ಕನ್ನಡಕ್ಕಾಗಿ ಹೋರಾಡ್ತೀವಿ, ಬೇಕಿದ್ರೆ ಸಾಯ್ತೀವಿ"; ಶಿವಣ್ಣ ಫಸ್ಟ್ ರಿಯಾಕ್ಷನ್
ಕನ್ನಡದ ಬಗ್ಗೆ ಕಮಲ್ ಹಾಸನ್ ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಸಿನಿಮಾ ತಾರೆಯರು ಕೂಡ ಈ ಬಗ್ಗೆ ದನಿ ಎತ್ತಿದ್ದಾರೆ. ಚೇತನ್ ಅಹಿಂಸಾ, ಜಗ್ಗೇಶ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕಮಲ್ ಹಾಸನ್ ಹೇಳಿಕೆ ಒಪ್ಪುವಂಥದ್ದಲ್ಲ ಎಂದಿದ್ದಾರೆ. ಇದೀಗ ಸ್ವತಃ ಶಿವರಾಜ್‌ಕುಮಾರ್ ಮಾತನಾಡಿದ್ದಾರೆ.
ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ 'ತಮಿಳಿನಿಂದ ಹುಟ್ಟಿದ್ದು ಕನ್ನಡ' ಎಂದಿದ್ದರು. ಅದೇ ಕಾರ್ಯಕ್ರಮಕ್ಕೆ ಶಿವಣ್ಣ ಅತಿಥಿಯಾಗಿ ತೆರಳಿದ್ದರು. ಕಮಲ್ ಹಾಸನ್ ಆ ರೀತಿ ಹೇಳುವಾಗ ಶಿವರಾಜ್‌ಕುಮಾರ್ ಯಾಕೆ ಸುಮ್ಮನಿದ್ದರು ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಇನ್ನು ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಚಿತ್ರ ಕರ್ನಾಟಕದಲ್ಲಿ ಬಿಡುಗಡೆಗೆ ಅವಕಾಶ ಮಾಡಿಕೊಡಲ್ಲ ಎಂದು ಕನ್ನಡ ಪರ ಸಂಘಟನೆಗಳು ಪಟ್ಟು ಹಿಡಿದಿವೆ.

"ಕಮಲ್ ಹಾಸನ್ ಕೂಡ ಕನ್ನಡಕ್ಕೆ ಗೌರವ ಕೊಡುತ್ತಾರೆ. ನಿನ್ನೆ ಬಂದಾಗಲೂ ಅಷ್ಟೇ ಚೆನ್ನಾಗಿ ಮಾತನಾಡಿದ್ದಾರೆ. ಫ್ಯಾಮಿಲಿ ಬಗ್ಗೆಯೂ ಗೌರವ ಕೊಡುತ್ತಾರೆ. ನಾವು ಅವರನ್ನು ನೋಡಿ ಬೆಳೆದವರು, ನಾನು ಅವರ ಅಭಿಮಾನಿ. ತಂದೆ ಇದ್ದು ಅವ್ರು ಹೇಗೆ ಅಭಿಮಾನಿ ಎನ್ನಬಹುದು. ತಂದೆ ಫ್ಯಾಮಿಲಿ ಆಗ್ತಾರೆ. ತಂದೆ ಸ್ಥಾನ ಬೇರೆ. ಕಮಲ್ ಅವ್ರಿಗೆ ನಾನು ಕೊಡುವ ಸ್ಥಾನ ಬೇರೆ. ನಾನು ಅವರಿಂದ ಇನ್‌ಸ್ಪೈರ್ ಆಗಿದ್ದೀನಿ. ಕಂಡಿತ ಅದಕ್ಕೆ ಏನು ಪ್ರತಿಕ್ರಿಯೆ ಕೊಡಬೇಕೋ ಅವ್ರು ಕೊಡ್ತಾರೆ" ಎಂದು ಶಿವಣ್ಣ ಪ್ರತಿಕ್ರಿಯಿಸಿದ್ದಾರೆ.
ಮಾತು ಮುಂದುವರೆಸಿರುವ ಶಿವಣ್ಣ "ನಮ್ಮನ್ನು ಕಾರ್ಯಕ್ರಮಕ್ಕೆ ಕರೆದಾಗ ಗೌರವದಿಂದ ಹೋಗಿದ್ದೇವೆ. ಅದು ಏನಾಯ್ತೋ ನಮಗೂ ಗೊತ್ತಿಲ್ಲ. ನಿನ್ನೆ ಬಂದಾಗ ಇಲ್ಲೇ ಇದ್ದರು. ಎಲ್ಲರೂ ಕೇಳಬಹುದಿತ್ತು. ಕನ್ನಡ ಪ್ರೀತಿ ಎನ್ನುವುದು ಯಾರೋ ಮಾತನಾಡಿದಾಗ ಮಾತ್ರ ಬರಬಾರದು. ಯಾವಾಗಲೂ ಇರಬೇಕು. ಇಲ್ಲಿಗೆ ಬಂದಾಗ ಕನ್ನಡ ಚಿಗುರಿಸುವುದಲ್ಲ, ಯಾವಾಗಲೂ ಚಿಗುರಿಸಬೇಕು. ಕನ್ನಡಕ್ಕಾಗಿ ಹೋರಾಡುತ್ತೇವೆ, ಬೇಕಿದ್ದರೆ ಸಾಯುತ್ತೇವೆ" ಎಂದಿದ್ದಾರೆ.
