ಅಮೆರಿಕದಲ್ಲಿ ಶಿವಣ್ಣಗೆ ಯಶಸ್ವಿ ಶಸ್ತ್ರ ಚಿಕಿತ್ಸೆ; ವೈದ್ಯರಿಂದ ಮಾಹಿತಿ
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅನಾರೋಗ್ಯ ಅವರ ಕುಟುಂಬ ಹಾಗೂ ಅಭಿಮಾನಿಗಳನ್ನು ಆತಂಕಕ್ಕೆ ಎಡೆ ಮಾಡಿಕೊಟ್ಟಿತ್ತು. ಖುದ್ದಾಗಿ ಶಿವಣ್ಣನೇ ಮುಂದು ಬಂದು ತಮ್ಮ ಆರೋಗ್ಯದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು. ಅಲ್ಲಿಂದ ಅವರ ಫ್ಯಾನ್ಸ್ ಕೂಡ ಆತಂಕಕ್ಕೆ ಒಳಗಾಗಿದ್ದರು. ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಶಿವಣ್ಣ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಗೆ ತೆರಳಿದ್ದಾರೆ.
ಈ ಹಿಂದೆ ಶಿವಣ್ಣನೇ ತಮ್ಮ ಆರೋಗ್ಯದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು. ಬೆಂಗಳೂರಿನಲ್ಲಿ ಚಿಕಿತ್ಸೆಯನ್ನು ಪಡೆದ ಬಳಿಕ ಶಸ್ತ್ರ ಚಿಕಿತ್ಸೆಗಾಗಿ ಅಮೆರಿಕಗೆ ತೆರಳಿದ್ದಾರೆ. ಇದೇ ಡಿಸೆಂಬರ್ 18ರಂದು ಅಮೆರಿಕ ಪತ್ನಿ ಗೀತಾ ಶಿವರಾಜ್‌ಕುಮಾರ್ ಹಾಗೂ ಪುತ್ರಿ ನಿವೇದಿತಾರೊಂದಿಗೆ ತೆರಳಿದ್ದರು. ಡಿಸೆಂಬರ್ 24ರಂದು ಶಿವಣ್ಣನಿಗೆ ಶಸ್ತ್ರ ಚಿಕಿತ್ಸೆ ನಡೆದಿದ್ದು, ಅದು ಯಶಸ್ವಿಯಾಗಿದೆ ಎಂಬ ಮಾಹಿತಿ ಬಂದಿದೆ.

ಶಿವಣ್ಣ ಜೊತೆ ಕಳೆದ 32 ವರ್ಷಗಳಿಂದ ಕಾರು ಚಾಲಕರಾಗಿರುವ ಗೋವಿಂದು ಈ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಮೊದಲೇ ನಿಗದಿ ಮಾಡಿದಂತೆ ನಿನ್ನೆ (ಡಿಸೆಂಬರ್ 24)ರಂದು ಸರ್ಜರಿಯನ್ನು ಯಶಸ್ವಿಯಾಗಿ ವೈದ್ಯರು ನೆರವೇರಿಸಿದ್ದಾರೆ. ಸದ್ಯ ಶಿವರಾಜ್‌ಕುಮಾರ್ ಶಸ್ತ್ರ ಚಿಕಿತ್ಸೆ ಬಳಿಕ ಆರಾಮಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಅಮೆರಿಕಗೆ ತೆರಳುವ ಮುನ್ನ ಶಿವಣ್ಣ ಆಸ್ಪತ್ರೆ ಹಾಗೂ ವೈದ್ಯರ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು. ಅಮೆರಿಕದ ಮಿಯಾಮಿ ಕ್ಯಾನ್ಸರ್ ಇನ್ಸ್‌ಟಿಟ್ಯೂಟ್‌ನಲ್ಲಿ ಶಿವಣ್ಣನಿಗೆ ಶಸ್ತ್ರ ಚಿಕಿತ್ಸೆ ನೆರವೇರಿದೆ. ಭಾರತೀಯ ಮೂಲದ ವೈದ್ಯರಾಗಿರುವ ಡಾ.ಮುರುಗೇಶ್ ಅವರಿಂದ ಶಿವಣ್ಣಗೆ ಶಸ್ತ್ರ ಚಿಕಿತ್ಸೆ ನೆರವೇರಿದೆ. ಯಶಸ್ವಿಯಾಗಿ ಸರ್ಜರಿಯಾಗಿರುವ ವಿಷಯ ಅವರ ಅಭಿಮಾನಿಗಳನ್ನು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಇನ್ನು ಶಿವಣ್ಣನ ಆರೋಗ್ಯ ಹಾಗೂ ಸರ್ಜರಿ ಬಗ್ಗೆ ಅಮೆರಿಕಾ ವೈದ್ಯರು ಮಾಹಿತಿ ನೀಡಿದ್ದಾರೆ. ಅಮೇರಿಕದಿಂದ ವೀಡಿಯೋ ಸಂದೇಶ ಬಂದಿದೆ. ದೇವರ ಆಶೀರ್ವಾದ ಹಾಗೂ ಎಲ್ಲರ ಹಾರೈಕೆಯಿಂದ ಸರ್ಜರಿ ಯಶಸ್ವಿಯಾಗಿದೆ. ಸರ್ಜರಿಗೆ ಶಿವಣ್ಣ ಉತ್ತಮವಾಗಿ ಸ್ಪಂದಿಸಿದ್ದಾರೆ. ಶಸ್ತ್ರ ಚಿಕಿತ್ಸೆ ನಂತರ ಅವರ ಆರೋಗ್ಯ ಸ್ಥಿರವಾಗಿದೆ. ಶೀಘ್ರದಲ್ಲೇ ಸಂಪೂರ್ಣ ಚೇತರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದೇವೆ ಎಂದು ಅಮೇರಿಕಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ವೈದ್ಯರು ತಿಳಿಸಿದ್ದಾರೆ.
