"45 ಭಾರತೀಯ ಚಿತ್ರರಂಗದ ಬೆಸ್ಟ್ ಸಿನಿಮಾ ಆಗುತ್ತೆ": ಸೆಂಚುರಿ ಸ್ಟಾರ್ ಶಿವಣ್ಣ
ಜುಲೈ 12, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅಭಿಮಾನಿಗಳಿಗೆ ಹಬ್ಬ. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ. ಅದರಲ್ಲೂ ಈ ಬಾರಿಯ ಹುಟ್ಟುಹಬ್ಬ ಶಿವಣ್ಣನ ಅಭಿಮಾನಿಗಳಿಗೆ ಸ್ಪೆಷಲ್. ಯಾಕಂದ್ರೆ, ಶಿವಣ್ಣ ಮತ್ತ ಅದೇ ಸ್ಪೀಡ್‌ನಲ್ಲಿ ಸಿನಿಮಾಗಳನ್ನು ಮುಗಿಸುತ್ತಿದ್ದಾರೆ.
ಈ ವರ್ಷ ಕೂಡ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಒಪ್ಪಿಕೊಂಡ ಸಿನಿಮಾಗಳ ಸದ್ದು ಜೋರಾಗಿದೆ. ಒಂದರ ಹಿಂದೊಂದು ಸಿನಿಮಾಗಳ ಹೆಸರು ಕೇಳಿಬರುತ್ತಿದೆ. ಅದರಲ್ಲೂ ಅವರ 62ನೇ ಹುಟ್ಟುಹಬ್ಬದಂದು ಸಾಲು ಸಾಲು ಸಿನಿಮಾಗಳು ಸರ್ಪ್ರೈಸ್ ಕೊಡುವುದಕ್ಕೆ ತುದಿಗಾಲಲ್ಲಿ ನಿಂತಿವೆ. ಅದರಲ್ಲೊಂದು ಇದೇ ಮೊದಲ ಬಾರಿಗೆ ಅರ್ಜುನ್ ಜನ್ಯ ನಿರ್ದೇಶಿಸುತ್ತಿರುವ '45'.

ಮ್ಯಾಜಿಕಲ್ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಆಕ್ಷನ್ ಕಟ್ ಹೇಳುತ್ತಿರುವ '45' ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ಸಾಗಿದೆ. ಶಿವಣ್ಣನ ಜೊತೆ ಬಹಳ ದಿನಗಳ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಕೂಡ ನಟಿಸುತ್ತಿದ್ದಾರೆ. ಈ ಮೂವರ ಕಾಂಬಿನೇಷನ್ ಸಿನಿಮಾ ಬಗ್ಗೆ ಈಗಾಗಲೇ ಕುತೂಹಲ ದುಪ್ಪಟ್ಟಾಗಿದೆ. ಅದಕ್ಕೆ ಶಿವಣ್ಣ ಸರ್ಪ್ರೈಸ್ ಕೊಡುತ್ತೇನೆ ಅಂತ ಹೇಳುವ ಮೂಲಕ ಕಿಚ್ಚು ಹಚ್ಚಿದ್ದಾರೆ.
ಅರ್ಜುನ್ ಜನ್ಯ ನಿರ್ದೇಶನದ '45' ಸಿನಿಮಾ ಭಾರತೀಯ ಚಿತ್ರರಂಗದ ಬೆಸ್ಟ್ ಸಿನಿಮಾ ಆಗುತ್ತೆ ಅಂತ ಸ್ವತ: ಶಿವಣ್ಣ ಹೇಳಿದ್ದು, ಆ ವಿಡಿಯೋವನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

