'ಭೈರತಿ ರಣಗಲ್' ಪೋಸ್ಟ್‌ಪೋನ್ ಆಗಲು ಧ್ರುವ ಸರ್ಜಾ ಕಾರಣ; ಒಂದೇ ಕರೆಗೆ ಶಿವಣ್ಣ ಒಪ್ಪಿದ್ದೇಕೆ?
ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ರಿಲೀಸ್ ಆಗಬೇಕಿರುವ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಶಿವಣ್ಣನ 'ಭೈರತಿ ರಣಗಲ್' ಕೂಡ ಒಂದು. ಇದರೊಂದಿಗೆ ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ಮೇಲೂ ಚಿತ್ರರಂಗ ಕಣ್ಣಿಟ್ಟಿದೆ. ಈಗಾಗಲೇ 'ಮಾರ್ಟಿನ್' ಸಿನಿಮಾ ಅಕ್ಟೋಬರ್ 11ಕ್ಕೆ ರಿಲೀಸ್‌ಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಆದರೆ, 'ಮಾರ್ಟಿನ್' ಸಿನಿಮಾ ಬಿಡುಗಡೆಗೂ ಮುನ್ನವೇ ಶಿವಣ್ಣ ಹಾಗೂ ನರ್ತನ್ ಕಾಂಬಿನೇಷನ್‌ನ 'ಭೈರತಿ ರಣಗಲ್' ರಿಲೀಸ್ ಆಗಬೇಕಿತ್ತು. ಆಗಸ್ಟ್ 15ರಂದೇ ರಿಲೀಸ್ ಆಗಬೇಕಿದ್ದ ಸಿನಿಮಾವನ್ನು ಅಕ್ಟೋಬರ್ 4ಕ್ಕೆ ಬಿಡುಗಡೆ ಮಾಡುವುದಕ್ಕೆ ಗೀತಾ ಶಿವರಾಜ್‌ಕುಮಾರ್ ನಿರ್ಧರಿಸಿದ್ದರು. ಆದರೆ, ಶಿವಣ್ಣನ ಸಿನಿಮಾ ಮತ್ತೆ ಮುಂದಕ್ಕೆ ಹೋಗಿತ್ತು. ಅದಕ್ಕೆ ಕಾರಣ ಧ್ರುವ ಸರ್ಜಾ.

ಶಿವಣ್ಣನ 'ಭೈರತಿ ರಣಗಲ್' ಸಿನಿಮಾ ಅಕ್ಟೋಬರ್ 4ರಂದು ರಿಲೀಸ್ ಆಗಿದ್ದರೆ, ಧ್ರುವ ಸರ್ಜಾ 'ಮಾರ್ಟಿನ್'ಗೆ ತೊಂದರೆ ಆಗುತ್ತಿತ್ತು. ಒಂದು ವಾರದ ಅಂತರದಲ್ಲಿ ಎರಡು ದೊಡ್ಡ ಸಿನಿಮಾಗಳು ಥಿಯೇಟರ್‌ಗಳಲ್ಲಿ ಕಾದಾಡಬೇಕಿತ್ತು. ಅದಕ್ಕೆ ಶಿವಣ್ಣನಿಗೆ ಧ್ರುವ ಸರ್ಜಾ ಒಂದು ಕರೆ ಮಾಡಿ ಮುಂದಕ್ಕೆ ಹೋಗಲು ಸಾಧ್ಯವೇ ಅಂತ ಮನವಿ ಮಾಡಿಕೊಂಡಿದ್ದರು. ಆ ವೇಳೆ ಇಬ್ಬರ ನಡುವೆ ನಡೆದ ಸಂಭಾಷಣೆಯನ್ನು ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ರಿವೀಲ್ ಮಾಡಿದ್ದಾರೆ. ಅಲ್ಲದೆ ಧ್ರುವ ಸರ್ಜಾ ಕೂಡ ಆ ಘಟನೆಯನ್ನು ವಿವರಿಸಿದ್ದಾರೆ.
ಇತ್ತೀಚೆಗೆ ಪ್ರಥಮ್ ಖರೀದಿಸಿದ್ದ ಹೊಸ ಕಾರು ಅನ್ನು ಶಿವಣ್ಣ ಮೊದಲು ಡ್ರೈವ್ ಮಾಡಿದ್ದರು. ಆ ವೇಳೆ ಶಿವಣ್ಣ ಸಹಾಯ ಮನೋಭಾವದ ಬಗ್ಗೆ ಮಾತಾಡುವಾಗ ಪ್ರಥಮ್ 'ಭೈರತಿ ರಣಗಲ್' ಯಾಕೆ ಪೋಸ್ಟ್‌ಪೋನ್ ಆಯ್ತು? ಶಿವಣ್ಣ ಹಾಗೂ ಧ್ರುವ ಸರ್ಜಾ ನಡುವಿನ ಸಂಭಾಷಣೆ ಏನಾಗಿತ್ತು ಅನ್ನೋದನ್ನು ಮಾಧ್ಯಮದ ಮುಂದೆ ರಿವೀಲ್ ಮಾಡಿದ್ದಾರೆ.
