'ಘೋಸ್ಟ್' 25 ದಿನ: ಹೇಗಿದೆ ಶಿವಣ್ಣನ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್? ಸ್ಯಾಟಲೈಟ್, ಡಿಜಿಟಲ್ ಬ್ಯುಸಿನೆಸ್ ಎಷ್ಟು?
2023 ಸ್ಯಾಂಡಲ್‌ವುಡ್ ಮಂದಿಗೆ ಸಿಕ್ಕಿದ್ದು ಬರೀ ನಿರಾಸೆನೇ. ಗೆದ್ದಿದ್ದು ಕೇವಲ ಬೆರಳೆಣಿಕೆಯಷ್ಟು ಸಿನಿಮಾಗಳು ಮಾತ್ರ. ಅದರಲ್ಲಿ ಶಿವರಾಜ್‌ಕುಮಾರ್ ನಟನೆಯ 'ಘೋಸ್ಟ್' ಸಿನಿಮಾ ಕೂಡ ಒಂದು. ಶ್ರೀನಿ ನಿರ್ದೇಶನ, ಅರ್ಜುನ್ ಜನ್ಯ ಹಿನ್ನೆಲೆ ಸಂಗೀತಕ್ಕೆ ಸಿನಿಪ್ರಿಯರು ಭೇಷ್ ಎಂದಿದ್ದರು.
'ಘೋಸ್ಟ್' ಸಿನಿಮಾ ಅಕ್ಟೋಬರ್ 19ಕ್ಕೆ ನಾಲ್ಕು ಭಾಷೆಗಳಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆಕಂಡಿದ್ದ ಸಿನಿಮಾ ಈಗ 25ನೇ ದಿನಗಳತ್ತ ಮುನ್ನುಗ್ಗುತ್ತಿದೆ. ತೆಲುಗು ವರ್ಷನ್ ಅನ್ನು ಕಳೆದ ಶನಿವಾರವಷ್ಟೇ ರಿಲೀಸ್ ಮಾಡಲಾಗಿದೆ.

ಸದ್ಯಕ್ಕೀಗ ಸಿನಿಮಾ ರಿಲೀಸ್ ಆಗಿ 22 ದಿನಗಳಾಗಿವೆ. ಇಲ್ಲಿವರೆಗೂ 'ಘೋಸ್ಟ್' ಸಿನಿಮಾ ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿದೆ. ಇಷ್ಟೇ ಅಲ್ಲದೆ ಸ್ಯಾಟಲೈಟ್ ಹಾಗೂ ಡಿಜಿಟಲ್ ರೈಟ್ಸ್ ಕೂಡ ಒಳ್ಳೆ ಮೊತ್ತಕ್ಕೆ ಸೇಲ್ ಆಗಿದೆ. 'ಘೋಸ್ಟ್' ಸಿನಿಮಾ ಬಜೆಟ್ ಎಷ್ಟು? ಬಾಕ್ಸಾಫೀಸ್‌ನಲ್ಲಿ ಆದ ಕಲೆಕ್ಷನ್ ಎಷ್ಟು? ಸ್ಯಾಟಲೈಟ್ ಹಾಗೂ ಡಿಜಿಟಲ್ ರೈಟ್ಸ್‌ನಿಂದ ಬಂದಿದ್ದೆಷ್ಟು? ಅನ್ನೋದನ್ನು ಟ್ರೇಡ್ ಎಕ್ಸ್‌ಪರ್ಟ್ಸ್ ಮಾಹಿತಿ ಹಂಚಿಕೊಂಡಿದ್ದಾರೆ.
ಥಿಯೇಟರ್‌ನಿಂದ ಬಂದ ಕಲೆಕ್ಷನ್ ಎಷ್ಟು?
'ಘೋಸ್ಟ್' ಈ ವರ್ಷ ಗೆದ್ದ ಕೆಲವೇ ಕೆಲವು ಕನ್ನಡ ಸಿನಿಮಾಗಳಲ್ಲಿ ಒಂದು. ಸುಮಾರು 20 ಕೋಟಿ ರೂಪಾಯಿ ಬಜೆಟ್‌ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಇದರಲ್ಲಿ ಪಬ್ಲಿಸಿಟಿ ಖರ್ಚು ಕೂಡ ಸೇರಿದೆ. ಅಲ್ಲದೆ ಐದು ಭಾಷೆಗಳಿಗೆ ಸಿನಿಮಾವನ್ನು ಡಬ್ ಮಾಡಿ ರಿಲೀಸ್ ಮಾಡಲಾಗಿತ್ತು. ಸದ್ಯ 22 ದಿನಗಳಲ್ಲಿ 'ಘೋಸ್ಟ್' ಸಿನಿಮಾ ಕೇವಲ ಥಿಯೇಟರ್‌ನಿಂದ ಸುಮಾರು 26 ಕೋಟಿ ರೂಪಾಯಿ (ವಿಶ್ವದಾದ್ಯಂತ) ಕಲೆಕ್ಷನ್ ಆಗಿದೆ ಎಂದು ವಿತರಕರು ಅಂದಾಜಿಸಿದ್ದಾರೆ. ಈ ವರ್ಷ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ 'ಘೋಸ್ಟ್' ಕೂಡ ಒಂದಾಗಿದೆ.

