"ಇನ್ನೊಂದು ಧರ್ಮದ ಪವಿತ್ರ ಸ್ಥಳದಲ್ಲಿ ದೇವಸ್ಥಾನ ಕಟ್ಟಲಾಗಿದೆ"; ಶ್ರುತಿ ಹರಿಹರನ್ ಪೋಸ್ಟ್ ವೈರಲ್!
ನಿನ್ನೆ (ಜನವರಿ 22) ಕೋಟ್ಯಾಂತರ ಜನರ ಕನಸು ಈಡೇರಿದೆ. ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೆರವೇರಿದೆ. ದೇಶಾದ್ಯಂತ ಸುಮಾರು 8 ಸಾವಿರಕ್ಕೂ ಅಧಿಕ ಗಣ್ಯರು ಈ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ. ಸಿನಿಮಾ, ರಾಜಕೀಯ, ಉದ್ಯಮ ಕ್ಷೇತ್ರದಿಂದ ಗಣ್ಯರು ಭಾಗವಹಿಸಿದ್ದಾರೆ.
ಇನ್ನೊಂದು ಕಡೆ ಶ್ರೀರಾಮ ಮಂದಿರ ಉದ್ಘಾಟನೆ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಹಲವು ವಿರೋಧ ವ್ಯಕ್ತಪಡಿಸಿದ್ದಾರೆ. ಕನ್ನಡದ ನಟರಾದ ಕಿಶೋರ್, ಆ ದಿನಗಳು ಖ್ಯಾತಿಯ ಚೇತನ್ ನಿನ್ನೆ(ಜನವರಿ 22) ವಿರೋಧವನ್ನು ವ್ಯಕ್ತಪಡಿಸಿದ್ದರು. ಈಗ ನಟಿ ಶ್ರುತಿ ಹರಿಹರನ್ ಕೂಡ ಭಾರತೀಯ ಸಂವಿಧಾನದ ಪ್ರತಿಯನ್ನು ಪೋಸ್ಟ್ ಮಾಡಿ, ಇನ್ನೊಂದು ಧರ್ಮದ ಪ್ರವಿತ್ರ ಸ್ಥಳದಲ್ಲಿ ದೇವಸ್ಥಾನ ಕಟ್ಟಿರೋದ ಅಸಮಧಾನ ಹೆಚ್ಚಿಸಿದೆ ಎಂದಿದ್ದಾರೆ.

ನೇರ ನುಡಿಯ ನಟಿ ಶ್ರುತಿ ಹರಿಹರನ್ ಆಗಾಗ ಧರ್ಮ, ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಅಸಮಧಾನವನ್ನು ಹೊರಹಾಕುತ್ತಲೇ ಇದ್ದಾರೆ. ಆಗಾಗ ಪ್ರಮುಖ ವೇದಿಕೆಗಳಲ್ಲಿ ಸಾಮಾಜಿಕ ನ್ಯಾಯ, ಮಹಿಳೆಯ ಮೇಲಿನ ಧೋರಣೆ ಬಗ್ಗೆ ಮಾತಾಡುತ್ತಲೇ ಇರುತ್ತಾರೆ. ಈಗ ಸಂವಿಧಾನದ ಪ್ರತಿಯನ್ನು ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು, ಶ್ರೀರಾಮ ಮಂದಿರ ಉದ್ಘಾಟನೆ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ. ಹಾಗಿದ್ದರೆ ಶ್ರುತಿ ಹರಿಹರನ್ ಪೋಸ್ಟ್‌ನಲ್ಲಿ ಏನಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ..
