ಆರಂಭಕ್ಕೂ ಮುನ್ನವೇ ಶಿವಣ್ಣಗೆ ಸಿನಿಮಾ ತೋರಿಸಿದ ಅರ್ಜುನ್ ಜನ್ಯ: ಇದು ಹೇಗೆ ಸಾಧ್ಯ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಇಳಿದಿರೋದು ಗೊತ್ತೇ ಇದೆ. ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳೋಕೆ ಸಜ್ಜಾಗಿರೋ ಸಂಗೀತ ನಿರ್ದೇಶಕ ಉತ್ಸಾಹದಲ್ಲಿ ಸಿನಿಮಾ ಘೋಷಣೆ ಮಾಡಿದ್ದರು. ಆದರೆ, ಟ್ಯೂನ್ ಹಾಕೋರಿಗೆ ಆಕ್ಷನ್ ಕಟ್ ಹೇಳೋಕೆ ಬರುತ್ತಾ? ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡಿತ್ತು.
ಸಿನಿಮಾ ಅನೌನ್ಸ್ ಮಾಡಿದ್ದೇನೋ ಆಗಿತ್ತು. ಟ್ರೋಲಿಗರಿಂದ ತಪ್ಪಿಸಿಕೊಳ್ಳುವುದಕ್ಕೆ ಪರದಾಡ ಬೇಕಾಗಿತ್ತು. "ಅವ್ರಿಗೆ ಹಾರ್ಟ್ ಅಟ್ಯಾಕ್ ಆಗಿದ್ದಲ್ಲದೆ ನಮಗೂ ಹಾರ್ಟ್ ಅಟ್ಯಾಕ್ ಭರಿಸುತ್ತಿದ್ದಾನೆ", "ಅಪ್ಪ ದೇವರು ಮಚ್ಚುಗಿಚ್ಚು ಕೊಟ್ಬಿಡು ಕತ್ತು ಕೊಯ್ಕೊಂಡು ಬಿಡ್ತೀನಿ", ಫಸ್ಟ್ ಸಿನಿಮಾನೇ ಪ್ಯಾನ್ ಇಂಡಿಯಾ.. ಮಲ್ಟಿಸ್ಟಾರರ್ ಸಿನಿಮಾ ಬೇರೆ ಬೇಕಾ ನಿನಗೆ" ಅಂತೆಲ್ಲಾ ಟ್ರೋಲ್ ಮಾಡಿದ್ರಂತೆ. ಅದಕ್ಕೆ ರೊಚ್ಚಿ ಗೆದ್ದು ನಿರ್ಮಾಪಕರಿಗೆ ಸಿನಿಮಾ ತೋರಿಸಿದ್ದಾರೆ.

ಆರಂಭಕ್ಕೂ ಮುನ್ನವೇ ಸಿನಿಮಾ ತೋರಿಸಿದ ಅರ್ಜುನ್ ಜನ್ಯ
ಅರ್ಜುನ್ ಜನ್ಯ ನಿರ್ದೇಶನದ ಮೊದಲ ಸಿನಿಮಾವೇ ಮಲ್ಟಿಸ್ಟಾರರ್. ಈಗಾಗಲೇ ಟೈಟಲ್ '45' ಅಂತಾನೂ ಇಟ್ಟಿದ್ದಾಗಿತ್ತು. ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿ ಕಥೆ ಕೇಳಿ ಮೆಚ್ಚಿದ್ದೂ ಆಗಿತ್ತು. ಆದರೆ, ಮೊದಲ ಸಿನಿಮಾ ನಿರ್ದೇಶನ ಮಾಡುವಾಗ ಒಂದು ಆತಂಕ ಅಂತೂ ಇದ್ದೇ ಇರುತ್ತೆ. ನಿರ್ಮಾಪಕರಿಗೂ ಎಲ್ಲೋ ಒಂದ್ಕಡೆ ಅನುಮಾನ ಮೂಡಿರುತ್ತೆ.
