'ಸು ಫ್ರಮ್ ಸೋ'ದಂತಹ ಸಿನಿಮಾಗಳಿಂದ ಸೂಪರ್‌ಸ್ಟಾರ್‌ಗಳ ಭವಿಷ್ಯಕ್ಕೆ ಕುತ್ತು? ನೀವು ಒಪ್ಪುತ್ತೀರಾ?
'ಸು ಫ್ರಮ್ ಸೋ' ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲ. ಇಡೀ ದೇಶದ ಗಮನವನ್ನು ಸೆಳೆದಿದೆ. ಸೂಪರ್‌ಸ್ಟಾರ್‌ಗಳು ಕೂಡ ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ರಾಜ್ ಬಿ ಶೆಟ್ಟಿಯನ್ನು ಬಿಟ್ಟರೆ, ಇಲ್ಲಿ ಸ್ಟಾರ್ ನಟರು ಯಾರು ಇಲ್ಲ. ಆದರೂ, ಸಿನಿಮಾ ಹೇಗೆ 50-60 ಕೋಟಿ ರೂಪಾಯಿ ಗಳಿಸಿತು? ಇದಕ್ಕೆ ಎಲ್ಲರೂ ಕೊಡುವ ಉತ್ತರ ಕಂಟೆಂಟ್. ಕಥೆ ಗಟ್ಟಿಯಾಗಿದ್ದರೆ, ಸಿನಿಮಾದಲ್ಲಿ ಯಾರೇ ಇದ್ದರೂ ಗೆಲ್ಲುತ್ತೆ ಅನ್ನೋದು 'ಸು ಫ್ರಮ್ ಸೋ' ಸಾಬೀತು ಮಾಡಿದೆ.
'ಕೆಜಿಎಫ್ 2', 'ಕಾಂತಾರ'ದಂತಹ ಪ್ಯಾನ್ ಇಂಡಿಯಾ ಸಿನಿಮಾಗಳು ದೇಶಾದ್ಯಂತ ಸದ್ದು ಮಾಡಿದ ಬಳಿಕ ಸ್ಯಾಂಡಲ್‌ವುಡ್ ಸೈಲೆಂಟ್ ಆಗಿತ್ತು. ಸುಮಾರು ಎರಡೂವರೆ ವರ್ಷ ಬೇರೆ ಚಿತ್ರರಂಗವನ್ನು ಸೆಳೆಯುವಂತಹ ಸಿನಿಮಾ ಬರಲೇ ಇಲ್ಲ. ಈ ಗ್ಯಾಪ್‌ನಲ್ಲಿ ದರ್ಶನ್ ನಟಿಸಿದ 'ಕಾಟೇರ' ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದರೂ ಅದು ಕರ್ನಾಟಕಕ್ಕಷ್ಟೇ ಸೀಮಿತವಾಯ್ತು. ಕಿಚ್ಚ ನಟಿಸಿದ 'ಮ್ಯಾಕ್ಸ್' ಬಾಕ್ಸಾಫೀಸ್ ಲೂಟಿ ಮಾಡಿತ್ತು. ಅದು ತಮಿಳು ಚಿತ್ರರಂಗಕ್ಕೆ ಲಗ್ಗೆ ಇಟ್ಟಿತಷ್ಟೇ.

