S.Janaki Death: ದಕ್ಷಿಣ ಭಾರತದ ಗಾನಕೋಗಿಲೆ ಎಸ್.ಜಾನಕಿ ಇನ್ನಿಲ್ಲ
ದಕ್ಷಿಣ ಭಾರತದ ಗಾನ ಕೋಗಿಲೆ ಎಸ್.ಜಾನಕಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇತ್ತೀಚೆಗೆ ಲೆಜೆಂಡರಿ ಗಾಯಕಿ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಮೈಸೂರಿನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಎಸ್.ಜಾನಕಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ಎಸ್.ಜಾನಕಿ ಅವರಿಗೆ 88 ವರ್ಷ ವಯಸ್ಸಾಗಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ, ಒಡಿಶಾ, ಉರ್ದು, ಬೆಂಗಾಲಿ, ಪಂಜಾಬಿ ಭಾಷೆ ಸೇರಿದಂತೆ 20ಕ್ಕೂ ಅಧಿಕ ಭಾಷೆಗಳಲ್ಲಿ ಸುಮಾರು 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದರು. ಎಸ್.ಜಾನಕಿ ಅವರ ಅಗಲಿಕೆ ಚಿತ್ರರಂಗಕ್ಕೆ ದೊಡ್ಡ ಶಾಕ್ ಆಗಿದ್ದು, ಸಂಗೀತ ಲೋಕ ಮರುಗುತ್ತಿದೆ.

ಎಸ್.ಜಾನಕಿಯವರಿಗೆ ಇತ್ತೀಚೆಗೆ ಅನಾರೋಗ್ಯದ ಸಮಸ್ಯೆಯಿತ್ತು. ಕಳೆದ ಕೆಲವು ವರ್ಷಗಳಿಂದ ಅವರು ಅಸ್ತಮಾದಿಂದ ಬಳಲುತ್ತಿದ್ದರು. ನಿನ್ನೆ (ಜುಲೈ 11) ಬೆಳ್ಳಂಬೆಳಗ್ಗೆ ಅವರಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಆರಂಭದಲ್ಲಿ ಅವರಿಗೆ ಮನೆಯಲ್ಲಿಯೇ ಚಿಕಿತ್ಸೆಯನ್ನು ನೀಡಲಾಗಿತ್ತು. ಬಳಿಕ ಅವರ ಆರೋಗ್ಯ ಉಲ್ಬಣ ಆಗುತ್ತಿದ್ದಂತೆ ಮೈಸೂರಿನ ಅಪೋಲೊ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಎಸ್.ಜಾನಕಿಯವರ ಆಪ್ತರು ಟಿವಿ9ಗೆ ಮಾಹಿತಿ ನೀಡಿರುವ ಪ್ರಕಾರ ಎರಡು ದಿನಗಳ ಹಿಂದಷ್ಟೇ ಪ್ರವಾಸ ಮಾಡಿದ್ದರು. ಪ್ರವಾಸ ಮುಗಿಸಿ ಬರುತ್ತಿದ್ದಂತೆ ಅವರಿಗೆ ಆಯಾಸ ಆಗಿತ್ತು. ಮೊದಲೇ ಅಸ್ತಮಾ ಸಮಸ್ಯೆ ಇದ್ದಿದ್ದರಿಂದ ಅವರಿಗೆ ದಿಢೀರನೇ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಕೂಡಲೇ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು (ಜುಲೈ 11) ಸಂಜೆ ಕೊನೆಯುಸಿರೆಳೆದಿದ್ದಾರೆ.
