ನಿಂಬಿಯಾ ಬನಾದ ಮ್ಯಾಗ: "ನಿಜಕ್ಕೂ ಒಂದು ಅದ್ಭುತ ದೃಶ್ಯಕಾವ್ಯವನ್ನು ನೋಡಿದ ಅನುಭವ ಆಯ್ತು": ಶಿವಣ್ಣ
ದೊಡ್ಮನೆ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಅಣ್ಣಾವ್ರ ಮೊಮ್ಮಗ ಷಣ್ಮುಖ ಗೋವಿಂದರಾಜ್ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇವರ ಚೊಚ್ಚಲ ಸಿನಿಮಾ 'ನಿಂಬಿಯಾ ಬನಾದ ಮ್ಯಾಗ' ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದು, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಗೀತಾ ಶಿವರಾಜ್‌ಕುಮಾರ್ಈ ಸಿನಿಮಾವನ್ನು ವೀಕ್ಷಿಸಿದ್ದಾರೆ.
ಮಲೆನಾಡಿನ ಸೊಬಗು ಹಾಗೂ ತಾಯಿ ಮಗನ ಬಾಂಧವ್ಯವನ್ನು ತೆರೆಮೇಲೆ ತರಲಾಗಿತ್ತು. ಈ ಸಿನಿಮಾ ವೀಕ್ಷಿಸಿದ ಬಳಿಕ ದೊಡ್ಮನೆ ಅಭಿಮಾನಿಗಳು ಮೆಚ್ಚುಗೆಯನ್ನು ಸೂಚಿಸಿದ್ದರು. ಈ ಬೆನ್ನಲ್ಲೇ ಶಿವಣ್ಣ ಸಿನಿಮಾವನ್ನು ನೋಡಿ ಮೆಚ್ಚುಕೊಂಡಿದ್ದಾರೆ. ರಾಜ್‌ಕುಮಾರ್ ಮೊಮ್ಮಗ ಅಂತ ಈ ಮಾತು ಹೇಳುತ್ತಿಲ್ಲ. ಈ ದೃಶ್ಯಕಾವ್ಯ ನಿಜಕ್ಕೂ ಒಂದೊಳ್ಳೆ ಅನುಭವ ಎಂದಿದ್ದಾರೆ.

ಅಣ್ಣಾವ್ರ ಮೊಮ್ಮಕ್ಕಳು ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ವಿನಯ್ ರಾಜ್‌ಕುಮಾರ್, ಯುವ ರಾಜ್‌ಕುಮಾರ್, ಧನ್ಯಾ ರಾಮ್‌ಕುಮಾರ್, ಧೀರೇಜ್ ರಾಮ್ ಕುಮಾರ್ ಈಗಾಗಲೇ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗ ಮತ್ತೊಬ್ಬ ಮೊಮ್ಮಗ ಎಂಟ್ರಿ ಕೊಟ್ಟಿದ್ದು, ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇವರಿಗೀಗ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಗೀತಕ್ಕನ ಬೆಂಬಲ ಸಿಕ್ಕಿದೆ. 'ನಿಂಬಿಯಾ ಬನಾದ ಮ್ಯಾಗ' ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜಕುಮಾರ್ 'ನಿಂಬಿಯಾ ಬನಾದ ಮ್ಯಾಗ' ಸಿನಿಮಾವನ್ನು ವೀಕ್ಷಿಸಿದ್ದರು. ಅವರಿಗೆ ಈ ಸಿನಿಮಾ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಮಲೆನಾಡಿನ ಮಡಿಲಿನಲ್ಲಿ ತಾಯಿ ಹಾಗೂ ಮಗನ ಕತೆಯನ್ನು ಹೇಳಲಾಗಿದೆ. ಸಿನಿಮಾ ನೀಡಿದ ಬಳಿಕ ಶಿವಣ್ಣ ಕೂಡ ಇದೊಂದು ಅತ್ಯುತ್ತಮ ದೃಶ್ಯಕಾವ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ.

