127 ದಿನ ಶೂಟಿಂಗ್.. 60 ದಿನ ನೈಟ್ ಶೂಟ್: 'ಬಘೀರ'ನಿಗಾಗಿ ಹಗಲು ಅನ್ನೋದನ್ನೇ ನೋಡಿಲ್ಲ ಶ್ರೀಮುರಳಿ
ರೋರಿಂಗ್ ಸ್ಟಾರ್ ಶ್ರೀಮುರಳಿ ಸಿನಿಮಾ ಮೂರು ವರ್ಷಗಳ ಬಳಿಕ ರಿಲೀಸ್‌ಗೆ ರೆಡಿಯಾಗುತ್ತಿದೆ. ಇದೇ ಅಕ್ಟೋಬರ್ 31ರಂದು 'ಬಘೀರ' ಅದ್ಧೂರಿಯಾಗಿ ಚಿತ್ರಮಂದಿರಗಳಿಗೆ ಎಂಟ್ರಿ ಕೊಡುತ್ತಿದೆ. 'ಕೆಜಿಎಫ್', 'ಕಾಂತಾರ', 'ಸಲಾರ್' ಅಂತಹ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾಗೆ ಹಣ ಹೂಡಿಕೆ ಮಾಡಿದೆ.
'ಬಘೀರ' ಕನ್ನಡದ ಸೂಪರ್ ಹೀರೋ ಸಿನಿಮಾ. ಕನ್ನಡದ ಜನಪ್ರಿಯರ ನಿರ್ದೇಶಕ ಪ್ರಶಾಂತ್ ನೀಲ್ ಈ ಸಿನಿಮಾಗೆ ಕಥೆ ಕೊಟ್ಟಿದ್ದಾರೆ. ಈ ಹಿಂದೆ ಯಶ್ ನಟಿಸಿದ 'ಲಕ್ಕಿ' ಅನ್ನೋ ಸಿನಿಮಾ ಆಕ್ಷನ್ ಕಟ್ ಹೇಳಿದ್ದ ಡಾ.ಸೂರಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ರೋರಿಂಗ್ ಸ್ಟಾರ್ ಶ್ರೀಮುರಳಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಬಣ್ಣ ಹಚ್ಚಿದ್ದಾರೆ.

ಹೀಗಾಗಿ ಇನ್ನೇನು ಬಿಡುಗಡೆಗೆ ಕೆಲವು ದಿನಗಳು ಬಾಕಿ ಉಳಿದಿರುವಾಗಲೇ ಶ್ರೀಮುರಳಿ ಫುಲ್ ಆಕ್ಟಿವ್ ಆಗಿದ್ದಾರೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಮೊದಲು ತೆಲುಗಿನ ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ 'ಬಘೀರ' ಸಿನಿಮಾ ಮೂರು ವರ್ಷಗಳನ್ನು ತೆಗೆದುಕೊಂಡಿದ್ದು ಹೇಗೆ? ಎಷ್ಟು ದಿನ ಶೂಟ್ ಮಾಡಿದ್ದಾರೆ? ವರ್ಕ್ ಔಟ್ ಇವೆಲ್ಲದರ ಬಗ್ಗೆನೂ ಶ್ರೀಮುರಳಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
127 ದಿನ ಶೂಟಿಂಗ್
'ಬಘೀರ' ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಒಂದಾಗಿತ್ತು. ಕಳೆದ ಮೂರು ವರ್ಷಗಳಿಂದ ನಿರ್ಮಾಣ ಹಂತದಲ್ಲೇ ಇದ್ದ ಈ ಸಿನಿಮಾ ಈ ವರ್ಷ ರಿಲೀಸ್ ಆಗುತ್ತಾ ಇಲ್ಲವಾ? ಅನ್ನೋ ಗೊಂದಲದಲ್ಲಿ ಇರುವಾಗಲೇ ಅಕ್ಟೋಬರ್ 31 ಅಂತ ರಿಲೀಸ್ ಡೇಟ್ ಅನೌನ್ಸ್ ಮಾಡಿತ್ತು. ಶ್ರೀಮುರಳಿ ಹೇಳುವ ಪ್ರಕಾರ 'ಬಘೀರ' ಸಿನಿಮಾವನ್ನು ಸುಮಾರು 127 ದಿನಗಳ ಶೂಟಿಂಗ್ ಮಾಡಲಾಗಿದೆ. ಇದರಲ್ಲಿ 60 ದಿನಗಳು ಕೇವಲ ರಾತ್ರಿಯಲ್ಲಿಯೇ ಚಿತ್ರೀಕರಣ ಮಾಡಲಾಗಿದೆಯಂತೆ. ಹಾಗೇ ಒಂದೊಂದು ಸೆಟ್ ಹಾಕುವುದಕ್ಕೆ 2 ರಿಂದ 3 ಸೆಟ್ ಹಾಕಲಾಗುತ್ತು ಎಂದಿದ್ದಾರೆ.

