'ಬೈರಾಗಿ' ಧ್ವನಿ ನೀಡಿದ ಸ್ಯಾಂಡಲ್‌ವುಡ್ ಅಧ್ಯಕ್ಷ: 'ಸಂಡೆ-ಮಂಡೆ' ಲವ್ವಿಗಿಲ್ಲ ಹಾಲಿಡೇ
ಒಂದ್ಕಡೆ ಸೆಂಚುರಿ ಸ್ಟಾರ್ ಶಿವಣ್ಣ. ಇನ್ನೊಂದ್ಕಡೆ ನಟ ರಾಕ್ಷಸ ಡಾಲಿ. ಮತ್ತೊಂದ್ಕಡೆ ದಿಯಾ ಖ್ಯಾತಿಯ ಪೃಥ್ವಿ ಅಂಬರ್. ಈ ಮೂವರು ಕಾಂಬಿನೇಷನ್ ಸಿನಿಮಾ 'ಬೈರಾಗಿ' ಕಳೆದ ಕೆಲವು ದಿನಗಳಿಂದ ಈ ಸಿನಿಮಾ ಬೇಜಾನ್ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಸ್ಯಾಂಡಲ್‌ವುಡ್ ಅಧ್ಯಕ್ಷ ಶರಣ್.
'ಬೈರಾಗಿ' ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 123ನೇ ಸಿನಿಮಾ. ಶಿವಣ್ಣನೊಂದಿಗೆ 'ಡಾಲಿ' ಧನಂಜಯ್ ಹಾಗೂ ಪೃಥ್ವಿ ಅಂಬರ್ ನಟಿಸಿರುವುದು ಚಿತ್ರಕ್ಕೆ ಮತ್ತೊಂದು ಕಳೆ ಬಂದಂತಾಗಿದೆ. ಈಗಾಗಲೇ ಇದೇ ಸಿನಿಮಾ ಒಂದು ಹಾಡು ರಿಲೀಸ್ ಆಗಿದ್ದು, ಈಗ ಮತ್ತೊಂದು ಹಾಡು ಬಿಡುಗಡೆಯಾಗಿದೆ.
ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಸ್ಯಾಂಡಲ್‌ವುಡ್ ಅಧ್ಯಕ್ಷ ಶರಣ್ ಹಾಡಿದ್ದಾರೆ. ಇದು ಶಿವಣ್ಣನಿಗೆ ಶರಣ್ ಹಾಡುತ್ತಿರುವ ಎರಡನೇ ಹಾಡು. 'ವಜ್ರಕಾಯ' ಸಿನಿಮಾದ ಬಳಿಕ ಶಿವಣ್ಣನಿಗೆ ಶರಣ್ ದನಿ ನೀಡಿರುವುದು ಮತ್ತೊಂದು ವಿಶೇಷ. ಅಂದ್ಹಾಗೆ 'ಸಂಡೆ ಮಂಡೆ ಎವೆರಿಡೇ, ಲವ್ವಿಗಿಲ್ಲ ಹಾಲಿಡೇ...' ಎಂಬ ಸಾಹಿತ್ಯ ರಚಿಸಿರುವುದು ಪ್ರಮೋದ್ ಮರವಂತೆ.

ಶಿವಣ್ಣ, ಡಾಲಿ ಧನಂಜಯ್ ಹಾಗೂ ಪೃಥ್ವಿ ಅಂಬರ್ ಅಭಿನಯದ ಈ ಹಾಡನ್ನು ಸಿಂಗಲ್ ಶಾಟ್'ನಲ್ಲಿ ಶೂಟ್ ಮಾಡಿರುವುದು ಮತ್ತೊಂದು ವಿಶೇಷ. ಈ ಕಾರಣಕ್ಕೆ ಈ ಹಾಡು ಕೌತುಕವನ್ನು ಹೆಚ್ಚಿಸಿದೆ. ಶಿವಣ್ಣನ ಅಭಿಮಾನಿಗಳೂ ಕೂಡ ಈ ಹಾಡು ಕೇಳಿ ಫುಲ್ ಥ್ರಿಲ್ ಆಗಿದ್ದಾರೆ.

'ರಿದಮ್ ಆಫ್ ಶಿವಪ್ಪ' ಕಾನ್ಸೆಪ್ಟ್'ನಡಿ ಮೂಡಿಬಂದಿರುವ ಈ ಹಾಡಿಗೆ ಇಡೀ 'ಬೈರಾಗಿ' ತಂಡವೇ ಹೆಜ್ಜೆ ಹಾಕಿದೆ. ಈ ಸ್ಪೆಷಲ್ ಸಾಂಗ್ ಅನ್ನು ದೇವನಹಳ್ಳಿ ಬಳಿಯಿರುವ ನೂತನ ಮಾಲ್‌ನಲ್ಲಿ ಶೂಟಿಂಗ್ ಮಾಡಲಾಗಿದೆ. ನೃತ್ಯ ನಿರ್ದೇಶಕ ಮುರಳಿ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ಹಾಡಿಗೆ ತಮಿಳಿನ ಗಾಯಕ ಆ್ಯಂಥೋನಿ ದಾಸ್ ದನಿಗೂಡಿಸಿದ್ದರು.
'ಬೈರಾಗಿ' ಸಿನಿಮಾವನ್ನು ವಿಜಯ್ ಮಿಲ್ಟನ್ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ಹಿರಿಯ ನಟ ಶಶಿಕುಮಾರ್, ಅನು ಪ್ರಭಾಕರ್, ಅಂಜಲಿ, ಯಶ ಶಿವಕುಮಾರ್, ಚಿಕ್ಕಣ್ಣ ಸೇರಿದಂತೆ ದೊಡ್ಡ ತಾರಾದಂಡೇ ಇದೆ. ಕೃಷ್ಣ ಸಾರ್ಥಕ್ 'ಬೈರಾಗಿ' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.


Click it and Unblock the Notifications











