"ನಮಗೂ ಸೌಂದರ್ಯ ಜಗದೀಶ್ ಸಾವಿಗೂ ಯಾವುದೇ ರೀತಿ ಸಂಬಂಧವಿಲ್ಲ" ಸೌಂದರ್ಯ ಸುರೇಶ್
ಕನ್ನಡ ಚಿತ್ರರಂಗದ ನಿರ್ಮಾಪಕ ಹಾಗೂ ಸೌಂದರ್ಯ ಕನ್‌ಸ್ಟ್ರಕ್ಷನ್ ಪಾಲುದಾರನಾಗಿದ್ದ ಸೌಂದರ್ಯ ಜಗದೀಶ್ ಅತ್ಮಹತ್ಯೆಗೆ ಶರಣಾಗಿದ್ದರು. ಇವರ ಹಣಕಾಸಿನ ವಿಚಾರವಾಗಿಯೇ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಅವರ ಕುಟುಂಬ ಆರೋಪ ಮಾಡಿತ್ತು. ಸೌಂದರ್ಯ ಜಗದೀಶ್ ಪತ್ನಿ ರೇಖಾ ಹಾಗೂ ಪುತ್ರ ಸ್ನೇಹಿತ್ ಇಬ್ಬರೂ ಸೌಂದರ್ಯ ಸುರೇಶ್, ಎಸ್.ಪಿ.ಹೊಂಬಣ್ಣ ಹಾಗೂ ಎಸ್.ಸುಧೀಂದ್ರ ವಿರುದ್ಧ ಆರೋಪ ಮಾಡಿದ್ದರು.
ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಸೌಂದರ್ಯ ಸುರೇಶ್, ಎಸ್.ಪಿ.ಹೊಂಬಣ್ಣ, ಎಸ್. ಸುಧೀಂದ್ರ ಪ್ರಚೋದನೆ ನೀಡಿದ್ದಾರೆಂದು ಕೇಸ್ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ರದ್ದು ಕೋರಿ ಈ ಮೂವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಸೌಂದರ್ಯ ಜಗದೀಶ್ ಬರೆದಿದ್ದಾರೆ ಎನ್ನಲಾದ ಆತ್ಮಹತ್ಯೆ ಪತ್ರದಲ್ಲಿ ಈ ಮೂವರ ಪ್ರಚೋದನೆ ಬಗ್ಗೆ ಇಲ್ಲ ಎಂಬ ಕಾರಣಕ್ಕೆ ಈ ಕೇಸ್ ಅನ್ನು ರದ್ದು ಪಡಿಸಿ ಹೈ ಕೋರ್ಟ್ ಆದೇಶ ಹೊರಡಿಸಿದೆ.

ಈ ಸಂಬಂಧ ತಮ್ಮ ಮೇಲಿನ ಆರೋಪದ ಬಗ್ಗೆ ಸೌಂದರ್ಯ ಸುರೇಶ್ ಸ್ಪಪ್ಟನೆ ನೀಡಿದ್ದಾರೆ. ಅಲ್ಲದೆ ಸೌಂದರ್ಯ ಜಗದೀಶ್ ಪತ್ನಿ ರೇಖಾ ಅವರ ಮೇಲೆ ಗಂಭೀರ ಆರೋಪವನ್ನು ಮಾಡಿದ್ದಾರೆ. "ಮೇ ತಿಂಗಳಲ್ಲಿ ತಮ್ಮನ್ನು ಹಾಗೂ ಪಾರ್ಟ್ನರ್ ಹೊಂಬಣ್ಣ ಅವರನ್ನು ಕರೆದು ಹತ್ತತ್ತು ಕೋಟಿ ರೂಪಾಯಿ ಕೊಡುವಂತೆ ರೇಖಾ ಅವರು ಕೇಳಿದ್ದರು ಎಂದು ಗಂಭೀರ ಆರೋಪ" ಮಾಡಿದ್ದಾರೆ. ಇದೇ ವೇಳೆ ತಮ್ಮ ತೇಜೋವಧೆ ಮಾಡಿದ್ದಕ್ಕೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ಸೌಂದರ್ಯ ಸುರೇಶ್ ಪತ್ರಿಕಾ ಗೋಷ್ಠಿಯ ಝಲಕ್ ಇಲ್ಲಿದೆ.
"ಅವನು ತುಂಬಾನೇ ಡಿಪ್ರೆಷನ್‌ನಲ್ಲಿದ್ದ"
"ನಾನು ಅವನು ದಿನಕ್ಕೆ ಐದು ಗಂಟೆ ಜೊತೆಯಲ್ಲಿ ಇರುತ್ತಿದ್ವಿ. 2020ಯಿಂದ ಅವನು ಯಾವ ಕಾರಣಕ್ಕೆ ಬರುತ್ತಿರಲಿಲ್ಲ. ಆ ದೇವರಿಗೆ ಗೊತ್ತು. ಆದರೆ ಅವನು ತುಂಬಾನೇ ಡಿಪ್ರೆಷನ್‌ನಲ್ಲಿ ಇದ್ದ. ಕೊನೆ ಕೊನೆಯಲ್ಲಿ ಅವನದ್ದೇ ಮನೆ ಹರಾಜಿಗೆ ಬಂತು. ಅವಾಗ ಯಾರೂ ದುಡ್ಡು ಕಟ್ಟಿಲ್ಲ. ಅವನು ಅಗಲಿದ ಮೇಲೆ ಅವನ ಮನೆಯವರು ದುಡ್ಡು ಕಟ್ಟಿದ್ದಾರೆ. " ಎಂದು ಸೌಂದರ್ಯ ಸುರೇಶ್ ಆರೋಪಿಸಿದ್ದಾರೆ.

