ಚಿಕ್ಕಪೇಟೆಯಲ್ಲಿ ಗರುಡಾಚಾರ್ ಪರ ವೋಟ್ ಕೇಳಿದ 'ನೀಲಕಂಠ'ನ ಅರಗಿಣಿ: ನಮಿತಾ ನೋಡಲು ಮುಗಿಬಿದ್ದ ಮತದಾರರು!
ಕರ್ನಾಟಕ ವಿಧಾನಸಭಾ ಕ್ಷೇತ್ರದ ಬಹಿರಂಗ ಪ್ರಚಾರಕ್ಕೆ ಇಂದು (ಮೇ 8) ತೆರೆಬೀಳಲಿದೆ. ಹೀಗಾಗಿ ಅಭ್ಯರ್ಥಿ ಕೊನೆಯ ದಿನ ಅದ್ಧೂರಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದಲ್ಲೂ ಪ್ರಚಾರ ರಂಗೇರಿದೆ.
ಈ ಬಾರಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ನಡುವೆ ಗೆಲುವಿಗಾಗಿ ಜಿದ್ದಾಜಿದ್ದಿ ಜೋರಾಗಿದೆ. ಹಾಲಿ ಶಾಸಕ ಬಿಜೆಪಿ ಅಭ್ಯರ್ಥಿ ಉದಯ್ ಗರುಡಾಚಾರ್, ಕಾಂಗ್ರೆಸ್ ಅಭ್ಯರ್ಥಿ ಆರ್ ವಿ ದೇಶಪಾಂಡೆ, ಪಕ್ಷೇತರ ಅಭ್ಯರ್ಥಿಯಾಗಿ ಕೆಜಿಎಫ್ ಬಾಬು ಚುನಾವಣಾ ಅಖಾಡಕ್ಕಿಳಿದಿದ್ದಾರೆ.

ಚಿಕ್ಕಪೇಟೆಯಲ್ಲಿ ಚುನಾವಣಾ ಕ್ಷೇತ್ರದಲ್ಲಿ ಗೆಲುವಿಗಾಗಿ ಭಾರಿ ಪೈಪೋಟಿ ಇದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಉದಯ್ ಗರುಡಾಚಾರ್ ಪರ ಚುನಾವಣಾ ಪ್ರಚಾರಕ್ಕೆ ನಟಿ ನಮಿತಾ ಬಂದಿದ್ದಾರೆ. ಕೊನೆಯ ಹಂತದ ಪ್ರಚಾರದಲ್ಲಿ ನಮಿತಾ ಎಂಟ್ರಿ ಕೊಟ್ಟಿರೋದ್ರಿಂದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ರಂಗೇರಿದೆ.
ಎರಡು ಮಕ್ಕಳ ತಾಯಿ ನಮಿತಾ
ಬಹುಭಾಷಾ ನಟಿ ನಮಿತಾ ಇತ್ತೀಚೆಗೆ ಎರಡು ಮಕ್ಕಳ ತಾಯಿಯಾಗಿರುವ ಸಂತಸದಲ್ಲಿದ್ದಾರೆ. ಕಳೆದ ವರ್ಷವಷ್ಟೇ ನಮಿತಾ ಅವಳಿಜವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಈ ಖುಷಿಯನ್ನು ಸೋಶಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದರು.

