'UI'ಮ್ಯೂಸಿಕ್ ಮೇಕಿಂಗ್ ಬಿಟ್ಟು ಮತ್ತೆ ತಲೆಗೆ ಹುಳ ಬಿಟ್ಟ ಬುದ್ಧಿವಂತ; "ಬುದ್ಧಿಯ ಬಿರುಗಾಳಿ" ಎಂದ ಉಪ್ಪಿ ಫ್ಯಾನ್ಸ್
ರಿಯಲ್‌ಸ್ಟಾರ್ ಉಪೇಂದ್ರ ಸಿನಿಮಾ ನಿರ್ದೇಶನ ಕೈ ಹಾಕಿದ್ರು ಅಂದ್ರೆ ಅಲ್ಲಿಂದಲೇ ಫ್ಯಾನ್ಸ್ ಅಲರ್ಟ್ ಆಗಿಬಿಡುತ್ತಾರೆ. ಮೊದಲೇ ದಿನದಿಂದಲೂ ಬಿಡುಗಡೆವರೆಗೂ ಅಭಿಮಾನಿಗಳು ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ. ಉಪ್ಪಿ 'UI' ಸಿನಿಮಾ ರಿಲೀಸ್‌ಗೆ ಸನಿಹವಾಗುತ್ತಿದ್ದಂತೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಉಪ್ಪಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ರೆ, ಸಿನಿಪ್ರಿಯರಿಗೆ ಏನೋ ಒಂಥರಾ ಸಂಕಟ. ಸಿನಿಮಾ ರಿಲೀಸ್ ಹತ್ತಿರ ಬಂದರೂ ಚಿಕ್ಕ ತುಣುಕುಗಳನ್ನು ಬಿಟ್ಟು ತಲೆಗೆ ಹುಳ ಬಿಡುತ್ತಾರೆ. ಟೀಸರ್, ಟ್ರೈಲರ್ ಅಂತ ಬಿಡುವುದು ತೀರಾ ವಿರಳ. ಇಂದು (ಆಗಸ್ಟ್ 23) 'UI' ಸಿನಿಮಾದ ಮ್ಯೂಸಿಕ್ ಮೇಕಿಂಗ್ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ. ಆಗಲೂ ತಲೆಗೆ ಹುಳ ಬಿಡುವ ಕೆಲಸವನ್ನೇ ಮಾಡಿದ್ದಾರೆ.

ಉಪ್ಪಿ ಫ್ಯಾನ್ಸ್ ಅಂತೂ 'UI' ಸಾಂಗ್ ಬಿಡಬಹುದೇನೋ ಅನ್ನೋ ನಿರೀಕ್ಷೆಯಿತ್ತು. ಆದರೆ, ಮ್ಯೂಸಿಕ್ ಮೇಕಿಂಗ್ ರಿಲೀಸ್ ಮಾಡಿದ್ದಾರೆ. ಆದರೆ, ಅದರ ಜೊತೆಗೆ ಸಿನಿಮಾ ಚಿಕ್ಕ ತುಣುಕುಗಳನ್ನೂ ರಿವೀಲ್ ಮಾಡಿದ್ದಾರೆ. ಅದು ಸಿನಿಪ್ರಿಯರು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಕೂಡ ಉಪೇಂದ್ರ ಜೊತೆ ಕಾಣಿಸಿಕೊಂಡಿದ್ದಾರೆ.
UI ಸಿನಿಮಾ ಮ್ಯೂಸಿಕ್ ಮೇಕಿಂಗ್ ಅನ್ನು ಹಂಗೇರಿಯಾದಲ್ಲಿ ಮಾಡಲಾಗಿದೆ. ಅಲ್ಲಿನ ಸಂಗೀತಗಾರರನ್ನು ಹಾಗೂ ವಾದ್ಯಗಳನ್ನು ಬಳಸಿಕೊಂಡು ಸಿನಿಮಾಗೆ ಬ್ಯಾಗ್ರೌಂಡ್ ಸ್ಕೋರ್ ಮಾಡಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ಲೈವ್ ಮ್ಯೂಸಿಕ್ ಅನ್ನು ಬಳಸಿರುವುದು ರಿಚ್ ಮೇಕಿಂಗ್‌ಗೆ ಸಾಕ್ಷಿಯಾಗಿದೆ. ಆದರೆ ಇಲ್ಲಿ ಇಂಟ್ರೆಸ್ಟಿಂಗ್ ಅಂತ ಅನಿಸಿದ್ದು ಸಿನಿಮಾ ಚಿಕ್ಕ ತುಣುಕುಗಳು.

