"ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ": ಕಿಚ್ಚ ಬಿಜೆಪಿ ಸೇರ್ಪಡೆ ಸುದ್ದಿಗೆ ಪ್ರಕಾಶ್ ರಾಜ್ ಟ್ವೀಟ್
ಪ್ರಕಾಶ್ ರಾಜ್ ಹಲವು ವರ್ಷಗಳಿಂದ ನಿರಂತರವಾಗಿ ಬಿಜೆಪಿಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಇದೇ ವಿಚಾರವಾಗಿ ಆಗಾಗ ಖಾರವಾಗಿ ಟ್ವೀಟ್ ಮಾಡುತ್ತಾರೆ. ತಮಗೆ ಅನಿಸಿದ್ದನ್ನು ನಿರ್ಭಯವಾಗಿ ಟ್ವೀಟ್ ಮೂಲಕ, ಇಲ್ಲವೇ ಅವಕಾಶ ಸಿಕ್ಕಾಗ ಹೇಳುತ್ತಲೇ ಬಂದಿದ್ದಾರೆ.
ಕಳೆದ ಕೆಲವು ದಿನಗಳಿಂದ ಕಿಚ್ಚನ ಸುದೀಪ್ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ. ಈ ವಿಚಾರವಾಗಿ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದು, ತಮ್ಮ ಅಸಮಧಾನವನ್ನು ಪರೋಕ್ಷವಾಗಿ ಹೊರ ಹಾಕಿದ್ದಾರೆ. ಇದೇ ಟ್ವೀಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

"ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ"
ಕಿಚ್ಚ ಸುದೀಪ್ ಬಿಜೆಪಿ ಸೇರ್ಪಡೆ ಬಗ್ಗೆ ಕಳೆದ ನಾಲ್ಕೈದು ದಿನಗಳಿಂದ ಚರ್ಚೆಯಾಗುತ್ತಲೇ ಇದೆ. ಆದರೆ, ಕಿಚ್ಚ ಸುದೀಪ್ ಹಾಗೂ ಬಿಜೆಪಿ ಪಕ್ಷ ಈ ಬಗ್ಗೆ ಎಲ್ಲೂ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಕಿಚ್ಚ ಬಿಜೆಪಿ ಸೇರುತ್ತಾರೆ ಎನ್ನುವ ಸುದ್ದಿ ಹೊರ ಬೀಳುತ್ತಿದ್ದಂತೆ ಪರ-ವಿರೋಧ ಚರ್ಚೆ ಆರಂಭ ಆಗಿದೆ. ಇದೇ ವೇಳೆ ಪ್ರಕಾಶ್ ರಾಜ್ ಟ್ವೀಟ್ ಮಾಡಿ, "ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ" ಎಂದಿದ್ದಾರೆ.
"ಕರ್ನಾಟಕದಲ್ಲಿ ಸೋಲುವ ಭಯದಲ್ಲಿ . ಭ್ರಷ್ಟ BJP ಹರಡುತ್ತಿರುವ ಸುಳ್ಳು ಸುದ್ದಿ ಎಂದು ನಾನು ನಂಬುತ್ತೇನೆ . ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ." ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
ಕಿಚ್ಚ ಸುದೀಪ್ ಇಂದು (ಏಪ್ರಿಲ್ 5) ಮಧ್ಯಾಹ್ನ ಸಿ ಎಂ ಬಸವರಾಜ್ ಬೊಮ್ಮಾಯಿ ಜೊತೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸುತ್ತಾರೆ ಎನ್ನಲಾಗಿದೆ. ಈ ವೇಳೆ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರಾ? ಇಲ್ಲಾ ಪ್ರಚಾರಕರಾಗಿ ಭಾಗವಹಿಸುತ್ತಾರಾ? ಅನ್ನೋ ಗೊಂದಲಕ್ಕೆ ತೆರೆಬೀಳಲಿದೆ.
ಮೊದಲಿನಿಂದಲೂ ಕಿಚ್ಚ ಸುದೀಪ್ ರಾಜಕೀಯಕ್ಕೆ ಎಂಟ್ರಿ ಕೊಡುವ ಪ್ರತಿಕ್ರಿಯೆ ನೀಡುತ್ತಲೇ ಬಂದಿದ್ದಾರೆ. ರಾಜಕೀಯಕ್ಕೆ ಬರೋದಿಲ್ಲ ಅಂತ ಹಲವು ಬಾರಿ ಹೇಳಿಕೆಯನ್ನು ನೀಡಿದ್ದಾರೆ. ಆದರೆ, ಈ ಬಾರಿ ಕಿಚ್ಚನ ರಾಜಕೀಯ ಎಂಟ್ರಿ ಬಗ್ಗೆ ಬಲವಾದ ಸುದ್ದಿ ಹಬ್ಬುತ್ತಿದೆ. ಕಿಚ್ಚ ಸುದೀಪ್ ಸಿ ಎಂ ಬಸವರಾಜ ಬೊಮ್ಮಾಯಿಗೆ ಆತ್ಮೀಯರಾಗಿರುವುದರಿಂದ ಮನವೊಲಿಸಿರಬಹುದು ಎಂದು ಅಂದಾಜಿಸಲಾಗಿದೆ.
ಇಂದು( ಏಪ್ರಿಲ್ 5) ಬೆಳಗ್ಗೆ ಶಾಸಕ ರಾಜು ಗೌಡ ಕೂಡ ಕಿಚ್ಚ ಸುದೀಪ್ ಬಿಜೆಪಿಗೆ ಬರುತ್ತಾರೆಂಬ ಸುಳಿವು ಇತ್ತು ಎಂದು ಹೇಳಿಕೆ ಕೊಟ್ಟಿರುವ ಬಗ್ಗೆ ವರದಿಯಾಗಿದೆ. ಹೀಗಾಗಿ ಕಿಚ್ಚನ ರಾಜಕೀಯ ನಡೆ ಏನು? ಅನ್ನುವ ಬಗ್ಗೆ ತ್ರೀವ ಕುತೂಹಲ ಕೆರಳಿಸುತ್ತಿದೆ.


Click it and Unblock the Notifications