ದಕ್ಷಿಣ ಭಾರತದ ಗಾನಕೋಗಿಲೆ ಅಂತಲೇ ಜನಪ್ರಿಯರಾಗಿದ್ದ ಎಸ್ ಜಾನಕಿಯವರು ಹಾಡಿದ ಹಾಡುಗಳು ಇಂದಿಗೂ ಸಂಗೀತ ಪ್ರಿಯರ ಬಾಯಿಯಲ್ಲಿ ಹರಿದಾಡುತ್ತಿದೆ. ಅವರು ಕೇವಲ ಟ್ಯೂನ್‌ಗಳಿಗೆ ಧ್ವನಿಯನ್ನು ನೀಡುತ್ತಿರಲಿಲ್ಲ. ತಾವು ಧ್ವನಿ ನೀಡುತ್ತಿದ್ದ ಸಂದರ್ಭ ಹಾಗೂ ವ್ಯಕ್ತಿಯ ಭಾವಕ್ಕೆ ಅನುಗುಣವಾಗಿ ಹಾಡುತ್ತಿದ್ದಿದ್ದು ವಿಶೇಷ. ಎಸ್. ಜಾನಕಿಯವರು 9 ವರ್ಷದಿಂದ ಹಿಡಿದು 90 ವರ್ಷ ವಯಸ್ಸಿನವರಿಗೂ ಹೊಂದಿಕೆಯಾಗುವಂತೆ ಹಾಡುತ್ತಿದ್ದದ್ದು ವಿಶೇಷ.
ಎಸ್.ಜಾನಕಿಯವರು ಶಾಸ್ತ್ರೀಯವಾಗಿ ಸಂಗೀತವನ್ನು ಕಲಿತಿಲ್ಲ ಅನ್ನೋದು ಇನ್ನೊಂದು ವಿಶೇಷ. ತಮ್ಮ 80ರ ಹರೆಯದಲ್ಲಿಯೂ ಎಸ್.ಜಾನಕಿಯವರು ಅದೇ ಉತ್ಸಾಹದಲ್ಲಿ ಇದ್ದರು. ಪ್ರತಿ ಭಾಷೆಯಲ್ಲಿಯೂ ಹಾಡುವಾಗ ಎಸ್.ಜಾನಕಿಯವರು ಶ್ರದ್ಧೆಯಿಂದ ಆ ಭಾಷೆಯನ್ನು ಕಲಿತು ಹಾಡುತ್ತಿದ್ದರು ಎಂದು ಹಿರಿಯ ಪತ್ರಕರ್ತ ಶ್ರೀಧರಮೂರ್ತಿಯವರು ಟಿವಿ9ಗೆ ನೀಡಿದ ಪ್ರತಿಕ್ರಿಯೆಯಲ್ಲಿ ನೆನಪಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ಸಂಗೀತ ಕ್ಷೇತ್ರಕ್ಕೆ ಇವರು ಕೊಟ್ಟಿರುವ ಕೊಡುಗೆ ಅಪಾರ. ಇವರ ಹಾಡಿದ ಹಾಡುಗಳು ಇಂದಿಗೂ ಸಂಗೀತ ಪ್ರಿಯರನ್ನು ಕಾಡುತ್ತವೆ. ನಟಿಯರ ಧ್ವನಿಗೆ ತಕ್ಕಂತೆ ಹಾಡುತ್ತಿದ್ದ ಎಸ್.ಜಾನಕಿಯವರನ್ನು ಕಳೆದುಕೊಂಡು ಚಿತ್ರರಂಗ ಬಡವಾಗಿದೆ. ಜಗ್ಗೇಶ್ ಸೇರಿದಂತೆ ಕನ್ನಡ ಚಿತ್ರರಂಗದ ಸಂಗೀತ ಲೋಕದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಸದ್ಯ ಜಾನಕಿಯವರ ಮೃತದೇಹ ಆಸ್ಪತ್ರೆಯಲ್ಲಿದ್ದು, ಅಂತಿಮ ವಿಧಿ ವಿಧಾನಗಳ ಬಗ್ಗೆ ಕುಟುಂಬ ನಿರ್ಧಾರ ಇನ್ನೂ ಕೈಗೊಳ್ಳಬೇಕಿದೆ.


Click it and Unblock the Notifications