, ಥಿಯೇಟರ್‌ನಲ್ಲಿ ರಿಲೀಸ್ ಮಾಡುತ್ತಿರುವುದು ಇದೇ ಮೊದಲು. ಸದ್ಯ ಪ್ರಚಾರ ಆರಂಭಿಸಿರುವ ನಿವೇದಿತಾ ಶಿವರಾಜ್‌ಕುಮಾರ್ ಫಿಲ್ಮಿಬೀಟ್ ಕನ್ನಡದ ಜೊತೆ ಸಿನಿಮಾ ನಿರ್ಮಾಣದ ಅನುಭವ, ಶಿವಣ್ಣನೊಂದಿಗೆ ಸಿನಿಮಾ ಮಾಡುವ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಅದರ ಒಂದು ಝಲಕ್ ಇಲ್ಲಿದೆ.

'ಫೈರ್ ಫ್ಲೈ' ಸಿನಿಮಾವನ್ನು ನಿವೇದಿತಾ ಶಿವರಾಜ್‌ಕುಮಾರ್ ಅವರೇ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾವನ್ನು ವಂಶಿ ನಿರ್ದೇಶಿಸಿದ್ದು, ನಾಯಕನಾಗಿ ನಟಿಸಿದ್ದಾರೆ. ಈ ಸಿನಿಮಾದ ಬಿಡುಗಡೆಗೆ ಈಗ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಏಪ್ರಿಲ್ 24, 2025ರಂದು ರಿಲೀಸ್ ಆಗಲಿದೆ. "ನಿರ್ಮಾಣ ಮಾಡಿ ಥಿಯೇಟರ್‌ನಲ್ಲಿ ರಿಲೀಸ್ ಮಾಡುವುದು ನನಗೆ ಹೊಸದು. ನನಗೆ ನರ್ವಸ್ ಕೂಡ ಇದೆ. ಹಾಗೆ ಕುತೂಹಲ ಕೂಡ ಇದೆ. ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ಅದರ ಫಲಿತಾಂಶ ಕೂಡ ಅಷ್ಟೇ ಚೆನ್ನಾಗಿ ಬರುತ್ತೆ ಅನ್ನೋ ನಂಬಿಕೆಯಿದೆ." ಎನ್ನುತ್ತಾರೆ.
ನಿವೇದಿತಾ ಶಿವರಾಜ್‌ಕುಮಾರ್ ಬಾಲ ನಟಿಯಾಗಿ ನಟಿಸಿದ್ದಾರೆ. ಶಿವಣ್ಣ ನಟಿಸಿದ 'ಅಂಡಮಾನ್' ಸಿನಿಮಾದಲ್ಲಿ ನಿವೇದಿತಾ ನಟಿಸಿದ್ದರು. ಅದು ಬಿಟ್ಟರೆ ಮತ್ತೆ ಸಿನಿಮಾದಲ್ಲಿ ನಟಿಸಲಿಲ್ಲ. "ಇಲ್ಲ ನಮ್ಮ ಮನೆಯಲ್ಲಿ ಆಕ್ಟಿಂಗ್ ಮಾಡಬೇಕು ಅನ್ನುವ ಬಗ್ಗೆ ಮಾತುಕತೆ ನಡೆಯುತ್ತಿರಲಿಲ್ಲ. ಅವಾಗ ನನ್ನ ಸ್ಕೂಲ್, ಶಿಕ್ಷಣ ಅದರ ಮೇಲೆ ಫೋಕಸ್ ಇತ್ತು. ಅಪ್ಪನ ಸಿನಿಮಾ ಸೆಟ್ಟಿಗೆ ಹೋಗುತ್ತಿದ್ವಿ. ಆದರೆ, ಸಿನಿಮಾ ಇಂಡಸ್ಟ್ರಿ ಬಗ್ಗೆ ಮನೆಯಲ್ಲಿ ಅಷ್ಟೊಂದು ಚರ್ಚೆ ಏನೂ ಆಗುತ್ತಿರಲಿಲ್ಲ." ಎನ್ನುತ್ತಾರೆ.
'ಅಂಡಮಾನ್' ಸಿನಿಮಾ ಬಳಿಕ ಬಾಲ ನಟಿಯಾಗಿ ಮತ್ತೊಂದು ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ, ಅದು ಟೇಕಾಫ್ ಆಗಲಿಲ್ಲ. "ಬಾಲ ನಟಿಯಾಗಿ ನಟಿಸುವುದಕ್ಕೆ ಅವಕಾಶ ಬಂದಿತ್ತು ಅನಿಸುತ್ತೆ. ಅಂಡಮಾನ್ ಆದ್ಮೇಲೆ ಇನ್ನೊಂದು ಸಿನಿಮಾ ಮಾಡಬೇಕಾಗಿತ್ತು ಅನಿಸುತ್ತೆ. ಆದರೆ, ಅದು ಟೇಕಾಫ್ ಆಗಲಿಲ್ಲ. ನನಗೆ ಅಷ್ಟು ನೆನಪಿರಲಿಲ್ಲ. ಯಾವ ಸಿನಿಮಾ ಅಂತ ನನಗೆ ನೆನಪಿಲ್ಲ. ಆಗ ನನಗೆ ನಾಲ್ಕು ವರ್ಷವಿತ್ತು." ಎನ್ನುತ್ತಾರೆ.