ಹಗಲು ಅನ್ನೋದೇ ನೋಡಿಲ್ಲ
'ಬಘೀರ' ಕನ್ನಡದ ಸೂಪರ್ ಹೀರೋ ಸಿನಿಮಾ. ಹೀಗಾಗಿ ಈ ಸಿನಿಮಾವನ್ನು ಹಾಲಿವುಡ್‌ನ ಬ್ಯಾಟ್‌ಮ್ಯಾನ್ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಸಿನಿಮಾ ಬಹುತೇಕ ಭಾಗವನ್ನು ರಾತ್ರಿ ಹೊತ್ತಿನಲ್ಲಿಯೇ ಚಿತ್ರೀಕರಣ ಮಾಡಬೇಕಾಗಿತ್ತು. ಈ ಕಾರಣಕ್ಕೆ "ಎಷ್ಟೋ ದಿನ ನಾನು ಹಗಲುಗಳನ್ನೇ ನೋಡಿಲ್ಲ" ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ರಾತ್ರಿ ಇಡೀ ಶೂಟಿಂಗ್ ಮಾಡಿದರೆ, ಬೆಳಗಾಗುವುದರೊಳಗೆ ಮನೆ ಸೇರಿಕೊಂಡು ಬಿಡುತ್ತಿದ್ದರು. ಹೀಗಾಗಿ ಹಗಲುಗಳನ್ನೇ ನೋಡಿಲ್ಲ ಎಂದು ಹೇಳಿಕೊಂಡಿದ್ದಾರೆ.
4 ಗಂಟೆ ವರ್ಕ್‌ಔಟ್.. 23 ಗಂಟೆ ಶೂಟಿಂಗ್
'ಬಘೀರ' ಸಿನಿಮಾಗಾಗಿ ಶ್ರೀಮುರಳಿ ಮೂರು ವರ್ಷಗಳ ಕಾಲ ನಿರಂತರ ವರ್ಕ್‌ಔಟ್ ಮಾಡಿದ್ದಾರೆ. 'ಬಘೀರ'ನ ಲುಕ್‌ಗಾಗಿ ಪ್ರತಿದಿನ ನಾಲ್ಕು ಗಂಟೆಗಳ ಕಾಲ ಜಿಮ್‌ನಲ್ಲಿ ಕಸರತ್ತು ಮಾಡುತ್ತಿದ್ದರು. ಸ್ಟ್ರಿಕ್ಟ್ ಆಗಿ ಡಯೆಟ್ ಅನ್ನು ಫಾಲೋ ಮಾಡುತ್ತಿದ್ದರು. ಇದನ್ನು ಸಿನಿಮಾ ಮುಗಿಯುವವರೆಗೂ ಫಾಲೋ ಮಾಡಿಕೊಂಡೇ ಬಂದಿದ್ದಾರೆ. ಅನ್ನ, ತುಪ್ಪ, ಚೀಸ್, ಚಿಕನ್ ಎಲ್ಲದಕ್ಕೂ ಬ್ರೇಕ್ ಹಾಕಿದ್ದಾಗಿ ಶ್ರೀಮುರಳಿ ಹೇಳಿಕೊಂಡಿದ್ದಾರೆ.
ಮೊಸರನ್ನ ಜೊತೆ ಚಿಕನ್ ಕಬಾಬ್
ಶ್ರೀಮುರಳಿಗೆ ಮೊಸರನ್ನ ಅಂದರೆ ಬಲು ಇಷ್ಟ. ಆದರೆ, ಮೊಸರನ್ನ ಜೊತೆ ಚಿಕನ್ ಕಬಾಬ್ ತಿನ್ನುವುದಕ್ಕೆ ಇಷ್ಟ ಪಡುತ್ತಿದ್ದರು. ಆದರೆ, ಇದೆಲ್ಲದಕ್ಕೂ 'ಬಘೀರ' ಶೂಟಿಂಗ್ ವೇಳೆ ಕಡಿವಾಣ ಹಾಕಲಾಗಿತ್ತು. ರುಚಿಕರವಾದ ಊಟವನ್ನು ಇಷ್ಟ ಪಟ್ಟು ಮಾಡುವ ಶ್ರೀಮುರಳಿ ಸಿನಿಮಾಗಾಗಿ ಇದೆಲ್ಲವನ್ನೂ ಬಿಡಬೇಕಾಗಿತ್ತು ಎಂದು ತೆಲುಗು ಮಾಧ್ಯಮಗಳಿಗೆ ನೀಡುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.


Click it and Unblock the Notifications











