ಶಿವಣ್ಣನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಸೆಟ್ಟೇರಲು ವೇದಿಕೆ ರೆಡಿ: 70ರ ದಶಕದ ಕಥೆ
ಕನ್ನಡದ ಬಹುತೇಕ ಸೂಪರ್‌ಸ್ಟಾರ್‌ಗಳು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲು ಇಷ್ಟ ಪಡುತ್ತಿದ್ದಾರೆ. ಈಗಾಗಲೇ ಯಶ್, ಸುದೀಪ್, ದರ್ಶನ್, ಧ್ರುವ ಸರ್ಜಾ, ಉಪೇಂದ್ರ ಸೇರಿದಂತೆ ಬಹುತೇಕ ನಟರು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಮಾತ್ರ ಪ್ಯಾನ್ ಇಂಡಿಯಾ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿರಲಿಲ್ಲ. ಈಗ ಅಭಿಮಾನಿಗಳ ಆಸೆಯನ್ನೂ ಶಿವಣ್ಣ ಈಡೇರಿಸುತ್ತಿದ್ದಾರೆ.
ಶಿವಣ್ಣ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುವ ವಿಚಾರ ಬಹಿರಂಗ ಆಗುತ್ತಿದ್ದಂತೆ ಸೆಂಚುರಿ ಸ್ಟಾರ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಯಾಕಂದರೆ, ಇದರು ಶಿವರಾಜ್‌ಕುಮಾರ್ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ಶಿವಣ್ಣನ ಲುಕ್‌ನಿಂದ ಹಿಡಿದು ಕಥೆಯವರೆಗೂ ಹೇಗಿರುತ್ತೋ ಅಂತ ಕೇಳಲು ಅಭಿಮಾನಿಗಳು ಕಾದು ಕೂತಿದ್ದಾರೆ. ಹಾಗಿದ್ದರೆ, ಶಿವರಾಜ್‌ಕುಮಾರ್ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಮಾಹಿತಿ ತಿಳಿಯಲು ಮುಂದೆ ಓದಿ.

ಶಿವಣ್ಣ ಮೊದಲ ಪ್ಯಾನ್ ಇಂಡಿಯಾ ಚಿತ್ರ
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಆಗಲಿದೆ. ಐದು ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಆಗಲಿದ್ದು, ಏಕಕಾಲಕ್ಕೆ ಸಿನಿಮಾ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಸದ್ಯ ಇನ್ನೂ ಕೇವಲ ಸಿನಿಮಾದ ಘೋಷಣೆ ಮಾಡಿದ್ದು, ಚಿತ್ರದ ಟೈಟಲ್, ಶಿವಣ್ಣ ಲುಕ್ ಎಲ್ಲವೂ ಕೆಲವೇ ದಿನಗಳಲ್ಲಿ ಅಭಿಮಾನಿಗಳ ಮುಂದೆ ಬಹಿರಂಗ ಪಡಿಸಲಿದೆ ಚಿತ್ರತಂಡ. ಆದರೆ, ಅದಕ್ಕೂ ಮುನ್ನ ಈ ಸಿನಿಮಾದ ತಾಂತ್ರಿಕ ವರ್ಗ ಹಾಗೂ ಕಥೆಯ ಬಗ್ಗೆ ಮಾಹಿತಿ ನೀಡಿದೆ.