"ಹುಟ್ಟುಹಬ್ಬ ಎನ್ನುವುದು ತಂದೆ ತಾಯಿ ನಮಗೆ ನೀಡಿರುವ ಗಿಫ್ಟ್. ಅವರಿಗೆ ನಾವು ಯಾವಾಗಲೂ ಚಿರ ಋಣಿಯಾಗಿರಬೇಕು. ಇದೇ ಜುಲೈ 12, ನನ್ನ 62ನೇ ಹುಟ್ಟುಹಬ್ಬ. ಇಷ್ಟು ವರ್ಷಗಳಿಂದ ಸಾವಿರಾರು ಅಭಿಮಾನಿಗಳು ನಮ್ಮ ಮನೆಗೆ ಬಂದು ನನ್ನ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದೀರಿ. ನಿಮ್ಮ ಅಭಿಮಾನಕ್ಕೆ ನನ್ನ ಧನ್ಯವಾದ. ಈ ಸಲದ ಹುಟ್ಟುಹಬ್ಬಕ್ಕೆ ನಾನು ನಿಮಗೊಂದು ಸ್ಪೆಷಲ್ ಗಿಫ್ಟ್ ಕೊಡಲಿದ್ದೇನೆ. ಅದೇನೆಂದರೆ, ನನ್ನ ಹುಟ್ಟುಹಬ್ಬದ ದಿನ ಬಹು ನಿರೀಕ್ಷಿತ '45' ಚಿತ್ರದ ನನ್ನ ಫಸ್ಟ್ ಲುಕ್ ರಿಲೀಸ್ ಆಗಲಿದೆ. ರಮೇಶ್ ರೆಡ್ಡಿ ಅವರ ನಿರ್ಮಾಣದಲ್ಲಿ, ಅರ್ಜುನ್ ಜನ್ಯ ಮೊದಲ ನಿರ್ದೇಶನದಲ್ಲಿ ಅದ್ದೂರಿಯಾಗಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ನಾನು, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸಿದ್ದೇವೆ. ಈ ಚಿತ್ರ ಇಂಡಿಯನ್ ಸ್ಕ್ರೀನ್ ನಲ್ಲೇ ಉತ್ತಮ ಚಿತ್ರವಾಗಲಿದೆ ಎಂದು ನನ್ನ ನಂಬಿಕೆ. ಅದಕ್ಕೆ ದೇವರ ಆಶೀರ್ವಾದ ಬೇಕು. ಆ ದೇವರು ಎಂದರೆ ಅಪ್ಪಾಜಿ ಹೇಳಿದ ಹಾಗೆ ಅಭಿಮಾನಿಗಳು. ಅಭಿಮಾನಿ ದೇವರುಗಳು ಈ ಚಿತ್ರವನ್ನು ನೋಡಿ ಹಾರೈಸಿ" ಎಂದು ಶಿವಣ್ಣ ಆ ವಿಡಿಯೋದಲ್ಲಿ ಹೇಳಿದ್ದಾರೆ.
ಅಂದ್ಹಾಗೆ, ಈ ಸಿನಿಮಾವನ್ನು ಸೂರಜ್ ಪ್ರೊಡಕ್ಷನ್ಸ್‌ನ ಶ್ರೀಮತಿ ಉಮಾ ರಮೇಶ್ ರೆಡ್ಡಿ ನಿರ್ಮಿಸುತ್ತಿದ್ದಾರೆ. '45' ಸಿನಿಮಾದ ನಾಯಕರಲ್ಲಿ ಒಬ್ಬರಾಗಿರುವ ಶಿವಣ್ಣ ಹುಟ್ಟುಹಬ್ಬಕ್ಕೆ ಚಿತ್ರತಂಡ ಶುಭಕೋರಿದೆ. ಇನ್ನು ಈ ಸಿನಿಮಾ ಬಹುಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ. ಅರ್ಜುನ್ ಜನ್ಯ ಕ್ಲೈಮ್ಯಾಕ್ಸ್ ನಲ್ಲಿ ಬರುವ ಸಾಹಸ ಸನ್ನಿವೇಶವನ್ನು ಮೂವತ್ತು ದಿನಗಳ ಕಾಲ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ.
ಅಂದ್ಹಾಗೆ ಸೆಪ್ಟೆಂಬರ್‌ನಲ್ಲಿ '45' ಸಿನಿಮಾದ ಮೊದಲ ಟೀಸರ್ ರಿಲೀಸ್ ಆಗಲಿದೆ. ಇನ್ನು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಷ್ಟೇ ಅಲ್ಲದೆ ಸಂಗೀತ ನಿರ್ದೇಶನ ಕೂಡ ಅರ್ಜುನ್ ಜನ್ಯ ಅವರದ್ದೇ ಆಗಿದೆ. ಹೀಗಾಗಿ ಸಿನಿಮಾದ ಜೊತೆ ಜೊತೆಗೆ ಹಾಡುಗಳ ಬಗ್ಗೆ ಕೂಡ ಸಾಕಷ್ಟು ನಿರೀಕ್ಷೆಯಿದೆ.


Click it and Unblock the Notifications











