ಗ್ರಾಫಿಕ್ಸ್ ತಂಡಕ್ಕೆ ಬಾಕಿ ಹಣ ಕೊಟ್ಟಿಲ್ವಾ '45' ನಿರ್ಮಾಣ ಸಂಸ್ಥೆ? ಸೋಶಿಯಲ್ ಮೀಡಿಯಾ ಪೋಸ್ಟ್ ಕಥೆಯೇನು?
ಕನ್ನಡದಲ್ಲಿ ಮಲ್ಟಿಸ್ಟಾರರ್ ಸಿನಿಮಾ ಬರುವುದೇ ಕಡಿಮೆ. ಸ್ಯಾಂಡಲ್‌ವುಡ್‌ನ ಸೂಪರ್‌ಸ್ಟಾರ್‌ಗಳು ಸಿಂಗಲ್ ಆಗಿ ಕಾಣಿಸಿಕೊಳ್ಳುವುದಕ್ಕೆ ಇಷ್ಟ ಪಡುತ್ತಾರೆ. ಆಗೊಮ್ಮೆ-ಈಗೊಮ್ಮೆ ಮಲ್ಟಿಸ್ಟಾರರ್ ಸಿನಿಮಾಗಳು ನಿರ್ಮಾಣ ಆಗುತ್ತವೆ. ಅಂತಹದರಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ ನಿರ್ಮಿಸಿದ '45' ಸಿನಿಮಾ ಕೂಡ ಒಂದು. ಈ ಸಿನಿಮಾದ ಇನ್ನೊಂದು ವಿಶೇಷ ಅಂದರೆ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದರು.
'45' ಕನ್ನಡ ಚಿತ್ರರಂಗದ ಮಟ್ಟಿಗೆ ಒಂದು ವಿಶಿಷ್ಠ ಪ್ರಯತ್ನ ಆಗಿತ್ತು. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಮೂವರನ್ನೂ ಒಂದೇ ಸಿನಿಮಾದಲ್ಲಿ ನೋಡುವುದಕ್ಕೆ ಪ್ರೇಕ್ಷಕರು ಕೂಡ ಅಷ್ಟೇ ಕುತೂಹಲ ವ್ಯಕ್ತಪಡಿಸಿದ್ದರು. ಆದರೆ, ಸಿನಿಮಾ ಅಂದುಕೊಂಡಷ್ಟು ಯಶಸ್ಸು ಕಾಣಲಿಲ್ಲ. ಬಾಕ್ಸಾಫೀಸ್‌ನಲ್ಲಿ ಸೋಲುಂಡಿತ್ತು.

ಈ ಬೆನ್ನಲ್ಲೇ ನಿರ್ಮಾಪಕ ರಮೇಶ್ ರೆಡ್ಡಿ ಕೂಡ ತಮ್ಮ ಸಿನಿಮಾಗೆ ಅನ್ಯಾಯ ಆಗಿದ್ದು, ಸಿನಿಮಾದಿಂದ ನಷ್ಟ ಆಗಿದೆ ಎಂದು ಒಪ್ಪಿಕೊಂಡಿದ್ದರು. ಇನ್ನೇನು ಜನರು ಕೂಡ '45' ಸಿನಿಮಾವನ್ನು ಮರೆತಿದ್ದರು. ಈಗ ಇದ್ದಕ್ಕಿದ್ದ ಹಾಗೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ಹರಿದಾಡುತ್ತಿದೆ. ಈ ಸಿನಿಮಾಗೆ ಕೆಲಸ ಮಾಡಿದ್ದ ವಿಎಫ್‌ಎಕ್ಸ್ ತಂಡಕ್ಕೆ '45' ತಂಡ ಹಣ ನೀಡಿಲ್ಲ ಎಂದು ಹೇಳಲಾಗಿದೆ. ಅಸಲಿಗೆ ಆ ಪೋಸ್ಟ್‌ನಲ್ಲಿ ಏನಿದೆ? ತಿಳಿಯುವುದಕ್ಕೆ ಮುಂದೆ ಓದಿ.