"ತಲೆ ಎತ್ತುವುದಕ್ಕೆ ಆಗುತ್ತಿಲ್ಲ"
"ನಾನು ಯಾರ ಮೇಲೂ ತಪ್ಪು ಹೇಳುತ್ತಿಲ್ಲ. ಟಿವಿ ಮುಂದೆ ಕೂತು ಎಲ್ಲರೂ ನನ್ನನ್ನು ಅಪರಾಧಿ ಅಂತ ಮಾಡಿದರು. ಯಾವ ಕಾರಣವನ್ನೂ ಕೊಡದೆ ಮಾಡಿದ್ದಾರೆ. ನಮಗೆ ಕಣ್ಣಲ್ಲಿ ನೀರು ಬಂತು. ಎಲ್ಲಾ ಚಾನೆಲ್‌ನವರು ತೋರಿಸಿದರು. ಎ 1, ಎ2 ಅಂತ ಹಾಕಿದರು. ನಮ್ಮ ಮರ್ಯಾದೆ ಏನಾಗಬೇಕು. ನಾವೇನೋ ವ್ಯಾಪಾರ ಮಾಡಿಕೊಂಡು ಇರುವವರು. ಎಲ್ಲಿ ಹೋದರೂ ನಾವು ತಲೆ ಎತ್ತಿಕೊಂಡು ತಿರುಗುವುದಕ್ಕೆ ಆಗುತ್ತಿಲ್ಲ. ನನ್ನ ಮಗನನ್ನು ಮದುವೆ ಮಾಡಬೇಕು. ಎಲ್ಲೇ ಹೋದರೂ, ನೀನು ಏನೋ ಮೋಸ ಮಾಡಿದ್ದೀಯ. ದುಡ್ಡು ಮಾಡಿದ್ದೀಯ ಅಂತಾರೆ ಎಲ್ಲಿದೆ ದಾಖಲೆ?" ಎಂದು ಸೌಂದರ್ಯ ಸುರೇಶ್ ಪ್ರಶ್ನೆ ಮಾಡಿದ್ದಾರೆ.
"ನಾವು ಕ್ಲೀನ್ ಇದ್ದೀವಿ"
"ನಾನು ಇಷ್ಟೇ ಹೇಳುವುದು ನಾವು ಕ್ಲೀನ್ ಆಗಿದ್ದೀವಿ. ಹೈಕೋರ್ಟ್‌ನಿಂದ ತೀರ್ಮಾನ ಆಗಿದೆ. ನಮಗೂ ಜಗದೀಶ್ ಸಾವಿಗೂ ಯಾವುದೇ ರೀತಿ ಸಂಬಂಧವಿಲ್ಲ. ಹಣದ ವಿಚಾರದಲ್ಲಿ ಜಗದೀಶ್‌ಗೆ ಮೋಸ ಮಾಡುವಂತಹವರು ಅಲ್ಲ. ಜಗದೀಶ್ ಟೈಗರ್ ಇದ್ದಂಗೆ. ಅವನು ಚಿಕ್ಕ ಮಗು ಅಲ್ಲ. ಅವನಿಗೆ ಮೋಸ ಮಾಡಿ, ಹೆದರಿಸುವುದಕ್ಕೆ. ವಿಡಿಯೋ ಇಟ್ಟುಕೊಂಡು ಹೆದರಿಸುತ್ತಿದ್ದೇನೆ ಅಂತ ಹೇಳುತ್ತಾರೆ. ಏನು ವಿಡಿಯೋ ಇದೆ?" ಎಂದು ಸೌಂದರ್ಯ ಸುರೇಶ್ ಪ್ರಶ್ನೆ ಮಾಡಿದ್ದಾರೆ.
"ನನ್ನ ತೇಜೋವಧೆ ಆಗಿದೆ"
"ಸೌಂದರ್ಯ ಕನ್‌ಸ್ಟ್ರಕ್ಷನ್ ಅನ್ನು ಮುಗಿಸಲೇಬೇಕು ಅಂತ ಹೀಗೆ ಮಾಡಿದ್ದಾರೆ. ಒಟ್ಟು 22ನೇ ತಾರೀಕು ಎಫ್‌ಐಆರ್ ಮಾಡಿ, 24ನೇ ತಾರೀಕು ನಿಮ್ಮ ಮುಂದೆ ಬಂದಿದ್ದಾರೆ. ಯಾಕೆ? ಸರ್ಕಾರದ ಮೇಲೆ ನಂಬಿಕೆ ಇಲ್ವಾ? ಕಾನೂನು ಮೇಲೆ ನಂಬಿಕೆ ಇಲ್ವಾ? ಪೊಲೀಸರ ಮೇಲೆ ನಂಬಿಕೆ ಇಲ್ವಾ? ನನ್ನ ತೇಜೋವಧೆ ಮಾಡಬೇಕು ಅಂತಾನೇ ಬಂದಿರೋದು. ಬೇರೆ ಯಾವ ಕಾರಣಕ್ಕೂ ಬಂದಿಲ್ಲ." ಎಂದು ತನ್ನ ತೇಜೋವಧೆ ಆಗಿದ್ದು, ಮಾನಹಾನಿ ಕೇಸ್ ಹಾಕುತ್ತೇನೆಂದು ಹೇಳಿದ್ದಾರೆ.


Click it and Unblock the Notifications