"ಇದು ನಮ್ಮ ಸಿನಿಮಾ ಅಂತ ಹೇಳುತ್ತಿಲ್ಲ. ನಿಜಕ್ಕೂ ಅದ್ಭುತ ದೃಶ್ಯಕಾವ್ಯವನ್ನು ನೋಡಿದ ಅನುಭವ ಆಯ್ತು. ಡಾ.ರಾಜಕುಮಾರ್ ಅವರ ಮೊಮ್ಮಗನ ಸಿನಿಮಾ ಅಂತ ತುಂಬಾ ಆಡಂಬರ ಮಾಡಿಲ್ಲ. ಸಿನಿಮಾವನ್ನು ಸಹಜವಾಗಿ ತೆರೆಗೆ ತಂದಿದ್ದಾರೆ. ನಾಯಕ ಷಣ್ಮುಖ, ನಾಯಕಿ ತನುಶ್ರೀ, ನಟ ಸುನಾದ್ ರಾಜ್ ಸೇರಿದಂತೆ ಎಲ್ಲಾ ಕಲಾವಿದರು ತುಂಬಾ ಚೆನ್ನಾಗಿ ನಟಿಸಿದ್ದಾರೆ. ಎಲ್ಲಾ ಪಾತ್ರಗಳು ಮನಸ್ಸಿನಲ್ಲೇ ಉಳಿಯುತ್ತದೆ. ಮಲೆನಾಡ ಸೊಬಗನ್ನು ಛಾಯಾಗ್ರಾಹಕರು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಇಂತಹ ಚಿತ್ರಗಳನ್ನು ಪ್ರತಿಯೊಬ್ಬರೂ ನೋಡಿ. ಪ್ರೋತ್ಸಾಹ ನೀಡಿ" ಎಂದು ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಹೇಳಿದ್ದಾರೆ.
'ನಿಂಬಿಯಾ ಬನಾದ ಮ್ಯಾಗ' ಸಿನಿಮಾವನ್ನು ಅಶೋಕ್ ಕಡಬ ನಿರ್ದೇಶನ ಮಾಡಿದ್ದಾರೆ. ಇದು ಅವರ ಐದನೇ ಸಿನಿಮಾ. ಸಿನಿಮಾದ ಕಥೆ ಕಡೆ ಬರುವುದಾರೇ, ಮಗ 2 ರಿಂದ 3 ವರ್ಷ ಇದ್ದಾಗ ಕಳೆದು ಹೋಗುತ್ತಾನೆ. 25 ವರ್ಷಗಳ ಬಳಿಕ ಕಳೆದು ಹೋಗಿದ್ದ ಮಗ ಮರಳಿ ಮನೆಗೆ ಬರುತ್ತಾನೆ. ಆ ವೇಳೆ ಮಗನನ್ನು ಕಳೆದುಕೊಂಡಿದ್ದ ತಾಯಿ ಅದೆಷ್ಟು ಖುಷಿ ಪಡುತ್ತಾಳೆ. ಮಗ ಸಿಕ್ಕಿದ ಬಳಿಕ ಏನೆಲ್ಲ ಘಟನೆಗಳು ನಡೆಯುತ್ತವೆ ಅನ್ನೋದು ಸಿನಿಮಾ ಕಥೆ.
ಅಣ್ಣಾವ್ರ ಮೊಮ್ಮಗ ಷಣ್ಮುಖ ಗೋವಿಂದರಾಜು ನಟಿಸಿದ 'ನಿಂಬಿಯಾ ಬನಾದ ಮ್ಯಾಗ' ಸಿನಿಮಾವನ್ನು ಎರಡು ಭಾಗಗಳಲ್ಲಿ ನಿರ್ಮಾಣ ಮಾಡಲಾಗಿದೆ. 'ನಿಂಬಿಯಾ ಬನಾದ ಮ್ಯಾಗ' ಪೇಜ್ -1 ಏಪ್ರಿಲ್ 4 ರಂದು ರಿಲೀಸ್ ಆಗಿದೆ. ಹಾಗೇ ಪೇಜ್ 2 ಕೂಡ ರಿಲೀಸ್ ಆಗಲಿದ್ದು, ಪೇಜ್ 1 ರ ಕೊನೆಯಲ್ಲಿ ಕುತೂಹಲವನ್ನು ಕೆರಳಿಸಿದೆ. ಹೀಗಾಗಿ ಇದು ರೆಗ್ಯೂಲರ್ ಸಿನಿಮಾಗಿಂತ ಭಿನ್ನವಾಗಿದೆ.
'ನಿಂಬಿಯಾ ಬನಾದ ಮ್ಯಾಗ' ಪೇಜ್ -1 ರಲ್ಲಿ ಷಣ್ಮುಖ ಗೋವಿಂದರಾಜುಗೆ ನಾಯಕಿಯಾಗಿ ತನುಶ್ರೀ ನಟಿಸಿದ್ದಾರೆ. ಈ ಸಿನಿಮಾ ಇನ್ನೊಂದು ವಿಶೇಷ ಅಂದರೆ, 25 ವರ್ಷಗಳ ಬಳಿಕ 'ಮೇಘಮಾಲೆ' ಖ್ಯಾತಿಯ ಸುನಾದ್‌ರಾಜ್ ನಾಯಕನಿಗೆ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ತ್ರಿಶಾ, ಪಂಕಜ್ ನಾರಾಯಣ್, ತಾಯಿಯ ಪಾತ್ರದಲ್ಲಿ ಸಂಗೀತಾ, ಭವ್ಯಾ, ರಾಮಕೃಷ್ಣ, ಪದ್ಮಾ ವಾಸಂತಿ ಸೇರಿದಂತೆ ಹಲವರು 'ನಿಂಬಿಯಾ ಬನಾದ ಮ್ಯಾಗ' ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.


Click it and Unblock the Notifications











