ಶಿವಣ್ಣನಾ ಯುವನಾ? ಹೆಜ್ಜೆ ಹಾಕೋದ್ರಲ್ಲಿ ಯಾರು ಉತ್ತಮ? "ಅಬ್ಬಾ...ಬೆಂಕಿ ಗುರು"ಎಂದು ಕೊಂಡಾಡಿದ ಫ್ಯಾನ್ಸ್!
ದೊಡ್ಮನೆ ತವರು ಚಾಮರಾಜನಗರದಲ್ಲಿ ದೊಡ್ಮನೆಯ ಮತ್ತೊಂದು ಕುಡಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ರಾಘಣ್ಣನ ಎರಡನೇ ಪುತ್ರ ಯುವ ರಾಜ್‌ಕುಮಾರ್ ನಟಿಸುತ್ತಿರುವ ಮೊದಲ ಸಿನಿಮಾ 'ಯುವ' ಬಿಡುಗಡೆಗೆ ರೆಡಿಯಾಗಿದೆ. ಈ ಸಿನಿಮಾ ಮೂಲಕ 'ಯುವ' ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಆ ಕ್ಷಣವನ್ನು ಕಣ್ತುಂಬಿ ಕೊಳ್ಳುವುದಕ್ಕೆ ದೊಡ್ಮನೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಹೀಗಾಗಿ ದೊಡ್ಮನೆಯ ತವರು ಅಂತಲೇ ಕರೆಯೋ ಚಾಮರಾಜನಗರದಲ್ಲಿ 'ಯುವ' ಸಿನಿಮಾದ ಮೊದಲ ಹಾಡನ್ನು ರಿಲೀಸ್ ಮಾಡಲಾಗಿದೆ. ನಿನ್ನೆ (ಮಾರ್ಚ್ 2) ನಡೆದ ಅದ್ಧೂರಿ ಸಮಾರಂಭದಲ್ಲಿ "ಒಬ್ಬನೇ ಶಿವ.. ಒಬ್ಬನೇ ಯುವ.." ಎಂಬ ಹಾಡನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಯುವ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ. ಇದು ಲಿರಿಕಲ್ ವಿಡಿಯೋ ಆಗಿದ್ದರೂ, ಇದರಲ್ಲಿ ಯುವ ಹೆಜ್ಜೆ ಹಾಕಿರೋ ಚಿಕ್ಕ ತುಣುಕುಗಳನ್ನು ಸೇರಿಸಲಾಗಿದೆ.

ಪುನೀತ್ ರಾಜ್‌ಕುಮಾರ್ ಅಂತೆಯೇ ಹೆಜ್ಜೆ ಹಾಕುವುದಕ್ಕೆ ಪ್ರಯತ್ನ ಪಟ್ಟಿದ್ದಾರೆ. ಇದು ಹಾಡನ್ನು ನೋಡಿದರೆ ಹೇಳಿಬಡಬಹುದು. ಇನ್ನೊಂದು ಕಡೆ ಈ ಹಾಡು ರಿಲೀಸ್ ಆಗುತ್ತಿದ್ದಂತೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಇದೇ ಹಾಡಿಗೆ ಯುವ ರಾಜ್‌ಕುಮಾರ್ ಜೊತೆ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೋ ಈ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಶಿವಣ್ಣ ಎನರ್ಜಿ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಎನರ್ಜಿ ಬಗ್ಗೆ ಹೊಸದಾಗೇನು ಹೇಳಬೇಕಿಲ್ಲ. 62ನೇ ವಯಸ್ಸಿನಲ್ಲೂ ಶಿವಣ್ಣ ಎನರ್ಜಿ ಕಿಂಚಿತ್ತೂ ಕಡಿಮೆ ಆಗಿಲ್ಲ. ಈಗ ಯುವ ಜೊತೆ ಹೆಜ್ಜೆ ಹಾಕಿರೋ ವಿಡಿಯೋದಲ್ಲೂ ಅದು ಎದ್ದು ಕಾಣುತ್ತೆ. ಶಿವಣ್ಣ ಹಾಗೂ ಯುವ ಇಬ್ಬರಲ್ಲಿ ಬೆಸ್ಟ್ ಅಂದ್ರೆ, ಫ್ಯಾನ್ಸ್ ಉತ್ತರವೇನು? ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ದೊಡ್ಮನೆ ಫ್ಯಾನ್ಸ್ ಕಮೆಂಟ್‌ಗಳ ಮೇಲೆ ಕಮೆಂಟ್ ಮಾಡುವುದಕ್ಕೆ ಶುರುವಿಟ್ಕೊಂಡಿದ್ದಾರೆ.