'45' ಸಿನಿಮಾ ಅರ್ಜುನ್ ಜನ್ಯ ಅವರ ಮಹತ್ವಾಕಾಂಕ್ಷೆಯ ಸಿನಿಮಾ ಆಗಿತ್ತು. ಈ ಸಿನಿಮಾದಲ್ಲಿ ಕೇವಲ ಸೂಪರ್‌ಸ್ಟಾರ್‌ಗಳು ಅಷ್ಟೇ ಇರಲಿಲ್ಲ. ವಿಎಫ್‌ಎಕ್ಸ್‌ಗೂ ಹೆಚ್ಚು ಪ್ರಾಮುಖ್ಯತೆ ನೀಡಲಾಗಿತ್ತು. ಈ ಕಾರಣಕ್ಕಾಗಿಯೇ ಸಿನಿಮಾ ರಿಲೀಸ್ ಡೇಟ್ ಕೂಡ ಹಲವು ಬಾರಿ ಮುಂದೂಡಲ್ಪಟ್ಟಿತ್ತು. ಸಿನಿಮಾ ಬಿಡುಗಡೆಗೂ ಮುನ್ನ '45' ತಂಡ ಕೂಡ ವಿಎಫ್‌ಎಕ್ಸ್ ಬಗ್ಗೆ ಮಾತಾಡಿತ್ತು.
ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ 'ಅಸೂ ವಿಎಫ್‌ಎಕ್ಸ್' (AsooVFX) ತಂಡ '45' ತಂಡ ವಿರುದ್ಧ ಆರೋಪ ಮಾಡಿರುವ ಪೋಸ್ಟ್ ಒಂದು ಓಡಾಡುತ್ತಿದೆ. ಸಿನಿಮಾಗೆ ವಿಎಫ್‌ಎಕ್ಸ್ ಮಾಡಿಸಿಕೊಂಡು ಕೊಡಬೇಕಾದ ಹಣವನ್ನು ಕೊಟ್ಟಿಲ್ಲ ಎಂದು ಆರೋಪ ಮಾಡಿದೆ. ಅಸಲಿಗೆ ಈ ಪೋಸ್ಟ್‌ನಲ್ಲಿ ಜನವರಿ 15, 2026 ಅಂತ ಡೇಟ್ ಇದೆ. ಹೀಗಾಗಿ ಹಳೆಯ ಪೋಸ್ಟ್ ಈಗ ಮತ್ತೆ ಹರಿದಾಡುತ್ತಿದೆಯಾ? ಇಲ್ಲ ಇದು 'ಅಸೂ ವಿಎಫ್‌ಎಕ್ಸ್' (AsooVFX) ಕಂಪನಿ ಮಾಡಿದ ಹೊಸ ಆರೋಪವೋ ಅನ್ನೋದು ಸ್ಪಷ್ಟತೆ ಸಿಕ್ಕಿಲ್ಲ.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಪೋಸ್ಟ್‌ನಲ್ಲಿ ಏನಿದೆ ಎಂದು ನೋಡುವುದಾರೇ, "45 ಸಿನಿಮಾದಲ್ಲಿ ಬರುವ ಕೆಲವು ದೃಶ್ಯಗಳನ್ನು ಮಾರ್ಸ್ ವಿಎಫ್‌ಎಕ್ಸ್ (Marzvfx) ತಂಡದ ಸಹಯೋಗದೊಂದಿಗೆ 'ಅಸೂ ವಿಎಫ್‌ಎಕ್ಸ್' (AsooVFX) ತಂಡ ಸೃಷ್ಟಿಸಿತ್ತು. ಸಿನಿಮಾದ ದೃಶ್ಯಗಳನ್ನು ನೀಡುವಾಗ ನಿರ್ಮಾಣ ಸಂಸ್ಥೆ ಸೂರಜ್ ಪ್ರೊಡಕ್ಷನ್ಸ್ ಜೊತೆ ನೇರ ಸಂಪರ್ಕ ಮಾಡಿ, ನಿರ್ದೇಶಕರ ಅನುಮತಿ ಪಡೆದು ಅವರಿಗೆ ನೀಡಲಾಗಿತ್ತು. ಫೈನಲ್ ಔಟ್fಪುಲ್‌ಗೆ ಅನುಮತಿ ಸಿಕ್ಕಿದ ಬಳಿಕವೇ ನಿರ್ಮಾನ ಸಂಸ್ಥೆಗೆ ನೀಡಲಾಗಿತ್ತು. ಆದರೆ, ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತಿದ್ದರಿಂದ ವಿಎಫ್‌ಎಕ್ಸ್ ಕ್ವಾಲಿಟಿ ಬಗ್ಗೆ ಪ್ರಶ್ನೆಗಳನ್ನು ಮಾಡಲಾಯ್ತು. ನಮಗೆ ನೀಡಬೇಕಿದ್ದ ಹಣವನ್ನು ನೀಡಲು ಹಿಂದೇಟು ಹಾಕಲಾಯ್ತು" ಎಂದು ಆ ಪೋಸ್ಟ್‌ನಲ್ಲಿ ಇದೆ.
ಹಾಗೇ " ಈ ಮೂಲಕ ತಿಳಿಸುವುದೇನೆಂದರೆ, ನಮ್ಮ ಫೀಸ್ ಅನ್ನು ಸೆಟಲ್ ಮಾಡುವವರೆಗೂ ನಾವು ಮಾಡಿದ ಕೆಲಸದ ಪ್ರತಿಯೊಂದು ದೃಶ್ಯವೂ ಅಸೂವಿಎಫ್‌ಎಕ್ಸ್ ಅವರದ್ದೇ ಆಗಿರುತ್ತೆ. ಈ ಸಂಸ್ಥೆ ಬಳಸುವುದಕ್ಕೆ, ಸ್ಕ್ರೀನಿಂಗ್ ಮಾಡುವುದಕ್ಕೆ ಯಾವುದೇ ಅಧಿಕಾರವಿರುವುದಿಲ್ಲ. ನಾವು ಮಾಡಿದ ಕೆಲಸಕ್ಕೆ ಹಣವನ್ನು ನೀಡದೇ ಇರುವುದರಿಂದ ಈ ಪ್ರಕರಣವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ" ಎಂದು ಹೇಳಲಾಗಿದೆ.
ಅಸಲಿಗೆ ಈ ಪೋಸ್ಟ್ ಯಾವಾಗಿಂದು ಅನ್ನೋದರ ಬಗ್ಗೆ ಮಾಹಿತಿ ಇಲ್ಲ. ಆದರೆ, ಚಿತ್ರರಂಗದ ಮೂಲದ ಪ್ರಕಾರ ಈ ವಿಎಫ್‌ಎಕ್ಸ್ ಸಂಸ್ಥೆ ಜನವರಿ 15ರಂದೇ ಅರ್ಜುನ್ ಜನ್ಯಗೆ ನೋಟಿಸ್ ಕೊಟ್ಟಿದ್ದರು. ನಿರ್ಮಾಪಕರು ಹಣವನ್ನು ಅರ್ಜುನ್ ಜನ್ಯಗೆ ಮೊದಲೇ ಕೊಟ್ಟಿದ್ದರು. ಆದರೆ, ಇನ್ನೂ ಹಣ ಸಂದಾಯ ಆಗಿಲ್ಲದೆ ಇರಬಹುದು. ಈ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಈ ಪಸ್ಟ್ ಹಾಕಿರಬಹುದೆಂದು ಅಂದಾಜಿಸಿದ್ದಾರೆ. ಸದ್ಯ ಈ ಬಗ್ಗೆ ನಿರ್ಮಾಣ ಸಂಸ್ಥೆಯಾಗಲಿ, ನಿರ್ಮಾಪಕ ರಮೇಶ ರೆಡ್ಡಿಯಾಗಲಿ, ಅರ್ಜುನ್ ಜನ್ಯ ಆಗಲಿ ಅಧಿಕೃತ ಮಾಹಿತಿ ನೀಡಿಲ್ಲ.


Click it and Unblock the Notifications
