"ಭಾರತದಲ್ಲಿ ಇಂತಹ ಕೃತ್ಯಗಳು ಮರುಕಳಿಸದಿರಲಿ" ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿದ ಶಿವಣ್ಣ, ರವೀನಾ ಟಂಡನ್
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ನಿನ್ನೆ (ಏಪ್ರಿಲ್ 22) ನಡೆದ ಭಯೋತ್ಪಾದಕರ ದಾಳಿಯಲ್ಲಿ ಪ್ರವಾಸಿಗರು ಸಾವನ್ನಪ್ಪಿದ್ದರು. ಪಹಲ್ಗಾಮ್‌ಗೆ ಬಂದಿದ್ದ ಪ್ರವಾಸಿಗರನ್ನು ಗುರಿಯಾಗಿಟ್ಟುಕೊಂಡು ಉಗ್ರಂ ಏಕಾ ಏಕಿ ಮನಸ್ಸಿಗೆ ಬಂದಂತೆ ಗುಂಡನ್ನು ಹಾರಿಸಿದ್ದರು. ಈ ಹೇರ ಕೃತ್ಯಕ್ಕೆ ಸುಮಾರು 28 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.
ಪ್ರವಾಸಿಗರ ಮೇಲೆ ನಡೆದ ಈ ದಾಳಿಯನ್ನು ಜಗತ್ತಿನ ಮುಖಂಡರು ಖಂಡಿಸಿದ್ದಾರೆ. ಟ್ರಂಪ್ ಸೇರಿದಂತೆ ಶಕ್ತಿಶಾಲಿ ದೇಶದ ಮುಖಂಡರು ಆಕ್ರೋಶವನ್ನು ಹೊರ ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಹುಲ್ ಗಾಂಧಿ, ಸಿಎಂ ಸಿದ್ಧರಾಮಯ್ಯ ಕೂಡ ಈ ಕೃತ್ಯವನ್ನು ಖಂಡಿಸಿದ್ದು, ಮೃತರ ಕುಟುಂಬಕ್ಕೆ ಸಂತಾಪವನ್ನು ಸೂಚಿಸಿದ್ದಾರೆ. ಹಾಗೇ ಸಿನಿಮಾ ತಾರೆಯರು ಕೂಡ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್, ರವೀನಾ ಟಂಡನ್, ಸೋನು ಸೂದ್, ವಿವೇಕ್ ಓಬೆರಾಯ್ ಸೇರಿದಂತೆ ಹಲವು ಸ್ಟಾರ್‌ಗಳು ತಮ್ಮ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಬಳಿಕ ವಿರೋಧ ವ್ಯಕ್ತಪಡಿಸಿದ್ದರು. ಹಾಗೇ ಸ್ಯಾಂಡಲ್‌ವುಡ್ ಕಿಂಗ್ ಶಿವರಾಜ್‌ಕುಮಾರ್ ಕೂಡ ಪಹಲ್ಗಾಮ್ ಉಗ್ರರ ದಾಳಿಯನ್ನು ಖಂಡಿಸಿ ಪೋಸ್ಟ್ ಮಾಡಿದ್ದಾರೆಂದು ಅವರ ಫ್ಯಾನ್ ಫೇಜ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಹಾಗಿದ್ದರೆ, ಈ ತಾರೆಯರೆಲ್ಲ ಏನು ಹೇಳಿದ್ದಾರೆ? ಅನ್ನೋದನ್ನು ನೋಡೋಣ.
ಜಮ್ಮು-ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಯನ್ನು ಎಲ್ಲಾ ಕಡೆಯಿಂದಲೂ ಖಂಡಿಸಲಾಗುತ್ತಿದೆ. ಮುಗ್ಧ ಪ್ರವಾಸಿಗರನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದು ಹಲವರಲ್ಲಿ ರಕ್ತ ಕುದಿಯುವಂತೆ ಮಾಡುತ್ತಿದೆ. 28 ಜನರ ಸಾವನ್ನು ತೀವ್ರವಾಗಿ ಖಂಡಿಸಲಾಗುತ್ತಿದೆ. ಕೆಲವು ಸೆಲೆಬ್ರೆಟಿಗಳು ಈ ಕೃತ್ಯವನ್ನು ಖಂಡಿಸುತ್ತಿದ್ದಾರೆ. ಶಿವಣ್ಣ ಹೇಳಿದ್ದಾರೆಂದು ಫ್ಯಾನ್ ಪೇಜ್ ಮಾಡಿದ ಪೋಸ್ಟ್‌ನಲ್ಲಿಯೂ ನಟ ಆತಂಕವನ್ನು ವ್ಯಕ್ತಪಡಿಸಿದ್ದು, ಈ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.