ಹಾಗೇ 'ಫೈರ್ ಫ್ಲೈ' ಸಿನಿಮಾ ನಿರ್ಮಾಣ ಮಾಡಿದ ಅನುಭವವನ್ನೂ ಹಂಚಿಕೊಂಡಿದ್ದಾರೆ. "ಕಲಿಕೆ ಅನ್ನೋದು ನಡೀತಾನೇ ಇರುತ್ತೆ. ಪ್ರಾಕ್ಟಿಕಲ್ ಆಗಿ ಹೋಗಿ ಸಿನಿಮಾ ಮಾಡಿದಾಗ ಕಲಿತು ಕೊಳ್ಳುತ್ತೇವೆ ಅಲ್ವ, ಅದು ತುಂಬಾನೇ ಮುಖ್ಯ ಆಗುತ್ತೆ. ಸೆಟ್ಟಿಗೆ ಹೋಗುವುದಾಗಿರಲಿ. ಡೈರೆಕ್ಟರ್ ಟೀಮ್ ಜೊತೆ ಕೂಡ ಚರ್ಚೆ ಮಾಡುವುದಾಗಿರಲಿ ಹೀಗೆ ಕಲಿಕೆ ನಡೀತಾನೇ ಇದೆ." ಎಂದು ನಿವೇದಿತಾ ಹೇಳಿದ್ದಾರೆ.
ಚಿಕ್ಕದನಿಂದ ಜೀವನದಲ್ಲ ಹಲವು ಗೋಲ್‌ಗಳನ್ನು ಇಟ್ಟುಕೊಂಡಿದ್ದರು. ಅದನ್ನು ರಿವೀಲ್ ಮಾಡಿದ್ದಾರೆ. "ನನಗೆ ಒಮ್ಮೆ ಟೀಚರ್ ಆಗಬೇಕು ಅಂತಿತ್ತು. ಇನ್ನೊಂದು ಸಮಯದಲ್ಲಿ ಆರ್ಕಿಟೆಕ್ಟ್ ಆಗಬೇಕು ಅಂತಿತ್ತು. ನಾನು ಪೆಂಟಿಂಗ್ ಎಲ್ಲಾ ಮಾಡುತ್ತೇನೆ. ನನಗೆ ಆರ್ಟಿಸ್ಟ್ ಆಗಬೇಕು ಅಂತಿತ್ತು. ಜೀವನದ ಪ್ರತಿಯೊಂದು ಹಂತದಲ್ಲಿ ಬೇರೆ ಬೇರೆ ಗುರಿ ಇತ್ತು." ಎನ್ನುತ್ತಾರೆ.
ಇನ್ನು ಶಿವಣ್ಣ ಸಿನಿಮಾ ಅಂತ ಅದೆಷ್ಟೇ ಬ್ಯುಸಿಯಾಗಿದ್ದರೂ, ಫ್ಯಾಮಿಲಿಗೆ ಸಮಯ ಮೀಸಲಿಡುತ್ತಿದ್ದರು. "ಅಪ್ಪ ಎಷ್ಟು ಬ್ಯುಸಿಯಾಗಿದ್ದರೂ, ಫ್ಯಾಮಿಲಿಗೆ ತುಂಬಾನೇ ಸಮಯ ಕೊಟ್ಟಿದ್ದಾರೆ. ನಮಗೆ ಸ್ಕೂಲ್‌ಗೆ ಡ್ರಾಪ್ ಮಾಡುವುದಾಗಿರಲಿ. ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗುವುದಾಗಿರಲಿ. ಡೆಂಟಿಸ್ಟ್ ಹತ್ತಿರ ಕರೆದುಕೊಂಡು ಹೋಗುವುದಾಗಿರಲಿ ಎಲ್ಲಾ ಮಾಡಿದ್ದಾರೆ. ಹೀಗಾಗಿ ನನಗೆ ಅಪ್ಪನೊಂದಿಗೆ ಹೆಚ್ಚು ಸಮಯ ಕಳೆದಿಲ್ಲ ಅಂತೇನಿ ಅನಿಸುವುದಿಲ್ಲ. ಅಪ್ಪ ಮನೆಯಲ್ಲಿ ಇಲ್ಲ. ಟೈಮ್ ಕೊಡುತ್ತಿಲ್ಲ ಅಂತ ಅನಿಸಲೇ ಇಲ್ಲ." ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ನಿವೇದಿತಾ ಶಿವರಾಜ್‌ಕುಮಾರ್‌ಗೆ ತನ್ನ ತಂದೆಗೆ ಒಂದು ಸಿನಿಮಾ ನಿರ್ಮಾಣ ಮಾಡಬೇಕು ಅನ್ನೋ ಆಸೆಯಿದೆ. ಅದು ಯಾವಾಗ ಶೈಲಿಯಲ್ಲಿಇರುತ್ತೆ ಅನ್ನೋದನ್ನು ಹಂಚಿಕೊಂಡಿದ್ದಾರೆ. "ಅಪ್ಪನಿಗೊಂದು ಸಿನಿಮಾ ಮಾಡಬೇಕು ಅಂತ ಆಸೆ ಇದೆ ನನಗೆ. ಆದರೆ, ಅವರು ಈಗ ತುಂಬಾನೇ ಬ್ಯುಸಿಯಾಗಿದ್ದಾರೆ. ಇನ್ನು ಕೆಲವು ವರ್ಷ ಅವರ ಕೈ ತುಂಬಾ ಸಿನಿಮಾಯಿದೆ. ನಾನು ಅಪ್ಪನಿಗೆ ಫ್ಯಾಮಿಲಿ ಓರಿಯೆಂಟೆಡ್, ಕ್ಯೂಟ್, ಸಿಂಪಲ್ ಸಿನಿಮಾ ಮಾಡಬೇಕು ಅಂತ ಇಷ್ಟ." ಎಂದು ಶಿವಣ್ಣನ ಪುತ್ರಿ ನಿವೇದಿತಾ ಹೇಳಿದ್ದಾರೆ.


Click it and Unblock the Notifications