41ನೇ ವರ್ಷಕ್ಕೆ ತಾಯಿಯಾಗಿರೋ ಬಹುಭಾಷಾ ನಟಿ ನಮಿತಾ ತಾಯ್ತನದ ಆನಂದವನ್ನು ಅನುಭವಿಸುತ್ತಿದ್ದಾರೆ. ಅಲ್ಲದೆ ಹೆರಿಗೆ ಬಳಿಕ ನಟಿ ಸ್ಲಿಮ್ ಆಗಿದ್ದು, ಆ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ನೆಟ್ಟಿಗರು ನಮಿತಾ ಹೊಸ ಲುಕ್‌ಗೆ ಮೆಚ್ಚುಗೆಯನ್ನು ಸೂಚಿಸಿದ್ದರು. ಈಗ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಅಭಿಮಾನಿಗಳಿಗೆ ಅವರನ್ನು ನೇರವಾಗಿಯೇ ನೋಡುವ ಅವಕಾಶ ಸಿಕ್ಕಿದೆ.
ಟ್ರೆಡಿಷನಲ್ ಲುಕ್‌ನಲ್ಲಿ ನಮಿತಾ ಪ್ರಚಾರ
ದಕ್ಷಿಣ ಭಾರತದ ಗ್ಲಾಮರಸ್ ಹೀರೊಯಿನ್ ನಮಿತಾ ಇಡೀ ದಿನ ಪ್ರಚಾರದಲ್ಲಿ ಬ್ಯುಸಿಯಾಗಲಿದ್ದಾರೆ. ಚಿಕ್ಕಪೇಟೆಯ ಹಲವು ವಾರ್ಡ್‌ಗಳಲ್ಲಿ ನಮಿತಾ ಪ್ರಚಾರ ಮಾಡಲಿದ್ದಾರೆ. ಪಕ್ಕಾ ಟ್ರೆಡಿಷನಲ್ ಲುಕ್‌ನಲ್ಲಿ ಎಂಟ್ರಿ ಕೊಟ್ಟಿರೋ ನಮಿತಾ ಮತದಾರರನ್ನು ಬಿಜೆಪಿ ಅಭ್ಯರ್ಥಿ ಪರ ಸೆಳೆಯಲಿದ್ದಾರೆ.
ಇದೇ ಸಂದರ್ಭದಲ್ಲಿ ಉದಯ್ ಗರುಡಾಚಾರ್ ಅವರ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ನಮಿತಾ ಎಲ್ಲೆಲ್ಲಿ ಪ್ರಚಾರ ಮಾಡಿದ್ದಾರೆಂಬ ಮಾಹಿತಿಯನ್ನು ಶೇರ್ ಮಾಡಿಕೊಂಡಿದ್ದಾರೆ. "ದಕ್ಷಿಣ ಭಾರತದ ಖ್ಯಾತ ನಟಿ ನಮಿತಾ ಅವರು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಸುಧಾಮನಗರ ವಾರ್ಡ್, ಸಿದ್ದಾಪುರ ವಾರ್ಡ್ ಮತ್ತು ಜಯನಗರ ವಾರ್ಡ್ ಗಳಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಡಾ.ಉದಯ್ ಬಿ. ಗರುಡಾಚಾರ್ ಅವರ ಪರ ಮತಯಾಚನೆ ಮಾಡಿದರು. ಅವರ ಅದ್ಭುತ ಬೆಂಬಲ ಮತ್ತು ಶುಭ ಹಾರೈಕೆಗಳಿಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು" ಎಂದು ಹೇಳಲಾಗಿದೆ.
ಚಿಕ್ಕಪೇಟೆಯಲ್ಲಿ ನಮಿತಾ ಪ್ರಚಾರ ವರ್ಕ್‌ಔಟ್ ಆಗುತ್ತಾ?
ಚಿಕ್ಕಪೇಟೆ ಉದ್ಯಮಿಗಳೇ ಹೆಚ್ಚಿರುವ ಕ್ಷೇತ್ರ. ಸದ್ಯ ಹಣಾಹಣಿಯಲ್ಲಿರುವ ಮೂವರು ಅಭ್ಯರ್ಥಿಗಳು ಕೋಟಿ ಕುಳಗಳೇ. ಹೀಗಾಗಿ ಬಿಜೆಪಿಯ ಅಭ್ಯರ್ಥಿ ಉದಯ್ ಬಿ ಗರುಡಾಚಾರ್, ಕಾಂಗ್ರೆಸ್ ಅಭ್ಯರ್ಥಿ ಆರ್ ವಿ ದೇವರಾಜ್, ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು ನಡುವೆ ತೀವ್ರ ಪೈಪೋಟಿಯಿದೆ.
ಹೀಗಿರುವಾಗ ನಟಿ ನಮಿತಾ ಮತದಾರರನ್ನು ಸೆಳೆಯುತ್ತಾರಾ? ಅನ್ನೋ ಪ್ರಶ್ನೆ ಎದ್ದಿರೋದು ಸಹಜ. ಚಿಕ್ಕಪೇಟೆ ಬಹುಭಾಷಿಗರ ಕ್ಷೇತ್ರ, ಹಿಂದಿ ಭಾಷಿಗರು ಬಿಟ್ಟರೆ, ಇಲ್ಲಿ ತಮಿಳರೇ ಹೆಚ್ಚಿದ್ದಾರೆ. ನಮಿತಾ ತಮಿಳಿನ ಜನಪ್ರಿಯ ನಟಿಯಾಗಿರುವುದರಿಂದ ಈ ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯುವ ಸಾಧ್ಯತೆಯಿದೆ. ಹೀಗಾಗಿ ಉದಯ್ ಬಿ ಗರುಡಾಚಾರ್‌ಗೆ ನಮಿತಾ ಪ್ರಚಾರ ಅನುಕೂಲವಾಗುವ ಸಾಧ್ಯತೆಯಿದೆ.


Click it and Unblock the Notifications











