ಶಿವಣ್ಣ ಇಷ್ಟು ಪಡುವ ಮೂವರು ಖಳನಟರು ಯಾರು? ವೇದಿಕೆ ಮೇಲೆ ದರ್ಶನ್ ತಂದೆ ಬಗ್ಗೆ ಏನಂದ್ರು?
ಕನ್ನಡ ಚಿತ್ರರಂಗದ ನಟಭಯಂಕರ, ಕಂಚಿನ ಕಂಠದ ನಟ ವಜ್ರಮುನಿ. ಇವರ ನಟನೆಗೆ ಮನಸೋಲದವರು ಯಾರಿದ್ದಾರೆ ಹೇಳಿ? ನಿನ್ನೆ (ನವೆಂಬರ್ 25) ದಿವಂಗತ ವಜ್ರಮುನಿಯವರ ಕಂಚಿನ ಪ್ರತಿಮೆಯನ್ನು ನಾಗರಬಾವಿ ವೃತ್ತದ ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದಲ್ಲಿ ಅನಾವರಣಗೊಳಿಸಲಾಗಿದೆ.
ವಜ್ರಮುನಿ ಕಂಚಿನ ಪ್ರತಿಮೆಯನ್ನು ಅನಾವರಣ ಮಾಡಲು ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಗೋವಿಂದರಾಜನಗರ ವಿಧಾನಸಭಾಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಪ್ರಿಯಕೃಷ್ಣ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರುಗಿತ್ತು. ಈ ಕಾರ್ಯಕ್ರಮದಲ್ಲಿ ವಜ್ರಮುನಿ ಕುಟುಂಬ ಹಾಗೂ ರಾಜಕೀಯ ಮುಖಂಡರು ಭಾಗವಹಿಸಿದ್ದರು.

ಈ ವೇಳೆ ಶಿವರಾಜ್‌ಕುಮಾರ್ ಕನ್ನಡ ಚಿತ್ರರಂಗದ ಖಳನಟರ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಖಳನಟರಾದ ವಜ್ರಮುನಿ, ತೂಗುದೀಪ ಶ್ರೀನಿವಾಸ್ ಹಾಗೂ ನಾಗಪ್ಪ ಅವರ ಜೊತೆಗೆ ಕಳೆದ ದಿನಗಳನ್ನು ಮೆಲುಕು ಹಾಕಿದ್ದಾರೆ. ಅದರಲ್ಲೂ ವಜ್ರಮುನಿ, ತೂಗುದೀಪ್ ಶ್ರೀನಿವಾಸ್ ಯಾಕೆ ಇಷ್ಟ ಆಗುತ್ತಿದ್ದರು ಅನ್ನೋದನ್ನು ತಮ್ಮದೇ ಸ್ಟೈಲ್‌ನಲ್ಲಿ ಹೇಳಿದ್ದಾರೆ. ಅದರ ಒಂದು ಝಲಕ್ ಇಲ್ಲಿದೆ.
"ಪುತ್ಥಳಿಯಲ್ಲಿ ನೋಡೋದು ನೋವಾಗುತ್ತೆ"
ಅಗಲಿದ ನಟರ ಪುತ್ಥಳಿಯಲ್ಲಿ ನೋಡುವುದು ಮನಸ್ಸಿಗೆ ನೋವಾಗುತ್ತೆ. ಅವರನ್ನು ಹತ್ತಿರದಿಂದ ನೋಡಿರುವುದರಿಂದ ಕಲ್ಲಿನಲ್ಲಿ ನೋಡಲು ಕಷ್ಟ ಎಂದು ಶಿವಣ್ಣ ಅಭಿಪ್ರಾಯ ಪಟ್ಟಿದ್ದಾರೆ. ಈ ಹಿಂದೆ ಕೂಡ ಹಲವು ಬಾರಿ ಇದೇ ಮಾತನ್ನು ಹೇಳಿದ್ದರು. ಅಪ್ಪು ಸಮಾಧಿಗೆ ಹೋಗಲ್ಲ. ಅಲ್ಲಿನಲ್ಲಿ ಅವನನ್ನು ನೋಡಲು ಆಗುವುದಿಲ್ಲ ಎಂದಿದ್ದರು. ಈಗ ವಜ್ರಮುನಿ, ಅಣ್ಣಾವ್ರು, ವಿಷ್ಣುವರ್ಧನ್, ಅಂಬರೀಶ್, ಪುನೀತ್ ವಿಚಾರದಲ್ಲೂ ಇದೇ ಮಾತನ್ನು ಹೇಳಿದ್ದಾರೆ.
"ಕಲ್ಲಿನಲ್ಲಿ ನೋಡಲು ಕಷ್ಟ ಆಗುತ್ತೆ"
"ಈ ಕಾರ್ಯಕ್ರಮಕ್ಕೆ ನಾನು ತಪ್ಪಿಸಿಕೊಂಡು ಬಿಡೋಣ ಅಂದುಕೊಂಡಿದ್ದೆ. ಯಾಕಂದ್ರೆ, ಪುತ್ಥಳಿ ಮಾಡೋದು ನನಗೆ ಸ್ವಲ್ಪ ನೋವಾಗುತ್ತೆ. ನಾನು ಅಂತಹ ವ್ಯಕ್ತಿಗಳನ್ನು ಚೆನ್ನಾಗಿ ನೋಡಿರುತ್ತೇವೆ. ನಮ್ಮ ತಂದೆಯವರದ್ದೇ ಆಗಲಿ, ವಿಷ್ಣುವರ್ಧನ್ ಆಗಲಿ, ಅಂಬರೀಶ್ ಅವರದ್ದೇ ಆಗಲಿ, ಪುನೀತ್ ಆಗಲಿ.. ವಜ್ರಮುನಿಯವರದ್ದೇ ಆಗಲಿ.. ಅವರನ್ನು ನೋಡಿರುತ್ತೇವೆ. ಅವರನ್ನು ಕಲ್ಲಿನಲ್ಲಿ ನೋಡುವುದಕ್ಕೆ ಕಷ್ಟ ಆಗುತ್ತೆ." ಎಂದು ಶಿವಣ್ಣ ಹೇಳಿದ್ದಾರೆ.

