ಹೇಳಿದಂತೆ ಆಯ್ತು.. ಯಶ್ 'ಟಾಕ್ಸಿಕ್' ಮತ್ತೆ ಪೋಸ್ಟ್‌ಪೋನ್; 9 ನಿಮಿಷದ ಶೋ ರೀಲ್ ರಹಸ್ಯವೇನು?
ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಟಾಕ್ಸಿಕ್' ಬಿಡುಗಡೆ ಮತ್ತೆ ವಿಳಂಬ ಆಗಿದೆ. ಈ ವರ್ಷದ ಯುಗಾದಿ ಹಬ್ಬಕ್ಕೆ ಈ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಬೇಕಿತ್ತು. ಆದರೆ, ಗ್ಲೋಬಲ್ ರಿಲೀಸ್ ಮಾಡುವುದಕ್ಕೆ ತಯಾರಿ ನಡೆಸುತ್ತಿದ್ದ ಯಶ್ ಅಂಡ್ ಟೀಮ್ ಇಸ್ರೇಲ್-ಅಮೆರಿಕ ಹಾಗೂ ಇರಾನ್ ಯುದ್ಧ ಎದುರಾಗಿತ್ತು. ವಿದೇಶಿ ಆಡಿಯನ್ಸ್ ಅನ್ನೂ ಗಮನದಲ್ಲಿ ಇಟ್ಟುಕೊಂಡು ಸಿನಿಮಾ ಮಾಡಿದ್ದರಿಂದ ಅನಿವಾರ್ಯವಾಗಿ ಪೋಸ್ಟ್‌ಪೋನ್ ಮಾಡಬೇಕಾಯ್ತು. ಹೀಗಾಗಿ ಜೂನ್ 4ರಂದು ಸಿನಿಮಾ ರಿಲೀಸ್ ಎಂದು ಘೋಷಣೆ ಮಾಡಿತ್ತು.
ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ ಜಂಟಿಯಾಗಿ ನಿರ್ಮಾಣ ಮಾಡಿರುವ ಈ ಸಿನಿಮಾ ಮತ್ತೆ ಪೋಸ್ಟ್‌ಪೋನ್ ಆಗಿದೆ. ಖುದ್ದಾಗಿ ಯಶ್ ಹಾಗೂ ಅವರ ತಂಡ ಜೂನ್ 4ಕ್ಕೂ ಸಿನಿಮಾ ರಿವೀಲ್ ಆಗೋದಿಲ್ಲ ಅನ್ನೋದನ್ನು ತಿಳಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ 'ಟಾಕ್ಸಿಕ್' ರಿಲೀಸ್ ಮಾಡುವುದಕ್ಕೆ ಪ್ಲಾನ್ ಮಾಡಿರೋದ್ರಿಂದ ಮತ್ತೆ ರಿಲೀಸ್ ಡೇಟ್ ಅನ್ನು ಮುಂದಕ್ಕೆ ಹಾಕಿರೋದಾಗಿ ನಿರ್ಮಾಣ ಸಂಸ್ಥೆಗಳು ಅಧಿಕೃತವಾಗಿ ಹೇಳಿವೆ.

ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ 'ಟಾಕ್ಸಿಕ್' ಮತ್ತೆ ಪೋಸ್ಟ್‌ಪೋನ್ ಆಗುತ್ತೆ ಅನ್ನೋ ಮಾತು ಕೇಳಿ ಬಂದಿದ್ದವು. 'ಟಾಕ್ಸಿಕ್' ಗ್ಲೋಬಲ್ ರಿಲೀಸ್ ಮಾಡುವುದಕ್ಕೆ ಮುಂದಾಗಿದ್ದರಿಂದ ಸಿನಿಮಾದ ಕೆಲವು ಭಾಗಗಳನ್ನು ರೀ-ಶೂಟ್ ಮಾಡುತ್ತಿದ್ದಾರೆಂಬ ಸುದ್ದಿ ಕೂಡ ಹಬ್ಬಿತ್ತು. ಈ ಬಗ್ಗೆ ನಿರ್ಮಾಣ ಸಂಸ್ಥೆಗಳು ಮಾಹಿತಿಯನ್ನು ಬಿಟ್ಟು ಕೊಡದೇ ಹೋದರೂ, ರಿಲೀಸ್ ಡೇಟ್ ಅನ್ನು ಮುಂದೂಡಿವೆ. ಅಸಲಿಗೆ 9 ನಿಮಿಷದ ಶೋ ರೀಲ್ ಮಾಡಿದ ಜಾದು ಏನು? ತಿಳಿಯುವುದಕ್ಕೆ ಮುಂದೆ ಓದಿ.
