ಮಾಸ್ ಲುಕ್ ಕೊಟ್ಟ ಆರ್ಮುಗಂ ರವಿಶಂಕರ್ ಪುತ್ರ; 'ಸುಬ್ರಹ್ಮಣ್ಯ'ನ ಅವತಾರವೆತ್ತಿ ಕಿಕ್ ಕೊಟ್ಟ ಅದ್ವೈ
ಸಿನಿಮಾ ಹೀರೋಗಳ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಹೊಸತೇನು ಅಲ್ಲ. ಪ್ರತಿ ವರ್ಷ ಸೆಲೆಬ್ರಿಟಿಗಳ ಮಕ್ಕಳು ಎಂಟ್ರಿ ಗ್ರ್ಯಾಂಡ್ ಆಗಿಯೇ ಆಗುತ್ತೆ. ಹೀಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಲಿರುವ ಸ್ಟಾರ್ ಕಿಡ್‌ಗಳಲ್ಲಿ ಪಟ್ಟಿಯಲ್ಲಿ ಆರ್ಮುಗಂ ರವಿಶಂಕರ್ ಪುತ್ರ ಅದ್ವೈ ಮುಂಚೂಣಿಯಲ್ಲಿದ್ದಾರೆ.
"ಇದು ಆರ್ಮುಗಂ ಕೋಟೆ ಕಣೋ.." ಅಂತಲೇ ಕನ್ನಡಿಗರ ಮನಗೆದ್ದಿದ್ದ ರವಿಶಂಕರ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಖಳನಾಯಕನಾಗಿಯೂ ಮೆಚ್ಚುಗೆ ಪಡೆದಿದ್ದಾರೆ. ಹಾಸ್ಯ ಪಾತ್ರಗಳಲ್ಲೂ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಕಂಚಿನ ಕಂಠದಿಂದಲೂ ಸಿನಿಪ್ರಿಯರ ಪ್ರೀತಿ ಗಳಿಸಿದ್ದಾರೆ. ರವಿಶಂಕರ್ ತೆರೆಮೇಲೆ ಬಂದರೆ, ಹೀರೋಗಳಿಗೆ ಶಿಳ್ಳೆಗಳು ಬೀಳೋದು ಗ್ಯಾರಂಟಿ.

ಪಿ.ರವಿಶಂಕರ್ ಚಿತ್ರರಂಗದಲ್ಲಿ ಆಕ್ಟಿವ್ ಆಗಿರುವಾಗಲೇ ತಮ್ಮ ಪುತ್ರ ಅದ್ವೈ ಅನ್ನು ಚಿತ್ರರಂಗಕ್ಕೆ ಪರಿಚಯಿಸುವುದಕ್ಕೆ ಮುಂದಾಗಿದ್ದಾರೆ. ಈಗಾಗಲೇ ಪ್ರೀ-ಲುಕ್ ಮೂಲಕ ಗಮನ ಸೆಳೆದಿದ್ದ ಅದ್ವೈ ಗಮನ ಸೆಳೆದಿದ್ದರು. ಗಣೇಶ ಚತುರ್ಥಿಯ ಈ ಶುಭ ಸಂದರ್ಭದಲ್ಲಿ ಪುತ್ರ ಅದ್ವೈ ನಟನೆಯ ಮೊದಲ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಸೆಂಚುರಿ ಸ್ಟಾರ್ ಶಿವಣ್ಣ ಹಾಗೂ ಪತ್ನಿ ಗೀತಾ ಶಿವರಾಜ್‌ಕುಮಾರ್ ಫಸ್ಟ್ ಲುಕ್ ರಿಲೀಸ್ ಮಾಡಿ ಸಾಥ್ ಕೊಟ್ಟಿದ್ದಾರೆ.
ರವಿಶಂಕರ್ ಪುತ್ರ ಅದ್ವೈ ಚೊಚ್ಚಲ ಸಿನಿಮಾ 'ಸುಬ್ರಹ್ಮಣ್ಯ' ಫಸ್ಟ್ ಲುಕ್ ಸಿನಿಪ್ರಿಯರಿಗೆ ಕಿಕ್ ಕೊಟ್ಟಿದೆ. ಹೈಟ್, ಪರ್ಸನಾಲಿಟಿ ಸೇರಿದಂತೆ ಹೀರೋಗೆ ಬೇಕಿರೋ ಎಲ್ಲಾ ಕ್ವಾಲಿಟಿ ಕೂಡ ರವಿಶಂಕರ್ ಪುತ್ರ ಅದ್ವೈನಲ್ಲಿದೆ. ಅದರಲ್ಲೂ 'ಸುಬ್ರಹ್ಮಣ್ಯ' ಸಿನಿಮಾದ ಫಸ್ಟ್ ಲುಕ್‌ನಲ್ಲಿ ಅದ್ವೈ ಸೂಪರ್ ಹೀರೋ ಲುಕ್ ಕೊಟ್ಟಿದ್ದಾರೆ. ಇದರೊಂದಿಗೆ ಕಾಡು, ನಿಗೂಢ ಪ್ರವೇಶ ದ್ವಾರ, ಸಿನಿಮಾದ ಗ್ರಾಫಿಕ್ಸ್ ಸೇರಿದಂತೆ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಗಮನ ಸೆಳೆದಿದೆ.

