Bagheera Box Office Day 5: ಸೋಮವಾರದ ಪರೀಕ್ಷೆ ಗೆದ್ದಿತೇ 'ಬಘೀರ'; ಬಾಕ್ಸಾಫೀಸ್ ಭವಿಷ್ಯವೇನು?
ರೋರಿಂಗ್ ಸ್ಟಾರ್ ಶ್ರೀಮುರಳಿ ಕಾದು ಸಿನಿಮಾ ಮಾಡಿದ್ದಾಕ್ಕೂ ಸಾರ್ಥಕ ಆಗಿದೆ ಎನಿಸಿತ್ತು. ಕನ್ನಡದ ಮೊದಲ ಸೂಪರ್ ಹೀರೋ ಆಗಿ ತೆರೆ ಬಂದಿದ್ದ ರೋರಿಂಗ್ ಸ್ಟಾರ್‌ಗೆ ಮೊದಲ ನಾಲ್ಕು ದಿನ ಪ್ರೇಕ್ಷಕರ ಬಹುಪರಾಕ್ ಹೇಳಿದ್ದರು. ಆದರೆ 'ಬಘೀರ'ನಿಗೆ ಅಸಲಿ ಚಾಲೆಂಜ್ ಅಂತ ಇದ್ದಿದ್ದು ಸೋಮವಾರ (ನವೆಂಬರ್ 4).
ಎಷ್ಟೇ ದೊಡ್ಡ ಸ್ಟಾರ್ ಸಿನಿಮಾ ಆಗಿದ್ದರೂ ಮೊದಲ ಸೋಮವಾರ ಬಾಕ್ಸಾಫೀಸ್‌ನಲ್ಲೊಂದು ಜರಕ್ ಹೊಡೆಯುತ್ತೆ. ಒಂದು ವೇಳೆ ಈ ಏಟನ್ನು ತಡೆದುಕೊಂಡರೇ ಆ ಸಿನಿಮಾ ಗೆದ್ದಂತೆ. ಹೀಗಾಗಿ ಪ್ರತಿಯೊಬ್ಬ ಫಿಲ್ಮ್ ಮೇಕರ್‌ಗೂ, ಸ್ಟಾರ್ ನಟನಿಗೂ ಮೊದಲ ಸೋಮವಾರ ಸ್ವಲ್ಪ ಟೆನ್ಷನ್ ಜಾಸ್ತಿನೇ ಇರುತ್ತೆ ಅಂತ ಹೇಳಬಹುದು.

ಇದೇ ಸವಾಲು 'ಬಘೀರ'ನಿಗೂ ಎದುರಾಗಿತ್ತು. ಶ್ರೀಮುರಳಿ, ರುಕ್ಮಿಣಿ ವಸಂತ್ ಜೊತೆಗೆ ನಿರ್ದೇಶಕ ಡಾ. ಸೂರಿ, ಪ್ರಶಾಂತ್ ನೀಲ್ ಸೋಮವಾರದ ಈ ಸವಾಲಿನಲ್ಲಿ ಗೆದ್ದರೇ? ನಿನ್ನೆ (ನವೆಂಬರ್ 4) 'ಬಘೀರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿತೇ? ಐದು ದಿನಗಳಲ್ಲಿ ಒಟ್ಟಾಗಿ ಈ ಸಿನಿಮಾ ಗಳಿಸಿದ್ದು ಎಷ್ಟು? ತಿಳಿಯಲು ಮುಂದೆ ಓದಿ.
ಸೋಮವಾರ ಪರೀಕ್ಷೆ ಪಾಸ್ ಆಯ್ತಾ?
ರೋರಿಂಗ್ ಸ್ಟಾರ್ ಶ್ರೀಮುರಳಿಯ 'ಬಘೀರ' ಕನ್ನಡಿಗರಿಗೆ ಹೊಸ ಅನುಭವ ನೀಡಿದೆ. ಕನ್ನಡದ ಮೊದಲ ಸೂಪರ್ ಹೀರೋ ಹೇಗಿರುತ್ತಾನೆ ಅನ್ನೋದನ್ನು ನೋಡುವುದಕ್ಕೆ ಪ್ರೇಕ್ಷಕರು ಕಾತುರರಾಗಿದ್ದರು. ಆಕ್ಷನ್ ಜೊತೆಗೆ ಲವ್ ಸ್ಟೋರಿ ಮಿಕ್ಸ್ ಮಾಡಿದ ಸಿನಿಮಾ ಇಷ್ಟನೂ ಆಗಿದೆ. ಆದರೆ, ಸೋಮವಾರ ಬಂತು ಅಂದರೆ, ಎಷ್ಟೇ ದೊಡ್ಡ ಸಿನಿಮಾ ಇದ್ದರೂ ಕಲೆಕ್ಷನ್‌ನಲ್ಲಿ ಡ್ರಾಪ್ ಆಗುವುದು ಸಹಜ. 'ಬಘೀರ' ಕೂಡ ಹಾಗೇ ಡ್ರಾಪ್ ಆಗಿದೆ. ಹಾಗಾಗಿ ಇಂಡಸ್ಟ್ರಿ ಟ್ರ್ಯಾಕರ್ sacnilk ಪ್ರಕಾರ ಐದನೇ ದಿನ ಈ ಸಿನಿಮಾ 1.10 ಕೋಟಿ ರೂಪಾಯಿ ಗಳಿಸಿದೆ. ಆದರೆ, ವಿತರಕರ ಲೆಕ್ಕಾಚಾರದಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಮೊದಲ ಸೋಮವಾರ 'ಬಘೀರ' ಗಳಿಸಿದ್ದು, 1.50 ಕೋಟಿ ರೂಪಾಯಿ ಮೇಲೆ ಕಲೆಕ್ಷನ್ ಆಗಿದೆ ಎಂದು ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿದೆ.