"ಒಬ್ಬನೇ ಶಿವ.. ಒಬ್ಬನೇ ಯುವ.. ಶಿವಣ್ಣ ಜೊತೆ ಇನ್ಮುಂದೆ ಯುವ ನಿಲ್ಲುವ" ಎಂದು ಅಭಿಮಾನಿಯೊಬ್ಬರು ಹೆಮ್ಮೆಯಿಂದ ಕಮೆಂಟ್ ಮಾಡಿದ್ದಾರೆ. ಅದೇ ಮತ್ತೊಬ್ಬರು "ಹಾವ ಹಾವಾ ರಾಜವಂಶ ದೇ ಹಾವಾ..." ಎಂದು ಹೇಳಿದ್ದಾರೆ. ಹೀಗೆ ಯುವ ಹಾಡಿಗೆ ಮನಸೋತು ಒಂದರ ಹಿಂದೊಂದು ಕಮೆಂಟ್‌ಗಳನ್ನು ಮಾಡುತ್ತಲೇ ಇದ್ದಾರೆ. ಇದರಲ್ಲಿ ಶಿವಣ್ಣ ಎನರ್ಜಿಗೆ ಫಿದಾ ಆಗಿ ಕಮೆಂಟ್ ಮಾಡಿದವರೇ ಹೆಚ್ಚು.
"ಶಿವಣ್ಣ ನಿಮ್ ಎನರ್ಜಿಗೆ ಸರಿಸಾಟಿನೇ ಯಾರು ಇಲ್ಲ ಬಿಡಿ. 62 ವರ್ಷ ಆದರೂ ನಿಮ್ಮ ಎನರ್ಜಿ ಕಡಿಮೆ ಆಗಿಲ್ಲ. ಹೀಗೆ 100 ವರ್ಷ ಬದುಕಿ ಬಾಳಿ" ಎಂದು ಅಭಿಮಾನಿಯೊಬ್ಬರು ಮನಸಾರೆ ಹರಸಿದ್ದಾರೆ. " ಶಿವಣ್ಣ ಸ್ವಾಗ್ ಅದ್ಭುತವಾಗಿದೆ. ನಿಜವಾಗಲೂ ಪರ್ಫೆಕ್ಟ್ ಆಗಿ ಹೆಜ್ಜೆ ಹಾಕಿದ್ದೀರ" ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇದರ ಜೊತೆನೇ ಮತ್ತೊಬ್ಬರು "ದಯವಿಟ್ಟು ಶಿವಣ್ಣ, ಯುವ, ವಿನಯ್, ಧೀರನ್, ಮುರಳಿ, ರಾಘು, ರಾಘಣ್ಣ ಒಟ್ಟಿಗೆ ಸಿನೆಮಾ ಮಾಡಿ" ಎಂದು ಬೇಡಿಕೆ ಇಟ್ಟಿದ್ದಾರೆ.
ಇನ್ನು 'ಯುವ' ಸಿನಿಮಾ ಕಡೆ ಬರೋದಾದರೆ, ಅಪ್ಪು ಅಗಲಿದ ಬಳಿಕ ಯುವ ರಾಜ್‌ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕು ಅನ್ನೋದು ಅವರ ಅಭಿಮಾನಿಗಳ ಆಸೆಯಾಗಿತ್ತು. ಅದನ್ನು ಸಂತೋಷ್ ಆನಂದ್‌ರಾಮ್ ನಿರ್ದೇಶನ ಮಾಡಬೇಕು ಅನ್ನೋದು ಅವರ ಬಯಕೆಯಾಗಿತ್ತು. ಹೀಗಾಗಿ ಯುವ ರಾಜ್‌ಕುಮಾರ್ ಅನ್ನು ಚಿತ್ರರಂಗಕ್ಕೆ ಲಾಂಚ್ ಮಾಡುವುದಕ್ಕೆ ಸಂತೋಷ್ ಆನಂದ್‌ರಾಮ್ ನಿರ್ಧರಿಸಿದ್ದರು. ಅದರಂತೆ 'ಯುವ' ಸಿನಿಮಾ ಕಳೆದ ವರ್ಷ ಸೆಟ್ಟೇರಿತ್ತು. ಈಗ ಮಾರ್ಚ್ 29ಕ್ಕೆ ಅದ್ಧೂರಿಯಾಗಿ ರಿಲೀಸ್ ಆಗುವುದಕ್ಕೆ ಸಜ್ಜಾಗುತ್ತಿದೆ.


Click it and Unblock the Notifications