ಅದಕ್ಕೆ, ಅರ್ಜುನ್ ಜನ್ಯ ಸಿನಿಮಾ ಸೆಟ್ಟೇರುವುದಕ್ಕೂ ಮುನ್ನವೇ ನಿರ್ಮಾಪಕರಿಗೆ ಸಿನಿಮಾ ತೋರಿಸಿದ್ದರಂತೆ. ಅದನ್ನೇ ಒಂದು ವಿಡಿಯೋ ಮಾಡಿ ಬಿಟ್ಟಿದ್ದಾರೆ. ಅರೇ ಶೂಟಿಂಗ್‌ಗೂ ಮುನ್ನವೇ ಸಿನಿಮಾ ತೋರಿಸೋಕೆ ಹೇಗೆ ಸಾಧ್ಯ ಅಂತಿರಾ? ಅದಕ್ಕೆ ಉತ್ತರನೂ ವಿಡಿಯೋದಲ್ಲೇ ಇದೆ. ಈ ಸಿನಿಮಾವನ್ನು ನಿರ್ಮಾಪಕರಿಗೆ ಅನಿಮೇಷನ್ ರೂಪದಲ್ಲಿ ತೋರಿಸಿದ್ದಾರಂತೆ.

ಮೈಸೂರಿನಲ್ಲಿ ಸೆಟ್ಟೇರಿದ '45'
ನಿರ್ಮಾಪಕರಿಗೆ ಅನಿಮೇಷನ್ ರೂಪದಲ್ಲಿ ಸಿನಿಮಾ ತೋರಿಸಿದ ಬಳಿಕ '45' ಸೆಟ್ಟೇರಿದೆ. ಮೊದಲ ದೃಶ್ಯಕ್ಕೆ ಗೀತಾ ಶಿವರಾಜ್‌ಕುಮಾರ್ ಕ್ಲಾಪ್ ಮಾಡಿ ಚಾಲನೆ ನೀಡಿದ್ದಾರೆ. ಈ ಸಿನಿಮಾವನ್ನು 'ಗಾಳಿಪಟ 2' ನಿರ್ಮಾಣ ಮಾಡಿದ್ದ ರಮೇಶ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ.
'45' ಸಿನಿಮಾ ಮೂಲಕ ಅರ್ಜುನ್ ಜನ್ಯ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಹೊಂದಿದ್ದಾರೆ. ಅಲ್ಲದೆ, ಈ ಸಿನಿಮಾದ ಕಥೆ ಹಾಗೂ ಚಿತ್ರಕಥೆ ಕೂಡ ಇವರದ್ದೇ. ಜೊತೆಗೆ ಸಂಗೀತವನ್ನೂ ಅರ್ಜುನ್ ಜನ್ಯ ಅವರೇ ನೀಡುತ್ತಿದ್ದಾರೆ. ಸತ್ಯ ಹೆಗಡೆ ಕ್ಯಾಮರಾ ವರ್ಕ್ ಇದ್ರೆ, ಅನಿಲ್ ಕುಮಾರ್ ಡೈಲಾಗ್ ಬರೆದಿದ್ದಾರೆ. ಮುಹೂರ್ತದ ವೇಳೆ ಉಪ್ಪಿ ಇಬ್ಬರನ್ನು ಬಿಟ್ಟು ಶಿವಣ್ಣ ಹಾಗೂ ರಾಜ್ ಬಿ ಶೆಟ್ಟಿ ಹಾಜರಿದ್ದರು.
ಇದೊಂದು ಫಿಲಾಸೋಫಿಕಲ್ ಎಂಟರ್‌ಟೈನರ್
"ಇದೊಂದು ಫಿಲಾಸಫಿಕಲ್ ಎಂಟರ್ಟೈನರ್. ಕಳೆದ ಒಂದು ವರ್ಷದಿಂದ ಈ ಸಿನಿಮಾ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಅರ್ಜುನ್ ಜನ್ಯ ಕಥೆ ಹೇಳಿದಾಗ ತುಂಬಾ ಇಷ್ಟ ಆಗಿತ್ತು. ಆ ನಂತರ ಅನಿಮೇಶನ್ ರೂಪದಲ್ಲಿ ಚಿತ್ರವನ್ನು ತೋರಿಸಿದ್ದಾರೆ. ಸಿನಿಮಾದ ಬಳಿಕ ಭಾರತದ ಟಾಪ್ ನಿರ್ದೇಶಕರ ಸಾಲಿನಲ್ಲಿ ಅರ್ಜುನ್ ಜನ್ಯ ಕೂಡ ಒಬ್ಬರಾಗುತ್ತಾರೆ ಎಂಬ ನಂಬಿಕೆಯಿದೆ. ಇದರಲ್ಲಿ ನನ್ನದು ತುಂಬಾ ಪ್ರಬುದ್ಧವಾಗಿರುವ ಪಾತ್ರ " ಎಂದು ಶಿವಣ್ಣ ಸಿನಿಮಾ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಲವು ವರ್ಷಗಳ ಬಳಿಕ ಶಿವಣ್ಣ ಮತ್ತು ಉಪೇಂದ್ರ ಮತ್ತೆ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಇಬ್ಬರ ಅಭಿಮಾನಿಗಳ ಕಣ್ಣಿಗೂ ಹಬ್ಬವೇ. ಇವರೊಂದಿಗೆ ರಾಜ್ ಬಿ ಶೆಟ್ಟಿ ಕೂಡ ಸೇರಿಕೊಂಡಿರೋದ್ರಿಂದ ಸಿನಿಮಾ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ.