'ಮ್ಯಾಕ್ಸ್' ಆದ್ಮೇಲೆ ಮತ್ತಷ್ಟೇ ರಾಗ ಮುಂದುವರೆದಿತ್ತು. ಸಿನಿಮಾ ರಿಲೀಸ್ ಆಗುತ್ತಿತ್ತು. ಹೇಳ ಹೆಸರಿಲ್ಲದಂತೆ ಥಿಯೇಟರ್‌ನಿಂದ ಎತ್ತಂಗಡಿ ಆಗುತ್ತಿತ್ತು. 'ಮ್ಯಾಕ್ಸ್' ಆದ್ಮೇಲೆ ಬಾಕ್ಸಾಫೀಸ್‌ನಲ್ಲಿ ಮೆಗಾ ಹಿಟ್ ಸಿನಿಮಾವನ್ನು ನೋಡುವುದಕ್ಕೆ 'ಸು ಫ್ರಮ್ ಸೋ'ವರೆಗೂ ಕಾಯಬೇಕಾಯ್ತು. ಆದರೆ, ಇದು ಸಿನಿಮಾ ಮಂದಿಗೆ ಹಲವು ಪಾಠಗಳನ್ನು ಕಳಿಸಿದೆ. ಸೂಪರ್‌ಸ್ಟಾರ್‌ಗಳಿಗೆ ಈ ಸಿನಿಮಾ ನಿಜಕ್ಕೂ ಎಚ್ಚರಿಕೆ ಗಂಟೆ.
'ಸು ಫ್ರಮ್ ಸ್ಯಾಂಡಲ್‌ವುಡ್'
ಕರಾವಳಿ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಸಿನಿಮ 'ಸು ಫ್ರಮ್ ಸೋ'. ಇದೊಂದು ಸಿನಿಮಾ ಈ ಮಟ್ಟಿಗೆ ಸದ್ದು ಮಾಡಬಹುದೆಂದು ಯಾರೂ ಎಣಿಸಿರಲಿಲ್ಲ. ಸಿನಿಮಾ ರಿಲೀಸ್ ಆಗುತ್ತಿದ್ದಂತೆ ನೋಡ ನೋಡುತ್ತಿದ್ದಂತೆ ಥಿಯೇಟರ್‌ಗಳು ತುಂಬುವುದಕ್ಕೆ ಶುರುವಾಗಿದ್ದವು. ಟಿಕೆಟ್ ಸಿಗದೆ ಜನರು ಹತಾಶೆ ವ್ಯಕ್ತಪಡಿಸುವ ಮಟ್ಟಕ್ಕೆ ಬಂತು ಬಿಟ್ಟಿತು. ಇದೇ ಚಿತ್ರರಂಗ ಆರು ತಿಂಗಳಿಂದ ಖಾಲಿ ಹೊಡೆಯುತ್ತಿತ್ತು. ಗ್ಯಾಪ್‌ನಲ್ಲಿ ಕೆಲವು ಕಂಟೆಂಟ್ ಸಿನಿಮಾಗಳು ಬಂದಿದ್ದರೂ, ಆ ಸಿನಿಮಾಗಳಿಗ್ಯಾಕೋ ಅದೃಷ್ಟವಿರಲಿಲ್ಲ. 'ಸು ಫ್ರಮ್ ಸೋ'ಸ ಜನರನ್ನು ಚಿತ್ರಮಂದಿರಕ್ಕೆ ಸೆಳೆಯುವುದಕ್ಕೆ ಯಶಸ್ವಿ ಆಯ್ತು. ಈಗ ಮುಂದೇನು? ಚಿತ್ರರಂಗದ ಮೂಲೆಯಲ್ಲೊಂದು ಧ್ವನಿ ಸೈಲೆಂಟ್ ಆಗಿ ಹರಿದಾಡುತ್ತಿರುವುದಕ್ಕೆ ಶುರುವಾಗಿದೆ. ಅದೇನದು ಅಂದರೆ..
ಸೂಪರ್‌ಸ್ಟಾರ್‌ಗಳಿಗೆ ಎಚ್ಚರಿಕೆ ಕೊಟ್ಟಿತೇ?
