Raghavendra Rajkumar: "ನನಗಿಂತ ಶ್ರುತಿ ಆಕ್ಟಿಂಗ್ ಸೂಪರ್.. ಅವ್ರೇ ನಿಜವಾದ ಹೀರೊ-ಹೀರೊಯಿನ್" - ರಾಘಣ್ಣ
ರಾಘವೇಂದ್ರ ರಾಜ್‌ಕುಮಾರ್ ಇತ್ತೀಚೆಗೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಪೋಷಕ ಪಾತ್ರಗಳಲ್ಲಿ ಅದರಲ್ಲೂ ವಿಶೇಷ ಪಾತ್ರಗಳ ಮೂಲಕ ಮತ್ತೆ ಸಿನಿ ಪ್ರಿಯರಿಗೆ ಇಷ್ಟವಾಗುತ್ತಿದ್ದಾರೆ. ಇಂದು (ಸೆಪ್ಟೆಂಬರ್ 15) ರಾಘಣ್ಣ ಹಾಗೂ ಶ್ರುತಿ ಅಭಿನಯದ '13' ಅನ್ನೋ ಸಿನಿಮಾ ರಿಲೀಸ್ ಆಗಿದೆ.
ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ಪ್ರೇಕ್ಷಕರೊಂದಿಗೆ ಕೂತು ರಾಘವೇಂದ್ರ ರಾಜ್‌ಕುಮಾರ್ ಹಾಗೂ ಹಿರಿಯ ನಟಿ ಶ್ರುತಿ ಸಿನಿಮಾ ನೋಡಿದ್ದಾರೆ. ತಾವೇ ನಟಿಸಿದ '13' ಸಿನಿಮಾ ನೋಡಿ ಹೊರಬಂದ ಬಳಿಕ ರಾಘವೇಂದ್ರ ರಾಜ್‌ಕುಮಾರ್ ಸಹ ನಟಿ ಶ್ರುತಿ ಅಭಿನಯವನ್ನು ಮನಸಾರೆ ಹೊಗಳಿದ್ದಾರೆ.

ಇತ್ತ ನಟಿ ಶ್ರುತಿ ಕೂಡ 26-27 ವರ್ಷಗಳ ಹಿಂದೆ ಒಟ್ಟಿಗೆ ನಟಿಸಿದ್ದ 'ಗೆಲುವಿನ ಸರದಾರ' ಅನ್ನೋ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. ಹಾಗೇ ರಾಘಣ್ಣ ಒಳ್ಳೆ ಗುಣವನ್ನು ಹಾಡಿ ಹೊಗಳಿದ್ದಾರೆ. ಅಷ್ಟಕ್ಕೂ '13' ಸಿನಿಮಾ ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ದೇನು? ಅದರ ಸಾರಾಂಶ ಇಲ್ಲಿದೆ. ಮುಂದೆ ಓದಿ..
"ನಾನೂ ಇವತ್ತೇ ಸಿನಿಮಾ ನೋಡಿದ್ದು"
13 ಸಿನಿಮಾ ನೋಡಿದ ಬಳಿಕ ರಾಘವೇಂದ್ರ ರಾಜ್‌ಕುಮಾರ್ ಖುಷಿಯಾಗಿದ್ದರು. ಪ್ರೇಕ್ಷಕರು ಸಿನಿಮಾವನ್ನು ಎಂಜಾಯ್ ಮಾಡುತ್ತಿದ್ದಿದ್ದನ್ನು ಕಣ್ತುಂಬಿಕೊಂಡಿದ್ದಾರೆ. "ನಾನು ಇವತ್ತೇ ಸಿನಿಮಾ ನೋಡುತ್ತಿರೋದು. ಇದೂವರೆಗೂ ನೋಡಿರಲಿಲ್ಲ. ನಾನು ಹೇಗಿದೆ ಅಂತ ಹೇಳೋದು ಮುಖ್ಯ ಅಲ್ಲ. ಜನ ಹೇಗೆ ಪ್ರೀತಿಸುತ್ತಾರೆ ಅನ್ನೋದೇ ಮುಖ್ಯ. ಇದೊಂದು ಸಸ್ಪೆನ್ಸ್ ಸಿನಿಮಾ. ಜನರು ಕುತೂಹಲದಿಂದ ನೋಡುತ್ತಿದ್ದರು. ಇನ್ನೂ ಏನಾದರೂ ಇದೆಯಾ? ಮುಗಿದೇ ಇಲ್ವಲ್ಲ ಅಂತ ಕನೆಕ್ಟ್ ಆದರು." ಎಂದು ಸಿನಿಮಾ ನೋಡಿದ ಬಳಿಕ ಪ್ರತಿಕ್ರಿಯೆ ನೀಡಿದ್ದರು.
ಶ್ರುತಿನೇ ನಿಜವಾದ ಹೀರೋ-ಹೀರೊಯಿನ್
ಇದೇ ವೇಳೆ ನಟಿ ಶ್ರುತಿ ಪಾತ್ರದ ಬಗ್ಗೆ ಮನಸಾರೆ ಮಾತಾಡಿದ್ದಾರೆ. "ನೆನಪುಗಳೇ ನಮ್ಮನ್ನು ಯಾವಾಗಲೂ ಸಂತೋಷವಾಗಿ ಇಡೋದು. ನನಗಿಂತ ಶ್ರತಿಯವರು ತುಂಬಾನೇ ಚೆನ್ನಾಗಿ ನಟಿಸಿದ್ದಾರೆ. ನಾನು ಸಿನಿಮಾ ನೋಡಿ ಹೊರಬಂದಾಗ ನನಗೆ ಶ್ರುತಿಯವರೇ ನೆನಪಿರೋದು. ಈ ಸಿನಿಮಾದ ನಿಜವಾದ ಹೀರೋ ಹೀರೊಯಿನ್ ಎರಡೂ ಇವರೇನೆ." ಎಂದು ರಾಘಣ್ಣ ಹೇಳಿದ್ದಾರೆ.

