ಸ್ಪಂದನಾ-ವಿಜಯ್ 16ನೇ ವಿವಾಹ ವಾರ್ಷಿಕೋತ್ಸವ: "ಇಣುಕು ನೋಟ ಬೀರಿ ಹೋದೆ.." ಎಂದು ಭಾವುಕರಾದ 'ಚಿನ್ನಾರಿ ಮುತ್ತ'
ಇತ್ತೀಚೆಗಷ್ಟೇ ಸ್ಯಾಂಡಲ್‌ವುಡ್‌ನ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಬಾಳಲ್ಲಿ ದುರಂತ ಸಂಭವಿಸಿತ್ತು. ಬ್ಯಾಂಕಾಕ್‌ಗೆ ಪ್ರವಾಸಕ್ಕೆಂದು ತೆರಳಿದ್ದಾಗ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ ಹೊಂದಿದ್ದರು. ಸ್ಪಂದನಾ ಬಾಳಲ್ಲಿ ವಿಧಿ ಆಟ ಆಡದೇ ಹೋಗಿದ್ದರೆ, ಇಂದು (ಆಗಸ್ಟ್ 26) ಈ ಜೋಡಿ 16ನೇ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳಬೇಕಿತ್ತು.
ಸ್ಪಂದನಾ ಸಂಬಂಧಿಗಳೊಂದಿಗೆ ಪ್ರವಾಸಕ್ಕೆಂದು ಬ್ಯಾಂಕಾಕ್‌ಗೆ ತೆರಳಿದ್ದರು. ಇನ್ನೇನು ಒಂದೆರಡು ದಿನಗಳಲ್ಲಿ ಭಾರತಕ್ಕೆ ಹಿಂತಿರುಗಬೇಕು ಅನ್ನುವಷ್ಟರಲ್ಲೇ ಆಗಸ್ಟ್ 6ರಂದು ತೀವ್ರ ಹೃದಯಾಘಾತವಾಗಿತ್ತು. ಸ್ಪಂದನಾ ಅವರನ್ನು ಆಸ್ಪತ್ರೆ ದಾಖಲಿಸಿದರೂ ಬದುಕಿಸಲು ಸಾಧ್ಯವಾಗಿರಲಿಲ್ಲ.

ವಿವಾಹ ವಾರ್ಷಿಕೋತ್ಸವಕ್ಕೆ ಕೇವಲ 21 ದಿನಗಳು ಬಾಕಿ ಇರುವಂತೆಯೇ ಸ್ಪಂದನಾ ಇಹಲೋಕ ತ್ಯಜಿಸಿದ್ದರು. ಸ್ಪಂದನಾ ಬದುಕಿದ್ದರೆ, ಇಂದು (ಆಗಸ್ಟ್ 26) ಸ್ಪಂದನಾ ಹಾಗೂ ವಿಜಯ್ ರಾಘವೇಂದ್ರ 16ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದರು. ಈ ಸಂಬಂಧ ಪತ್ನಿ ಸ್ಪಂದನಾರನ್ನು ನೆನೆದು ವಿಜಯ್ ರಾಘವೇಂದ್ರ ಭಾವನಾತ್ಮಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವಾರ್ಷಿಕೋತ್ಸವದಂದು ಭಾವನಾತ್ಮಕ ಪೋಸ್ಟ್
16ನೇ ವಿವಾಹ ವಾರ್ಷಿಕೋತ್ಸವದಂದು ವಿಜಯ್ ರಾಘವೇಂದ್ರ ಭಾವನಾತ್ಮಕ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಪತ್ನಿ ಸ್ಪಂದನಾರನ್ನು ನೆನೆದು ಭಾವನಾತ್ಮಕ ಪದಗಳಿರುವ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಪತ್ನಿ ಸ್ಪಂದನಾ ನೆನೆದು 'ಲವ್ ಯೂ ಚಿನ್ನ' ಎಂದು ಬರೆದು ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಿಜಯ್ ರಾಘವೇಂದ್ರ ಸಮಾಧಾನದ ಮಾತುಗಳನ್ನು ಆಡುತ್ತಿದ್ದಾರೆ.
ಈ ವಿಡಿಯೋದಲ್ಲಿ ಏನಿದೆ?
"ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲಿ.. ಎಲ್ಲೆ ಮೀರಿ ಒಲವ ನೀಡಿದೆ ಎದೆಯ ಅಂತರಾಳದಲಿ.. ಬದುಕನ್ನು ಕಟ್ಟಿ ಸರ್ವಸ್ವವಾದೆ.. ಉಸಿರಲ್ಲಿ ಬೆರೆತು ಜೀವಂತವಾದೆ.. ಮುದ್ದಾದ ನಗುವಿನಲ್ಲಿದ್ದ ಶಕ್ತಿ ಪರ್ವತದಷ್ಟು.. ಮರೆಯದೆ ತೊರೆಯದೆ ಎದೆಗೊತ್ತಿ ಪ್ರೀತಿಸುವೆ.." ಎಂದು ಭಾವನಾತ್ಮಕವಾಗಿ ವಿಜಯ್ ರಾಘವೇಂದ್ರ ಬರೆದು ವಿಡಿಯೋ ಮಾಡಿದ್ದಾರೆ.
ವಿಜಯ್ ರಾಘವೇಂದ್ರಗೆ ಸಮಾಧಾನದ ಮಾತು
"ನೀವಿಬ್ಬರೂ ಬೆಸ್ಟ್.. ಪ್ರತಿದಿನ ನಿನ್ನನ್ನು ಹೆಚ್ಚು ಪ್ರೀತಿಸುತ್ತೇನೆ" ಎಂದು ನೆಟ್ಟಿಗರೊಬ್ಬರು ವಿಜಯ್ ರಾಘವೇಂದ್ರ ಪೋಸ್ಟ್‌ಗೆ ಕಮೆಂಟ್ ಮಾಡಿದ್ದಾರೆ. "ಸರ್.. ಇನ್ನಷ್ಟು ಶಕ್ತಿ ಕೊಡಲಿ.. ದೇವತೆಯಾಗಿ ಅವರು ನಿಮ್ಮನ್ನು ನೋಡುತ್ತಲೇ ಇರುತ್ತಾರೆ" ಎಂದು ನಟಿ ಐಶ್ವರ್ಯಾ ಸಿಂಧೋಗಿ ಸಮಾಧಾನ ಮಾಡಿದ್ದಾರೆ. "ಜೊತೆಗಿರದ ಜೀವ ಎಂದಿಗಿಂತ ಜೀವಂತ" ಅಂತ ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. "ಈ ನಿಮ್ಮ ಮಾತು ಕೇಳಿದರೆ ನನಗೆ ಅಳು ಬರುತ್ತಿದೆ" ಎಂದು ಮತ್ತೊಬ್ಬರು ಹೇಳಿದ್ದಾರೆ.
'ಕದ್ದ ಚಿತ್ರ'ದ ಟ್ರೈಲರ್ ಲಾಂಚ್
ಸ್ಪಂದನಾ ಅಗಲಿಕೆಗೂ ಮುನ್ನ ವಿಜಯ್ ರಾಘವೇಂದ್ರ 'ಕದ್ದ ಚಿತ್ರ' ಅನ್ನೋ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಈ ಸಿನಿಮಾದ ಪ್ರಚಾರದಲ್ಲಿ ವಿಜಯ್ ರಾಘವೇಂದ್ರ ತೊಡಗಿಸಿಕೊಳ್ಳಬೇಕಿತ್ತು. ಅದೇ ವೇಳೆ ಪತ್ನಿ ಸ್ಪಂದನಾ ಕೊನೆಯುಸಿರೆಳೆದಿದ್ದರಿಂದ ವಿಜಯ್ ರಾಘವೇಂದ್ರ ಪತ್ನಿ ಕಾರ್ಯದ ಕಡೆಗೆ ಬ್ಯುಸಿಯಾಗಿದ್ದರು. ಈಗ 'ಕದ್ದ ಚಿತ್ರ'ದ ಪ್ರಚಾರ ಮತ್ತೆ ಆರಂಭ ಆಗಿದೆ. 16ನೇ ವಿವಾಹ ವಾರ್ಷಿಕೋತ್ಸವದಂದೇ 'ಕದ್ದ ಚಿತ್ರ'ದ ಟ್ರೈಲರ್ ಲಾಂಚ್ ಆಗಲಿದೆ.


Click it and Unblock the Notifications