"ಅರ್ಜುನ್ ಜನ್ಯ ಸಿನಿಮಾವನ್ನೇ ತೋರಿಸಿದ್ರು"
"ಸಾಮಾನ್ಯವಾಗಿ ನಿರ್ದೇಶಕರು ನಟರಿಗೆ ಸಿನಿಮಾದ ಕಥೆ ಹೇಳುತ್ತಾರೆ. ಆದರೆ, ಅರ್ಜುನ್ ಜನ್ಯ ನನಗೆ ಸಿನಿಮಾವನ್ನೇ ತೋರಿಸಿದ್ದಾರೆ. ಒಂದು ಸಿನಿಮ ಮಾಡುವಾಗ ನಾವು ಸಾಕಷ್ಟು ತಯಾರಿ ಮಾಡಿಕೊಳ್ಳುತ್ತೇವೆ. ಹೀಗಾಗಿ ನನ್ನ ತಂಡದ ಬಗ್ಗೆ ನನಗೆ ಹೆಮ್ಮೆ ಇತ್ತು. ಆದರೆ, ಅರ್ಜುನ್ ಜನ್ಯ ಮತ್ತು ಅವರ ತಂಡದ ಕೆಲಸ ನೋಡಿ ಆಶ್ಚರ್ಯವಾಯಿತು. ಹೀಗಾಗಿ ಒಬ್ಬ ನಟನಾಗಿ, ಪ್ರೇಕ್ಷಕನಾಗಿ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಯಿದೆ" ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.
ಶಿವಣ್ಣ, ಉಪ್ಪಿ ಹಾಗೂ ರಾಜ್ ಬಿ ಶೆಟ್ಟಿ ಸಿನಿಮಾಗೆ ಕೌಸ್ತುಭ ಮಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಇವರದ್ದು ಬೋಲ್ಡ್ ಹುಡುಗಿಯ ಪಾತ್ರ. ಸುಮಾರು 9 ತಿಂಗಳುಗಳ ಕಾಲ ಪ್ರೀ ಪ್ರೊಡಕ್ಷನ್ ಕೆಲಸ ಮಾಡಿ, ಬಳಿಕ ಚಿತ್ರೀಕರಣಕ್ಕೆ ಮುಂದಾಗಿದೆ ತಂಡ. "ಈ ಸಿನಿಮಾದ ಮೂಲಕ ಒಂದು ದೊಡ್ಡ ಫಿಲಾಸಫಿಯನ್ನು ಸರಳ ರೀತಿಯಲ್ಲಿ, ಕ್ಲಾಸ್ ಮತ್ತು ಮಾಸ್ ಆಗಿ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ" ಎಂದು ಅರ್ಜುನ್ ಜನ್ಯ ಹೇಳಿದ್ದಾರೆ. '45' ಸಿನಿಮಾ 80 ದಿನಗಳ ಕಾಲ ಬೆಂಗಳೂರು, ಮೈಸೂರು ಸೇರಿದಂತೆ ಮುಂತಾದ ಕಡೆಗಳಲ್ಲಿ ಶೂಟಿಂಗ್ ನಡೆಯಲಿದೆ. ಕನ್ನಡದ ಜೊತೆಗೆ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲೂ ಸಿನಿಮಾ ರಿಲೀಸ್ ಆಗಲಿದೆ.


Click it and Unblock the Notifications