25ನೇ ದಿನದತ್ತ 'ಘೋಸ್ಟ್'
'ಘೋಸ್ಟ್' ನವೆಂಬರ್ 12ಕ್ಕೆ 25 ದಿನಗಳನ್ನು ಪೂರೈಸಲಿದೆ. ಹೀಗಾಗಿ ಅಂದು ಸಿನಿಮಾ ತಂಡದಿಂದಲೇ 'ಘೋಸ್ಟ್' ಸಿನಿಮಾದ ಅಧಿಕೃತ ಬಾಕ್ಸಾಫೀಸ್ ಕಲೆಕ್ಷನ್ ರಿವೀಲ್ ಆಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ, ಈಗಾಗಲೇ ದಳವಾಯಿ ಪಾತ್ರವನ್ನಿಟ್ಟುಕೊಂಡು ಶ್ರೀನಿ ಸಿನಿಮಾ ಮಾಡುತ್ತಿರೋದಾಗಿ ಈಗಾಗಲೇ ಘೋಷಿಸಿದ್ದಾರೆ. ಈ ಕಾರಣಕ್ಕೆ 25ನೇ ದಿನ ಶಿವಣ್ಣನ ಫ್ಯಾನ್ಸ್‌ಗೆ ಸರ್ಪ್ರೈಸ್ ಸಿಗುವ ಸಾಧ್ಯತೆಯಿದೆ.
ಸ್ಯಾಟಲೈಟ್-ಡಿಜಿಟಲ್ ಬ್ಯುಸಿನೆಸ್ ಎಷ್ಟು?
ಶಿವರಾಜ್‌ಕುಮಾರ್ 'ಘೋಸ್ಟ್' ಸಿನಿಮಾ ಥಿಯೇಟರ್‌ನಲ್ಲಷ್ಟೇ ಸದ್ದು ಮಾಡಿಲ್ಲ. ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕುಗಳಿಂದ ಸುಮಾರು 19.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಕನ್ನಡ ಹಾಗೂ ತೆಲುಗು ವರ್ಷನ್ ಘೋಸ್ಟ್‌ಗೆ ಜೀ ಸಂಸ್ಥೆ 12 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದೆ. ಹಿಂದಿ ಹಕ್ಕನ್ನು ಪೆನ್ ಸಂಸ್ಥೆ 6 ಕೋಟಿ ರೂಪಾಯಿಗೆ ಖರೀದಿ ಮಾಡಿದ್ರೆ, ಅದೇ ಮಲಯಾಳಂ ವರ್ಷನ್ 50 ಲಕ್ಷ ರೂಪಾಯಿ, ತಮಿಳು ಒಂದು ಕೋಟಿ ರೂ.ಗೆ ಸೇಲ್ ಆಗಿದೆ. ಒಟ್ಟು 19.5 ಕೋಟಿ ರೂಪಾಯಿ ವ್ಯಾಪಾರ ಆಗಿದೆ ಎನ್ನಲಾಗಿದೆ.
'ಘೋಸ್ಟ್' ಓಟಿಟಿ ರಿಲೀಸ್ ಯಾವಾಗ?
ಶಿವರಾಜ್‌ಕುಮಾರ್ 'ಘೋಸ್ಟ್' ಸಿನಿಮಾ ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ. ಜೀ5ನಲ್ಲಿ ನವೆಂಬರ್ 17ರಿಂದ ಪ್ರಸಾರ ಆಗಲಿದೆ ಅನ್ನೋ ಸುದ್ದಿ ಓಡಾಡುತ್ತಿವೆ. ಓಟಿಟಿಯಲ್ಲೂ ಸಿನಿಮಾ ಸದ್ದು ಮಾಡುವ ಎಲ್ಲಾ ಸಾಧ್ಯತೆಗಳೂ ಇವೆ. ಇದೇ ವೇಳೆ 'ಲಿಯೋ' ಕೂಡ ಅದೇ ದಿನ ಓಟಿಟಿಗೆ ಎಂಟ್ರಿ ಕೊಡುತ್ತಿದೆ ಅನ್ನೋ ಮಾತು ಕೂಡ ಇದೆ. ಹೀಗಾಗಿ ಎರಡೂ ಸಿನಿಮಾಗಳಿಗೆ ರೆಸ್ಪಾನ್ಸ್ ಹೇಗಿರುತ್ತೆ? ಅನ್ನೋ ನಿರೀಕ್ಷೆಯಲ್ಲಿ ಶಿವಣ್ಣ ಫ್ಯಾನ್ಸ್ ಇದ್ದಾರೆ.


Click it and Unblock the Notifications