9 ನಿಮಿಷದ ತುಣುಕಿನ ಜಾದು
ಕಳೆದ ಕೆಲವು ದಿನಗಳಿಂದ ರಾಕಿಂಗ್ ಸ್ಟಾರ್ ಯಶ್ ವಿದೇಶದ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದರು. ಈ ವೇಳೆ 'ಟಾಕ್ಸಿಕ್' ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದರು. ಇದೇ ವೇಳೆ ಹಾಲಿವುಡ್‌ನ ಸಿನಿಮಾಕಾನ್‌ನಲ್ಲಿ 'ಟಾಕ್ಸಿಕ್' ಸಿನಿಮಾದ ಕೆಲ ತುಣುಕುಗಳ ಪ್ರದರ್ಶನ ಮಾಡಲಾಗಿತ್ತು. ಅದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ಸಿನಿಮಾದ ವ್ಯಾಪಾರ ಹಾಗೂ ಪ್ರಚಾರದ ದೃಷ್ಠಿಯಿಂದ ರಿಲೀಸ್ ಡೇಟ್ ಅನ್ನು ಮುಂದೂಡಲಾಗಿದೆ ಎನ್ನಲಾಗಿದೆ.
'ಟಾಕ್ಸಿಕ್' ಸಿನಿಮಾದ 9 ನಿಮಿಷಗಳ ತುಣುಕನ್ನು ಇದೇ ಸಿನಿಮಾಕಾನ್‌ನಲ್ಲಿ ಪ್ರದರ್ಶನ ಮಾಡಲಾಗಿತ್ತು. ಆ ಬಳಿಕ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಆಗಿದೆ ಎಂದು ಸಿನಿಮಾ ತಂಡವೇ ಹೇಳಿಕೊಂಡಿದೆ. ಕೆಲವು ಮೂಲಗಳ ಪ್ರಕಾರ, 'ಟಾಕ್ಸಿಕ್' ಸಿನಿಮಾವನ್ನು ಇಂಗ್ಲಿಷ್‌ನಲ್ಲಿ ರಿಲೀಸ್ ಮಾಡುವುದಕ್ಕೆ ಹಾಲಿವುಡ್‌ನ ಬಿಗ್ ನಿರ್ಮಾಣ ಸಂಸ್ಥೆ ವಾರ್ನರ್ ಬ್ರದರ್ಸ್ ಸಂಸ್ಥೆ ಜೊತೆನೂ ಮಾತುಕತೆ ನಡೆಸುತ್ತಿದೆ. ಹೀಗಾಗಿ ಇಂಟರ್ನ್ಯಾಷನಲ್ ಸಿನಿಮಾ ವಿತರಣಾ ಸಂಸ್ಥೆಗಳ ಜೊತೆಗೆ ಸಹಭಾಗಿತ್ವಕ್ಕೆ ಹೆಚ್ಚು ಸಮಯದ ಹಿಡಿಯುತ್ತಿದ್ದು, ಈ ಕಾರಣಕ್ಕೆ ಸಿನಿಮಾ ಪೋಸ್ಟ್‌ಪೋನ್ ಮಾಡಲಾಗಿದೆ.
ಯಶ್ ಸಂದೇಶವೇನು?
"ಕೆಲವು ಸಿನಿಮಾಗಳನ್ನು ನಾವು ಮಾಡುತ್ತೇವೆ. ಆದರೆ, ಅವುಗಳಲ್ಲಿ ಕೆಲವು ಸಿನಿಮಾಗಳು ನಾವು ಚಿತ್ರರಂಗವನ್ನು ಇಷ್ಟಪಟ್ಟಿದ್ದೇಕೆ ಅನ್ನೋದನ್ನು ನೆನಪಿಸುತ್ತವೆ. ಟಾಕ್ಸಿಕ್ ಅಂತಹ ಒಂದು ಪಯಣ. ಸಿನೆಮಾಕಾನ್‌ನಲ್ಲಿ ನಮ್ಮ ಸಿನಿಮಾವನ್ನು ಪ್ರದರ್ಶಿಸಿದಾಗ ಸಿಕ್ಕ ಅಭೂತಪೂರ್ವ ಜಾಗತಿಕ ಪ್ರತಿಕ್ರಿಯೆಯಿಂದ ವಿಶ್ವದಾದ್ಯಂತ ಪೂರ್ಣ ಸಾಮರ್ಥ್ಯದೊಂದಿಗೆ ತಲುಪಬೇಕು ಎಂಬ ನಮ್ಮ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ. ಟಾಕ್ಸಿಕ್ ಸಿನಿಮಾ ಸಿದ್ಧವಾಗಿದೆ. ಸದ್ಯ ನಾವು ಗ್ಲೋಬಲ್ ಡಿಸ್ಟ್ರಿಬ್ಯೂಷನ್ ಹಾಗೂ ಸಹಭಾಗಿತ್ವದ ಕಡೆಗೆ ಹೆಚ್ಚು ಗಮನ ಹರಿಸಿದ್ದೇವೆ. ಈ ಹಿನ್ನೆಲೆಯಲ್ಲಿ, ನಾವು ಸಿನಿಮಾದ ಬಿಡುಗಡೆಯ ಸಮಯವನ್ನು ಮುಂದಕ್ಕೆ ಹಾಕುವುದಕ್ಕೆ ನಿರ್ಧರಿಸಿದ್ದೇವೆ. ಈ ಮೊದಲು ಅನೌನ್ಸ್ ಮಾಡಿದ್ದಂತೆ ಜೂನ್ 4 ರಂದು ಸಿನಿಮಾ ಬಿಡುಗಡೆಯಾಗುವುದಿಲ್ಲ. ಬದಲಾಗಿ ಜಾಗತಿಕ ಮಾರುಕಟ್ಟೆಗೆ ಪೂರಕವಾದ ದಿನದಂದು ವಿಶ್ವದಾದ್ಯಂತ ತೆರೆಕಾಣಲಿದೆ. ಟಾಕ್ಸಿಕ್ ಶೀಘ್ರದಲ್ಲೇ ನಿಮ್ಮ ಹತ್ತಿರದ ಚಿತ್ರಮಂದಿರಗಳಿಗೆ ಬರಲಿದೆ. ಜಾಗತಿಕ ವೇದಿಕೆಯಲ್ಲಿ ಭಾರತೀಯ ಚಿತ್ರರಂಗದ ಧ್ವನಿ ಬಲವಾಗಿ ಕೇಳಿಸುತ್ತಿದೆ. ಈ ಸಮಯದಲ್ಲಿ, ಗುಣಮಟ್ಟವನ್ನು ಹೆಚ್ಚಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಒಬ್ಬ ನಟ ಮತ್ತು ನಿರ್ಮಾಪಕನಾಗಿ, ನಮ್ಮ ಸಿನಿಮಾ ಜಾಗತಿಕ ಮಟ್ಟದಲ್ಲಿ ಅಂದುಕೊಂಡ ಪ್ರಭಾವವನ್ನು ಬೀರುವಂತೆ ಮಾಡಲು ಈ ಸಮಯವನ್ನು ತೆಗೆದುಕೊಳ್ಳುತ್ತಿದ್ದೇನೆ. ಇದು ಭಾರತೀಯ ಚಿತ್ರರಂಗಕ್ಕೆ ನಾನು ನೀಡುವ ಸಣ್ಣ ಕೊಡುಗೆ ಎಂದು ಭಾವಿಸುತ್ತೇನೆ. ಪ್ರತಿಯೊಂದು ಹಂತದಲ್ಲೂ ನಿಮ್ಮ ಬೆಂಬಲ ನನ್ನೊಂದಿಗಿದೆ, ಅದಕ್ಕಾಗಿ ನಾನು ಚಿರಋಣಿ. ಕೆಲವು ಕಥೆಗಳು ತಾಳ್ಮೆಯನ್ನು ಬಯಸುತ್ತವೆ. ಕೆಲವು ಪಯಣಗಳು ಅದನ್ನು ಕೇಳುತ್ತವೆ. ನಿಮ್ಮ ಸಂಭ್ರಮಕ್ಕೆ ಸಖತ್ ಸಿನಿಮಾ ನೀಡುವುದಾಗಿ ನಾವು ಭರವಸೆ ನೀಡುತ್ತೇವೆ - ಇದು ಭಾರತೀಯ ಚಿತ್ರರಂಗ ಹೆಮ್ಮೆ ಪಡುವಂತಹ ಕ್ಷಣವಾಗಲಿದೆ" ಎಂದು ಯಶ್ ಸಂದೇಶ ನೀಡಿದ್ದಾರೆ.
'ಟಾಕ್ಸಿಕ್' ಸ್ಟಾರ್‌ಕಾಸ್ಟ್
ಕೆವಿಎನ್ ಪ್ರೊಡಕ್ಷನ್ ಹಾಗೂ ಮಾನ್ಸಟರ್ಸ್ ಮೈಂಡ್ ಕ್ರಿಯೇಷನ್ ಅವರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾದಲ್ಲಿ ಯಶ್ ಅವರೊಂದಿಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ನಟಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಈ ಸಿನಿಮಾವನ್ನು ಶೂಟ್ ಮಾಡಲಾಗಿದ್ದು, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗಲಿದೆ. ಶೀಘ್ರದಲ್ಲೇ ಇನ್ನೊಂದು ಹೊಸ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ.


Click it and Unblock the Notifications