ಬಾಕ್ಸಾಫೀಸ್‌ನಲ್ಲಿ ಬೆಂಕಿ ಬಿರುಗಾಳಿಯನ್ನೇ ಎಬ್ಬಿಸಿದ 'ಸು ಫ್ರಮ್ ಸೋ' ಚಿತ್ರರಂಗಕ್ಕೆ ಎಚ್ಚರಿಕೆಯನ್ನೂ ಕೊಟ್ಟಿದೆ. ಸೂಪರ್‌ಸ್ಟಾರ್‌ಗಳು ಕಂಟೆಂಟ್ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಆಕ್ಷನ್, ಮಾಸ್ ಡೈಲಾಗ್, ಬಿಲ್ಡಪ್ ಶಾಟ್, ರೊಮ್ಯಾಂಟಿಕ್ ಸೀನ್‌ಗಳಿಂದ ಇನ್ನೂ ಹೊರ ಬಂದಿಲ್ಲ. ರೆಗ್ಯೂಲರ್ ಮಾಸ್, ಕ್ಲಾಸ್ ಸಬ್ಜೆಕ್ಟ್‌ಗಳಲ್ಲೇ ಮುಳುಗಿ ಹೋಗಿದ್ದಾರೆ. ಅದೆಲ್ಲ ಇನ್ಮುಂದೆ ನಡೆಯೋದಿಲ್ಲ, ಬಿಟ್ಟು ಬಿಡಿ ಎಂಬ ಪರೋಕ್ಷ ಸಂದೇಶವನ್ನು ಕೊಟ್ಟಿತ್ತೇ? ಅನ್ನೋದು ಕೆಲವು ಫಿಲ್ಮ್ ಮೇಕರ್‌ಗಳ ಅಭಿಪ್ರಾಯ.

ಸ್ಟಾರ್‌ಗಿಂತ ಕಂಟೆಂಟ್ ಕಿಂಗ್
ಫಿಲ್ಮ್ ಮೇಕರ್ಸ್‌ಗೆ ತಮ್ಮ ಸಿನಿಮಾದಲ್ಲಿ ಸ್ಟಾರ್‌ಗಳು ಇದ್ದರೆ ಜನರು ಥಿಯೇಟರ್‌ಗೆ ಸೆಳೆಯುವುದಕ್ಕೆ ಸುಲಭ. ರಿಲೀಸ್ ಆದ ಕೆಲವೇ ದಿನಗಳಲ್ಲಿ ಹಾಕಿದ ಬಂಡವಾಳ ಬಂದು ಬಿಡುತ್ತೆ ಅನ್ನೋ ಲೆಕ್ಕಾಚಾರ. ಆದರೆ, ಅದನ್ನೆಲ್ಲ 'ಸು ಫ್ರಮ್ ಸೋ' ತಲೆಕೆಳಗೆ ಮಾಡಿದೆ. ಸ್ಟಾರ್‌ಗಳಿಲ್ಲದೆ ಒಂದು ಸಿನಿಮಾ ಗೆಲ್ಲಬಹುದು ಅನ್ನೋದನ್ನು ಸಾಬೀತು ಮಾಡಿದೆ. 'ಬಾ ಬಾರೋ ರಸಿಕ', 'ಹಗ್ಗದ ಕೊನೆ', 'ಆ ಕರಾಳ ರಾತ್ರಿ' ಅಂತಹ ಸಿನಿಮಾಗಳನ್ನು ನೀಡಿರುವ ನಿರ್ದೇಶ ದಯಾಳ್ ಕೂಡ "ಒಳ್ಳೆಯ ಸಿನಿಮಾ ಮಾಡಿ ಇಲ್ಲಾ ಅಂದರೆ ಕಂಟೆಂಟ್ ನಿಮ್ಮನ್ನು ತಿಂದು ಬಿಡುತ್ತೆ" ಎನ್ನುತ್ತಾರೆ.
