UI Troll Song: "ನಾವು ತಮಾಷೆಗೆ ಬೆಳ್ಳುಳ್ಳಿ ಕಬಾಬ್ ಅಂದಿದ್ದು"; ಉಪ್ಪಿಯ ಟ್ರೋಲ್ ಸಾಂಗ್‌ಗೆ ಚಂದ್ರು ಹೇಳಿದ್ದೇನು?
ಈ ಸೋಶಿಯಲ್ ಮೀಡಿಯಾ ಜಮಾನದಲ್ಲಿ ರಾತ್ರೋ ರಾತ್ರಿ ಜನರು ಫೇಮಸ್ ಆಗಿಬಿಡ್ತಾರೆ. ಇನ್‌ಸ್ಟಾಗ್ರಾಂ, ಯೂಟ್ಯೂಬ್, ಫೇಸ್‌ಬುಕ್‌ನಲ್ಲಿ ತಮ್ಮ ಟ್ಯಾಲೆಂಟ್ ತೋರಿಸಿ ಜನರ ಮನಸ್ಸು ಗೆದ್ದು ಬಿಡ್ತಾರೆ. ಸದ್ಯ ಕನ್ನಡದಲ್ಲಿ ಎಲ್ಲರ ಬಾಯಲ್ಲೂ ಕೇಳಿ ಬರುತ್ತಿರೋ ಎರಡು ಪದಗಳು ಅಂದ್ರೆ, ಒಂದು 'ಬೆಳ್ಳುಳ್ಳಿ ಕಬಾಬ್', ಇನ್ನೊಂದು 'ಕರಿಮಣಿ ಮಾಲೀಕ'. ಇವೆರಡೂ ಸದ್ಯ ಟ್ರೆಂಡಿಂಗ್‌ನಲ್ಲಿವೆ.
ಈ ಟ್ರೋಲ್ ಟ್ರೆಂಡ್ ಅನ್ನು ರಿಯಲ್‌ಸ್ಟಾರ್ ಉಪೇಂದ್ರ ತಮ್ಮ ಸಿನಿಮಾಗೂ ಬಳಸಿಕೊಂಡಿದ್ದಾರೆ. ನಿನ್ನೆ (ಮಾರ್ಚ್ 4) ರಿಲೀಸ್ ಆಗಿರೋ ಈ ಟ್ರೋಲ್ ಸಾಂಗ್ ಸದ್ಯ ಎಲ್ಲರ ಮನಸ್ಸು ಗೆದ್ದಿದೆ. ಈ ಹಾಡಿನಲ್ಲಿ ಈ ಹಿಂದೆ ಸಿಕ್ಕಾಪಟ್ಟೆ ವೈರಲ್ ಆಗಿದ್ದ ಟ್ರೋಲ್‌ಗಳನ್ನು ಬಳಸಿಕೊಳ್ಳಲಾಗಿದೆ. ಹಾಗೇ ಬೆಳ್ಳುಳ್ಳಿ ಕಬಾಬ್ ಬಗ್ಗೆನೂ ಉಲ್ಲೇಖವಿದೆ.

ಬೆಳ್ಳುಳ್ಳಿ ಕಬಾಬ್ ಮಾಡಿ ಚಂದ್ರು ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ. ಅಲ್ಲದೆ ಇವರಿಗೆ ಸಿನಿಮಾರಂಗ ಕೂಡ ಚೆನ್ನಾಗಿಯೇ ಪರಿಚಯವಿದೆ. ಹೀಗಾಗಿ ಉಪೇಂದ್ರ ನಿರ್ದೇಶಿಸಿ, ನಟಿಸಿರೋ 'ಯುಐ' ಟ್ರೋಲ್ ಸಾಂಗ್ ಬಗ್ಗೆ ಕನ್ನಡ ಪಿಕ್ಚರ್ ಯೂಟ್ಯೂಬ್ ಚಾನೆಲ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಿದ್ರೆ 'ಯುಐ' ಹಾಡಿನ ಬಗ್ಗೆ ಬೆಳ್ಳುಳ್ಳಿ ಕಬಾಬ್ ಚಂದ್ರು ಹೇಳಿದ್ದೇನು? ತಿಳಿಯೋಕೆ ಮುಂದೆ ಓದಿ.