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಗುಣರಾಗಿ ಬರುವಂತೆ ಹೋಮ ಹವನಗಳು ನಡೆದಿದ್ದವು. ಶಿವಣ್ಣನಿಗೆ ಕಾರು ಚಾಲಕರಾಗಿರುವ ಗೋವಿಂದು ಅವರು ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದರು. ಗಣಪತಿ ಪೂಜೆ, ಹೋಮ, ಗುರು ಪ್ರಾರ್ಥನ ಸಂಕಲ್ಪ, ನವಗ್ರಹ ಪೂಜೆ, ಮೃತ್ಯುಂಜಯ ಪೂಜೆ ಹಾಗೂ ಹೋಮ, ಸುದರ್ಶನ ಪೂಜೆ ನೆರವೇರಿಸಿದ್ದಾರೆ. ಶಿವಣ್ಣನ ಮನೆಯಲ್ಲಿ ಪೂಜೆ ಮಾಡುವ ಗಂಗಾಧರ ಸ್ವಾಮಿಗಳು ಈ ಪೂಜೆಯನ್ನು ನೆರವೇರಿಸಿದ್ದರು.
ಇವರೊಂದಿಗೆ ಶಿವರಾಜ್‌ಕುಮಾರ್ ಅಭಿಮಾನಿಗಳು ಕೂಡ ನಟನ ಹೆಸರಿನಲ್ಲಿ ಪೂಜೆಯನ್ನು ಹಮ್ಮಿಕೊಂಡಿದ್ದರು. ಅಭಿಮಾನಿಗಳ ಹಾರೈಕೆಯಂತೆ ಶಿವರಾಜ್‌ಕುಮಾರ್‌ಗೆ ಅಮೆರಿಕದ ಮಿಯಾಮಿಯ ಕ್ಯಾನ್ಸರ್ ಇನ್ಸ್‌ಟಿಟ್ಯೂಟ್‌ನಲ್ಲಿ ಡಿಸೆಂಬರ್ 24 ಬೆಳಗ್ಗೆ 9 ಗಂಟೆಯಿಂದ 10 ಗಂಟೆಯ ಸಮಯದಲ್ಲಿ ಶಸ್ತ್ರ ಚಿಕಿತ್ಸೆ ನಡೆದಿದೆ ಎಂದು ವರದಿಯಾಗಿದೆ.
ಶಸ್ತ್ರ ಚಿಕಿತ್ಸೆ ಬಳಿಕ ಶಿವಣ್ಣ ಸುಮಾರು ಒಂದು ತಿಂಗಳಿಗೂ ಅಧಿಕ ಕಾಲ ಅಮೆರಿಕದಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಚಿಕಿತ್ಸೆ ಬಳಿಕ ಫಾಲೋ ಅಪ್ ಇರುವುದರಿಂದ ಒಂದು ತಿಂಗಳು ಅಮೆರಿಕದಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಶಿವಣ್ಣನೇ ಮಾಹಿತಿ ನೀಡಿದಂತೆ ಜನವರಿ 25ರಂದು ಅಮೆರಿಕದಲ್ಲಿ ತೆರಳಲಿದ್ದು, ಜನವರಿ 26ಕ್ಕೆ ಬೆಂಗಳೂರಿಗೆ ಹಿಂತಿರುಗಲಿದ್ದಾರೆ. ಆ ಬಳಿಕ ಒಂದಿಷ್ಟು ದಿನ ವಿಶ್ರಾಂತಿ ಪಡೆಯಲಿದ್ದಾರೆ. ಸಂಪೂರ್ಣವಾಗಿ ಗುಣಮುಖರಾದ ಬಳಿಕ ಶಿವಣ್ಣ ಮತ್ತೆ ಸಿನಿಮಾದ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರೆ.


Click it and Unblock the Notifications