5 ದಿನಗಳ ಒಟ್ಟು ಗಳಿಕೆ ಎಷ್ಟು?
ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಸಿನಿಮಾದ 'ಬಘೀರ' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕನ್ನಡದ ಪ್ರೇಕ್ಷಕರು ಈ ಸಿನಿಮಾ ನೋಡಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಒಳ್ಳೊಳ್ಳೆ ಸಿನಿಮಾಗಳನ್ನು ನಿರ್ಮಾಣ ಮಾಡುತ್ತೆ ಅನ್ನೋ ನಂಬಿಕೆಯನ್ನು ಉಳಿಸಿಕೊಂಡಿದೆ. ಆದರೆ, ಕಲೆಕ್ಷನ್ ವಿಚಾರದಲ್ಲಿ ಇನ್ನೂ ಸ್ವಲ್ಪ ಏರಿಕೆ ಆಗಬೇಕಿತ್ತು ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮೊದಲ ಐದು ದಿನಗಳಲ್ಲಿ 'ಬಘೀರ' ಕಲೆಕ್ಷನ್ ಹೀಗಿದೆ.
'ಬಘೀರ' 5 ದಿನಗಳ ಕಲೆಕ್ಷನ್ ಹೀಗಿದೆ
ಮೊದಲ ದಿನ 3.25 ಕೋಟಿ ರೂ.
ಎರಡನೇ ದಿನ 3.30 ಕೋಟಿ ರೂ.
ಮೂರನೇ ದಿನ 3.50 ಕೋಟಿ ರೂ.
ನಾಲ್ಕನೇ ದಿನ 3.15 ಕೋಟಿ ರೂ.
ಐದನೇ ದಿನ 1.50 ಕೋಟಿ ರೂ.
ಒಟ್ಟು 14.65 ಕೋಟಿ ರೂ.
ತೆಲುಗು ವರ್ಷನ್ ಏನಾಯ್ತು?
'ಬಘೀರ' ಸಿನಿಮಾ ತೆಲುಗಿನಲ್ಲೂ ರಿಲೀಸ್ ಆಗಿತ್ತು. ಪ್ರಶಾಂತ್ ನೀಲ್ ಟ್ರೇಡ್ ಮಾರ್ಕ್ ಇದ್ದಿದ್ದರಿಂದ ಅಲ್ಲೂ ಲಿಮಿಟೆಡ್ ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಲಾಗಿತ್ತು. ಆದರೆ, ಆರಂಭದಲ್ಲಿ ತೆಲುಗಿನಲ್ಲಿ ಕೆಲವರು ನೆಗೆಟಿವ್ ಪ್ರಚಾರ ಮಾಡಿದ್ದರು. ಹೀಗಾಗಿ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ದೊಡ್ಡ ಸಂಖ್ಯೆ ಕಾಣಿಸುತ್ತಿಲ್ಲ. ಆದರೂ ಐದನೇ ದಿನ 10 ರಿಂದ 20 ಲಕ್ಷ ರೂಪಾಯಿ ಒಳಗೆ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಇಲ್ಲಿವರೆಗೂ ಒಂದೂವರೆ ಕೋಟಿ ರೂಪಾಯಿ ವರೆಗೂ ಕಲೆಕ್ಷನ್ ಆಗಿರಬಹುದೆಂದು ಹೇಳಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಏನಾಗಬಹುದು?
ದೀಪಾವಳಿ ಹಬ್ಬದ ರಜೆ ಮುಗಿಸಿ ದೈನಂದಿನ ಕೆಲಸಗಳ ಕಡೆಗೆ ಜನರು ಗಮನ ಹರಿಸಿದ್ದರು. ಹೀಗಾಗಿ ಸೋಮವಾರ ಥಿಯೇಟರ್ ಕಡೆಗೆ ಮುಖ ಮಾಡಿದ್ದು ಕಡಿಮೆ. ಇಂದಿನಿಂದ (ನವೆಂಬರ್ 5) ಮತ್ತೆ ಫ್ಯಾಮಿಲಿ ಸಮೇತ 'ಬಘೀರ' ನೋಡಲು ಥಿಯೇಟರ್‌ಗೆ ಬರಬಹುದು. ಈ ವೀಕೆಂಡ್ ಒಳಗೆ 'ಬಘೀರ' 20 ಕೋಟಿ ಕಲೆ ಹಾಕಬಹುದು ಎಂಬ ನಿರೀಕ್ಷೆಯಿದೆ.


Click it and Unblock the Notifications











