ಸುದೀಪ್-ಕುಮಾರ್ ವಿವಾದ ಬಗೆ ಹರಿಸುತ್ತಾರಾ ಶಿವಣ್ಣ? ಇನ್ನೊಂದು ವಾರದಲ್ಲಿ ಎಲ್ಲಾ ಸರಿ ಹೋಗುತ್ತೆ ಎಂದಿದ್ದೇಕೆ?
ಇಂದು(ಜುಲೈ 12) ಡಾ.ಶಿವರಾಜ್‌ಕುಮಾರ್ 61ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಶ್ರೀನಿ ನಿರ್ದೇಶಿಸುತ್ತಿರುವ 'ಘೋಸ್ಟ್' ಸಿನಿಮಾದ ಕ್ಯಾರೆಕ್ಟರ್ ಟೀಸರ್ ಅನ್ನು ರಿಲೀಸ್ ಮಾಡಲಾಗಿದೆ. ಈ ವೇಳೆ ಸಿನಿಮಾ ಬಗ್ಗೆ ಮಾತಾಡುವಾಗ, ಕಿಚ್ಚ ಸುದೀಪ್ ಹಾಗೂ ಎಂಎನ್ ಸುರೇಶ್ ವಿವಾದ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಈ ಬಗ್ಗೆ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಎಂಎನ್ ಕುಮಾರ್ ವಿವಾದ ನ್ಯಾಯಾಲಯ ಮೆಟ್ಟಿಲೇರಿದೆ. ಸುದೀಪ್ ನಿರ್ಮಾಪಕರ ವಿರುದ್ಧ ಮಾನಹಾನಿ ದೂರು ದಾಖಲಿಸಿದ್ದಾರೆ. ಇನ್ನೊಂದು ಕಡೆ ನಿರ್ಮಾಪಕ ಕುಮಾರ್ ನಿರ್ಮಾಪಕರು ಹಾಗೂ ಚಿತ್ರರಂಗದ ಹಿರಿಯರು ಹೇಳಿದಂತೆ ಮುನ್ನಡೆಯುತ್ತೇನೆ ಎಂದಿದ್ದಾರೆ.

ವಿವಾದಗಳು ಮುನ್ನಲೆಗೆ ಬರುತ್ತಿದ್ದಂತೆ ಕನ್ನಡ ಚಿತ್ರರಂಗದ ನಿರ್ಮಾಪಕರು ಶಿವಣ್ಣ ಹಾಗೂ ರವಿಚಂದ್ರನ್ ಇಬ್ಬರನ್ನೂ ಸಮಸ್ಯೆ ಬಗೆ ಹರಿಸಿಕೊಡುವಂತೆ ಮನವಿ ಮಾಡಿದ್ದರು. ಈ ಸಂಬಂಧ ಇದು ಪತ್ರಕರ್ತರು ಶಿವಣ್ಣನಿಗೆ ಚಿತ್ರರಂಗದ ಮುಂದಾಳತ್ವ ವಹಿಸಿಕೊಳ್ಳುತ್ತೀರಾ? ಎಂದು ಪ್ರಶ್ನೆ ಮಾಡಿದ್ದರು. ಇಬ್ಬರ ಸಮಸ್ಯೆಯನ್ನು ಬಗೆ ಹರಿಸುತ್ತೀರಾ ಎಂದು ಕೇಳಿದ್ದರು. ಅದಕ್ಕೆ ಶಿವಣ್ಣ ಪ್ರತಿಕ್ರಿಯೆ ಹೀಗಿದೆ.
ಇನ್ನೊಂದು ವಾರದ ಸರಿ ಹೋಗುತ್ತಾ?
ಸುದೀಪ್ ಹಾಗೂ ನಿರ್ಮಾಪಕ ಕುಮಾರ್ ನಡುವಿನ ಕಿತ್ತಾಟ ದೇಶಾದ್ಯಂತ ಸುದ್ದಿಯಾಗಿದೆ. ಒಬ್ಬೊಬ್ಬರೇ ನಿರ್ಮಾಪಕರು ಸುದೀಪ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಈ ಸಂಬಂಧ ಸಮಸ್ಯೆ ಬಗೆ ಹರಿಸುವಂತೆ ನಿರ್ಮಾಪಕರು ಶಿವಣ್ಣನನ್ನು ಕೋರಿಕೊಂಡಿದ್ದಾರೆ. ಇದಕ್ಕೆ ಶಿವಣ್ಣ ಚಿಕ್ಕದೊಂದು ಸುಳಿವು ಕೊಟ್ಟಿದ್ದು, ಇನ್ನೊಂದು ವಾರದಲ್ಲಿ ಬಗೆ ಹರಿಯುತ್ತೆ ಎಂದು ಹೇಳಿದ್ದಾರೆ.
"ಎಲ್ಲರೂ ಒಂದೊಂದಾಗೇ ಕೂತು ಬಗೆ ಹರಿಸಿಕೊಳ್ಳಬೇಕು ಅಷ್ಟೇ.. ನನ್ನಿಂದ ಆಗುತ್ತೆ ಅಂತ ಅಲ್ಲ. ನಮ್ಮಿಂದ ಆಗಬೇಕು ಅಷ್ಟೇ. ಎಲ್ಲರೂ ಕೂತು ಮಾತಾಡುತ್ತಿದ್ದೇವೆ. ನಾವೇನೋ ಅಂದುಕೊಂಡಿದ್ದೇವೆ. ಅದು ಆಗುತ್ತಾ ಇಲ್ವಾ ಅನ್ನೋದು ನೋಡುತ್ತಿದ್ದೇವೆ. ನಾನೊಬ್ಬನೇ ಅಲ್ಲ, ಗೀತಾ, ಶ್ರೀಕಾಂತ್ ಹೀಗೆ ದೊಡ್ಡ ದೊಡ್ಡವರು ಇದ್ದರೆ. ಅವರ ಹೆಸರು ಈಗಲೇ ಬೇಡ. ಇನ್ನೊಂದು ವಾರದಲ್ಲಿ ಎಲ್ಲಾ ಸರಿ ಹೋಗುತ್ತೆ." ಎಂದು ಶಿವಣ್ಣ ಹೇಳಿದ್ದಾರೆ.