ಶಿವಣ್ಣ ಹೇಳಿದ್ದಾರೆಂದು ಫ್ಯಾನ್ ಪೇಜ್ ಮಾಡಿದ ಪೋಸ್ಟ್‌ನಲ್ಲಿ ಹೀಗೆ ಬರೆಯಲಾಗಿದೆ. "ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿಯನ್ನ ತೀವ್ರವಾಗಿ ಖಂಡಿಸುತ್ತೇನೆ. ಶಾಂತಿ ಸೌಹಾರ್ದದ ಭಾರತದಲ್ಲಿ ಇಂತಹ ಕೃತ್ಯಗಳು ಮರುಕಳಿಸದಿರಲಿ. ಹಾಗೆಯೇ ಈ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ಆಗಲಿ ಮತ್ತು ನಮ್ಮನ್ನು ಅಗಲಿದ ಎಲ್ಲಾ ಭಾರತೀಯರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕೋರುತ್ತಾ ಎಲ್ಲಾ ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿ ಹಾಗೂ ಧೈರ್ಯವನ್ನು ದೇವರು ನೀಡಲಿ. ಈ ಪೈಶಾಚಿಕ ಕೃತ್ಯ ಎಸಗುವವರ ವಿರುದ್ಧದ ಸರ್ಕಾರದ ಹೋರಾಟಕ್ಕೆ ಸದಾ ಬೆಂಬಲವಿರುತ್ತದೆ." ಎಂದು ಶಿವಣ್ಣ ಆಕ್ರೋಶ ಹೊರ ಹಾಕಿದ್ದಾರೆ ಎಂದು ಪೋಸ್ಟ್ ಮಾಡಲಾಗಿದೆ.
ರವೀನಾ ಟಂಡನ್
ಹಾಗೇ ಬಾಲಿವುಡ್ ನಟಿ ರವೀನಾ ಟಂಡನ್ ಕೂಡ ಉಗ್ರರ ಅಟ್ಟಹಾಸವನ್ನು ಖಂಡಿಸಿದ್ದು, ಶಿವಮೊಗ್ಗದ ಮಂಜುನಾಥ್ ಪತ್ನಿಗೆ ಉಗ್ರರು ಹೇಳಿದ್ದನ್ನು ಕೇಳಿ ಶಾಕ್ ಆಗಿದ್ದಾರೆ. " ಓಂ ಶಾಂತಿ, ನನ್ನ ಕಡೆಯಿಂದ ಸಂತಾಪ. ಈ ಘಟನೆಯನ್ನು ಕೇಳಿ ಆತಂಕ ಹಾಗೂ ಕೋಪ ತರಿಸುತ್ತಿದೆ. ಈ ದುಃಖವನ್ನು ವ್ಯಕ್ತಪಡಿಸಲು ನನ್ನ ಬಳಿ ಪದಗಳಿಲ್ಲ. ಈ ಸಮಯದಲ್ಲಿ ನಾವೆಲ್ಲರೂ ಒಳ ಜಗಳವನ್ನು ಬಿಟ್ಟು, ಒಟ್ಟಾಗಿ ಶತ್ರುವನ್ನು ಅರಿತುಕೊಳ್ಳುವ ಸಮಯ ಬಂದಿದೆ" ಎಂದು ರವೀನಾ ಟಂಡನ್ ಟ್ವೀಟ್ ಮಾಡಿದ್ದಾರೆ.
ಸೋನು ಸೂದ್
ಇನ್ನೊಬ್ಬ ಬಾಲಿವುಡ್ ನಟ ಸೋನು ಸೂದ್ ಕೂಡ ದಾಳಿಯನ್ನು ಟ್ವೀಟ್ ಮೂಲಕ ಖಂಡಿಸಿದ್ದಾರೆ. " ಮುಗ್ಧ ಪ್ರವಾಸಿಗರ ಮೇಲೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಹೇಡಿತನದ ಭಯೋತ್ಪಾದಕ ದಾಳಿಯನ್ನು ಖಂಡಿಸುತ್ತೇನೆ. ಈ ನಾಗರೀಕ ಜಗತ್ತಿನಲ್ಲಿ ಭಯೋತ್ಪಾದನೆಗೆ ಯಾವುದೇ ಜಾಗವಿಲ್ಲ. ಇಂತಹ ಕೃತ್ಯವನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ತಮ್ಮ ಪ್ರೀತಿ ಪಾತ್ರರಾದವರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪವನ್ನು ಸೂಚಿಸುತ್ತೇನೆ. ಹಾಗೇ ಗಾಯಗೊಂಡವರು ಬೇಗನೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಸೋನು ಸೂದ್ ಟ್ವೀಟ್ ಮಾಡಿದ್ದಾರೆ.
