Mango Pachcha: 'ಪೆದ್ದಿ'ಗೆ ಟಕ್ಕರ್ ಕೊಡುಬಹುದೇ 'ಮ್ಯಾಂಗೋ ಪಚ್ಚ'? ಕಿಚ್ಚನ ಸೋದರಳಿಯನ ಟ್ರೈಲರ್ ಹೇಗಿದೆ?
ಕನ್ನಡ ಚಿತ್ರರಂಗದಲ್ಲಿ ಕಳೆದ ಕೆಲವು ದಿನಗಳಿಂದ ಸಿನಿಮಾಗಳು ಕೈ ಹಿಡಿಯುತ್ತಿಲ್ಲ. ಬೆರಳೆಣಿಕೆಯಷ್ಟು ಸಿನಿಮಾಗಳು ಬಿಟ್ಟರೆ, ಬಾಕ್ಸಾಫೀಸ್‌ನಲ್ಲಿ ಪಲ್ಟಿ ಹೊಡೆದಿದ್ದೆ ಹೆಚ್ಚು. ಇದರೊಂದಿಗೆ ಐಪಿಎಲ್ ಬೇರೆ ಇದ್ದಿದ್ದರಿಂದ ಸಿನಿಮಾಗಳು ರಿಲೀಸ್ ಆಗೋದು ಕೂಡ ಕಡಿಮೆ ಆಗಿತ್ತು. ಇನ್ನೇನು ಐಪಿಎಲ್ ಮುಗಿಯುತ್ತಿದ್ದಂತೆ ಒಂದೊಂದು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗುತ್ತಿವೆ. ಅದರಲ್ಲಿ 'ಮ್ಯಾಂಗೋ ಪಚ್ಚ' ಕೂಡ ಒಂದು.
ಇನ್ನು ರಿಲೀಸ್‌ಗೆ ಕೆಲವೇ ದಿನಗಳು ಬಾಕಿ ಇರುವಾಗಲೇ 'ಮ್ಯಾಂಗೋ ಪಚ್ಚ' ಪ್ರಚಾರ ಶುರುವಾಗಿದೆ. ಸ್ವತ: ಕಿಚ್ಚ ಸುದೀಪ್ ಅಖಾಡಕ್ಕೆ ಇಳಿದಿದ್ದಾರೆ. ಹೀಗಾಗಿ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಗುವ ಸಾಧ್ಯತೆಯಿದೆ. ಇತ್ತೀಚೆಗಷ್ಟೇ ಸಿನಿಮಾದ ಟ್ರೈಲರ್ ಕೂಡ ರಿಲೀಸ್ ಆಗಿತ್ತು. ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಂಚಿತ್ ಸಂಜೀವ್ ನಟನೆ ಪ್ರಾಮಿಸಿಂಗ್ ಅಂತ ಅನಿಸುತ್ತಿದೆ.

'ಮ್ಯಾಂಗೋ ಪಚ್ಚ' ಟ್ರೈಲರ್ ಹಲವು ಕಾರಣಕ್ಕೆ ಗಮನ ಸೆಳೆದಿದೆ. ಟ್ರೈಲರ್‌ನಲ್ಲಿ ಕಾಣಿಸುವ ಒಂದೊಂದು ಫ್ರೇಮ್ ಇಂಪ್ರೆಸಿವ್ ಆಗಿದೆ. ಅದರಲ್ಲೂ ಡೈಲಾಗ್‌ಗಳು ಮಾಸ್ ಹಾಗೂ ಕ್ಲಾಸ್ ಇಬ್ಬರಿಗೂ ಇಷ್ಟ ಆಗುವಂತಿವೆ. ಅದ್ರಲ್ಲೂ ಸಂಚಿತ್ ಸಂಜೀವ್ "ಶಕ್ತಿ ಇರುವವರು ಯುದ್ಧ ಗೆಲ್ಲುತ್ತಾರೆ, ಆತ್ಮಶಕ್ತಿ ಉಳ್ಳವರು ಸಾಮ್ರಾಜ್ಯ ಕಟ್ಟುತ್ತಾರೆ" ಎಂಬ ಡೈಲಾಗ್ ಟ್ರೈಲರ್‌ನಲ್ಲಿ ಗಮನ ಸೆಳೆಯುತ್ತಿದೆ.
ಸೋದರ ಅಳಿಯ ಸಂಚಿತ್ ಸಂಜೀವ್‌ಗಾಗಿ ಕಿಚ್ಚ ಸುದೀಪ್ 'ಮ್ಯಾಂಗೋ ಪಚ್ಚ' ಸಿನಿಮಾಗೆ ಕೈ ಹಾಕಿದ್ದಾರೆ. ಕಿಚ್ಚ ಸುದೀಪ್ ಅವರ ಸುಪ್ರಿಯಾನ್ವಿ ಸ್ಟುಡಿಯೋಸ್ ಹಾಗೂ ಕೆಆರ್ ಜಿ ಸ್ಟುಡಿಯೋಸ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ. ಇನ್ನು ಈ ಸಿನಿಮಾಗೆ ಮೈಸೂರು ಮೂಲದ ವಿವೇಕ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಟ್ರೈಲರ್ ಅಂತೂ ಪ್ರಾಮಿಂಗ್ ಆಗಿದೆ.
ನಿನ್ನೆಯಷ್ಟೇ (ಮೇ 25) ಬಿಡುಗಡೆ ಆಗಿರುವ ಟ್ರೇಲರ್ ಮೈಸೂರಿನ ಯುವಕನ ಕಥೆಯನ್ನು ಚಿಕ್ಕದಾಗಿ ಬಿಚ್ಚಿಟ್ಟಿದೆ. ಮೈಸೂರಿನ ಸಾಮಾನ್ಯ ಹುಡುಗ ಪ್ರಶಾಂತ್ ಮ್ಯಾಂಗೋ ಪಚ್ಚನಾಗಿ ಹೇಗೆ ಬದಲಾಗುತ್ತಾನೆ? ಅನ್ನೋ ಈ ಸಿನಿಮಾದ ಒಂದೆಳೆ ಸ್ಟೋರಿ. ಮೈಸೂರಿನ ಕೆಲವು ನೈಜ ಘಟನೆಗಳನ್ನು ಆಧರಿಸಿ, 'ಮ್ಯಾಂಗೋ ಪಚ್ಚ'ನ ಕಥೆಯನ್ನು ಹೆಣೆಯಲಾಗಿದೆ. ಈ ಸಿನಿಮಾ ಬಹುತೇಕ ಮೈಸೂರಿನಲ್ಲಿ ನಡೆಯುವ ಕಥೆಯಾಗಿದ್ದು ಇದೊಂದು ಪಕ್ಕ ಕಮರ್ಷಿಯಲ್ ಸಿನಿಮಾ.