ಚಿತ್ರರಂಗ ಮುಂದಾಳತ್ವ ವಹಿಸಿಕೊಳ್ಳುತ್ತಾರಾ?
ಡಾ. ರಾಜ್‌ಕುಮಾರ್, ಡಾ.ವಿಷ್ಣುವರ್ಧನ್.ಡಾ. ಅಂಬರೀಶ್ ಇದ್ದಾಗ ಚಿತ್ರರಂಗದ ಸಮಸ್ಯೆಗಳನ್ನು ಬಗೆ ಹರಿಸುತ್ತಿದ್ದರು. ಆದ್ರೀಗ ಚಿತ್ರರಂಗಕ್ಕೆ ಮುಖಂಡರೇ ಇಲ್ಲದಂತಾಗಿದೆ. ಹೀಗಾಗಿ ಶಿವಣ್ಣಗೆ ಚಿತ್ರರಂಗದ ನಾಯಕತ್ವವನ್ನು ವಹಿಸಿಕೊಳ್ಳುವಂತೆ ನಿರ್ಮಾಪಕರು ಕೇಳಿಕೊಂಡಿದ್ದರು. ಅದಕ್ಕೆ ಶಿವಣ್ಣ ಕೊಟ್ಟ ಉತ್ತರ ಹೀಗಿತ್ತು.
"ನಾನು ಜಾಗಕ್ಕೆಲ್ಲ ಇಷ್ಟ ಪಡುವವನಲ್ಲ ಸಿನಿಮಾ ಇಷ್ಟ ಪಡುವವನು. ಮುಂದಕ್ಕೆ ನೋಡೋಣ. ಹಂಗೇನಾದರೂ ಪರಿಸ್ಥಿತಿ ಬಂದರೆ ಮುಂದೆ ನೋಡೋಣ. ಏನೇ ಸಮಸ್ಯೆ ಬಂದರೂ ಪರಿಹಾರ ಮಾಡುವುದಕ್ಕೆ ನಾವು ಇದ್ದೇವೆ. ಒಬ್ಬ ಸೀನಿಯರ್ ಆಕ್ಟರ್ ಆಗಿ 100 ಪರ್ಸೆಂಟ್ ಭಾಗಿಯಾಗುತ್ತೇನೆ" ಎಂದು ಶಿವಣ್ಣ ಹೇಳಿದ್ದಾರೆ.
ಸುದೀಪ್-ಕುಮಾರ್ ವಿವಾದ ಹರಿಯುತ್ತಾ?
ಸುದೀಪ್ ಸಿನಿಮಾ ಮಾಡಿಕೊಡುತ್ತೇನೆ ಎಂದು ಹಣ ಪಡೆದು ಸತಾಯಿಸುತ್ತಿದ್ದಾರೆ ಎಂದು ನಿರ್ಮಾಪಕ ಕುಮಾರ್ ಆರೋಪ ಮಾಡಿದ್ದರು. ಇದಕ್ಕೆ ಕಿಚ್ಚ ಸುದೀಪ್ ನಿರ್ಮಾಪಕ ಕುಮಾರ್ ಹಾಗೂ ಎನ್‌ಎಂ ಸುರೇಶ್ ಲೀಗಲ್ ನೋಟೀಸ್ ಕಳುಹಿಸಿದ್ದರು. ಹೀಗಾಗಿ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ.
ಈ ಸಂಬಂಧ ಚಿತ್ರರಂಗದ ಪ್ರಭಾವಿ ವ್ಯಕ್ತಿಗಳು ಬಂದು ಸಮಸ್ಯೆಯನ್ನು ಬಗೆ ಹರಿಸಬೇಕು ಎಂದು ಹೇಳಿದ್ದರು. ಶಿವಣ್ಣ ಹಾಗೂ ರವಿಚಂದ್ರನ್ ಅವರಿಗೆ ಮನವಿಯನ್ನೂ ಮಾಡಿಕೊಂಡಿದ್ದರು. ಹೀಗಾಗಿ ಈ ಸಮಸ್ಯೆಯನ್ನು ಬಗೆ ಹರಿಸಲು ಶಿವಣ್ಣ ಎಂಟ್ರಿ ಕೊಡುತ್ತಾರಾ? ಅನ್ನೋ ಪ್ರಶ್ನೆಗೆ ಚಿಕ್ಕದೊಂದು ಸುಳಿವು ಸಿಕ್ಕಿದೆ.


Click it and Unblock the Notifications











