ರಮ್ಯಾ ಕಮ್‌ಬ್ಯಾಕ್ ಸಿನಿಮಾಗೆ ಎಂಟ್ರಿ ಕೊಟ್ಟ ಶಿವಣ್ಣ: ಡಾಲಿ 'ಉತ್ತರಕಾಂಡ'ಕ್ಕೆ ಸೆಂಚುರಿ ಕಿಚ್ಚು!
ಸ್ಯಾಂಡಲ್‌ವುಡ್‌ನಲ್ಲಿ ನಿರೀಕ್ಷೆಯಲ್ಲಿರೋ ಸಿನಿಮಾಗಳ ಒಟ್ಟಿಯಲ್ಲಿ 'ಉತ್ತರಕಾಂಡ' ಕೂಡ ಒಂದು. ಈ ಸಿನಿಮಾ ಯಾಕೆ ಅಷ್ಟೊಂದು ಸದ್ದು ಮಾಡುತ್ತಿದೆ ಅನ್ನೋದಕ್ಕೆ ಹಲವು ಕಾರಣಗಳಿವೆ. ಈಗ ಇನ್ನೊಂದು ಕಾರಣ ಸಿಕ್ಕಿದೆ. ಅದುವೇ ಸೆಂಚುರಿ ಸ್ಟಾರ್ ಶಿವಣ್ಣ.
'ರತ್ನನ್ ಪ್ರಪಂಚ' ಅಂತಹ ಜನಮೆಚ್ಚಿದ ಸಿನಿಮಾದ ಬಳಿಕ ಮತ್ತೆ ಡಾಲಿ ಧನಂಜಯ್ ಹಾಗೂ ರೋಹಿತ್ ಪದಕಿ ಒಟ್ಟಿಗೆ ಸೇರಿ ಸಿನಿಮಾ ಮಾಡುತ್ತಿದ್ದಾರೆ. ಮೊದಲು ಸಾಫ್ಟ್ ಸ್ಟೋರಿಯೊಂದಿಗೆ ಬಂದಿದ್ದ ನಿರ್ದೇಶಕ ರೋಹಿತ್ ಪದಕಿ, ಈ ಬಾರಿ ಪಕ್ಕಾ ರಗಡ್ ಸಿನಿಮಾವನ್ನು ಹೊರತರುತ್ತಿದ್ದಾರೆ.

ಈಗಾಗಲೇ 'ಉತ್ತರಕಾಂಡ' ಸಿನಿಮಾದ ಚಿಕ್ಕದೊಂದು ಝಲಕ್ ಪ್ರೇಕ್ಷಕರ ನಿದ್ದೆ ಕದ್ದಿದೆ. ಡಾಲಿ ಧನಂಜಯ್ ಗಬ್ರು ಸತ್ಯನ ಅವತಾರದಲ್ಲಿ ಪೊಲೀಸ್ ಸ್ಟೇಷನ್ ಅನ್ನೇ ಉಡಾಯಿಸಿದ್ದು, ಸಿನಿಮಾ ಹೇಗಿರುತ್ತೆ ಅನ್ನೋದನ್ನು ಪರೋಕ್ಷವಾಗಿ ಹೇಳಿದೆ. ಇನ್ನು ಈ ತಂಡಕ್ಕೆ ಮಾಸ್ ಆಫ್ ಬಿಗ್ ಡ್ಯಾಡಿ ಸೇರಿಕೊಂಡರೆ ಹೇಗಿರಬೇಡ? ಈ ಹೊರಬೀಳುತ್ತಿದ್ದಂತೆ ಶಿವಣ್ಣ ಫ್ಯಾನ್ಸ್ ಫಿದಾ ಆಗಿದ್ದಾರೆ.
'ಉತ್ತರಕಾಂಡ'ಕ್ಕೆ ಲಗ್ಗೆ ಇಟ್ಟ ಶಿವಣ್ಣ
ಮಾಸ್ ಇರಲಿ, ಕ್ಲಾಸ್ ಇರಲಿ ಅಲ್ಲಿ ಶಿವಣ್ಣ ಇದ್ದ ಮೇಲೆ ಅಲ್ಲೊಂದು ಪವರ್‌ಹೌಸ್ ಸೃಷ್ಟಿಯಾಗುತ್ತೆ. 'ಉತ್ತರಕಾಂಡ' ತಂಡಕ್ಕೂ ಅಷ್ಟೇ ಮತ್ತಷ್ಟು ಪವರ್ ಬಂದಂತೆ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣನೊಂದಿ 'ಉತ್ತರಕಾಂಡ' ತಂಡ ಕ್ಯಾಮರಾಗೆ ಪೋಸ್ ಕೊಟ್ಟಿರೋ ಫೋಟೊವೊಂದು ವೈರಲ್ ಆಗಿದೆ. ಶಿವಣ್ಣ 'ಉತ್ತರಕಾಂಡ' ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿಸುವುದಕ್ಕೆ ಕನ್ಫರ್ಮ್ ಆಗಿದೆ. ಇನ್ನೇನಿದ್ದರೂ ಶಿವಣ್ಣನ ಲುಕ್, ಮ್ಯಾನರಿಸಂ ಹೇಗಿರುತ್ತೆ? ಅನ್ನೋದೇ ಕುತೂಹಲ.