ಧರ್ಮದ ವಿಚಾರದಲ್ಲಿ ತಟಸ್ಥವಾಗಿರಬೇಕು
"ನಾನು ಏನನ್ನು ನಂಬುತ್ತೇನೋ ಅದರ ಹಿಂದೆ ಹೋಗುವುದು ಇದೀಗ ಉತ್ತಮ ಪ್ರವೃತ್ತಿಯಾಗಿಟ್ಟಿದೆ. ಇಂತಹ ಸಮಯದಲ್ಲಿ ಸಂವಿಧಾನವನ್ನು ನೆನಪಿಟ್ಟುಕೊಳ್ಳುವುದು ಏಕೆ ಮುಖ್ಯ? ಧರ್ಮದ ವಿಷಯದಲ್ಲಿ ದೇಶವು ತಟಸ್ಥವಾಗಿರಬೇಕೆಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಇದು ಯಾವುದೇ ಧರ್ಮದ ವಿರುದ್ಧ ತಾರತಮ್ಯ ಅಥವಾ ಪೋಷಣೆ ಮಾಡುವಂತಿಲ್ಲ. ನಾನಿಲ್ಲಿ ರಾಜಕೀಕರಣ ಆಗುತ್ತಿರುವುದನ್ನು ಗಮನಿಸುತ್ತಿದ್ದೇನೆ. ಇದನ್ನೆಲ್ಲ ನೋಡಿ ಆರಾಮಾಗಿ ಕೂತು ಗಮನಿಸಲು ಸಾಧ್ಯವಿಲ್ಲ." ಎಂದು ಶ್ರುತಿ ಹರಿಹರನ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಜೈ ಶ್ರೀರಾಮ್ ಹೇಳುವುದರಲ್ಲಿ ತಪ್ಪಿಲ್ಲ
ಇದೇ ಪೋಸ್ಟ್‌ನಲ್ಲಿ ಶ್ರೀರಾಮನ ಬಗ್ಗೆನೂ ಶ್ರುತಿ ಹರಿಹರನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. "ಹೀಗೆ ಹೇಳುವುದರಲ್ಲಿ ಸಮಸ್ಯೆಯಿಲ್ಲ. ರಾಮನಲ್ಲಿರುವ ಸ್ವಭಾವಗಳಿಂದ ಯಾರು ಪ್ರೇರಿತರಾಗುವುದಿಲ್ಲ? ಹನುಮಂತ ತನ್ನ ಎದೆಯನ್ನು ಬಗೆದು ರಾಮನನ್ನು ತೋರಿಸುವುದು ನನಗೆ ಕಾಕತಾಳೀಯ ಅಂತ ಅನಿಸುವುದಿಲ್ಲ. ಬಹುಶ: ರಾಮ ನಮ್ಮೊಳಗೆ ಇದ್ದಾನೆ ಅಂತ ಹೇಳುವುದಕ್ಕಂತಲೇ ಉದ್ದೇಶಪೂರ್ವಕವಾಗಿ ಇದನ್ನು ಹೇಳಲಾಗಿದೆಯೇ?" ಎಂದಿದ್ದಾರೆ.
ರಾಜಕೀಯ ಭರವಸೆ ಈಡೇರಿದೆ
ಇನ್ನೊಂದು ಧರ್ಮದ ಪವಿತ್ರ ಸ್ಥಳದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟಿದ್ದಾರೆಂದು ಬೇಸರ ಹೊರ ಹಾಕಿದ್ದಾರೆ. "ಇನ್ನೊಂದು ಧರ್ಮದ ಪವಿತ್ರ ಸ್ಥಳದಲ್ಲಿ ದೇವಸ್ಥಾನ ಕಟ್ಟುವ ರಾಜಕೀಯ ಭರವಸೆ ನೀಡಿ, ಅದನ್ನೀಗ ಈಡೇರಿಸಿರುವುದು. ಅಲ್ಲದೆ ಅದನ್ನು ಸಂಭ್ರಮಿಸುತ್ತಿರುವ ರೀತಿ ಅಸಮಧಾನಕ್ಕೆ ಕಾರಣವಾಗಿದೆ." ಎಂದು ಶ್ರುತಿ ಹರಿಹರನ್ ಹೇಳಿದ್ದಾರೆ.
ನೆಟ್ಟಿಗರ ಅಸಮಧಾನ
ಶ್ರುತಿ ಹರಿಹರನ್ ಪೋಸ್ಟ್‌ಗೆ ಕೆಲವರು ಅಸಮಧಾನ ಹೊರ ಹಾಕಿದ್ದಾರೆ. ಇದೇ ವೇಳೆ ಭಾರತೀಯ ಸಂವಿಧಾನ ಪ್ರತಿಯನ್ನು ಹಂಚಿಕೊಂಡಿದ್ದರ ಬಗ್ಗೆನೂ ಚರ್ಚೆ ಮಾಡುತ್ತಿದ್ದಾರೆ. ಮತ್ತೆ ಕೆಲವರು ಶ್ರುತಿ ಹರಿಹರನ್ ಪೋಸ್ಟ್‌ಗೆ ಬೆಂಬಲವನ್ನೂ ಸೂಚಿಸುತ್ತಿದ್ದಾರೆ. ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಬೆನ್ನಲ್ಲೇ ಕಿಶೋರ್, ಚೇತನ್ ಬಳಿಕ ಶ್ರುತಿ ಹರಿಹರನ್ ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ.


Click it and Unblock the Notifications











