ಶಿವಣ್ಣನ ಭಜರಂಗಿ 2ಗೆ ಭರ್ಜರಿ ರೆಸ್ಸಾನ್ಸ್: ಥಿಯೇಟರ್ ಮುಂದೆ ಹೌಸ್‌ಫುಲ್ ಬೋರ್ಡ್
ದೀಪಾವಳಿ ಹಬ್ಬಕ್ಕೆಂದೆ ಕಾದು ಕೂತು ಭಜರಂಗಿ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಅಕ್ಟೋಬರ್ 29ರಂದು ಭಜರಂಗಿ 2 ಥಿಯೇಟರ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿತ್ತು. ಫಸ್ಟ್ ಡೇ ಫಸ್ಟ್ ಶೋ ನೋಡಿ ಶಿವರಾಜ್‌ಕುಮಾರ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದರು. ಕಥೆ, ಚಿತ್ರಕಥೆ, ಶಿವಣ್ಣನ ನಟನೆ, ಹರ್ಷ ನಿರ್ದೇಶಕನಕ್ಕೆ ಬಹುಪರಾಕ್ ಎಂದಿದ್ದರು. ಅದರಲ್ಲೂ ಸಿನಿಮಾಗಾಗಿ ಬಳಸಿದ ಗ್ರಾಫಿಕ್ಸ್ ಕಂಡು ಪ್ರೇಕ್ಷಕರು ಥ್ರಿಲ್ ಆಗಿದ್ದರು.
ಫ್ಯಾನ್ಸ್ ಶೋ ಮುಗಿಯುತ್ತಿದ್ದಂತೆ ಭಜರಂಗಿ 2 ತಂಡಕ್ಕೆ ದೊಡ್ಡ ಆಘಾತವೇ ಎದುರಾಗಿತ್ತು. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನ ಸುದ್ದಿ ಬರಸಿಡಿಲಿನಂತೆ ಬಂದೆರಗಿತ್ತು. ಭಜರಂಗಿ 2ಗೆ ಸೂಪರ್ ಅಂತಿದ್ದ ಶಿವಣ್ಣನ ಅಭಿಮಾನಿಗಳಲ್ಲಿ ದು:ಖ ಆವರಿಸಿಕೊಂಡಿತ್ತು. ಅಂದಿನಿಂದ ಭಜರಂಗಿ 2 ಅಷ್ಟೇ ಅಲ್ಲ, ಬೇರಾವುದೇ ಸಿನಿಮಾ ನೋಡಲು ಕನ್ನಡಿಗರಿಗೆ ಮನಸ್ಸಾಗಿರಲಿಲ್ಲ. ಆದರೆ, ಬೆಳಕಿನ ಹಬ್ಬದಂದು ಅಪ್ಪು ಅಗಲಿಕೆಯ ನೋವಿನಿಂದ ಹೊರಬಂದು ಭಜರಂಗಿ ಸಿನಿಮಾ ನೋಡುತ್ತಿದ್ದಾರೆ. ತೆರೆಕಂಡ ಬಹುತೇಕ ಚಿತ್ರಮಂದಿರಗಳು ಹೌಸ್‌ಫುಲ್ ಆಗಿವೆ. ಈ ಬಗ್ಗೆ ಭಜರಂಗಿ 2 ಚಿತ್ರದ ನಿರ್ದೇಶಕ ಎ. ಹರ್ಷ ಖುಷಿ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 29ರಂದು ಭಜರಂಗಿ 2 ಸಿನಿಮಾ ಸುಮಾರು 350ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಗ್ರ್ಯಾಂಡ್ ಓಪನಿಂಗ್ ಕಂಡಿದ್ದ ಸಿನಿಮಾ ಫಸ್ಟ್ ಡೇ ಫಸ್ಟ್ ಶೋನೇ ಶೇ. 90ರಷ್ಟು ಚಿತ್ರಮಂದಿರ ತುಂಬಿತ್ತು. ಆದರೆ ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ದಿಢೀರ್ ನಿಧನದಿಂದ ಚಿತ್ರಮಂದಿರಕ್ಕೆ ಹೋಗುವ ಮನಸ್ಸು ಕನ್ನಡಿಗರಿಗೆ ಇರಲಿಲ್ಲ. ಇತ್ತ ಚಿತ್ರತಂಡ ಕೂಡ ಮಂಕಾಗಿತ್ತು.

ಎರಡು ದಿನದಿಂದ ಪ್ರೇಕ್ಷಕರು ಬರುತ್ತಿದ್ದಾರೆ: ಹರ್ಷಾ
ಕಳೆದ ಎರಡು ದಿನಗಳಿಂದ ನಿಧಾನವಾಗಿ ಪ್ರೇಕ್ಷಕರು ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಈ ಬಗ್ಗೆ ಭಜರಂಗಿ 2 ಚಿತ್ರದ ನಿರ್ದೇಶಕ ಹರ್ಷ ಖುಷಿಯಾಗಿದ್ದು, ಸಿನಿಮಾ ಮತ್ತೆ ಚೇತರಿಸಿಕೊಂಡು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. " ಭಜರಂಗಿ ಸಿನಿಮಾ ಸುಮಾರು 375 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಎರಡನೇ ವಾರ 15 ಚಿತ್ರಮಂದಿರಗಳು ಕಡಿಮೆ ಆಗಿರಬಹುದು. ಉಳಿದಂತೆ 350 ಚಿತ್ರಮಂದಿರ 300 ಥಿಯೇಟರ್‌ಗಳು ದೀಪಾವಳಿ ಹಬ್ಬದಂದು ಹೌಸ್‌ಫುಲ್ ಆಗಿವೆ. ಈ ಬೆಳವಣೆಗೆ ನಮ್ಮಲ್ಲಿ ಮತ್ತೆ ಉತ್ಸಾಹ ತಂದಿದೆ" ಎನ್ನುತ್ತಾರೆ ಹರ್ಷ.

