"ಇಷ್ಟು ಕಲೆಕ್ಟ್ ಮಾಡ್ತು.. ಅಷ್ಟು ಕಲೆಕ್ಟ್ ಮಾಡ್ತು ಅನ್ನೋದೆಲ್ಲ ಮೊದಲು ಬಿಡಿ"; ಶಿವಣ್ಣ ಖಡಕ್ ಮೆಸೇಜ್!
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹೊಸ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಯೋಗರಾಜ್ ಭಟ್ ನಿರ್ದೇಶಿಸಿರುವ 'ಕರಟಕ ದಮನಕ' ಇದೇ ವಾರ ಬಿಡುಗಡೆಯಾಗುತ್ತಿದೆ. ಹೀಗಾಗಿ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಇತ್ತೀಚೆಗೆ ಇಡೀ ಸಿನಿಮಾ ತಂಡ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಶಿವಣ್ಣ ಜೊತೆ ಪ್ರಭುದೇವ, ಯೋಗರಾಜ್ ಭಟ್, ರಾಕ್‌ಲೈನ್ ವೆಂಕಟೇಶ್, ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು ಸೇರಿದಂತೆ ಇಡೀ ತಂಡ ಭಾಗಿಯಾಗಿತ್ತು.
ಈಗ ಸಿನಿಮಾ 100 ದಿನ ಪ್ರದರ್ಶನ ಕಂಡಿದೆ ಅನ್ನೋ ಮಾತು ಹೇಳುವುದಕ್ಕೆ ಆಗೋದಿಲ್ಲ. ಹೆಚ್ಚು ಅಂದರೆ, 25 ದಿನ ಸಿನಿಮಾ ಥಿಯೇಟರ್‌ನಲ್ಲಿ ಪ್ರದರ್ಶನ ಕಾಣಬಹುದು. ಅದು ಬಿಟ್ಟರೆ ದೊಡ್ಡ ಸಿನಿಮಾಗಳು ಕಷ್ಟ ಪಟ್ಟು 50 ದಿನ ಮಾಡಬಹುದು. ಈಗೆಲ್ಲ ಬಾಕ್ಸಾಫೀಸ್‌ನಲ್ಲಿ ಸೋಲು ಗೆಲುವಿನ ಲೆಕ್ಕ ಹಾಕುತ್ತಿದ್ದಾರೆ. ಆ ಬಗ್ಗೆ ಶಿವಣ್ಣ 'ಈ ಕರಟಕ ದಮನಕ' ಸಂದರ್ಶನದಲ್ಲಿ ಸಂದೇಶ ಕೊಟ್ಟಿದ್ದಾರೆ.

ಯೋಗರಾಜ್ ಭಟ್ ನಿರ್ದೇಶಿಸಿದ 'ಕರಟಕ ದಮನಕ' ಸಿನಿಮಾ ಬಗ್ಗೆ ಶಿವಣ್ಣ ಮನತುಂಬಿ ಮಾತಾಡಿದ್ದರು. ಅದೇ ಸಿನಿಮಾದ ಪ್ರಚಾರ, ಬಾಕ್ಸಾಫೀಸ್ ಕಲೆಕ್ಷನ್ ಅನ್ನೋ ವಿಚಾರ ಬಂದಾಗ ಶಿವಣ್ಣ ಖಡಕ್ ಆದ ಸಂದೇಶವನ್ನು ರವಾನೆ ಮಾಡಿದ್ದಾರೆ. ಬಾಕ್ಸಾಫೀಸ್‌ನಲ್ಲಿ ಅಷ್ಟು ಕಲೆಕ್ಷನ್ ಆಯ್ತು. ಇಷ್ಟು ಕಲೆಕ್ಷನ ಆಯ್ತು ಅನ್ನೋದನ್ನು ಬಿಡಿ. ಜನರನ್ನು ಮೊದಲು ನೋಡಲು ಬಿಡಿ ಎಂದು ಹೇಳಿದ್ದಾರೆ. ಅಷ್ಟಕ್ಕೂ ಶಿವಣ್ಣ ಯಾಕೆ ಈ ಮಾತು ಹೇಳಿದ್ರು? ಯಾರಿಗೆ ಹೇಳಿದ್ರು? ಅನ್ನೋದನ್ನು ತಿಳಿಯಲು ಮುಂದೆ ಓದಿ.
"ಏನು ಮಾಡಿದ್ರೂ ನಿಯತ್ತಾಗಿ ಮಾಡ್ಬೇಕು"
ಈಗ ಯಾವುದೇ ಸಿನಿಮಾ ರಿಲೀಸ್ ಆದರೂ, ಅದಕ್ಕೆ ಪಬ್ಲಿಸಿಟಿ ಅನ್ನೋದು ಬಹಳ ಮುಖ್ಯ. ಕೆಲವರು ಜೋರಾಗಿ ಪಬ್ಲಿಸಿಟಿ ಮಾಡುತ್ತಾರೆ. ಅದಕ್ಕೆ ಶಿವಣ್ಣ ಕೂಡ ಈಗ ಪ್ರಚಾರ ಅನ್ನೋದು ಒಂದು ಬ್ಯುಸಿನೆಸ್ ಅಂತ ಶಿವಣ್ಣನೂ ಒಪ್ಪಿಕೊಂಡಿದ್ದಾರೆ. "ನಾನು 86ನಲ್ಲಿ ಬಂದೆ.. ಈಗ 2024 ವರೆಗೂ ಇದ್ದೀವಿ ಅದೇ ಪುಣ್ಯ. ಇನ್ನೂ ಮಾಡಿ ನೋಡ್ತೀವಿ ಅಂತ ಹೇಳ್ತಿದ್ದಾರೆ. ಅದನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳೋಣ. ಅಪ್‌ಡೇಟ್ ಆಗುತ್ತಿದ್ದೇವೆ. ನಾವು ಆಗಬೇಕಿದೆ. ಈಗ ಎಲ್ಲದು ಹೇಗೆ ಬ್ಯುಸಿನೆಸ್ ಆಗುತ್ತಿದೆಯೋ ಹಾಗೇ ಪಬ್ಲಿಸಿಟಿ ಕೂಡ ಒಂದು ಬ್ಯುಸಿನೆಸ್. ಆದರೆ, ಏನೇ ಮಾಡಿದರೂ ನಿಯತ್ತಾಗಿ ಮಾಡಬೇಕಷ್ಟೇ. " ಎಂದು ಶಿವಣ್ಣ ಹೇಳಿದ್ದಾರೆ.