ಬಹಳ ವರ್ಷಗಳ ಪರಿಚಯ
ಚಂದ್ರು ಹೋಟೆಲ್ ನಡೆಸುವುದಕ್ಕೂ ಮುನ್ನ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಹೀಗಾಗಿ ಸಿನಿಮಾರಂಗದ ನಂಟು ಕೂಡ ಇದೆ. ಹೀಗಾಗಿ ಉಪ್ಪಿ ಪರಿಚಯ ಅಂತ ಹೇಳಿದ್ದಾರೆ. "ನನಗೆ ಬಹಳ ವರ್ಷಗಳಿಂದ ಪರಿಚಯ. ನಾವು ಸಿನಿಮಾದವರಲ್ವಾ. ಅದಕ್ಕೆ ಉಪೇಂದ್ರ ಪರಿಚಯ. ಅವರು ಶ್ರಮ ಜೀವಿ, ತಲೆಯಿದೆ. ಅವರ ಗುರು ಯಾರು? ಕಾಶಿನಾಥ್. ಅವರ ವೃತ್ತಿ ಧರ್ಮಕ್ಕೆ ಬೆಲೆ ಕೊಟ್ಟಿದ್ದಾರೆ. ಏನೇ ಮಾಡಿದ್ರೂ ವಿಭಿನ್ನವಾಗಿ ಮಾಡುತ್ತಾರೆ. ಓಂ ಆಗಲಿ. ನಮ್ಮ ಜಗ್ಗೇಶ್ ಪಿಕ್ಚರ್ ತರ್ಲೆ ನನ್ ಮಗ ಆಗಲಿ. ಅವತ್ತಿನ ಟ್ರೆಂಡ್‌ಗೆ ಏನು ಬೇಕೋ ಅದನ್ನು ಇಟ್ಕೊಂಡು ಸಿನಿಮಾ ಮಾಡುತ್ತಾರೆ." ರಿಯಲ್ ಸ್ಟಾರ್ ಉಪ್ಪಿಯನ್ನು ಹೊಗಳಿದ್ದಾರೆ.
ಒಂದು ತಿಂಗಳ ಮೊದಲೇ ಗೊತ್ತಿತ್ತು
'ಯುಐ' ಸಿನಿಮಾದಲ್ಲಿ ಇಂತಹದ್ದೊಂದು ಹಾಡು ಇರುತ್ತೆ ಅನ್ನೋದು ಬೆಳ್ಳುಳ್ಳಿ ಕಬಾಬ್ ಚಂದ್ರುಗೆ ಮೊದಲೇ ಗೊತ್ತಿತ್ತು. ಸಿನಿಮಾ ನಿರ್ಮಾಪಕರಲ್ಲಿ ಒಬ್ಬರಾದ ಶ್ರೀಕಾಂತ್ ಮೊದಲೇ ಇವರಿಗೆ ಟ್ರೋಲ್ ಸಾಂಗ್ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದರಂತೆ. "ಶ್ರೀಕಾಂತ್ ಅವರು ನನಗೆ ಒಂದು ತಿಂಗಳ ಹಿಂದೆ ಕಳಿಸಿದ್ರು. ಹೀಗೆ ಮಾಡೋಣ ಅಂತ ಇದ್ದೀವಿ ಚಂದ್ರು ಅಂದಿದ್ರು. ನಾನು ಮಾಡಿ ಅಂತ ಹೇಳಿದ್ದೆ. ಏನೋ ಮಾಡಿದ್ವಿ. ನಿನ್ನೆಯಿಂದ ಇದೊಂದು ಶುರುವಾಗಿದೆ. ದಿನ ಏನೋ ಒಂದು ಆಗುತ್ತೆ. ನಿನ್ನೆ ಮೆಟ್ರೋದಲ್ಲಿ ಹುಡುಗರೆಲ್ಲ ಹಾಡು ಹೇಳಿದ್ದಾರೆ. ನಾವು ತಮಾಷೆಗೆ ಬೆಳ್ಳುಳ್ಳಿ ಕಬಾಬ್ ಅಂದಿದ್ದು, ಎಲ್ಲಿಗೆ ತೆಗೆದುಕೊಂಡು ಹೋಗಿದೆ. ಅದು ನನಸಾ ಕನಸಾ ಅಂತ ಅನಿಸುತ್ತೆ." ಎಂದಿದ್ದಾರೆ.