ಉಪ್ಪಿ ಸಿನಿಮಾವನ್ನು ಪ್ರಚಾರ ಮಾಡುವ ಪರಿನೇ ಹೇಗೆ. ಸಿನಿಮಾ ಪ್ರೇಮಿಗಳಿಗೆ ತಮ್ಮ ಸಿನಿಮಾದ ತುಣುಕುಗಳನ್ನು ತೋರಿಸಿದಂತೆಯೂ ಇರಬೇಕು. ತೋರಿಸದಂತೆಯೂ ಇರಬೇಕು. ಸಿನಿಮಾದ ಬಗ್ಗೆ ಚಿಕ್ಕ ಸುಳಿವನ್ನು ಬಿಟ್ಟು ಕೊಡುವುದಿಲ್ಲ. ಎಲ್ಲವನ್ನೂ ಥಿಯೇಟರ್‌ಗೆ ಬಂದೇ ಸಿನಿಮಾ ನೋಡಬೇಕು ಅನ್ನೋದು ಉಪ್ಪಿಯ ತಂತ್ರ. ಆದರೆ, ಅವರ ಫ್ಯಾನ್ಸ್ ಮಾತ್ರ ಈ ಮ್ಯೂಸಿಕಲ್ ಮೇಕಿಂಗ್ ನೋಡಿ ಡಿಸೈನ್ ಡಿಸೈನ್ ಆಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ನೆಟ್ಟಿಗರೊಬ್ಬರು ಸೌಂಡ್ ಆಫ್ ಯುಐ ನೋಡಿ "ಅಣ್ಣ ನಿನ್ ಇಷ್ಟೆಲ್ಲಾ ಸಸ್ಪೆನ್ಸ್ ಕೊಟ್ರೆ ಹೇಗೆ ಅಣ್ಣ.. ಏನ್ ಆದ್ರೂ ಸ್ಪಷ್ಟವಾಗಿ ಕೊಡು ಮಾರಾಯ.. ನಮ್ಮನ್ನ ಯಾಕ್ ಹಿಂಗ್ ಕಾಡ್ತಾ ಇದ್ದೀಯ" ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೇ ಮತ್ತೊಬ್ಬರು "ಪ್ರಪಂಚಕ್ಕೆ 17ನೇ ನಿರ್ದೇಶಕ ಮಾಡುವ ಸಿನಿಮಾ ಎಂಥಾದ್ದು ಅನ್ನೋದು ಗೊತ್ತಾಗುತ್ತದೆ" ಎಂದಿದ್ದಾರೆ. ಇನ್ನೊಬ್ಬರು "ಬಾಸ್ ಬೇಗ ಕಾಯೋಕೆ ಆಗ್ತಿಲ್ಲ.. ಬೇಗ ಬಿಡಿ ಸಾಂಗ್" ಎಂದು ಬೇಡಿಕೆ ಇದ್ದಾರೆ. ಮತ್ತೊಬ್ಬರು "ಬೇರೆ ಪ್ರಪಂಚ ನೋಡ್ತಿವಿ ಅನ್ಸತ್ತೆ.. ಈ ಸಿನಿಮಾದಲ್ಲಿ ವಾಸ್ತವದ ಅರ್ಥ ಆಗಬಹುದು" ಎಂದು ಅವರೇ ಸಮಾಧಾನ ಮಾಡಿಕೊಂಡಿದ್ದಾರೆ. ಇನ್ನೊಬ್ಬರು "ಬುದ್ಧಿಯ ಬಿರುಗಾಳಿ" ಟೈಟಲ್ ಬೇರೆ ಕೊಟ್ಟಿದ್ದಾರೆ.
ಉಪ್ಪಿ ಈಗಾಗಲೇ 'ಯುಐ' ಸಿನಿಮಾ ಅಕ್ಟೋಬರ್‌ಗೆ ರಿಲೀಸ್ ಅಂತ ಹೇಳಿದ್ದಾರೆ. ಆದರೆ, ಅಲ್ಲೂ ಡೇಟ್ ಅನ್ನು ಅನೌನ್ಸ್ ಮಾಡಿಲ್ಲ. ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ ಇನ್ನೂ ಡೇಟ್ ಫಿಕ್ಸ್ ಮಾಡುವುದರಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಬಹುತೇಕ ಈ ಸಿನಿಮಾ ಅಕ್ಟೋಬರ್ ಕೊನೆಯಲ್ಲಿ ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗಬಹುದೆಂಬ ನಿರೀಕ್ಷೆಯಿದೆ.


Click it and Unblock the Notifications











