ಕಲಾರಸಿಕರೇ ಕೇಳಿ.. ಸಂಕಷ್ಟಗಳಿಂದ ಹೊರಬಂತು 'ಸಂಜು ವೆಡ್ಸ್ ಗೀತಾ 2'; ಈ ದಿನವೇ ರಿಲೀಸ್
ಸಂಕ್ರಾಂತಿ ಹಬ್ಬಕ್ಕೆ ಕನ್ನಡದ ಎರಡು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿದ್ದವು. ಶರಣ್, ಚಿಕ್ಕಣ್ಣ ನಟನೆಯ 'ಛೂ ಮಂತರ್', ಇದರೊಟ್ಟಿಗೆ ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ನಟಿಸಿರುವ 'ಸಂಜು ವೆಡ್ಸ್ ಗೀತಾ 2'. ನಾಗಶೇಖರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಆದರೆ, ಕೊನೆಯ ಕ್ಷಣದಲ್ಲಿ ಹೈದರಾಬಾದ್ ಸಿಟಿ ಸಿವಿಲ್ ಕೋರ್ಟ್‌ನಿಂದ ತಡೆಯಾಜ್ಞೆ ಬಂದಿದ್ದರಿಂದ ಬಿಡುಗಡೆಯಾಗಿರಲಿಲ್ಲ.
ಹೈದರಾಬಾದ್ ಮೂಲದ ಫೈನಾನ್ಷರ್ ಒಬ್ಬರು ನಾಗಶೇಖರ್ ಸಿನಿಮಾ ಮೇಲೆ ತಡೆಯಾಜ್ಞೆ ತಂದಿದ್ದು, 'ಸಂಜು ವೆಡ್ಸ್ ಗೀತಾ 2' ಯಾವುದೇ ಕಾರಣಕ್ಕೂ ಬಿಡುಗಡೆಯಾಗುವುದಿಲ್ಲ ಎಂಬ ಸುದ್ದಿ ಹೊರಬಿದ್ದಿತ್ತು. ಅಂದರಂತೆ 'ಸಂಜು ವೆಡ್ಸ್ ಗೀತಾ 2' ಜನವರಿ 10ರಂದು ಬಿಡುಗಡೆಯಾಗಿರಲಿಲ್ಲ. ಚಿತ್ರರಂಗ ಪ್ರತಿಕ್ರಿಯೆ ಕೊಡುವುದಕ್ಕೂ ಹೋಗಿರಲಿಲ್ಲ. ಬಳಿಕ ಹೈದರಾಬಾದ್ ಕೋರ್ಟ್‌ನಿಂದ ತಡೆಯಾಜ್ಞೆ ತೆರವುಗೊಂಡ ಬಳಿಕ ನಿರ್ಮಾಪಕರ ವಿಡಿಯೋ ಮಾಡಿ ಮಾಹಿತಿ ಹಂಚಿಕೊಂಡಿದ್ದರು.

ಈಗ ಚಿತ್ರತಂಡ ಹೊಸ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ. ಕಾನೂನು ತೊಡಕುಗಳನ್ನು ಬಗೆಹರಿಸಿಕೊಂಡು ಇದೇ ಜನವರಿ 17ರಂದು ಸಿನಿಮಾ ಬಿಡುಗಡೆಯಾಗುತ್ತಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಇದರ ಜೊತೆಗೆ ಚಿತ್ರತಂಡ ಈ ಸಿನಿಮಾಗೆ ಎದುರಾಗಿದ್ದ ಸಮಸ್ಯೆಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದೆ. ಅಷ್ಟಕ್ಕೂ ಹೈದರಾಬಾದ್ ಫೆನಾನ್ಷಿಯರ್ ತಡೆಯಾಜ್ಞೆ ತಂದಿದ್ದು ಯಾಕೆ? ನಾಗಶೇಖರ್ ಕೊಟ್ಟ ಕಾರಣವೇನು? ಅಂತ ನೋಡುವುದಾರೇ..
