ತಮಿಳಿನ 'ಖೈದಿ' ರೀಮೇಕ್‌ನಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ?
ಮಲಯಾಳಂನ 'ಒಪ್ಪಂ' ಚಿತ್ರದ ಕನ್ನಡ ರೀಮೇಕ್ 'ಕವಚ'ದ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತೊಂದು ರೀಮೇಕ್ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಬಂದಿದೆ. ತಮಿಳಿನ ಸೂಪರ್ ಹಿಟ್ ಚಿತ್ರ 'ಖೈದಿ'ಯ ಕನ್ನಡ ಅವತರಣಿಕೆಯಲ್ಲಿ ಶಿವಣ್ಣ ಅಭಿನಯಿಸಲಿದ್ದಾರೆ ಎನ್ನಲಾಗಿದೆ.
ಕಾಲಿವುಡ್‌ನಲ್ಲಿ ಲೋಕೇಶ್ ಕನಗರಾಜ್ ನಿರ್ದೇಶಿಸಿದ್ದ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಕಾರ್ತಿ ಮತ್ತು ನರೈನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. 2019ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಇದನ್ನು ಕನ್ನಡಕ್ಕೆ ರೀಮೇಕ್ ಮಾಡುವ ಕುರಿತು ಆಗಲೇ ಮಾತುಗಳು ಕೇಳಿಬಂದಿದ್ದವು. ಈಗ ಮತ್ತೆ ಆ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದ್ದು, ಮುಖ್ಯ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ರೀಮೇಕ್ ಸಿನಿಮಾ ಕವಚದಲ್ಲಿ ನಟನೆ
ತಾವಿನ್ನು ರೀಮೇಕ್ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಶಿವಣ್ಣ 14 ವರ್ಷಗಳ ಹಿಂದೆ ಪ್ರತಿಜ್ಞೆ ತೆಗೆದುಕೊಂಡಿದ್ದರು. ಅದರಂತೆ ನಡೆದುಕೊಂಡಿದ್ದರು. ಆದರೆ ಇತ್ತೀಚೆಗೆ ಮಲಯಾಳಂನ 'ಒಪ್ಪಂ' ಚಿತ್ರದ ರೀಮೇಕ್ 'ಕವಚ'ದಲ್ಲಿ ನಟಿಸಿದ್ದರು.

ಶಿವಣ್ಣಂಗೆ ಹೊಂದಿಕೆಯಾಗಲಿದೆ ಪಾತ್ರ
'ಖೈದಿ' ಚಿತ್ರದ ಖಡಕ್ ಪಾತ್ರ ಶಿವರಾಜ್ ಕುಮಾರ್ ಅವರಿಗೆ ಹೊಂದಿಕೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ತುಂಬಾ ಇಷ್ಟವಾಗುವಂತಹ ಹಾಗೂ ಮನಸಿಗೆ ಹತ್ತಿರವಾಗುವಂತಹ ಪರಭಾಷೆಯ ಸಿನಿಮಾಗಳನ್ನು ರೀಮೇಕ್ ಮಾಡಿದರೆ ನಟಿಸಲು ಸಿದ್ಧ ಎಂದು ಶಿವರಾಜ್‌ಕುಮಾರ್ ಹೇಳಿಕೊಂಡಿದ್ದರು.

ನಂದಕುಮಾರ್ ನಿರ್ದೇಶನ?
ಸದ್ಯ, 'ಪೊಗರು' ಚಿತ್ರದಲ್ಲಿ ತೊಡಗಿಕೊಂಡಿರುವ ನಿರ್ದೇಶಕ ನಂದಕಿಶೋರ್ 'ಖೈದಿ'ಯ ರೀಮೇಕ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ. 'ಪೊಗರು' ಪೂರ್ಣಗೊಂಡ ಬಳಿಕವೇ ಅವರು ಈ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ. ರೀಮೇಕ್‌ಗೆ ಶಿವಣ್ಣ ಕೂಡ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಹಿಂದಿಯಲ್ಲಿ ಅಜಯ್ ದೇವಗನ್
ಪೊಲೀಸ್ ಹಾಗೂ ಖಳರ ನಡುವಿನ ಸಮರದಲ್ಲಿ ಸಿಕ್ಕಿಬೀಳುವ 'ಖೈದಿ'ಯೊಬ್ಬ ಜೀವಕ್ಕೆ ಎದುರಾಗುವ ಅಪಾಯಗಳನ್ನು ಲೆಕ್ಕಿಸದೆ ಪೊಲೀಸರ ಜೀವ ಉಳಿಸಲು ನೆರವಾಗುವ ಆಕ್ಷನ್ ಹಾಗೂ ಸಸ್ಪೆನ್ಸ್ ಮಯ ಕಥೆ ಇದರಲ್ಲಿದೆ. ಜತೆಗೆ ಭಾವನಾತ್ಮಕ ನಂಟಿನ ಎಳೆಯೂ ಇದೆ. ಈ ಚಿತ್ರ ತಮಿಳಿನಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಚಿತ್ರವನ್ನು ಹಿಂದಿಯಲ್ಲಿಯೂ ರೀಮೇಕ್ ಮಾಡಲಾಗುತ್ತಿದ್ದು, ಅಜಯ್ ದೇವಗನ್ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.


Click it and Unblock the Notifications