"ವ್ರಜ್ರಮುನಿ ಜೊತೆ 2 ಸಿನಿಮಾದಲ್ಲಿ ನಟನೆ"
"ನನಗೂ ವಜ್ರಮುನಿಯವರೊಂದಿಗೆ ನಟಿಸುವುದಕ್ಕೆ ಎರಡು ಸಿನಿಮಾಗಳಲ್ಲಿ ಅವಕಾಶ ಸಿಕ್ಕಿತ್ತು. ಪುರುಷೋತ್ತಮ ಹಾಗೂ ರಣರಂಗ ಅನ್ನುವ ಸಿನಿಮಾದಲ್ಲಿ ಜೊತೆಯಲ್ಲಿ ನಟಿಸಿದ್ದೇವೆ. ಬಹಳ ಒಳ್ಳೆಯ ವ್ಯಕ್ತಿ. ಶೂಟಿಂಗ್ ಮುಗಿಸಿಕೊಂಡು ನಮ್ಮ ಮನೆಗೆ ಬಂದು ಅಪ್ಪಾಜಿ, ವಜ್ರಮುನಿ, ತೂಗುದೀಪ ಶ್ರೀನಿವಾಸ್ ಎಲ್ಲಾ ಒಟ್ಟಿಗೆ ಕೂತು ಊಟ ಮಾಡುತ್ತಿದ್ದರು. ಎಷ್ಟು ಮಜವಾಗಿತ್ತು. ತುಂಬಾ ಚೆನ್ನಾಗಿತ್ತು." ಎಂದು ಶಿವಣ್ಣ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
"ತೂಗುದೀಪ ಶ್ರೀನಿವಾಸ್ ತುಂಬಾನೇ ಇಷ್ಟ"
"ನನಗೆ ಮೂರು ಜನ ತುಂಬಾನೇ ಇಷ್ಟ. ನಾಗಪ್ಪ ಅಂತ ಒಬ್ಬರು ಇದ್ದರು. ಇನ್ನೊಬ್ಬರು ತೂಗುದೀಪ್ ಶ್ರೀನಿವಾಸ್ ಅವರು. ಮೂರನೇಯವರು ವಜ್ರಮುನಿಯವರು. ಈ ಮೂರು ಜನ ತುಂಬಾ ಇಷ್ಟ ನನಗೆ" ಎಂದು ಶಿವರಾಜ್‌ಕುಮಾರ್ ವೇದಿಕೆ ಮೇಲೆ ಹೇಳಿದ್ದಾರೆ.


Click it and Unblock the Notifications