'ಸಂಜು ವೆಡ್ಸ್ ಗೀತಾ 2' ನಿರ್ದೇಶಿಸುವುದಕ್ಕೂ ಮುನ್ನ ನಾಗಶೇಖರ್ ತೆಲುಗಿನಲ್ಲಿ 'ಗುರ್ತುಂದಾ ಶೀತಕಾಲಂ' ಅನ್ನೋ ಚಿತ್ರವನ್ನು ಡೈರೆಕ್ಷನ್ ಜೊತೆ ನಿರ್ಮಾಣ ಕೂಡ ಮಾಡಿದ್ದರು. ಇದು ಕನ್ನಡ 'ಲವ್ ಮಾಕ್ಟೇಲ್' ಸಿನಿಮಾ ರಿಮೇಕ್ ಆಗಿತ್ತು. ಭಾವನ ರವಿ, ರಾಮ ರಾವ್ ಚಿಂತಪಲ್ಲಿ ಜೊತೆ ಸೇರಿ ನಾಗಶೇಖರ್ ಸಿನಿಮಾ ನಿರ್ಮಾಣ ಮಾಡಿದ್ದರು. ಆದರೆ, ಈ ಸಿನಿಮಾ ತೆಲುಗಿನಲ್ಲಿ ಸೋತಿತ್ತು. ಆ ಕಮಿಟ್‌ಮೆಂಟ್ ಹಿನ್ನೆಲೆಯಲ್ಲಿ 'ಸಂಜು ವೆಡ್ಸ್ ಗೀತಾ 2' ತಡೆಯಾಜ್ಞೆ ತಂದಿದ್ದಾರೆಂದು ಆರೋಪಿಸಲಾಗಿದೆ. ಆ ಸಿನಿಮಾಗೂ, ಇದಕ್ಕೂ ಏನು ಸಂಬಂಧ? ಯಾಕೀ ಗೊಂದಲ ಅನ್ನೋದನ್ನು ನಾಗಶೇಖರ್ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
"ನಿಮಗೆಲ್ಲರಿಗೂ ಗೊತ್ತು ಜನವರಿ 10, 2025ರಂದು 'ಸಂಜು ವೆಡ್ಸ್ ಗೀತಾ 2' ರಿಲೀಸ್ ಆಗಬೇಕಾಗಿತ್ತು. ರಿಲೀಸ್ ಆಗಲಿಲ್ಲ. ಅದಕ್ಕೆ ಒಂದೇ ಒಂದು ಕಾರಣ. ನಮಗೆ ಹೈದರಾಬಾದ್‌ನ ಸಿಟಿ ಸಿವಿಲ್ ಕೋರ್ಟ್‌ನಿಂದ ಬಂದ ತಡೆಯಾಜ್ಞೆ. ಇದು ಯಾಕೆ ಅಂದ್ರೆ, ನನ್ನ ಸ್ನೇಹಿತ ಭಾವನಾ ರವಿ ಜೊತೆ ನನ್ನ ನಿರ್ಮಾಣದಲ್ಲಿ ಒಂದು ಸಿನಿಮಾ ನಿರ್ಮಾಣ ಆಗಿತ್ತು. ತೆಲುಗು ಭಾಷೆಯಲ್ಲಿ ತಮನ್ಯಾ ಮತ್ತು ಸತ್ಯದೇವ್ ನಟಿಸಿದ ಸಿನಿಮಾ 'ಗುರ್ತುಂದಾ ಸೀತಾಕಾಲಂ'. ಅದಕ್ಕೆ ಇನ್ನೊಬ್ಬ ಪಾರ್ಟ್ನರ್ ಇದ್ದರು. ಅವರು ಅಲ್ಲಾದ ವ್ಯವಹಾರದ ವಹಿವಾಟಿನ ವಿಚಾರದಲ್ಲಿ ನಾಗಶೇಖರ್ ಮೂವೀಸ್ ಅಂತ ಹಳೆಯ ವಿಡಿಯೋದಲ್ಲಿದ್ದ ಒಂದು ಕ್ಲಿಪ್ ಅನ್ನು ಇಟ್ಕೊಂಡು ಈ ಸಿನಿಮಾಗೆ ತಡೆಯಾಜ್ಞೆ ತಂದರು." ಎಂದು ನಾಗಶೇಖರ್ ಹೇಳಿದ್ದಾರೆ.
