SIIMA 2024: ಸೈಮಾ ನಾಮಿನೇಷನ್ ರೇಸ್‌ನಲ್ಲಿ ಪೈಪೋಟಿಗೆ ಬಿದ್ದ 'ಕಾಟೇರ', 'ಸಪ್ತ ಸಾಗರದಾಚೆ ಎಲ್ಲೋ ಸೈಡ್-ಎ'
ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಅವಾರ್ಡ್ ಅಂದ್ರೆ, ಸೈಮಾ ಪ್ರಶಸ್ತಿ ಸಮಾರಂಭ ಮತ್ತೆ ಶುರುವಾಗುತ್ತಿದೆ. 2024ನೇ ಸಾಲಿನ ದಕ್ಷಿಣ ಭಾರತದ ಈ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭವನ್ನು ಅದ್ಧೂರಿಯಾಗಿ ನಡೆಸಲು ಆಯೋಜಕರು ತೀರ್ಮಾನಿಸಿದ್ದಾರೆ. ಸೈಮಾ ಪ್ರಶಸ್ತಿಯನ್ನು ದಕ್ಷಿಣ ಭಾರತದಲ್ಲಿ ನಿರ್ಮಾಣ ಆದ ಸಿನಿಮಾಗಳಿಗೆ ಮಾತ್ರ ನೀಡಲಾಗುತ್ತಿದೆ.
2024ರಲ್ಲಿ ದಕ್ಷಿಣ ಭಾರತದ ನಾಲ್ಕು ಪ್ರಮುಖ ಭಾಷೆಗಳಾದ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ತೆರೆಕಂಡ ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕಳೆದ ವರ್ಷ ಕನ್ನಡದಲ್ಲಿ ಹೇಳಿಕೊಳ್ಳುವಂತಹ ಸಿನಿಮಾ ಬಾರದೇ ಇದ್ದರೂ, ಎರಡು ಸಿನಿಮಾಗಳು ನಾಮಿನೇಷನ್ ಪ್ರಕ್ರಿಯೆಯಲ್ಲಿ ಸಿಕ್ಕಾಪಟ್ಟೆ ಪೈಪೋಟಿಗೆ ಬಿದ್ದಿವೆ. ಅದು 'ಕಾಟೇರ' ಹಾಗೂ 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ'.

ಇನ್ನು ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಅತೀ ಹೆಚ್ಚು ವಿಭಾಗಗಳಲ್ಲಿ ಪೈಪೋಟಿಗೆ ನೀಡುತ್ತಿರುವ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆ ಪಟ್ಟಿಗಳ ಲಿಸ್ಟ್ ಇಲ್ಲಿದೆ. ಸೈಮಾದ ಅಧ್ಯಕ್ಷರಾದ ಬೃಂದಾ ಪ್ರಸಾದ್ ಅಡುಸುಮಿಲ್ಲಿ 2024ನೇ ಸಾಲಿನ ಸಿನಿಮಾಗಳ ನಾಮನಿರ್ದೇಶನದ ಪಟ್ಟಿಯನ್ನು ಘೋಷಿಸಿದ್ದಾರೆ.
"ಕಳೆದ ಎರಡು ವರ್ಷಗಳಲ್ಲಿ ದಕ್ಷಿಣ ಭಾರತದ ಸಿನಿಮಾದ ಪ್ರಾದೇಶಿಕ ಸಿನಿಮಾಗಳು ಭಾಷೆಯನ್ನು ಮೀರಿ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಹೀಗಾಗಿ SIIMA 2024 ಪ್ರಬಲ ಸ್ಪರ್ಧಿಗಳ ಪಟ್ಟಿಯನ್ನು ಹೊಂದಿರುತ್ತದೆ" ಎಂದು ಸೈಮಾದ ಅಧ್ಯಕ್ಷರಾದ ಬೃಂದಾ ಪ್ರಸಾದ್ ಅಡುಸುಮಿಲ್ಲಿ ತಿಳಿಸಿದ್ದಾರೆ.
ಸ್ಯಾಂಡಲ್‌ವುಡ್‌ನಿಂದ ದರ್ಶನ್ ನಟಿಸಿದ 'ಕಾಟೇರ' ಹಾಗೂ 'ಸಪ್ತಸಾಗರದಾಚೆ ಎಲ್ಲೋ ಸೈಡ್-ಎ' ಸಿನಿಮಾಗಳು ಸೈಮಾ ಪ್ರಶಸ್ತಿಯ ನಾಮನಿರ್ದೇಶನಗೊಂಡ ಪಟ್ಟಿಯಲ್ಲಿವೆ. ತರುಣ್ ಸುಧೀರ್ ನಿರ್ದೇಶಿಸಿದ್ದ 'ಕಾಟೇರ' ಸಿನಿಮಾ ಸುಮಾರು 8 ವಿಭಾಗಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಇದರೊಂದಿಗೆ ರಕ್ಷಿತ್ ಶೆಟ್ಟಿ ನಟಿಸಿ, ಹೇಮಂತ್ ರಾವ್ ನಿರ್ದೇಶಿಸಿದ 'ಸಪ್ತಸಾಗರದಾಚೆ ಎಲ್ಲೋ ಸೈಡ್-ಎ' ಸಿನಿಮಾ ಸುಮಾರು 7 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.
ಹಾಗೆಯೇ ತೆಲುಗಿನಲ್ಲಿ ನಾನಿ ಮತ್ತು ಕೀರ್ತಿ ಸುರೇಶ್ ನಟಿಸಿ, ಶ್ರೀಕಾಂತ್ ಒಡೆಲಾ ನಿರ್ದೇಶಿಸಿದ್ದ 'ದಸರಾ' ಸಿನಿಮಾ 11 ಕ್ಯಾಟಗರಿಯಲ್ಲಿ ನಾಮಿನೇಟ್ ಆಗಿದೆ. ಇದರೊಂದಿಗೆ ನಾನಿ ಮತ್ತು ಮೃಣಾಲ್ ಠಾಕೂರ್ ನಟಿಸಿರೋ 'ಹಾಯ್ ನಾನ್ನ' ಸಿನಿಮಾ ಸುಮಾರು 10 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ.