ಮೇಲ್ನೋಟಕ್ಕೆ 'ಸುಬ್ರಹ್ಮಣ್ಯ' ಸಿನಿಮಾ ಒಂದು ಸೋಶಿಯೋ-ಫ್ಯಾಂಟಸಿ ಶೈಲಿಯ ಸಿನಿಮಾ ಅಂತ ಅನಿಸುತ್ತಿದೆ. ಜೊತೆ ಅಡ್ವೆಂಚರ್ ಎಲಿಮೆಂಟ್ಸ್ ಕೂಡ ಈ ಸಿನಿಮಾದಲ್ಲಿದೆ. ಈಗಾಗಲೇ ಸಿನಿಮಾದ ಶೇ.60ರಷ್ಟು ಚಿತ್ರೀಕರಣ ಶೂಟಿಂಗ್ ಮುಗಿದಿದೆ. ಈಗಾಗಲೇ ಶೂಟಿಂಗ್ ಆಗಿರುವ ಸಿನಿಮಾದ ಭಾಗಗಳನ್ನು ಬೆಂಗಳೂರು, ಮುಂಬೈ, ಹೈದರಾಬಾದ್ ಹಾಗೂ ಚೆನ್ನೈನ ಪ್ರತಿಷ್ಠಿತ ಸ್ಟುಡಿಯೋಗಳಲ್ಲಿ ನಡೆಯುತ್ತಿದೆ.
ಇನ್ನೊಂದು ವಿಶೇಷ ಅಂದರೆ, ತಮ್ಮ ಪುತ್ರ ಅದ್ವೈ ಮೊದಲ ಸಿನಿಮಾ 'ಸುಬ್ರಹ್ಮಣ್ಯ'ಗೆ ರವಿಶಂಕರ್ ಅವರೇ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸುಮಾರು 20 ವರ್ಷಗಳ ಬಳಿಕ ರವಿಶಂಕರ್ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ತಮ್ಮ ಪುತ್ರನನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಇಂಟ್ರುಡ್ಯೂಸ್ ಮಾಡುವುದಕ್ಕೆ ರವಿಶಂಕರ್ ಸ್ಕೆಚ್ ಹಾಕಿದ್ದಾರೆ. ಈ ಹಿಂದೆ ಮಾಲಾಶ್ರೀ ನಟನೆಯ 'ದುರ್ಗಿ' ಸಿನಿಮಾಗೆ ರವಿಶಂಕರ್ ಆಕ್ಷನ್ ಕಟ್ ಹೇಳಿದ್ದರು.
'ಸುಬ್ರಹ್ಮಣ್ಯ' ಸಿನಿಮಾವನ್ನು ತಿರುಮಲ ರೆಡ್ಡಿ ಹಾಗೂ ಅನಿಲ್ ಕಡಿಯಾಲ ನಿರ್ಮಾಣ ಮಾಡುತ್ತಿದ್ದಾರೆ. 'ಕೆಜಿಎಫ್' ಹಾಗೂ 'ಸಲಾರ್' ಸಿನಿಮಾಗೆ ಸಂಗೀತ ನೀಡಿರುವ ರವಿ ಬಸ್ರೂರು ಈ ಸಿನಿಮಾಗೆ ಟ್ಯೂನ್ ಹಾಕುತ್ತಿದ್ದಾರೆ. ವಿಘ್ನೇಶ್ ರಾಜ್ ಕ್ಯಾಮರಾ ವರ್ಕ್ ಇದ್ದರೆ, ವಿಜಯ್ ಎಂ. ಕುಮಾರ್ ಎಡಿಟಿಂಗ್ ಮಾಡುತ್ತಿದ್ದಾರೆ. ಮಗನಿಗಾಗಿ ಎರಡು ದಶಕಗಳ ಬಳಿಕ ಡೈರೆಕ್ಟರ್ ಕ್ಯಾಪ್ ಧರಿಸಿರೋ ರವಿಶಂಕರ್ ಚಿತ್ರರಂಗಕ್ಕೆ ಹೀರೋ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಕೊಡುತ್ತಾರಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