ಶಾರುಖ್ ಖಾನ್
ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಈ ಕೃತ್ಯ ಆಕ್ರೋಶ ಹೊರ ಹಾಕಿದ್ದಾರೆ. "ಪಹಲ್ಗಾಮ್‌ನಲ್ಲಿ ನಡೆದ ಹೇಯ ಮತ್ತು ಅಮಾನವೀಯ ಕೃತ್ಯದ ಬಗ್ಗೆ ದುಃಖ ಮತ್ತು ಕೋಪವನ್ನು ವ್ಯಕ್ತಪಡಿಸುವುದಕ್ಕೆ ಪದಗಳೇ ಬರುತ್ತಿಲ್ಲ. ಇಂತಹ ಕಷ್ಟದ ಸಮಯದಲ್ಲಿ ದೇವರ ಮೊರೆ ಹೋಗಿ ಸಂತ್ರಸ್ತ ಕುಟುಂಬಗಳಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತೇನೆ. ಒಂದು ದೇಶವರಾಗಿ ನಾವು ಒಗ್ಗಟ್ಟಿನಿಂದ ನಿಂತು ಈ ಹೇಯ ಕೃತ್ಯವನ್ನು ಬಲವಾಗಿ ವಿರೋಧಿಸಿ ನ್ಯಾಯವನ್ನು ಪಡೆಯೋಣ" ಎಂದು ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
ಸನ್ನಿ ಡಿಯೋಲ್
ಮತ್ತೊಬ್ಬ ಬಾಲಿವುಡ್ ನಟ ಸನ್ನಿ ಡಿಯೋಲ್ ಭಯೋತ್ಪಾದನೆ ವಿರುದ್ಧ ಹೋರಾಡಬೇಕಿದೆ ಎಂದು ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. " ಈ ಸಮಯದಲ್ಲಿ ಜಗತ್ತಿನ ಆಲೋಚನೆ ಭಯೋತ್ಪಾದನೆಯನ್ನು ಹತ್ತಿಕ್ಕುವ ಕಡೆ ಹರಿಸಬೇಕಿದೆ. ಯಾಕಂದರೆ, ಇವರ ಕೃತ್ಯಕ್ಕೆ ಮುಗ್ಧ ಜನರ ಬಲಿಯಾಗುತ್ತಿದ್ದಾರೆ. ಜನರು ತಮ್ಮ ಬಗ್ಗೆ ಜಾಗರೂಕರಾಗಿರಬೇಕಾಗಿದೆ. ಈ ಕಷ್ಟದ ಸಮಯದಲ್ಲಿ ನಾನು ಸಂತ್ರಸ್ತರ ಪರವಾಗಿ ನಿಲ್ಲುತ್ತೇನೆ." ಎಂದು ನಟ ಸನ್ನಿ ಡಿಯೋಲ್ ಹೇಳಿದ್ದಾರೆ.