70 ಕಾಲ ಘಟ್ಟದ ಕಥೆ
ಪ್ಯಾನ್ ಇಂಡಿಯಾ ಸಿನಿಮಾ ಅಂದರೆ, ಕಥೆ ಎಲ್ಲಾ ಭಾಷೆಗೂ ಸಲ್ಲುವಂತಿರಬೇಕು. ದಕ್ಷಿಣದಿಂದ ಉತ್ತರದವರೆಗೂ ಸಿನಿಮಾ ಮೆಚ್ಚುವಂತಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಆ ಕಥೆ ಶಿವಣ್ಣನಿಗೆ ಸೂಟ್ ಆಗುವಂತಿರಬೇಕು. ಈಗ ಅಂತಹದ್ದೇ ಕತೆಯೊಂದನ್ನು ನಿರ್ದೇಶಕ ಆರ್ ಜೈರಾಮ್ ಸಿದ್ಧಪಡಿಸಿಕೊಂಡಿದ್ದಾರೆ. 70 ರ ದಶಕದಲ್ಲಿ ನಡೆಯುವ ಕಥೆಯಾಗಿದ್ದು, ಸೆಂಚುರಿ ಸ್ಟಾರ್ ಇಮೇಜ್‌ಗೆ ತಕ್ಕಂತೆ ಇದೆ ಎನ್ನಲಾಗಿದೆ. ಹೀಗಾಗಿ ರೆಟ್ರೋ ಮಾದರಿಯ ಕತೆಯಲ್ಲಿ ಶಿವಣ್ಣ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂದು ನೋಡಲು ಕಾತುರದಿಂದ ಕಾದು ಕೂತಿದ್ದಾರೆ.

ಶಿವಣ್ಣನ ಪ್ಯಾನ್ ಇಂಡಿಯಾಗೆ ಬುದ್ದಿವಂತ ನಿರ್ದೇಶಕ
ನಾಲ್ಕೈದು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಶಿವಣ್ಣನ ಪ್ಯಾನ್ ಇಂಡಿಯಾ ಸಿನಿಮಾದ ನಿರ್ದೇಶಕ ಈಗಾಗಲೇ ಉಪೇಂದ್ರ ಜೊತೆ ಕೆಲಸ ಮಾಡಿದ್ದಾರೆ. ಉಪ್ಪಿ ನಿರ್ದೇಶನದ 'ಬುದ್ದಿವಂತ 2'ಗೆ ಈಗಾಗಲೇ ಆಕ್ಷನ್ ಕಟ್ ಹೇಳಿದ್ದಾರೆ. ಹೌದು, ಆರ್. ಜಯರಾಮ್ ಹೇಳಿದ ಕಥೆ ಶಿವರಾಜ್‌ಕುಮಾರ್‌ಗೆ ಇಷ್ಟ ಆಗಿದೆ. ಹೀಗಾಗಿ ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟ ಕೂಡಲೇ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಅಂದ್ಹಾಗೆ ಈ ಸಿನಿಮಾ ಮೂಲಕ ನಿರ್ದೇಶಕ ತಮ್ಮ ಹೆಸರನ್ನು ಆರ್ ಜೈ ಎಂದು ಬದಲಿಸಿಕೊಂಡಿದ್ದಾರೆ.

'ಲಕ ಲಕ ಲ್ಯಾಂಬೊರ್ಗಿನಿ' ನಂಟು
ಚಂದನ್ ಶೆಟ್ಟಿ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಂಬಿನೇಷನ್‌ನಲ್ಲಿ ಬಂದಿದ್ದ ಹಾಡು 'ಲಕ ಲಕ ಲ್ಯಾಂಬೊರ್ಗಿನಿ' ನಿರ್ಮಿಸಿದ್ದ ನಿರ್ಮಾಪಕರೇ ಈ ಪ್ಯಾನ್ ಇಂಡಿಯಾಗೆ ಹಣ ಹೂಡುತ್ತಿದ್ದಾರೆ. ತಮ್ಮ ಮಗಳು ಬಿಂದ್ಯಾ ಹುಟ್ಟುಹಬ್ಬದ ಉಡುಗೊರೆಯಾಗಿ ಮೂಲತ: ರೈತನಾಗಿರುವ ಆರ್ ಕೇಶವ್ ಈ ಆಲ್ಬಮ್ ಸಾಂಗ್ ನಿರ್ಮಿಸಿದ್ದರು. ಈಗ ಅವರೇ ಶಿವಣ್ಣ ಪ್ಯಾನ್ ಇಂಡಿಯಾ ಸಿನಿಮಾಗೆ ಹಣ ಹೂಡುತ್ತಿದ್ದಾರೆ.


Click it and Unblock the Notifications