"ನಾನು ಸ್ಟಾರ್ ಎಂತಹ ಸಿನಿಮಾ ಬೇಕಾದರೂ ಮಾಡಬಹುದು ಅಂತ ಹೋದರೆ ಕಷ್ಟ. ಕಂಟೆಂಟ್ ಇಲ್ಲ ಅಂದರೆ ಆಗಲ್ಲ. ಇಲ್ಲಿ ಕಂಟೆಂಟ್ ಕಿಂಗ್. ಅದಿಲ್ಲ ಅಂದರೆ ಏನೂ ಇಲ್ಲ. ಸ್ಟಾರ್ ಸಿನಿಮಾ ಮುಂದೆ ಕಂಟೆಂಟ್ ಸಿನಿಮಾ ಬಂದರೆ ಸೋಲುತ್ತೆ ಅನ್ನೋದು ಸುಳ್ಳು. ಈಗ ಪವನ್ ಕಲ್ಯಾಣ್ ಸಿನಿಮಾ ತೆಗೆದು ಸು ಫ್ರಮ್ ಸೋ ಹಾಕಿದ್ರಲ್ಲ. ಸೋ ಸ್ಟಾರ್ ವಾಲ್ಯೂ ಜೊತೆ ಕಂಟೆಂಟ್ ಬೇಕು. ಈಗ ಸ್ಟಾರ್ ಅಥವಾ ಕಂಟೆಂಟ್ ಅಂತ ನೋಡಿದರೆ, ಕಂಟೆಂಟ್ ಕಿಂಗ್" ಎನ್ನುತ್ತಾರೆ ನಿರ್ದೇಶಕ ದಯಾಳ್ ಪದ್ಮನಾಭನ್.
ರವಿಯಣ್ಣನ ಪಾತ್ರವನ್ನು ಸೂಪರ್‌ಸ್ಟಾರ್ ಮಾಡಲ್ಲ
ಹಾಗೇ ಕಂಟೆಂಟ್ ಸಿನಿಮಾಗಳ ಪಾತ್ರಗಳನ್ನು ಸೂಪರ್‌ಸ್ಟಾರ್‌ಗಳು ಮಾಡುವುದಿಲ್ಲ. ಮಾಡಿದರೂ ಅದರಲ್ಲಿ ಫ್ರೆಶ್‌ನೆಸ್ ಕಾಣಿಸುವುದಿಲ್ಲ ಅನ್ನೋದು ದಯಾಳ್ ಅಭಿಪ್ರಾಯ. "ಒಳ್ಳೆಯ ಸಿನಿಮಾ ಮಾಡಿ ಇಲ್ಲಾ ಅಂದರೆ ಕಂಟೆಂಟ್ ನಿಮ್ಮನ್ನು ತಿಂದು ಬಿಡುತ್ತೆ. ಈಗ ರವಿಯಣ್ಣನ ಪಾತ್ರವನ್ನು ಸೂಪರ್‌ಸ್ಟಾರ್ ಮಾಡೋದಿಲ್ಲ. ಮಾಡಿದರೂ ರೆಗ್ಯೂಲರ್ ಆಕ್ಟರ್ ತರ ಮಾಡುತ್ತಾರೆ. ಅದರಲ್ಲಿ ಫ್ರೆಶ್‌ನೆಸ್ ಅನ್ನೋದು ಇರುವುದಿಲ್ಲ. ಕಂಟೆಂಟ್ ಚೆನ್ನಾಗಿದ್ದರೆ, ಎಲ್ಲರೂ ನೋಡುತ್ತಾರೆ. ಎಲ್ಲರೂ ಖಂಡಿತಾ ಇಷ್ಟ ಪಡುತ್ತಾರೆ. ಆಗಲೇ ಹೇಳಿದ ಹಾಗೆ ಕಂಟೆಂಟ್ ಜೊತೆ ಸ್ಟಾರ್ ಢಮ್ ಸೇರಿಕೊಂಡರೆ ಆ ಸಿನಿಮಾ ಹಿಟ್ ಲಿಸ್ಟ್ ಸೇರುವುದನ್ನು ತಡೆಯೋಕೆ ಸಾಧ್ಯವೇ ಇಲ್ಲ." ಎನ್ನುತ್ತಾರೆ.


Click it and Unblock the Notifications