ಥಿಯೇಟರ್‌ಗೆ ಜನರು ಬರುತ್ತಿರಲಿಲ್ಲ.. ಕರೆಯುವ ಮನಸ್ಸು ನಮಗೂ ಇರಲಿಲ್ಲ
"ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಇಡೀ ರಾಜ್ಯ ಕಂಗಾಲಾಗಿತ್ತು. ನಡೆಯಬಾರದ್ದು ನಡೆದು ಹೋಗಿತ್ತು. ಇಂತಹ ದು:ಖದ ಸಂದರ್ಭದಲ್ಲಿ ಸಿನಿಮಾ ನೋಡಿ ಅಂತ ಹೇಳುವುದು ಎಷ್ಟು ಸರಿ. ಜನರೇ ಮಂಕಾಗಿ ಹೋಗಿದ್ದರು. ಅವರು ಚಿತ್ರಮಂದಿರಕ್ಕೆ ಬರಲಿಲ್ಲ. ನಮಗೂ ಅವರನ್ನು ಕರೆಯುವ ಮನಸ್ಸು ಇರಲಿಲ್ಲ. ಆದರೆ ಭಾನುವಾರ ಸೆಕೆಂಡ್ ಶೋಯಿಂದಲೇ ನಿಧಾನವಾಗಿ ಚಿತ್ರಮಂದಿರಕ್ಕೆ ಬರಲು ಶುರು ಮಾಡಿದ್ದರು. ಬುಧವಾರ ಕೆಲವೆಡೆ ಹೌಸ್‌ಫುಲ್ ಆಗಿತ್ತು. ಆದರೆ, ಇವತ್ತು ಇಷ್ಟು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರು ಸಿನಿಮಾ ನೋಡ್ತಿರೋದು ಖುಷಿ ಕೊಟ್ಟಿದೆ." ಎಂದು ಖುಷಿ ವ್ಯಕ್ತಪಡಿಸಿದ್ದಾರೆ ಹರ್ಷ.

'ಸಿನಿಮಾ ಬಗ್ಗೆ ಶಿವಣ್ಣನೂ ರಿಪೋರ್ಟ್ ತೆಗೆದುಕೊಳ್ಳುತ್ತಿದ್ದಾರೆ'
"ಶಿವಣ್ಣನೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ಇಂತಹ ದು:ಖದ ಸಂದರ್ಭದಲ್ಲೂ ನಮಗೆ ಧೈರ್ಯ ತುಂಬುತ್ತಿದ್ದಾರೆ. ಶಿವಣ್ಣ ಮಾನಸಿಕವಾಗಿ ತುಂಬಾನೇ ಸ್ಟ್ರಾಂಗ್ ಇದ್ದಾರೆ. ಭಜರಂಗಿ 2 ಸಿನಿಮಾ ಹೇಗಿದೆ. ಪ್ರೇಕ್ಷಕರು ಥಿಯೇಟರ್‌ಗೆ ಬರುತ್ತಿದ್ದಾರಾ? ಅಂತ ಅವರೇ ವಿಚಾರಿಸಿಕೊಳ್ಳುತ್ತಿದ್ದಾರೆ. ನಾನು ನಿರಂತರವಾಗಿ ಶಿವರಾಜ್‌ಕುಮಾರ್ ಅವರೊಂದಿಗೆ ಮಾತಾಡುತ್ತಿದ್ದೇನೆ. ಸಿನಿಮಾ ಚೆನ್ನಾಗಿ ಆಗುತ್ತೆ ಅಂತ ಧೈರ್ಯ ತುಂಬಿದ್ದಾರೆ." ಅಂತಾರೆ ನಿರ್ದೇಶಕ ಹರ್ಷ.

'ಭಜರಂಗಿ 2 ಸಿನಿಮಾ ಬಿಡುಗಡೆಗೂ ಮುನ್ನ ಲಾಭದಲ್ಲಿತ್ತು'
"ಈ ಮಾತನ್ನು ನಿರ್ಮಾಪಕ ಜಯಣ್ಣ ಅವರೇ ಅದೆಷ್ಟೋ ಬಾರಿ ಹೇಳಿದ್ದಾರೆ. ಭಜರಂಗಿ 2 ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನವೇ ಲಾಭದಲ್ಲಿತ್ತು. ಮೊದಲ ವಾರ ಚಿತ್ರಮಂದಿರದಲ್ಲಿ ಸ್ವಲ್ಪ ಹಿನ್ನಡೆ ಆಗಿದ್ದು ಬಿಟ್ಟರೆ, ಎರಡನೇ ವಾರ ಕಲೆಕ್ಷನ್ ಚೆನ್ನಾಗಿದೆ. ಹೀಗಾಗಿ ಭಜರಂಗಿ 2 ಬಾಕ್ಸಾಫೀಸ್ ಸಕ್ಸಸ್ ಆಗುತ್ತೆ." ಅಂತಿದ್ದಾರೆ.


Click it and Unblock the Notifications