"ಭೈರತಿ ರಣಗಲ್‌ಗೆ ಕ್ರೇಜ್ ಇದೆ. ಈಗ ಅಕ್ಟೋಬರ್ ನಾಲ್ಕಕ್ಕೆ ಬಂದರೆ, 11ನೇ ತಾರೀಕು ಮಾರ್ಟಿನ್ ಬಂದರೆ ಎಲ್ಲಿ ಕ್ಲ್ಯಾಶ್ ಆಗುತ್ತೋ ಅನ್ನೋ ಕಾರಣಕ್ಕೆ ಧ್ರುವ ಸರ್ಜಾ ಹಾಗೂ ನಿರ್ಮಾಪಕರು ಶಿವಣ್ಣನಿಗೆ ಫೋನ್ ಮಾಡಿದ್ದರು. ಶಿವಣ್ಣ ನಾನು ಮಾರ್ಟಿನ್‌ಗೆ ಮೂರು ವರ್ಷ ಹಾಕಿದ್ದೀನಿ. ಏನಾದರೂ ನೋಡಬಹುದಲ್ಲ ಅಂತ ಧ್ರುವ ಸರ್ಜಾ ಹೇಳಿದ್ದಕ್ಕೆ, ಅಕ್ಟೋಬರ್ ನಾಲ್ಕು ಒಳ್ಳೆ ಟೈಮ್ ಅಂತ ಪ್ಲಾನ್ ಮಾಡಿದ್ವಲ್ಲ ಅಂತ ಅಂದು, ಏನು ಮಾಡುವುದಕ್ಕೆ ಆಗುತ್ತೆ ನೋಡಿತ್ತೇನೆ" ಅಂತ ಶಿವಣ್ಣ ಹೇಳಿದ್ದನ್ನು ಪ್ರಥಮ್ ರಿವೀಲ್ ಮಾಡಿದ್ದರು.
ಮಾರನೇ ದಿನ ನಿರ್ಮಾಪಕ ಉದಯ್ ಮೆಹ್ತಾ ಬಂದು ಗೀತಾ ಶಿವರಾಜ್‌ಕುಮಾರ್ ಜೊತೆ ಮಾತಾಡಿದ್ದರು. ಆ ವೇಳೆ ಏನಾಯ್ತು? ಅನ್ನೋದನ್ನು ಪ್ರಥಮ್ ರಿವೀಲ್ ಮಾಡಿದ್ದರು. "ಇಲ್ಲಿಗೆ ಬಂದು ಉದಯ್ ಮೆಹ್ತಾ ಅವರು ಮಾತಾಡಿಕೊಂಡು ಹೋದರು. ಅದಾದ ಮಾರನೇ ದಿನವೇ ಶಿವಣ್ಣ ಮತ್ತು ಗೀತಕ್ಕ ಏನಂದ್ರು ಗೊತ್ತಾ? ಈಗ ಮಾರ್ಟಿನ್ 11ಕ್ಕೆ ಬರುತ್ತಿದೆ ಅಲ್ವಾ? ಭೈರತಿ ರಣಗಲ್ ನಾಲ್ಕಕ್ಕೆ ಬಂದರೆ ತೊಂದರೆ ಆಗುತ್ತೆ ಅಲ್ವಾ? ಆಯ್ತು ಬಿಡು ಮುಂದಕ್ಕೆ ಹೋಗುತ್ತೇನೆ ಅಂತ ಒಂದು ತಿಂಗಳು ಮುಂದಕ್ಕೆ ಹೋದರು." ಎಂದು ಪ್ರಥಮ್ ರಿವೀಲ್ ಮಾಡಿದ್ದರು.
ಧ್ರುವ ಸರ್ಜಾ ಕೂಡ ಸುದ್ದಿ ಮನೆಗೆ ನೀಡಿದ ಸಂದರ್ಶನದಲ್ಲಿಯೂ ಈ ಮಾತನ್ನು ಒಪ್ಪಿಕೊಂಡಿದ್ದರು. "ಭೈರತಿ ರಣಗಲ್ ಅಕ್ಟೋಬರ್ 4ಕ್ಕೆ ರಿಲೀಸ್ ಆಗಬೇಕಿತ್ತು. ಅಕ್ಟೋಬರ್ 11ಕ್ಕೆ ನಾವು ಅನೌನ್ಸ್ ಮಾಡಿದ್ವಿ. ಆಗಸ್ಟ್ 15 ಇತ್ತು ಅದು ಅಕ್ಟೋಬರ್ 4ಕ್ಕೆ ಬರುತ್ತೆ ಅಂದಾಗ, ನಾನು ಶಿವಣ್ಣನಿಗೆ ಪೋನ್ ಮಾಡಿ ಅಣ್ಣ ಒಂದು ರಿಕ್ವೆಸ್ಟ್ ಏನೋ ಮಾತಾಡಬೇಕು ಅಂದೆ. ಅಣ್ಣ ಹೀಗೆ ಅಕ್ಟೋಬರ್ 4ಕ್ಕೆ ಬಂದರೆ, ಥಿಯೇಟರ್ ಬ್ಲಾಕ್ ಆಗುತ್ತೆ. ಒಂದು ಚೂರು ನೋಡಿ ಅಂತ ರಿಕ್ವೆಸ್ಟ್ ಮಾಡಿಕೊಂಡೆ. ಒಂದು ದಿನ ಆದ್ಮೇಲೆ ಶಿವಣ್ಣ ಮತ್ತು ಗೀತಕ್ಕ ಫೋನ್ ಮಾಡಿ ನೀವು ನಮ್ಮ ಫ್ಯಾಮಿಲಿ. ಡೋಂಟ್ ವರಿ ನಾನು ಒಂದು ತಿಂಗಳು ಮುಂದಕ್ಕೆ ಹೋಗುತ್ತೀನಿ. ಆಲ್ ದಿ ಬೆಸ್ಟ್, ಸಿನಿಮಾ ಚೆನ್ನಾಗಿ ಮಾಡಿದ್ದೀಯಾ? ಅಂತ ಪ್ರಶ್ನೆ ಮಾಡಿದ್ರು." ಎಂದು ಧ್ರುವ ಸರ್ಜಾ ಸಂದರ್ಶನದಲ್ಲಿ ಹೇಳಿದ್ದಾರೆ.


Click it and Unblock the Notifications











