"ನಾನು ಸತ್ತು ಬದುಕಿಬಿಟ್ಟೆ..": ಶಿವಣ್ಣ '45' ಒಪ್ಪುವುದಕ್ಕೆ ಇದೇ ಕಾರಣ
ಮುಂದಿನ ವಾರ ಕನ್ನಡದಲ್ಲಿ ಮತ್ತೆರಡು ಸಿನಿಮಾಗಳು ರಿಲೀಸ ಆಗುತ್ತಿವೆ. ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಒಂದು ಕಡೆಯಾದರೆ, ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ '45' ಕೂಡ ಒಂದು. ಈ ಎರಡು ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಕಾರಣಕ್ಕೆ ಎರಡೂ ತಂಡಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಕರ್ನಾಟಕದ ಒಂದೊಂದು ಕಡೆ ಒಬ್ಬೊಬ್ಬರು ಪ್ರಚಾರ ಮಾಡುತ್ತಿದ್ದಾರೆ.
ಇನ್ನು '45' ಸಿನಿಮಾ ತಂಡ ಭರ್ಜರಿ ಪ್ರಚಾರದಲ್ಲಿ ತೊಡಗಿದೆ. ಶಿವಣ್ಣನಿಗೆ ಈ ಸಿನಿಮಾ ವಿಶೇಷ. ಅವರ ವೃತ್ತಿ ಬದುಕಿನಲ್ಲಿ ಎಂದೂ ಮರೆಯಲಾಗದ ಸಿನಿಮಾ. ಹೀಗಾಗಿ ಮತ್ತೊಮ್ಮೆ ಇದೇ ತಂಡದೊಂದಿಗೆ ಸಿನಿಮಾ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. '45' ಸಿನಿಮಾದ ಪಾತ್ರದ ಬಗ್ಗೆನೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೇ ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದರಿಂದ '45' ಮೇಲೆ ಇಡೀ ಚಿತ್ರರಂಗವೇ ಕಣ್ಣಿಟ್ಟಿದೆ.

ಇತ್ತೀಚೆಗೆ '45' ಸಿನಿಮಾಗಾಗಿ ನೀಡಿದ ಸಂದರ್ಶನದಲ್ಲಿ ಶಿವರಾಜ್‌ಕುಮಾರ್ ಅಭಿಮಾನಿಗಳೇ ಭಾವುಕರಾಗುವಂತೆ ಮಾತಾಡಿದ್ದಾರೆ. ಟಿವಿ9ಗೆ ನೀಡಿದ ಸಂದರ್ಶನದಲ್ಲಿ "ನಾನು ಸತ್ತು ಬದುಕಿ ಬಿಟ್ಟೆ ಎಂದು ಹೇಳಿದ್ದಾರೆ." ಇದೆಷ್ಟೇ ಅಲ್ಲದೆ, ಅಪ್ಪು ಅಗಲಿಕೆ ಬಗ್ಗೆನೂ ಮಾತಾಡಿದ್ದಾರೆ. ಅವರ ಮಾತುಗಳನ್ನು ಕೇಳಿ ಶಿವಣ್ಣ ಆಧ್ಯಾತ್ಮದ ಕಡೆಗೆ ವಾಲಿದರೇ? ಎಂಬ ಪ್ರಶ್ನೆ ಮೂಡುವಂತಿದೆ. ಅಷ್ಟಕ್ಕೂ ಶಿವಣ್ಣ ಏನು ಹೇಳಿದ್ದಾರೆಂದು ನೋಡುವುದಾರೇ,
ಶಿವಣ್ಣನಿಗೆ '45' ಸಿನಿಮಾ ಮಾಡುವಾಗ ಕ್ಯಾನ್ಸರ್ ಇರುವ ಸಂಗತಿ ಗೊತ್ತಾಗಿತ್ತು. ಇಂತಹ ಸಂದರ್ಭದಲ್ಲಿ ಚಿಕಿತ್ಸೆ ಪಡೆಯುತ್ತಲೇ ಸಿನಿಮಾದಲ್ಲಿ ನಟಿಸಿದ್ದರು. ಶೂಟಿಂಗ್ ಅನ್ನು ಮುಗಿಸಿ ಕೊಟ್ಟಿದ್ದರು. ಆ ಸಂದರ್ಭ ಹೇಗಿತ್ತು? ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಆ ಘಳಿಗೆಯನ್ನು ಹೇಗೆ ಎದುರಿಸಿದರು? ಅನ್ನೋದನ್ನು ರಿವೀಲ್ ಮಾಡಿದ್ದಾರೆ.
"ಈ ಸಿನಿಮಾದ ಕ್ಲೈಮ್ಯಾಕ್ಸ್ ಮಾಡುವಾಗ ನನಗೆ ಕಿಮೋ ನೀಡುತ್ತಿದ್ದರು. ಆ ಎಲ್ಲರೂ ಜೊತೆಯಲ್ಲಿ ಇದ್ದರು. ಫ್ಯಾಮಿಲಿ ಇತ್ತು. ಗೀತಾ, ಮಗಳು, ಇಡೀ ಇಂಡಸ್ಟ್ರಿ, ಫ್ರೆಂಡ್ಸ್, ಡೈರೆಕ್ಟರ್‌ಗಳು, ಅರ್ಜುನ್ ಜನ್ಯ, ನಮ್ಮ ಇಡೀ ಟೀಮ್ ಉಪೇಂದ್ರ, ರಾಜ್ ಬಿ ಶೆಟ್ಟಿ, ಡಿಕೆಡಿ ಮಾಡುತ್ತಿದ್ದೆ. ಅಲ್ಲಿ ರಕ್ಷಿತಾ ಅವರಿದ್ದರು. ಚಿನ್ನಿ ಮಾಸ್ಟರ್, ವಿಜಯ ರಾಘವೇಂದ್ರ, ಅನುಶ್ರೀ, ಎಲ್ಲಾ ಸ್ಪರ್ಧಿಗಳು ಇದ್ದರು. ಯಾರೋ ಇದ್ದಾರೆ. ನನ್ನ ಹಿಂದೆ ಯಾರೋ ಇದ್ದಾರೆ ಅಂತ ಹಾಗೇ ಕರೆದುಕೊಂಡು ಹೋಯ್ತು" ಎಂದು ಶಿವಣ್ಣ ಹೇಳಿದ್ದಾರೆ.

