Shivarajkumar: "ನನ್ನ ನೋಡಿ ಏನು ಮೆಚ್ಚಿದರೋ ಗೊತ್ತಾಗುತ್ತಿಲ್ಲ.. ಇಷ್ಟು ಸಣ್ಣ ಪಾತ್ರ ಸ್ವೀಕರಿಸಿದ್ದೇ ಸರ್ಪ್ರೈಸ್"- ಶಿವಣ್ಣ
ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ 'ಜೈಲರ್' ಎಲ್ಲಾ ಕಡೆ ಚಿಂದಿ ಉಡಾಯಿಸುತ್ತಿದೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಸಿನಿಮಾ ಬಗ್ಗೆ ಕ್ರೇಜ್ ಹೆಚ್ಚಾಗುತ್ತಲೇ ಇದೆ. ಸೋಲಿನ ಬಳಿಕ ರಜನಿಕಾಂತ್‌ಗೆ ಮತ್ತೊಂದು ದೊಡ್ಡ ಸಕ್ಸಸ್ ಸಿಕ್ಕಿದೆ.
'ಜೈಲರ್' ಸಿನಿಮಾದಲ್ಲಿ ರಜನಿಕಾಂತ್ ಜೊತೆ ಶಿವಣ್ಣ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ನರಸಿಂಹ ಅನ್ನೋ ಪಾತ್ರದಲ್ಲಿ ನಟಿಸಿರೋ ಶಿವಣ್ಣನಿಗೂ ಪ್ರೇಕ್ಷಕರು ಬಹುಪರಾಕ್ ಹೇಳುತ್ತಿದ್ದಾರೆ. ಅದರಲ್ಲೂ ಶಿವಣ್ಣನ ಖದರ್, ಲುಕ್, ಮ್ಯಾನರಿಸಂಗೆ ತಮಿಳು ಮಂದಿನೇ ಫಿದಾ ಆಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಶಿವರಾಜ್‌ಕುಮಾರ್ ಹಾಡಿ ಹೊಗಳುವುದು ಇನ್ನೂ ನಿಂತಿಲ್ಲ. ಶಿವಣ್ಣನ ವಿಚಾರದಲ್ಲಿ ಕನ್ನಡಿಗರು ಹಾಗೂ ತಮಿಳಿಗರು ಒಂದಾಗಿದ್ದಾರೆ. ಮುಕ್ತ ಕಂಠದಿಂದ ಶಿವಣ್ಣ ಹಾಗೂ ಅವರ ಪಾತ್ರವನ್ನು ಹಾಡಿ ಹೊಗಳುತ್ತಿದ್ದಾರೆ. ಈ ಬಗ್ಗೆ ಇದೇ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
"ದೊಡ್ಡ ಹೆಸರು ಮಾಡಬೇಕು ಅನ್ನೋ ಉದ್ದೇಶ ಅಲ್ಲ"
'ಜೈಲರ್' ಸಿನಿಮಾವನ್ನು ಶಿವರಾಜ್‌ಕುಮಾರ್ ಮೈಸೂರಿನಲ್ಲಿ ವೀಕ್ಷಿಸಿದ್ದಾರೆ. ಅದರಲ್ಲೂ ಮುನ್ನ ಮಾಧ್ಯಮಗಳೊಂದಿಗೆ ತಮ್ಮ ಪಾತ್ರದ ಬಗ್ಗೆ ಎದ್ದಿರೋ ಕ್ರೇಜ್ ಬಗ್ಗೆ, ಜೈಲರ್ ಸಿನಿಮಾ ಬಗ್ಗೆ ಮಾತಾಡಿದ್ದಾರೆ. ಫಸ್ಟ್‌ನ್ಯೂಸ್ ಜೊತೆ ಶಿವಣ್ಣ ಹಂಚಿಕೊಂಡಿರೋ ಕೆಲವು ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ. ರಜನಿಕಾಂತ್ ಜೊತೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ಸಿಕ್ಕಿದಾಗ ಕಥೆ ಕೇಳದೆ ಒಪ್ಪಿಕೊಂಡೆ ಎಂದಿದ್ದಾರೆ.

"ನೆಲ್ಸನ್ ಸರ್ ಬಂದು ಹೇಳಿದಾಗ, ಕಥೆ ಏನು ಅಂತ ಕೇಳಲಿಲ್ಲ. ಯಾಕಂದ್ರೆ, ರಜನಿ ಸರ್ ಜೊತೆ ಸ್ಕ್ರೀನ್ ಶೇರ್ ಮಾಡಬೇಕು ಅಂತ ಎಷ್ಟೋ ಜನ ಕಾಯುತ್ತಿರುತ್ತಾರೆ. ಅದರಲ್ಲಿ ನಮಗೊಂದು ಅವಕಾಶ ಬಂದಾಗ ಯಾಕೆ ಮಾಡಬಾರದು ಅಂತ ಮಾಡಿದೆ. ಏನೋ ದೊಡ್ಡ ಹೆಸರು ಮಾಡಬೇಕು ಅನ್ನೋ ಉದ್ದೇಶ ಅಲ್ಲ. ಅವರ ಜೊತೆ ಸಿನಿಮಾ ಮಾಡೋದೇ ಖುಷಿ." ಎಂದಿದ್ದಾರೆ ಶಿವಣ್ಣ.
