ಅಪ್ಪು ಅಗಲಿಕೆ ನೋವಿನಲ್ಲೇ 125ನೇ ಚಿತ್ರಕ್ಕೆ ಸಿದ್ಧರಾದ ಶಿವಣ್ಣ
ಸ್ಯಾಂಡಲ್‌ವುಡ್‌ನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮೆಲ್ಲರನ್ನು ಅಗಲಿ ಇಂದಿಗೆ (ನವೆಂಬರ್ 11) 14ನೇ ದಿನ. ಅಪ್ಪು ಅಗಲಿಕೆಯನ್ನು ಅವರನ್ನು ಅಪಾರವಾಗಿ ಪ್ರೀತಿಸುವ ಅಭಿಮಾನಿಗಳಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಇನ್ನು ಅವರ ಕುಟುಂಬದ ಸ್ಥಿತಿ ಹೇಗಿರಬೇಕು. ಆದರೂ, ಜೀವನ ಮುಂದುವರೆಯಲೇ ಬೇಕು. ನೋವುಗಳನ್ನು ನುಂಗಿ ಮುನ್ನುಗ್ಗಲೇ ಬೇಕು. ಅಭಿಮಾನಿಗಳನ್ನು ರಂಜಿಸಲೇಬೇಕು. ಇದೇ ಕಾಯಕಕ್ಕೆ ಶಿವರಾಜ್‌ಕುಮಾರ್ ಮುಂದಾಗಿದ್ದಾರೆ.
ಪುನೀತ್ ರಾಜ್‌ಕುಮಾರ್ 11ನೇ ದಿನದ ಪುಣ್ಯಸ್ಮರಣೆ ಇತ್ತೀಚೆಗಷ್ಟೆ ನಡಿದಿದೆ. 12ನೇ ದಿನ ಅಭಿಮಾನಿಗಳಿಗೆ ಅನ್ನಸಂತರ್ಪಣೆಯನ್ನು ಡಾ.ರಾಜ್‌ಕುಮಾರ್ ಕುಟುಂಬ ಹಮ್ಮಿಕೊಂಡಿತ್ತು. ಇನ್ನು ನವೆಂಬರ್ 16ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಪುನೀತ್ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹೀಗೆ ಒಂದೊಂದೇ ಜವಾಬ್ದಾರಿಗಳನ್ನು ಶಿವಣ್ಣ ಮುಗಿಸುತ್ತಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳು ಮುಗಿದ ಬಳಿಕ ಶಿವಣ್ಣ ತನ್ನ 125ನೇ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಈ ಬಗ್ಗೆ 125ನೇ ಸಿನಿಮಾ ನಿರ್ದೇಶಿಸುತ್ತಿರುವ ಎ.ಹರ್ಷ ಕೆಲವು ಮಾಹಿತಿ ಫಿಲ್ಮಿ ಬೀಟ್ ಜೊತೆ ಹಂಚಿಕೊಂಡಿದ್ದಾರೆ.

ನವೆಂಬರ್ ಕೊನೆ ವಾರದಲ್ಲಿ ವೇದ ಸೆಟ್ಟೇರುವ ಸಾಧ್ಯತೆ
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ಶಿವಣ್ಣನ 125ನೇ ಸಿನಿಮಾ ಸೆಟ್ಟೇರಬೇಕಿತ್ತು. ಈ ವರ್ಷ ಶಿವರಾತ್ರಿ ಹಬ್ಬದಂದೇ 125ನೇ ಸಿನಿಮಾದ ಫಸ್ಟ್ ಲುಕ್ ಬಿಟ್ಟು ಸಿನಿಮಾ ಅನೌನ್ಸ್ ಕೂಡ ಮಾಡಿದ್ದರು. ಆದರೆ, ಕೊರೊನಾ ಎರಡನೇ ಅಲೆಯಿಂದಾಗಿ ಸಿನಿಮಾದ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಅಲ್ಲದೆ ನಿರ್ದೇಶಕ ಹರ್ಷನೇ ವೇದ ಸಿನಿಮಾಗೆ ಆಕ್ಷನ್ ಕಟ್ ಹೇಳ ಬೇಕಿದ್ದರಿಂದ ಮೊದಲು ಭಜರಂಗಿ 2 ಸಿನಿಮಾ ರಿಲೀಸ್ ಮಾಡುವುದರೆಡೆಗೆ ಹೆಚ್ಚು ಗಮನ ಹರಿಸಿದ್ದರು. ಇನ್ನು ಭಜರಂಗಿ 2 ರಿಲೀಸ್ ಆಗಿದೆ. ಶಿವಣ್ಣ ಹಾಗೂ ಹರ್ಷ ಕಾಂಬಿನೇಷನ್ ಅನ್ನು ಜನರು ಮೆಚ್ಚಿದ್ದಾರೆ. ಹೀಗಾಗಿ ಶಿವಣ್ಣನ 125ನೇ ಸಿನಿಮಾ ವೇದ ಸೆಟ್ಟೇರಲು ರೆಡಿಯಾಗಿದೆ.