ಇದೇ ಸಂದರ್ಶನದಲ್ಲಿ "ನಾನು ಸತ್ತು ಬದುಕಿಬಿಟ್ಟೆ" ಎಂದು ಹೇಳಿದ್ದು, ಅವರ ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ. ಈ ಪಾತ್ರವನ್ನೆ ದೇವರೇ ಕೊಟ್ಟಿದ್ದು ಎಂದು ಹೇಳಿಕೊಂಡಿದ್ದಾರೆ. "ಇಲ್ಲಿ ಸಾಧಿಸಿದ್ದು ಏನೂ ಇಲ್ಲ. ಎಲ್ಲಾ ಸಾಧಿಸುವಂತೆ ಮಾಡಿದರು. ನಾನು ಯಾಕೆ ಈ ಮಾತಾಡುತ್ತಿದ್ದೇನೆ ಅಂತ ಸಿನಿಮಾ ನೋಡಿದ ಬಳಿಕ ಗೊತ್ತಾಗುತ್ತೆ. ನಾನು ಸತ್ತು ಬದುಕಿಬಿಟ್ಟೆ. ಇದನ್ನೇ ಬದುಕು ಅಂತ ಕರೆಯೋದು. ಅದಕ್ಕೆ ಈ ಪಾತ್ರಕ್ಕೆ ಒಂದು ನಂಟು ಇದೆ. ಅದಕ್ಕೆ ಅಂತಾನೇ ದೇವರು ಈ ಪಾತ್ರ ಕೊಟ್ನಾ? ಅದಕ್ಕೆ ಅರ್ಜುನ್ ಜನ್ಯ ಈ ಪಾತ್ರ ಬರೀಬೇಕಾಯ್ತಾ? ಅನಿಸಿಬಿಡ್ತು." ಎಂದಿದ್ದಾರೆ.
ಇನ್ನೊಂದು ಕಡೆ ಶಿವಣ್ಣ ಆಧ್ಯಾತ್ಮದ ಕಡೆ ವಾಲಿಬಿಟ್ಟರೇ? ಎಂಬ ಪ್ರಶ್ನೆ ಮೂಡುತ್ತಿದೆ. ಅಪ್ಪು ಉದಾಹರಣೆ ಕೊಟ್ಟು ಬದುಕಿನ ಪಾಠ ಮಾಡಿದ್ದಾರೆ. "ಮನುಷ್ಯ ಒಬ್ಬರನ್ನೊಬ್ಬರು ಪ್ರೀತಿಸಬೇಕು. ಅಸೂಯೆ ಪಡಬಾರದು. ಹೊಟ್ಟೆ ಕಿಚ್ಚು ಪಡಬಾರದು. ಏನಿರುತ್ತೆ ಜೀವನದಲ್ಲಿ? ಇವತ್ತು ಇರುತ್ತೇವೆ. ನಾಳೆ ಹೋಗುತ್ತೇವೆ. ಇಲ್ಲಿಂದ ನಾವು ಏನು ಕಟ್ಟಿಕೊಂಡು ಹೋಗುತ್ತೇವೆ. ಉದಾಹರಣೆಗೆ ಅಪ್ಪು..ಯಾರಿಗೆ ಏನು ಮಾಡಿದ್ದ. ನನ್ನ ಹತ್ತಿರ ಬಂದುಬಿಡಪ್ಪ ಅಂತ ಕರೆದುಕೊಂಡು ಹೋಗಿದ್ದ. ಡೈಲಿ ಅಪ್ಪು ಬಗ್ಗೆ ಮಾತಾಡುತ್ತೇವೆ. ಅದಕ್ಕೇನು ಟೈಮ್ ಟೇಬಲ್ ಬೇಡ. ಇದನ್ನು ಯಾಕೆ ಹೇಳುತ್ತಿದ್ದೇನೆ ಅಂದರೆ, ಇಷ್ಟೆಲ್ಲ ಇದ್ದಾಗಲೇ ನಾವು ಹೀಗೆ ಇದ್ದೇವೆ." ಎಂದು ಶಿವಣ್ಣ ಹೇಳಿದ್ದಾರೆ.


Click it and Unblock the Notifications