ಅಂದರೆ, 'ಸಂಜು ವೆಡ್ಸ್ ಗೀತಾ 2' ಸಿನಿಮಾಗೆ ನಾಗಶೇಖರ್ ಕೂಡ ಒಬ್ಬ ನಿರ್ಮಾಪಕ ಎಂದು ಅವರು ತಿಳಿದುಕೊಂಡಿದ್ದರು. ಹೀಗಾಗಿ 'ಸಂಜು ವೆಡ್ಸ್ ಗೀತಾ 2' ನಲ್ಲಿ ನಾಗಶೇಖರ್ ಮೂವೀಸ್ ಅಂತಿದ್ದ ಹಳೆಯ ವಿಡಿಯೋ ಕ್ಲಿಪ್ ಅನ್ನು ಇಟ್ಟುಕೊಂಡು ಸಿನಿಮಾ ರಿಲೀಸ್‌ಗೆ ತಡೆಯಾಜ್ಞೆ ತಂದಿದ್ದಾರೆಂದು ನಾಗಶೇಖರ್ ಕ್ಲಾರಿಟಿ ಕೊಟ್ಟಿದ್ದಾರೆ.
"ಈ ಮೂಲಕ ನೇರವಾಗಿ ಸ್ಪಷ್ಟನೆ ಕೊಡುವ ವಿಚಾರ ಏನು ಅಂದರೆ, 'ಸಂಜು ವೆಡ್ಸ್ ಗೀತಾ 2' ಸಿನಿಮಾದಲ್ಲಿ ನಾನು ಒಬ್ಬ ಸ್ಟೋರಿ, ಸ್ಕ್ರೀನ್‌ಪ್ಲೇ, ಡೈರೆಕ್ಷನ್ ಮಾತ್ರ ನನ್ನದು. ಇದು ಬಿಟ್ಟು ಈ ಸಿನಿಮಾದ ಬೇರೆ ಯಾವುದೇ ವ್ಯವಹಾರಕ್ಕೂ ನನಗೂ ಸಂಬಂಧವಿಲ್ಲ. ಸಂಬಂಧವಿದೆ ಎಂದು ಕಲ್ಪಿಸಿಕೊಂಡು ತಡೆಯಾಜ್ಞೆ ತಂದರು. ಆದರೆ, ನ್ಯಾಯಾಲಯ ಇದು ಚಲವಾದಿ ಕುಮಾರ್ ಅವರ ನಿರ್ಮಾಣದಲ್ಲಿ ಆಗಿರುವಂತಹ ಸಿನಿಮಾ ಅಂತ ಪರಿಗಣನೆಗೆ ತೆಗೆದುಕೊಂಡು, ಆ ತಡೆಯಾಜ್ಞೆಯನ್ನು ನಿನ್ನೆ ತೆರವುಗೊಳಿಸಿ, ಈ ಸಿನಿಮಾಗೆ ಕಾನೂನಾತ್ಮಕ ನಿರ್ಬಂಧವನ್ನು ತಿರಸ್ಕರಿಸಿ ಅಪ್ಪಣೆಯನ್ನು ನೀಡಿದೆ." ಎಂದು ನಿರ್ದೇಶಕ ನಾಗಶೇಖರ್ ಹೇಳಿದ್ದಾರೆ.
ಸದ್ಯ 'ಸಂಜು ವೆಡ್ಸ್ ಗೀತಾ 2' ಸಿನಿಮಾ ಎಲ್ಲಾ ಸಮಸ್ಯೆಗಳಿಂದ ಹೊರಬಂದಿದ್ದು, ಇದೇ ಜನವರಿ 17ರಂದು ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಇದೇ ವೇಳೆ ರಾಮ್ ಚರಣ್ ನಟನೆಯ 'ಗೇಮ್ ಚೇಂಜರ್' ಸಿನಿಮಾ ಬಿಡುಗಡೆ ಮಾಡುವುದಕ್ಕಾಗಿ 'ಸಂಜು ವೆಡ್ಸ್ ಗೀತಾ 2' ಸಿನಿಮಾ ಮೇಲೆ ಹುನ್ನಾರ ಮಾಡಿದ್ದಾರೆಂದು ಚಿತ್ರತಂಡ ಆರೋಪ ಮಾಡಿದೆ.


Click it and Unblock the Notifications