"ನಮ್ಮ ತಂದೆ ಸ್ಥಾನದಲ್ಲಿ ನೋಡುತ್ತೇವೆ"
ಶಿವಣ್ಣ ಇದೇ ವೇಳೆ ತಮ್ಮ ಹಾಗೂ ರಜನಿಕಾಂತ್ ಅವರ ಕುಟುಂಬದೊಂದಿಗೆ ಇರುವ ಸಂಬಂಧದ ಬಗ್ಗೆನೂ ಮಾತಾಡಿದ್ದಾರೆ. "ರಜನಿ ಸರ್ ಅನ್ನು ನಮ್ಮ ತಂದೆ ಸ್ಥಾನದಲ್ಲಿ ನೋಡುತ್ತೇವೆ. ಯಾಕಂದ್ರೆ, ಅವರಿಗೂ ನಮ್ಮ ಫ್ಯಾಮಿಲಿಗೂ ಇರುವ ಒಡನಾಟ ಬಹಳಾನೇ ದೊಡ್ಡದು. ವಿಶೇಷವಾಗಿ ಅವರೊಂದಿಗೆ ಸಿನಿಮಾ ಮಾಡುವುದೇ ಒಂದು ಖುಷಿ ಅಂತ ಸಿನಿಮಾ ಮಾಡಿದ್ದೇನೆ. ಅವರು ಹೇಳ್ತಾ ಇರುತ್ತಾರೆ. ನೀವು ಒಪ್ಪಿಕೊಂಡಿದ್ದೇ ಬಹಳ ಖುಷಿ ಆಯ್ತು ಶಿವಣ್ಣ ಅಂತ. ನಮಗೆ ಅದೊಂದು ಖುಷಿ." ಎಂದಿದ್ದಾರೆ ಶಿವಣ್ಣ.
"ನನ್ನ ನೋಡಿ ಏನು ಮೆಚ್ಚಿದರೋ ನನಗೆ ಗೊತ್ತಿಲ್ಲ"
"ನೆಲ್ಸನ್ ಏನು ಮಾಡುತ್ತಾರೆ ಅನ್ನೋದು ನನಗೆ ಗೊತ್ತಾಗಿಲ್ಲ. ಜನ ಇವತ್ತು ಇಷ್ಟು ಸಣ್ಣ ಪಾತ್ರವನ್ನು, ಅತಿಥಿ ಪಾತ್ರವನ್ನು ಈ ಮಟ್ಟಿಗೆ ಸ್ವೀಕರಿಸುತ್ತಾರೆ ಅನ್ನೋದು ನನಗೆ ಸರ್ಪ್ರೈಸಿಂಗ್ ಆಗಿತ್ತು. ನನ್ನ ನೋಡಿ ಏನು ಮೆಚ್ಚಿದರೋ ನನಗೆ ಗೊತ್ತಾಗುತ್ತಿಲ್ಲ. ನನಗೆ ಒಂದು ಪ್ರಶ್ನೆ ಹುಟ್ಟಿಕೊಂಡಿದೆ. ಅವರ ಜೊತೆ ಇದ್ದಿದ್ದೇ ಒಂದು ಒಳ್ಳೆ ಅನುಭವ. ಒಳ್ಳೆಯವರೊಂದಿಗೆ ಇರೋದಿಂದ ಒಂದು ಪಾಸಿಟಿವ್ ಎನರ್ಜಿ ಬರುತ್ತೆ. ಆ ರೀತಿ ನನಗೆ ಫೀಲ್ ಆಯ್ತು. ನಾನು ನೆಲ್ಸನ್ ಅವರಿಗೆ ಥ್ಯಾಂಕ್ಸ್ ಹೇಳುವುದಕ್ಕೆ ಇಷ್ಟ ಪಡುತ್ತೇನೆ." ಎಂದು ಶಿವಣ್ಣ ನಿರ್ದೇಶಕರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.
ಡಬ್ಬಿಂಗ್ ಸಿನಿಮಾ ಬಗ್ಗೆ ಶಿವಣ್ಣ ಹೀಗಂದ್ರು
"ಸಾಕಷ್ಟು ಒಳ್ಳೊಳ್ಳೆ ಸಿನಿಮಾಗಳು ಬರುತ್ತಿವೆ. ಭಾಷೆ ಅರ್ಥ ಆಗದವರು ಕನ್ನಡದಲ್ಲಿ ಬಂದಾಗ ಅದನ್ನು ನೋಡಲು ಅರ್ಥ ಮಾಡಿಕೊಳ್ಳಬಹುದು. ಒಂದು ಒಳ್ಳೆಯ ಸಿನಿಮಾ ಭಾಷೆ ಮೂಲಕ ಸುಧಾರಣೆ ಕಾಣುತ್ತಿರೋದು ಬಹಳ ಒಳ್ಳೆ ವಿಷಯ. ಇದು ಹೀಗೆ ಮುಂದುವರೆಯಬೇಕು. ಅದ್ಭುತ ಯಶಸ್ಸು ಕಾಣುತ್ತಿರುವುದು ಖುಷಿಯಾಗುತ್ತೆ. ಸಾಮಾನ್ಯವಾಗಿ ಡಬ್ ಮಾಡಿದ್ರೆ, ಸಿನಿಮಾ ಓಡುವುದಿಲ್ಲ. ಈ ಸಿನಿಮಾ ಚೆನ್ನಾಗಿ ಓಡುತ್ತಿದೆ. ಆದರೆ, ಜೈಲರ್ ಸಿನಿಮಾ ಓಡುತ್ತಿರೋದು ಬಹಳ ಖುಷಿಯಾದ ವಿಷಯ." ಎಂದು ಶಿವಣ್ಣ ಸಿನಿಮಾ ಯಶಸ್ಸು ಹಾಗೂ ಡಬ್ಬಿಂಗ್ ಬಗ್ಗೆ ಮುಕ್ತವಾಗಿ ಮಾತಾಡಿದ್ದಾರೆ.


Click it and Unblock the Notifications