"ಬರೀ ಮಾತನಾಡಿ ಪೋಸ್ ಕೊಡುವುದಲ್ಲ. ಕನ್ನಡಕ್ಕೆ ಏನು ಮಾಡ್ತೀವಿ ಅಂತ ಈಗ್ಲೇ ನೋಡಿ. ಉತ್ತರ ಸಿಗುತ್ತೆ. ಬರೀ ಸ್ಟಾರ್‌ಗಳ ಸಿನಿಮಾಗಳಿಗೆ ಪ್ರೋತ್ಸಾಹ ಕೊಡುವುದಲ್ಲ. ಹೊಸಬರಿಗೂ ಪ್ರೋತ್ಸಾಹ ಕೊಡಬೇಕು, ಕನ್ನಡ ಅಂದ್ರೆ ಇಷ್ಟೇ ಅಲ್ಲ, ಜವಾಬ್ದಾರಿ ಇದೆ. ದಯವಿಟ್ಟು ಬೇರೆ ಅರ್ಥ ಕೊಡಬೇಡಿ. ನಿಮ್ಮ ಮನಸ್ಸನ್ನು ಮುಟ್ಟಿ ಕೇಳಿಕೊಳ್ಳಿ. ಸರಿನಾ ತಪ್ಪಾ ಅಂತ ಉತ್ತರ ಸಿಗುತ್ತದೆ. ಕಮಲ್ ಅವರಿಗೆ ಹೇಳುವುದು ಬೇಕಿಲ್ಲ. ಅವರಿಗೆ ಗೊತ್ತು. ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಏನು ಮಾಡಬೇಕೋ ಮಾಡುತ್ತಾರೆ" ಎಂದು ಶಿವಣ್ಣ ವಿವರಿಸಿದ್ದಾರೆ.
ಕಮಲ್ ಹಾಸನ್ ಮಾತನಾಡಿದಾಗ ಶಿವಣ್ಣ ಏನು ಮಾಡುತ್ತಿದ್ದರು ಎಂದು ಕೆಲವರು ಟೀಕಿಸಿದ್ದರು. ಈ ಬಗ್ಗೆ ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದರು. ಕನ್ನಡ ಅಭಿಮಾನದ ಪಾಠವನ್ನು ಶಿವಣ್ಣನಿಗೆ ಹೇಳಲು ಬರಬೇಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡಿದ್ದರು. ಶಿವಣ್ಣ ಈ ಹಿಂದೆ ಕನ್ನಡ ಅಭಿಮಾನದ ಬಗ್ಗೆ ಮಾತನಾಡಿದ್ದ ವೀಡಿಯೋಗಳನ್ನು ತೇಲಿ ಬಿಟ್ಟಿದ್ದರು.
ಇತ್ತೀಚೆಗೆ ತಮ್ಮ ಹೇಳಿಕೆಗೆ ಕಮಲ್ ಹಾಸನ್ ಸ್ಪಷ್ಟನೆ ನೀಡಿದ್ದರು. ನಾನು ಕ್ಷಮೆ ಕೇಳಲ್ಲ ಎನ್ನುವ ಧಾಟಿಯಲ್ಲಿ ಮಾತನಾಡಿದ್ದರು. "ಪ್ರೀತಿಯಿಂದ ಹೇಳಿದ್ದಕ್ಕೆ ನಾನು ಕ್ಷಮೆ ಕೇಳುವುದಿಲ್ಲ. ರಾಜಕೀಯ ಮುಖಂಡರು ಭಾಷೆಯ ಬಗ್ಗೆ ಮಾತಾಡುವುದಕ್ಕೆ ಯೋಗ್ಯರಲ್ಲ. ಅದರಲ್ಲಿ ನಾನೂ ಕೂಡ ಸೇರಿಕೊಂಡಿದ್ದೇನೆ. ತಮಿಳುನಾಡು ತುಂಬಾನೇ ಅಪರೂಪದ ರಾಜ್ಯ. ಇಲ್ಲಿ ಮೆನನ್ ಮುಖ್ಯಮಂತ್ರಿಯಾಗಿದ್ದಾರೆ, ರೆಡ್ಡಿ ಸಿಎಂ ಆಗಿದ್ದಾರೆ. ಕನ್ನಡಿಗ ಕೂಡ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಚೆನ್ನೈನಲ್ಲಿ ನಾನು ಸಮಸ್ಯೆಗೆ ಸಿಕ್ಕಿಕೊಂಡಾಗ ಕರ್ನಾಟಕ ನನ್ನ ಪರವಾಗಿ ನಿಂತಿತ್ತು" ಎಂದು ಕಮಲ್ ಹಾಸನ್ ಉತ್ತರಿಸಿದ್ದರು.


Click it and Unblock the Notifications











