Prakash Raj: ಕರವೇ ಸದಸ್ಯರಿಂದ ಸಿದ್ಧಾರ್ಥ್ ಪ್ರತಿಕಾ ಗೋಷ್ಠಿಗೆ ಅಡ್ಡಿ.. ಕನ್ನಡಿಗರ ಪರ ಪ್ರಕಾಶ್ ರಾಜ್ ಕ್ಷಮೆ
ಕಾವೇರಿ ಹೋರಾಟ ತೀವ್ರಗೊಂಡಿದೆ. ತಮಿಳುನಾಡಿಗೆ ನೀರು ಬಿಡುತ್ತಿರುವ ವಿಷಯಕ್ಕೆ ಕನ್ನಡ ಪರ ಸಂಘಟನೆಗಳು ಆಕ್ರೋಶಗೊಂಡಿವೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ನಾಳೆ (ಸೆಪ್ಟೆಂಬರ್ 29) ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ರಾಜ್ಯದಲ್ಲಿ ಕಾವೇರಿ ವಿಚಾರದಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ.
ಇದೇ ಸಂದರ್ಭದಲ್ಲಿ ತಮಿಳು ನಟ ಸಿದ್ಧಾರ್ಥ್ ಇಂದು (ಸೆಪ್ಟೆಂಬರ್ 28) ಬಿಡುಗಡೆಯಾಗಿರುವ 'ಚಿತ್ತ' ಸಿನಿಮಾದ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದರು. ಇಲ್ಲಿನ ಎಸ್‌ಆರ್‌ವಿ ಚಿತ್ರಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಸೇನೆ ಸಂಘಟನೆ ಸದಸ್ಯರು ನುಗ್ಗಿ ಪತ್ರಿಕಾ ಗೋಷ್ಠಿಯನ್ನು ಸ್ಥಗಿತಗೊಳಿಸಿದ್ದರು.

ಈ ಘಟನೆ ನಡೆದ ಕೆಲವು ಗಂಟೆಗಳಲ್ಲಿಯೇ ಬಹುಭಾಷಾ ನಟ ಪ್ರಕಾಶ್ ರಾಜ್ ಟ್ವೀಟ್ ಮಾಡಿ ತಮಿಳು ನಟ ಸಿದ್ದಾರ್ಥ್‌ಗೆ ಕ್ಷಮೆ ಯಾಚಿಸಿದ್ದಾರೆ. ಕನ್ನಡ ಪರ ಸಂಘಟನೆಗಳು ಪತ್ರಿಕಾಗೋಷ್ಠಿಯನ್ನು ತಡೆದಿದ್ದು ತಪ್ಪು ಎಂದು ಪ್ರಕಾಶ್ ರಾಜ್ ಟ್ವೀಟ್‌ನಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
" ದಶಕಗಳಷ್ಟು ಹಳೆಯ ಸಮಸ್ಯೆಯನ್ನು ಪರಿಹರಿಸಲಾರದ ರಾಜಕೀಯ ಪಕ್ಷಗಳನ್ನು ಹಾಗೂ ಅದರ ಮುಖಂಡರನ್ನು ಪ್ರಶ್ಮಿಸುವ ಬದಲು.. ಕೇಂದ್ರ ಮಧ್ಯಸ್ಥಿಕೆ ವಹಿಸಬೇಕು ಅಂತ ಒತ್ತಡ ಹೇರಲಾರದಂತಹ ಅಸಮರ್ಥ ಸಂಸದರನ್ನು ಪ್ರಶ್ನೆ ಮಾಡುವ ಬದಲು.. ಸಾಮಾನ್ಯ ಜನರು ಹಾಗೂ ಕಲಾವಿದರಿಗೆ ತೊಂದರೆ ಕೊಡುವುದನ್ನು ಒಬ್ಬ ಕನ್ನಡಿಗನಾಗಿ, ಕನ್ನಡಿಗರ ಪರವಾಗಿ ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ." ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸಿದ್ಧಾರ್ಥ್ ಪತ್ರಿಕಾಗೋಷ್ಠಿಯ ವೇಳೆ ನಡೆದ ಘಟನೆಯ ವಿಡಿಯೋವನ್ನು ನೆಟ್ಟಿಗರೊಬ್ಬರು ಶೇರ್ ಮಾಡಿದ್ದರು. ಅದನ್ನು ಪ್ರಕಾಶ್ ರಾಜ್ ರೀ ಟ್ವೀಟ್ ಮಾಡಿ ತಮಿಳು ನಟ ಸಿದ್ಧಾರ್ಥ್‌ಗೆ ಕನ್ನಡಿಗರ ಪರವಾಗಿ ಕ್ಷಮೆಯನ್ನು ಕೋರಿದ್ದಾರೆ.
ಸಿದ್ಧಾರ್ಥ್ ತಮ್ಮ ಸಿನಿಮಾ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ನೀಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಕನ್ನಡ ಸಂಘಟನೆ ಕಾರ್ಯಕರ್ತರು ಇಂತಹ ಸಂದರ್ಭದಲ್ಲಿ ತಮಿಳು ಸಿನಿಮಾ ಪ್ರಚಾರ ಮಾಡುವುದು ಸರಿಯಲ್ಲ. ಪತ್ರಿಕಾಗೋಷ್ಠಿಯನ್ನು ನಿಲ್ಲಿಸಿ. ಬೇರೆ ಸಮಯದಲ್ಲಿ ಸಿನಿಮಾ ಪ್ರಚಾರವನ್ನು ಮಾಡಿಕೊಳ್ಳಿ ಎಂದು ಮನವಿ ಮಾಡುವುದರ ಜೊತೆ ಆಕ್ರೋಶವನ್ನು ಹೊರಹಾಕಿದ್ದರು.
ಈ ವೇಳೆ ತಮಿಳು ನಟ ಸಿದ್ಧಾರ್ಥ್ ಕನ್ನಡದಲ್ಲಿಯೇ ಸಿನಿಮಾದ ಕುರಿತು ಮಾತನಾಡಲು ಪ್ರಯತ್ನ ಪಟ್ಟರಾದರೂ ಕನ್ನಡ ಸಂಘಟನೆಯ ಸದಸ್ಯರು ಆ ಮಾತುಗಳನ್ನು ಕೇಳುವ ಪ್ರಯತ್ನ ಮಾಡಲಿಲ್ಲ. ತಮಿಳು ಸಿನಿಮಾ ಪ್ರಚಾರ ಮಾಡಬಾರದು ಎಂಬ ಪಟ್ಟು ಹಿಡಿದಿದ್ದರು. ಹೀಗಾಗಿ ಅಲ್ಲಿಂದ ಸಿದ್ಧಾರ್ಥ್ ಪತ್ರಿಕಾಗೋಷ್ಠಿಯನ್ನು ಸ್ಥಗಿತಗೊಳಿಸಿ ತೆರಳಿದ್ದರು.


Click it and Unblock the Notifications