"ಇಷ್ಟು ಅಷ್ಟು ಕಲೆಕ್ಟ್ ಮಾಡ್ತು ಅನ್ನೋದು ಬಿಡಿ"
ಇತ್ತೀಚೆಗೆ ಬಾಕ್ಸಾಫೀಸ್ ಕಲೆಕ್ಷನ್ ಅನ್ನೋದು ಪ್ರಚಾರದ ಮೆಟಿರಿಯಲ್ ಆಗಿದೆ. ಮೊದಲನೇ ದಿನದಂದಲೇ ಬಾಕ್ಸಾಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಅನ್ನೋದನ್ನು ರಿವೀಲ್ ಮಾಡುತ್ತಾರೆ. ಆದರೆ, ಇದರಲ್ಲಿ ಎಷ್ಟು ಸತ್ಯವಿದೆ. ಎಷ್ಟು ಸುಳ್ಳಿದೆ ಅನ್ನೋದನ್ನು ಗೊತ್ತಾಗುವುದಿಲ್ಲ. ಅದಕ್ಕೆ ಇಷ್ಟು ಅಷ್ಟು ಕಲೆಕ್ಟ್ ಮಾಡ್ತು ಅನ್ನೋದು ಬಿಡಿ ಅಂತ ಖಡಕ್ ಸಂದೇಶ ಕೊಟ್ಟಿದ್ದಾರೆ. "ನಾವು ಹೀಗೆ ಮಾಡಿದ್ವಿ. ಹಾಗೆ ಮಾಡಿದ್ವಿ ಅನ್ನೋದಲ್ಲ. ಇಷ್ಟು ಕಲೆಕ್ಟ್ ಮಾಡಿತು. ಅಷ್ಟು ಕಲೆಕ್ಟ್ ಮಾಡಿತು ಅನ್ನೋದಲ್ಲ. ಅದೆಲ್ಲ ಮೊದಲು ಬಿಡಿ. ಜನರನ್ನು ಸಿನಿಮಾ ನೋಡಲು ಬಿಡಿ. ಅವರು ಸಿನಿಮಾ ನೋಡಿ ಆಮೇಲೆ ಜಡ್ಜ್ ಮಾಡಲಿ. ಸುಮ್ಮನೆ ಫೇಕ್ ಆಗಿ ಮಾತಾಡುವುದನ್ನು ನಿಲ್ಲಿಸಿ. ನಾವೊಂದು ಒಳ್ಳೆಯ ಪ್ರಪಂಚದಲ್ಲಿದ್ದೀವಿ. ಸತ್ಯವನ್ನು ಹೇಳಬೇಕು." ಎಂದು ಶಿವಣ್ಣ ಹೇಳಿದ್ದಾರೆ.
"ಎಷ್ಟು ಒಳ್ಳೆಯ ಸಿನಿಮಾ ಅನ್ನೋದು ಮುಖ್ಯ"
"ಈಗ ಕರಟಕ ದಮನಕ ರಿಲೀಸ್ ಆಗುತ್ತಿದೆ. ಹಿಂದಿನ ವರ್ಷ ಒಳ್ಳೆಯ ಸಿನಿಮಾ ಬಂದವು. ಈ ವರ್ಷದ ಆರಂಭದಲ್ಲಿಯೂ ಕಾಟೇರ ಬಂತು. ಹಾಗೆ ಒಳ್ಳೆಯ ಸಿನಿಮಾ ಬಂದಾಗ ಮುಂದಕ್ಕೆ ಹೋಗಬೇಕು. ಸಿನಿಮಾ ಎಷ್ಟು ಗಳಿಕೆ ಮಾಡ್ತು ಅನ್ನೋದು ಮುಖ್ಯ ಅಲ್ಲ. ಎಷ್ಟು ಒಳ್ಳೆಯ ಸಿನಿಮಾ ಮಾಡಿದ್ದೀವಿ ಅನ್ನೋದು ಮುಖ್ಯ. ಗಳಿಕೆ ತಾನಾಗೇ ಆಗುತ್ತೆ. ಅದು ಪ್ರಡ್ಯೂಸರ್ ನೋಡಿಕೊಳ್ಳುತ್ತಾರೆ ಬಿಡಿ. ಅವರನ್ನು ತೆರಿಗೆ ಅಧಿಕಾರಿಗಳಿಗೆ ಹತ್ತಿರ ಯಾಕೆ ತಗಲಾಕಿಸುತ್ತೀರ." ಎಂದು ಶಿವಣ್ಣ ಸಲಹೆ ನೀಡಿದ್ದಾರೆ.


Click it and Unblock the Notifications