ಭಜರಂಗಿ 2 ರಿಲೀಸ್ ಆಗುತ್ತಿದ್ದಂತೆ ವೇದ ಚಿತ್ರೀಕರಣಕ್ಕೆ ಚಾಲನೆ ಸಿಗುತ್ತಿತ್ತು. ಆದರೆ, ಪುನೀತ್ ರಾಜ್‌ಕುಮಾರ್ ಅವರ ದಿಢೀರ್ ನಿಧನದ ನೋವಿನಿಂದ ಶಿವಣ್ಣ ಹೊರಬರಲು ಸ್ವಲ್ಪ ಬೇಕಾಗಿತ್ತು. ಪುನೀತ್ ಕಾರ್ಯಗಳನ್ನೆಲ್ಲಾ ಮುಗಿಸಿ ಮತ್ತೆ ಸಿನಿಮಾ ಕಡೆ ಮುಖ ಮಾಡುತ್ತಿದ್ದಾರೆ. " ಶಿವಣ್ಣನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದೇನೆ. ನವೆಂಬರ್ ಕೊನೆಯ ವಾರದಲ್ಲಿ ವೇದ ಸಿನಿಮಾದ ಚಿತ್ರೀಕರಣ ಆರಂಭ ಆಗುವ ಎಲ್ಲಾ ಸಾಧ್ಯತೆ ಇದೆ. ಶಿವಣ್ಣ ಅವರೇ ಸಿನಿಮಾ ಶುರುಮಾಡೋಣ ಅಂತ ಹೇಳಿದ್ದಾರೆ. ಎಲ್ಲಾ ಅಂದ್ಕೊಂಡಂತೆ ಆದರೆ, ಈ ತಿಂಗಳ ಕೊನೆಯಲ್ಲಿ ವೇದ ಶೂಟಿಂಗ್ ಶುರುವಾಗುತ್ತೆ. ಟಾಕಿಯಿಂದ ಶುರು ಮಾಡ್ಬೇಕಾ? ಆಕ್ಷನ್ ದೃಶ್ಯದಿಂದ ಶುರು ಮಾಡ್ಬೇಕಾ? ಅನ್ನೋದು ನಿರ್ಧಾರ ಆಗಿಲ್ಲ. ಶಿವಣ್ಣನ ಜೊತೆ ಮತ್ತೊಮ್ಮೆ ಕೂತು ನಿರ್ಧಾರ ಮಾಡ್ತೀವಿ." ಎಂದು ನಿರ್ದೇಶಕ ಎ. ಹರ್ಷ ಹೇಳಿದ್ದಾರೆ.

ಬಿಳಿಗಡ್ಡ ಬಿಟ್ಟು ವಯಸ್ಸಾದ ವ್ಯಕ್ತಿಯ ಲುಕ್ ಕೊಟ್ಟಿದ್ದ ಶಿವಣ್ಣ
ಶಿವಣ್ಣ ವೇದ ಫಸ್ಟ್ ಲುಕ್ ಬಿಡುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬಿಳಿ ಗಡ್ಡ ಬಿಟ್ಟು ವಯಸ್ಸಾದ ವ್ಯಕ್ತಿಯ ಗೆಟಪ್‌ನಲ್ಲಿ ಶಿವರಾಜ್‌ಕುಮಾರ್ ಎಲ್ಲರಿಗೂ ಇಷ್ಟ ಆಗಿತ್ತು. ಇಡೀ ಸಿನಿಮಾದ ಮುಕ್ಕಾಲು ಭಾಗ ಇದೇ ಗೆಟಪ್‌ನಲ್ಲಿ ಶಿವಣ್ಣ ಮಿಂಚಲಿದ್ದಾರೆ. ವೇದ ಸಿನಿಮಾದ ಪ್ರಮುಖ ಗೆಟಪ್ ಇದೆನೇ. ಹೀಗಾಗಿ ಅಪ್ಪು ಅಗಲಿಕೆಯ ನೋವು ನುಂಗಿಕೊಂಡೇ ವೇದನಾಗಿ ಬಣ್ಣ ಹಚ್ಚಲು ಮುಂದಾಗಿದ್ದಾರೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್.

60ರ ದಶಕದ ಕಥೆ.. ಸೆಟ್ಟಿನಲ್ಲೇ ಶೂಟಿಂಗ್
ಹರ್ಷ ನಿರ್ದೇಶನ ಸಿನಿಮಾದಲ್ಲಿ ಸಿನಿಮಾನೇ ಹೈಲೈಟ್ ಆಗಿರುತ್ತೆ. ಭಜರಂಗಿ, ವಜ್ರಕಾಯ, ಭಜರಂಗಿ 2 ಈಗ ಶಿವಣ್ಣನೊಂದಿಗೆ ನಾಲ್ಕನೇ ಸಿನಿಮಾ ವೇದದಲ್ಲೂ ಸೆಟ್ಟು ಪ್ರಮುಖ ಆಕರ್ಷಣೆ. ಹೇಳಿ-ಕೇಳಿ ಇದು 60ರ ದಶಕದ ಕಥೆಯಾಗಿದ್ದು, ಬಹುತೇಕ ಸಿನಿಮಾವನ್ನು ಸೆಟ್ಟಿನಲ್ಲೇ ಶೂಟಿಂಗ್ ಮಾಡಬೇಕಾಗಿದೆ. ಇದೇ ಮೊದಲ ಬಾರಿಗೆ ಶಿವರಾಜ್‌ಕುಮಾರ್ ಪತ್ನಿ ಗೀತಾ ಶಿವರಾಜ್‌ಕುಮಾರ್ ತಮ್ಮದೇ ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಶಿವಣ್ಣನ 125ನೇ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದಂತಾಗಿದೆ.


Click it and Unblock the Notifications











