ಅಪ್ಪು ಮನೆಗೆ ಭೇಟಿ ಕೊಟ್ಟ ಶೋಭಾ ಕರಂದ್ಲಾಜೆ; ಸಾಥ್ ಕೊಟ್ಟ ಸಿ ಎನ್ ಅಶ್ವತ್ಥನಾರಾಯಣ
2024ರ ಲೋಕಸಭೆ ಚುನಾವಣೆ ಕಾವು ಜೋರಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಜಿದ್ದಾಜಿದ್ದಿಗೆ ಬಿದ್ದು ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದೆ. ಇತ್ತೀಚೆಗೆ ಚುನಾವಣಾ ಆಯೋಗ ಕೂಡ ಚುನಾವಣೆಯ ದಿನಾಂಕವನ್ನು ಅನೌನ್ಸ್ ಮಾಡಿದೆ. ಈ ಬೆನ್ನಲ್ಲೇ ಅಭ್ಯರ್ಥಿಗಳು ಬಿರುಸಿನ ಪ್ರಚಾರಕ್ಕೆ ಮುಂದಾಗಿದ್ದಾರೆ.
ಅದರಲ್ಲೂ ಬೆಂಗಳೂರಿನ ಅಭ್ಯರ್ಥಿಗಳು ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಗಿಟ್ಟಿಸಿಕೊಂಡಿರುವ ಶೋಭಾ ಕರಂದ್ಲಾಜೆ ಅಖಾಡಕ್ಕೆ ಇಳಿದಿದ್ದಾರೆ. ಹೀಗಾಗಿ ಇತ್ತೀಚೆಗೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಮನೆಗೆ ಶೋಭಾ ಭೇಟಿ ನೀಡಿದ್ದು, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವನ್ನು ಭೇಟಿ ಮಾಡಿದ್ದಾರೆ.

ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಅನೌನ್ಸ್ ಆಗಿದ್ದು, ಕರ್ನಾಟಕದಲ್ಲಿ 28 ಕ್ಷೇತ್ರಗಳಲ್ಲಿ 20 ಲೋಕಸಭೆ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಹೆಸರಿಸಿದೆ. ಸದ್ಯಕ್ಕೆ 3 ಸೀಟುಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಇನ್ನೂ ಉಳಿದ 5 ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಕುತೂಹಲ ಮೂಡಿಸಿದೆ. ಈ ಬೆನ್ನಲ್ಲೇ ಶೋಭಾ ಕರಂದ್ಲಾಜೆ ಬಿರುಸಿನ ಪ್ರಚಾರಕ್ಕೆ ಮುನ್ನ ತಮ್ಮ ಕ್ಷೇತ್ರದ ಗಣ್ಯರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದಾರೆ.
ಈ ಸಂಬಂಧ ಶೋಭಾ ಕರಂದ್ಲಾಜೆ ಇಂದು (ಮಾರ್ಚ್ 19) ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಮನೆಗೆ ಭೇಟಿ ಕೊಟ್ಟು ಬೆಂಬಲ ಕೋರಿದ್ದಾರೆ. ಬಳಿಕ ತನ್ನ ಫೇಸ್‌ಬುಕ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
"ಶ್ರೀಮತಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಮನೆಗೆ ಭೇಟಿ ನೀಡಿ, ಲೋಕಸಭಾ ಚುನಾವಣೆಗೆ ಬೆಂಬಲ ನೀಡುವಂತೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ, ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರು ಉಪಸ್ಥಿತರಿದ್ದರು" ಎಂದು ಶೋಭಾ ಕರಂದ್ಲಾಜೆ ಪೋಸ್ಟ್ ಮಾಡಿದ್ದಾರೆ.
ಶೋಭಾ ಕರಂದ್ಲಾಜೆ ಜೊತೆ ಮಾಜಿ ಉಪಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ ಕೂಡ ಸಾಥ್ ಕೊಟ್ಟಿದ್ದರು. ಈ ವೇಳೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
"ಶ್ರೀಮತಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಮನೆಗೆ ಕೇಂದ್ರ ಸಚಿವರು ಹಾಗೂ ನಮ್ಮ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಕುಮಾರಿ ಶೋಭಾ ಕರಂದ್ಲಾಜೆ ಅವರ ಜತೆ ಭೇಟಿ ನೀಡಿ, ಔಪಚಾರಿಕ ಮಾತುಕತೆ ನಡೆಸಲಾಯಿತು." ಎಂದು ಡಾ. ಸಿ ಎನ್ ಅಶ್ವತ್ಥನಾರಾಯಣ ಪೋಸ್ಟ್ ಮಾಡಿದ್ದಾರೆ.


Click it and Unblock the Notifications