"ತಮಾಷೆಗೆ ಬೆಳ್ಳುಳ್ಳಿ ಕಬಾಬ್ ಮಾಡಿದ್ವಿ"
ಬೆಳ್ಳುಳ್ಳಿ ಕಬಾಬ್ ಅನ್ನು ಫೇಮಸ್ ಆಗಬೇಕು ಅಂತ ಮಾಡಿದ್ದಲ್ಲ. ತಮಾಷೆಗೆ ಅಂತ ಮಾಡಿದ್ದು. ಆದರೆ, ಅದು ಈ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾಗಿ ಕನ್ನಡ ಪಿಕ್ಚರ್ ಯೂಟ್ಯೂಬ್ ಚಾನೆಲ್‌ಗೆ ತಿಳಿಸಿದ್ದಾರೆ. "ನಾವು ಅಷ್ಟು ನಾಲೆಡ್ಜ್ ಇರೋ ಜನ ಅಲ್ಲ. ನಾವು ನಮ್ಮ ಪಾಡಿಗೆ ಇರೋ ಜನ. ಕಲರ್ ಟಾಕೀಸ್‌ನವರು ಬಂದಿದ್ರು. ಅವರು ನನ್ನನ್ನು ತೆಗೆದುಕೊಂಡು ಹೋಗಿ ಟಾಪ್ ಸ್ಥಾನಕ್ಕೆ ನಿಲ್ಲಿಸಿದ್ರು. ಒಳ್ಳೊಳ್ಳೆ ಅಡುಗೆ ಮಾಡಿದ್ದೆ. ಆಡು ಭಾಷೆಯಲ್ಲಿ ಮಾತಾಡಿದ್ದೆ. ರುಬ್ಬಿಕೊಡೋ ರಾಹುಲ್ಲಾ, ತಂದು ಕೊಡೊ ರಾಹುಲ್ಲಾ ಅಂತ ಹೇಳಿದ್ದೆ. ಈತ ಮಾತಾಡಿ ಏನೋ ಒಂದು ತಮಾಷೆಗೆ ಬೆಳ್ಳುಳ್ಳಿ ಕಬಾಬ್ ಮಾಡಿದ್ವಿ." ಎಂದಿದ್ದಾರೆ.
"32 ವರ್ಷದ ಶ್ರಮ"
ಇದರ ಜೊತೆ ದಿಢೀರನೇ ಚಂದ್ರು ಫೇಮಸ್ ಆಗಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "32 ವರ್ಷದ ಶ್ರಮಕ್ಕೆ ಬೆಳ್ಳುಳ್ಳಿಯಿಂದ ದೇವರು ಪ್ರತಿಫಲ ಕೊಟ್ರು. ನಾವಾಗಿ ಹುಡುಕಿಕೊಂಡು ಅಂತೂ ಹೋಗಿಲ್ಲ. ಹುಡುಕಿಕೊಂಡು ಹೋಗುವುದೂ ಇಲ್ಲ. ಅದೇ ಬಂತಾ? ನಮಗೆ ರೀಚ್ ಆಗುತ್ತಾ ತಗೋತಿವಿ ಅಷ್ಟೇ." ಎಂದು ಬೆಳ್ಳುಳ್ಳಿ ಕಬಾಬ್ ಚಂದ್ರು ಹೇಳಿದ್ದಾರೆ.


Click it and Unblock the Notifications