ತಮಿಳಿನಲ್ಲಿ ರಜನಿಕಾಂತ್ ನಟಿಸಿ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಿದ 'ಜೈಲರ್' ಸಿನಿಮಾ 11 ವಿಭಾಗದಲ್ಲಿ ನಾಮಿನೇಟ್ ಆಗಿದೆ. ಇದರ ಜೊತೆಗೆ ಉದಯನಿಧಿ ಸ್ಟಾಲಿನ್ ಮತ್ತು ಕೀರ್ತಿ ಸುರೇಶ್ ನಟಿಸಿದ 'ಮಾಮಣ್ಣನ್' ಸಿನಿಮಾ 9 ಕ್ಯಾಟಗರಿಯಲ್ಲಿ ನಾಮನಿರ್ದೇಶನಗೊಂಡಿದೆ.
ಹಾಗೇ ಮಲಯಾಳಂನಲ್ಲೂ ಟೋವಿನೋ ಥಾಮಸ್ ಮತ್ತು ಆಸಿಫ್ ಅಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ '2018' ಸಿನಿಮಾ 8 ಕ್ಯಾಟಗರಿಯಲ್ಲಿ ನಾಮಿನೇಟ್ ಆಗಿದೆ. ಈ ಸಿನಿಮಾವನ್ನು ಜೂಡ್ ಆಂಥನಿ ಜೋಸೆಫ್ ನಿರ್ದೇಶನ ಮಾಡಿದ್ದಾರೆ. 2018ಗೆ ಪೈಪೋಟಿ ನೀಡಲು ಮಮ್ಮುಟ್ಟಿ ಮತ್ತು ಜ್ಯೋತಿಕಾ ಅಭಿನಯದ 'ಕಾತಲ್ - ದಿ ಕೋರ್' 7 ಕ್ಯಾಟಗರಿಯಲ್ಲಿ ಆಯ್ಕೆಯಾಗಿದೆ.
ಇನ್ನು ನಾಲ್ಕು ಭಾಷೆಗಳಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿರುವ ಸಿನಿಮಾಗಳನ್ನು ಆನ್‌ಲೈನ್ ವೋಟಿಂಗ್ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಸಿನಿಮಾಪ್ರಿಯರು ತಮ್ಮ ನೆಚ್ಚಿನ ತಾರೆಯರು ಮತ್ತು ಸಿನಿಮಾಗಳಿಗೆ www.siima.in ಹಾಗೂ SIIMAದ ಫೇಸ್‌ಬುಕ್ ಪೇಜ್‌ನಲ್ಲಿ ವೋಟ್ ಮಾಡಿ ಆಯ್ಕೆ ಮಾಡಬಹುದು. ಈ ಪ್ರಶಸ್ತಿ ಸಮಾರಂಭ ದುಬೈನಲ್ಲಿ ಇದೇ ವರ್ಷ ಸೆಪ್ಟಂಬರ್ 14 ಮತ್ತು 15ರಂದು ನಡೆಯಲಿದೆ.


Click it and Unblock the Notifications