'ಮ್ಯಾಂಗೋ ಪಚ್ಚ' ಸಿನಿಮಾ ಪ್ರೇಕ್ಷಕರಿಗೆ ಕಮರ್ಷಿಯಲ್ ಸಿನಿಮಾವನ್ನಂತೂ ನೀಡಿದೆ. ಆಕ್ಷನ್, ಫ್ಯಾಮಿಲಿ ಸೆಂಟಿಮೆಂಟ್, ಲವ್ ಸ್ಟೋರಿ, ಹಾಸ್ಯ ಎಲ್ಲವೂ ಇದೆ. ಸಿನಿಮಾದ ಮತ್ತೊಂದು ವಿಶೇಷವೆಂದರೆ ಸುದೀಪ್ ಪುತ್ರಿ ಸಾನ್ವಿ ಸುದೀಪ್ ಈ ಸಿನಿಮಾದಲ್ಲಿ ಹಾಡೊಂದನ್ನು ಹಾಡಿದ್ದಾರೆ. ಇನ್ನು ಈ ಸಿನಿಮಾದ ಟ್ರೈಲರ್‌ನಲ್ಲಿ ಕತೆ, ಹಿನ್ನೆಲೆಯ ಅನಾವರಣದ ಜೊತೆ ಪಾತ್ರಗಳ ಪರಿಚಯ ಮಾಡಲಾಗಿದೆ. ನಾಯಕ ಸಂಚಿತ್ ಸಂಜೀವ್ ಜೊತೆಗೆ ಇನ್ನೂ ಕೆಲವು ಪಾತ್ರಗಳ ಪರಿಚಯ ಮಾಡಲಾಗಿದೆ. ಸಂಚಿತ್ ಜೊತೆಯಲ್ಲಿ ನಾಯಕಿಯಾಗಿ ಕಾಜಲ್ ಕುಂದರ್ ಅಭಿನಯಿಸಿದ್ದು, ವಿಲನ್ ಆಗಿ ನಟ ಮಯೂರ್ ಪಟೇಲ್ ನಟಿಸಿದ್ದಾರೆ. ಇನ್ನ ಉಗ್ರಂ ಮಂಜು ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಟ್ರೇಲರ್ ನಲ್ಲಿ ಸಂಚಿತ್ ಭರವಸೆ ನಾಯಕನಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.
'ಮ್ಯಾಂಗೋ ಪಚ್ಚ' ಜೊತೆ ರಾಮ್ ಚರಣ್, ಜಾಹ್ನವಿ ಕಪೂರ್, ಶಿವರಾಜ್‌ಕುಮಾರ್ ನಟನೆಯ 'ಪೆದ್ದಿ' ಕೂಡ ರಿಲೀಸ್ ಆಗುತ್ತಿದೆ. 'ಪೆದ್ದಿ' ಕನ್ನಡದಲ್ಲೂ ರಿಲೀಸ್ ಆಗುತ್ತಿರೋದ್ರಿಂದ 'ಮ್ಯಾಂಗೋ ಪಚ್ಚ' ಪ್ರೇಕ್ಷಕರನ್ನು ಥಿಯೇಟರ್‌ನತ್ತ ಹೇಗೆ ಸೆಳೆಯುತ್ತೆ ಅನ್ನೋದು ಜೂನ್ 5 ರ ಬಳಿಕ ಗೊತ್ತಾಗಲಿದೆ.


Click it and Unblock the Notifications