ನಾನಿ
ಪಹಲ್ಗಾಮ್ ಉಗ್ರರ ದಾಳಿಯನ್ನು ತೆಲುಗು ನಟ ನಾನಿ ಖಂಡಿಸಿದ್ದಾರೆ. ಕೆಲವೇ ದಿನಗಳ ಹಿಂದಷ್ಟೇ ಅವರ ಸಿನಿಮಾವನ್ನು ಇದೇ ಜಾಗದಲ್ಲಿ ಶೂಟ್ ಮಾಡಲಾಗಿತ್ತು. ಸುಮಾರು 200 ಜನರ ತಂಡ ಇಲ್ಲಿ ಚಿತ್ರೀಕರಣವನ್ನು ಮಾಡಿದ್ದರು. ಈ ಕೃತ್ಯವನ್ನು ಖಂಡಿಸಿ, ಎಕ್ಸ್ ಪೋಸ್ಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. " ಮೂರು ತಿಂಗಳ ಹಿಂದಷ್ಟೇ ನಾವು ಅಲ್ಲಿ ಇದ್ದೆವು. 200ಕ್ಕೂ ಅಧಿಕ ಮಂದಿಯ ತಂಡ ಸುಮಾರು 20 ದಿನಗಳ ಕಾಲ ಶೂಟಿಂಗ್ ಮಾಡಿದ್ವಿ. ಪಹಲ್ಗಾಮ್ ಒಂದು ಕನಸಾಗಿತ್ತು. ಆ ಜಾಗ, ಅಲ್ಲಿನ ಜನರು ಹಾಗೂ ಅಲ್ಲಿನ ಅಪ್ಪುಗೆ ಎಲ್ಲವೂ ಸೊಗಸಾಗಿತ್ತು. ಹೃದಯ ಒಡೆದಿದೆ, ಮಾತೇ ಬರುತ್ತಿಲ್ಲ. ಯಾಕೆ?" ಎಂದು ನಟಿ ನಾನಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಆಲಿಯಾ ಭಟ್
ಪಹಲ್ಗಾಮ್ ಭಯೋತ್ಪಾದಕರ ಅಟ್ಟಹಾಸಕ್ಕೆ ಆಲಿಯಾ ಭಟ್ ವಿರೋಧಿಸಿದ್ದು, ಸಂತ್ರಸ್ತ ಕುಟುಂಬದ ಬೆಂಬಲಕ್ಕೆ ನಿಂತಿದ್ದಾರೆ. "ಮುಗ್ಧ ಜನರು ಜೀವ ಹೋಯ್ತು. ಪ್ರವಾಸಿಗರು, ಕುಟುಂಬಗಳು, ಜನರು ಅವರ ಪಾಡಿಗೆ ಬದುಕುತ್ತಿದ್ದರು. ಸೌಂದರ್ಯವನ್ನು ಆಸ್ವಾಧಿಸುತ್ತಿದ್ದರು. ಶಾಂತಿಯನ್ನು ಬಯಸುತ್ತಿದ್ದರು. ಪ್ರಾಣವನ್ನು ಕಳೆದುಕೊಂಡ ಆ ಮುಗ್ಧ ಜೀವಗಳಿಗೆ ಶಾಂತಿ ಸಿಗಲಿ." ಎಂದು ಆಲಿಯಾ ಭಟ್ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ಮಾಧುರಿ ದೀಕ್ಷಿತ್
ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಉಗ್ರರ ಕೃತ್ಯಕ್ಕೆ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. "ಪಹೆಲ್ಗಾಮ್‌ನಲ್ಲಿ ನಡೆದ ಘಟನೆ ಹೃದಯವಿದ್ರಾವಕವಾಗಿದೆ. ನಮ್ಮ ಸಂತಾಪಗಳು ಪ್ರಾಣ ಕಳೆದುಕೊಂಡ ಕುಟುಂಬದ ಜೊತೆ ಇದ್ದೇ ಇರುತ್ತೆ. ಈ ದುರಂತವನ್ನು ಎಲ್ಲರೂ ಖಂಡಿಸುತ್ತಾರೆ." ಎಂದು ಹೇಳಿದ್ದಾರೆ.
ರಾಜ್‌ಕುಮಾರ್ ರಾವ್
ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಈ ಭಯೋತ್ಪಾದಕರ ಕೃತ್ಯವನ್ನು ಖಂಡಿಸಿದ್ದಾರೆ. "ಪಹಲ್ಗಾಮ್‌ನಲ್ಲಿ ನಡೆದ ಈ ಹೇಯ ಕೃತ್ಯ ವಿಚಲಿತನನ್ನಾಗಿಸಿದೆ. ಭಯೋತ್ಪಾದಕರ ಕೃತ್ಯದಿಂದ ಸಾಕಷ್ಟು ಮುಗ್ಧರು ಜೀವ ಕಳೆದುಕೊಂಡಿದ್ದು ನೋಡಿ ಹೃದಯ ಒಡೆದು ಹೋಗಿದೆ." ಎಂದು ರಾಜ್‌ಕುಮಾರ್ ರಾವ್ ಹೇಳಿದ್ದಾರೆ. ಹೀಗೆ ಬಾಲಿವುಡ್ ಸೇರಿದಂತೆ ಬೇರೆ ಬೇರೆ ಚಿತ್ರರಂಗದ ಗಣ್ಯರು ಈ ಕೃತ್ಯವನ್ನು ಖಂಡಿಸಿದ್ದಾರೆ.


Click it and Unblock the Notifications