'ಬೈರಾಗಿ' ಬಳಿಕ ಡಾಲಿ-ಶಿವಣ್ಣ
ಶಿವಣ್ಣ ಹಾಗೂ ಡಾಲಿ ಧನಂಜಯ್ ಒಟ್ಟಿಗೆ ನಟಿಸಿದ ಸಿನಿಮಾಗಳು ಸಿಕ್ಕಾಪಟ್ಟೆ ಸದ್ದು ಮಾಡಿವೆ. 'ಟಗರು' ಸಿನಿಮಾದಲ್ಲಿ ಇಬ್ಬರ ಮುಖಾಮುಖಿ ಪ್ರೇಕ್ಷಕರಿಗೆ ಕಿಕ್ ಕೊಟ್ಟಿತ್ತು. ಕಳೆದ ವರ್ಷ ತೆರೆಕಂಡಿದ್ದ 'ಬೈರಾಗಿ'ಯಲ್ಲೂ ಇಬ್ಬರೂ ಜೊತೆಯಾಗಿ ನಟಿಸಿದ್ದರು. ಆದರೆ, ಈ ಸಿನಿಮಾ ಯಾಕೋ ಅಷ್ಟೊಂದು ಸದ್ದು ಮಾಡಲಿಲ್ಲ. ಈಗ ಮೂರನೇ ಬಾರಿಗೆ ಶಿವಣ್ಣ ಹಾಗೂ ಡಾಲಿ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಉತ್ತರ ಕರ್ನಾಟಕದ ಶೈಲಿಯ ಈ ಸಿನಿಮಾಗೆ ಇಬ್ಬರ ಮುಖಾ ಮುಖಿಯಾಗುತ್ತಾ? ಇಲ್ಲಾ ಒಟ್ಟಿಗೆ ಕಾಣಿಸಿಕೊಳ್ಳುತ್ತಾರಾ? ಅನ್ನೋ ಕುತೂಹಲದಲ್ಲಿ ಫ್ಯಾನ್ಸ್ ಇದ್ದಾರೆ.
ರಮ್ಯಾ ಕಮ್‌ಬ್ಯಾಕ್ ಸಿನಿಮಾ
'ಉತ್ತರಕಾಂಡ' ಮೋಹಕತಾರೆ ಮತ್ತೆ ನಟಿಯಾಗಿ ಕಮ್‌ಬ್ಯಾಕ್ ಮಾಡುತ್ತಿರುವ ಸಿನಿಮಾ. ಇದೂವರೆಗೂ ರಮ್ಯಾ ಲುಕ್ ಹೇಗಿರುತ್ತೆ? ಅನ್ನೋದು ರಿವೀಲ್ ಆಗಿಲ್ಲ. ಆದರೆ, ರಮ್ಯಾ ಉತ್ತರ ಕರ್ನಾಟಕ ಭಾಷೆಯಲ್ಲಿ ಬಿಟ್ಟ ಡೈಲಾಗ್‌ಗಳು ಕುತೂಹಲ ಕೆರಳಿಸಿತ್ತು. ಈಗ ಡಾಲಿ ಧನಂಜಯ್, ರಮ್ಯಾ ಜೊತೆಗೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕೂಡ ಸೇರಿಕೊಂಡಿದ್ದು, ಸಿನಿಮಾಗೆ ಮತ್ತಷ್ಟು ಪವರ್ ಕೊಟ್ಟಂತೆ ಆಗಿದೆ.
'ಜೈಲರ್' ಬಳಿಕ ಶಿವಣ್ಣ ಮತ್ತೆ ಬ್ಯುಸಿ
ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿದ 'ಜೈಲರ್' ಸಿನಿಮಾದಲ್ಲಿ ಶಿವಣ್ಣ ಅತಿಥಿ ಪಾತ್ರದಲ್ಲಿ ನಟಿಸಿದ್ದು ಗೊತ್ತೇ ಇದೆ. 10 ನಿಮಿಷದ ಒಂದು ರೋಲ್ ದೇಶದೆಲ್ಲೆಡೆ ಸದ್ದು ಮಾಡಿತ್ತು. ಅಲ್ಲಿಂದ ಶಿವಣ್ಣನನ್ನು ಹುಡುಕಿಕೊಂಡು ವಿಭಿನ್ನ ಸಿನಿಮಾಗಳು ಬರುತ್ತಿವೆ. ಅದರಲ್ಲಿ 'ಉತ್ತರಕಾಂಡ' ಕೂಡ ಒಂದು ಎಂದು ಹೇಳಲಾಗುತ್ತಿದೆ. ಸದ್ಯ ಶಿವಣ್ಣ ಎಂಟ್ರಿ ಬಗ್ಗೆ ಅಷ್ಟೇ ಸ್ಪಷ್ಟನೆ ಸಿಕ್ಕಿದೆ. ಪಾತ್ರವೇನು? ಸಿನಿದಾ ಉದ್ದಕ್ಕೂ ಇರುತ್ತಾರಾ? ಅತಿಥಿ ಪಾತ್ರನಾ? ಅನ್ನೋದನ್ನು ಕೆಆರ್‌ಜಿ ಸ್ಟುಡಿಯೋ ರಿವೀಲ್ ಮಾಡಿಲ್ಲ.


Click it and Unblock the Notifications