ರಾಘಣ್ಣನ ದೊಡ್ಡ ಗುಣ ಎಂದು ಶ್ರುತಿ
ರಾಘಣ್ಣ ನಟಿ ಶ್ರುತಿಯವರ ನಟನೆಯನ್ನು ಹೊಗಳುತ್ತಿದ್ದಂತೆ ಅದು ಅವರ ದೊಡ್ಡ ಗುಣ್ಣ ಎಂದು ಹೇಳಿದ್ದಾರೆ. "ಅದು ಅವರ ದೊಡ್ಡ ಗುಣ ಯಾವಾಗಲೂ ಹಾಗೇ ಹೇಳುತ್ತಾರೆ. ಸ್ಪಾಟ್‌ನಲ್ಲಿ ಕೂಡ ಯಾವಾಗಲೂ ಹೀಗೆ ಹೇಳೋರು. ನನಗಿಂತ ನೀನು ತುಂಬಾ ಚೆನ್ನಾಗಿ ಆಕ್ಟ್ ಮಾಡಿದ್ದೀಯಾ ಅಂತ. ಪಕ್ಕದಲ್ಲಿರುವ ಕಲಾವಿದರನ್ನು ಅವರು ಹಾಗೇ ಪ್ರೋತ್ಸಾಹ ಮಾಡೋರು. ನನಗೆ ಅವರ ಆಕ್ಟಿಂಗ್ ತುಂಬಾನೇ ಇಷ್ಟ." ಎಂದು ಶ್ರುತಿ ಹೇಳಿದ್ದಾರೆ.
27 ವರ್ಷದ ಹಿಂದಿನ ಸಿನಿಮಾ ನೆನೆದ ಶ್ರುತಿ
"ಗೆಲುವಿನ ಸರದಾರ ಆದ್ಮೇಲೆ ಸುಮಾರು 26 ರಿಂದ 27 ವರ್ಷ ಆಗಿತ್ತು. ಒಟ್ಟಿಗೆ ಆಕ್ಟಿಂಗ್ ಮಾಡದೆ. ಆತರಹದ ಒಂದು ಸಣ್ಣ ಕ್ಲಿಪಿಂಗ್ಸ್ ಅನ್ನೂ ಈ ಸಿನಿಮಾದಲ್ಲಿ ಹಾಕಿದ್ದರು. ಅವರೊಂದಿಗೆ ಈ ಸಿನಿಮಾದಲ್ಲಿ ಕೆಲಸ ಮಾಡಿದಕ್ಕೆ ಖುಷಿ ಆಯ್ತು" ಎಂದು ಶ್ರುತಿ ಹಳೆಯ ನೆನಪುಗಳನ್ನು ಮೆಲುಕು ಹಾಕಿ '13' ಸಿನಿಮಾದ ರಿಲೀಸ್ ಅನ್ನು ಸಂಭ್ರಮಿಸಿದ್ದಾರೆ.


Click it and Unblock the Notifications











